ಬದುಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಘಟಿಸುವ ಸಂಗತಿಗಳು ನೀಡುವ ಖುಷಿಯೇ ಬೇರೆ. ಮೊದಲ ಮಗು ಹುಟ್ಟಿದ ತಕ್ಷಣ ಪೋಷಕರು ಅನುಭವಿಸುವ ಖುಷಿ ಕೂಡ ಅಂಥದ್ದೇ. ಆ ಮಗುವಿಗೆ ಸಂಬಂಧಿಸಿದ ಪ್ರತಿ ಚಿಕ್ಕಪುಟ್ಟ ವಿಷಯಕ್ಕೂ ಗಮನ ನೀಡುವ ಜೊತೆಗೆ ಅದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಮಗು ಮೊದಲ ಬಾರಿಗೆ ನಕ್ಕಿದ್ದು, ಕೂತಿದ್ದು, ಅಂಬೆಗಾಲಿಟ್ಟಿದ್ದು...ಹೀಗೆ ಪ್ರತಿ ವಿಷಯವೂ ಹೆತ್ತವರಿಗೆ ಸರಿಯಾಗಿ ನೆನಪಿರುತ್ತದೆ. ಆ ಮಗು ಕೇಳಿದ ಪ್ರತಿ ವಸ್ತುವನ್ನು ಖರೀದಿಸಿ ಕೊಡುತ್ತಾರೆ. ಒಟ್ಟಾರೆ ಇಡೀ ಮನೆಯ ಕೇಂದ್ರಬಿಂದು ಆ ಮಗು. ಎರಡನೇ ಮಗುವಿನ ಆಗಮನವಾಗುವ ತನಕ ಈ ವಿಶೇಷ ಕಾಳಜಿ ಮುಂದುವರಿಯುತ್ತದೆ. ಹಾಗಂತ ಎರಡನೇ ಮಗುವಿನ ಆಗಮನವಾಗುತ್ತಿದ್ದಂತೆ ಪೋಷಕರು ದೊಡ್ಡ ಮಗುವನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂದಲ್ಲ. ಆದರೆ, ಮೊದಲಿನಷ್ಟು ಸಮಯ, ಗಮನ ನೀಡಲು ಕಷ್ಟವಾಗುವುದಂತೂ ಸತ್ಯ. 

ಡೌನ್‌ ಸಿಂಡ್ರೋಮ್‌ ಮಗು ತೋರಿಸೋ ಪ್ರೀತಿ ಮುಂದೆ ಬೇರೇನೂ ಇಲ್ಲ!

ಫಸ್ಟ್ ಬಾರ್ನ್ ಸಿಂಡ್ರೋಮ್: ಎರಡನೇ ಮಗು ಹುಟ್ಟಿದ ತಕ್ಷಣ ಮೊದಲ ಮಗುವಿಗೆ ಮನೆಯ ಸದಸ್ಯರೆಲ್ಲ ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಭಾವನೆ ಮೂಡುವುದು ಸಹಜ. ಇದೇ ಕಾರಣಕ್ಕೆ ಎರಡನೇ ಮಗುವನ್ನು ಮೊದಲ ಮಗು ತನ್ನ ಕಾಂಪಿಟೇಟರ್ ಎಂದೇ ಭಾವಿಸುತ್ತದೆ. ತನಗೆ ನೀಡುತ್ತಿದ್ದ ಪ್ರೀತಿ, ಅಕ್ಕರೆ ಹಾಗೂ ಮಮತೆಯಲ್ಲಿ ಪಾಲು ಪಡೆಯುತ್ತಿರುವ ಮಗುವನ್ನು ನೋಡಿದ ತಕ್ಷಣ ಮೊದಲ ಮಗುವಿನ ಮನಸ್ಸಿನಲ್ಲಿ ಅಸೂಯೆ ಹುಟ್ಟುತ್ತದೆ. ಇದು ಆ ಮಗುವಿನ ಮನಸ್ಸಿನಲ್ಲಿ ‘ನಾನೇ ಮೊದಲು’ ಎಂಬ ಭಾವನೆ ಬೆಳೆಯಲು ಕಾರಣವಾಗುತ್ತದೆ. ಅನಾರೋಗ್ಯಕರ ಸ್ಪರ್ಧೆಯ ಭಾವನೆಯೊಂದು ಸದ್ದಿಲ್ಲದಂತೆ ರೂಪು ತಳೆಯುವ ಕಾರಣ ಪುಟ್ಟ ಮಗುವನ್ನು ಕಂಡರೆ ದ್ವೇಷಿಸಲು ಪ್ರಾರಂಭಿಸುತ್ತದೆ. ಯಾರಿಗೂ ಗೊತ್ತಾಗದಂತೆ ಮಗುವಿಗೆ ಚಿವುಟುವುದು, ಹೊಡೆಯುವುದು ಮಾಡುತ್ತದೆ. ಕೆಲವು ಮಕ್ಕಳಿಗಂತೂ ಕೋಪವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಅಪ್ಪ-ಅಮ್ಮ ಸೇರಿದಂತೆ ಎಲ್ಲರ ಸಮ್ಮುಖದಲ್ಲೇ ಮಗುವಿಗೆ ಹೊಡೆದು ಬಿಡುತ್ತಾರೆ. ಇಂಥ ಸಂದರ್ಭಗಳಲ್ಲಿ ದೊಡ್ಡ ಮಗುವಿನಿಂದ ಸಣ್ಣ ಮಗುವನ್ನು ರಕ್ಷಿಸುವುದೇ ಮನೆಮಂದಿಗೆ ಸವಾಲಿನ ಕೆಲಸವಾಗುತ್ತದೆ. ಅದರಲ್ಲೂ ಎರಡು ಮಕ್ಕಳ ನಡುವಿನ ಅಂತರ ಕಡಿಮೆಯಿದ್ದರಂತೂ ಕೇಳುವುದೇ ಬೇಡ. ಹಾಗಾದ್ರೆ ಫಸ್ಟ್ ಬಾರ್ನ್ ಸಿಂಡ್ರೋಮ್ ಲಕ್ಷಣಗಳನ್ನು ಹೊಂದಿರುವ ಮಗುವನ್ನು ಸಂಭಾಳಿಸುವುದು ಹೇಗೆ?

•ಮಗುವನ್ನು ಮಗುವಿನಂತೆಯೇ ಕಾಣಿ: ಬಹುತೇಕ ಪೋಷಕರು ಮಾಡುವ ದೊಡ್ಡ ತಪ್ಪೆಂದರೆ ಎರಡನೇ ಮಗು ಹುಟ್ಟಿದ ತಕ್ಷಣ ಮೊದಲ ಮಗು ದೊಡ್ಡದಾಗಿ ಬಿಟ್ಟಿದೆ ಎಂಬಂತೆ ವರ್ತಿಸುವುದು.ಇನ್ನೂ 4-5ನೇ ವಯಸ್ಸಿನಲ್ಲಿರುವ ಮೊದಲ ಮಗು ಎಲ್ಲವನ್ನೂ ಅರ್ಥೈಸಿಕೊಳ್ಳಬೇಕು, ಹೇಳಿದಂತೆ ಕೇಳಬೇಕು ಎಂದು ಬಯಸಿದರೆ ಎಷ್ಟು ಸರಿ? ಆ ಮಗುವಿಗೂ ತನ್ನ ಬಾಲ್ಯದ ಚೇಷ್ಟೆ, ತುಂಟಾಟಗಳನ್ನು ಮಾಡಲು ಅವಕಾಶ ನೀಡಬೇಕು.ಇಷ್ಟು ದಿನ ಎಲ್ಲರ ಪ್ರೀತಿ, ಕಾಳಜಿಯ ಕೇಂದ್ರಬಿಂದುವಾಗಿದ್ದ ನನಗೆ ಮೊದಲಿನಷ್ಟು ಪ್ರಾಮುಖ್ಯತೆ ಸಿಗುತ್ತಿಲ್ಲ ಎಂಬುದು ಸಹಜವಾಗಿಯೇ ಆ ಪುಟ್ಟ ಹೃದಯದಲ್ಲಿ ತಲ್ಲಣಗಳನ್ನು ಹುಟ್ಟು ಹಾಕುತ್ತದೆ.ಇದನ್ನು ದೊಡ್ಡವರು ಅರ್ಥಮಾಡಿಕೊಳ್ಳಬೇಕು.ಸಿಟ್ಟು, ಸಿಡುಕು ಮಾಡಿದಾಗ ಮುದ್ದಿಸಿ,ಶಾಂತವಾಗಿ ವರ್ತಿಸಬೇಕೇ ಹೊರತು ತಾಳ್ಮೆ ಕಳೆದುಕೊಂಡರೆ ಮಕ್ಕಳು ಇನ್ನಷ್ಟು ಮೊಂಡುತನ ತೋರುವುದು ಪಕ್ಕಾ.

ಮಕ್ಕಳು ಅವರಿಗಿಷ್ಟವಾದ ಪುಸ್ತಕ ಓದಿಕೊಳ್ಳಲಿ, ನಿಮಗೇನು ಕಷ್ಟ?

•ಕಾಳಜಿ ಕಡಿಮೆಯಾಗದಂತೆ ಎಚ್ಚರ ವಹಿಸಿ: ಎರಡನೇ ಮಗು ಜನಿಸಿದ ತಕ್ಷಣ ತಾಯಿಯ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ.ಎರಡೂ ಮಕ್ಕಳನ್ನು ಸಂಭಾಳಿಸಬೇಕಾದ ಅನಿವಾರ್ಯತೆ ಜೊತೆಗೆ ಹೆರಿಗೆ,ಬಾಣಂತನ ಆಕೆಯನ್ನು ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿಸುತ್ತದೆ.ಎಷ್ಟೇ ಪ್ರಯತ್ನಿಸಿದರೂ ಮೊದಲನೆಯ ಮಗುವಿಗೆ ಹೆಚ್ಚಿನ ಗಮನ ನೀಡಲು ಆಕೆಗೆ ಸಾಧ್ಯವಾಗುವುದಿಲ್ಲ.ಇಂಥ ಸಮಯದಲ್ಲಿ ಅಪ್ಪ ಹಾಗೂ ಮನೆಯ ಇತರ ಸದಸ್ಯರು ಮೊದಲ ಮಗುವಿನೆಡೆಗೆ ಹೆಚ್ಚಿನ ಗಮನ ನೀಡಬೇಕು.ಮೊದಲ ಮಗು ಒಂಟಿಯಾಗಿರದಂತೆ ನೋಡಿಕೊಳ್ಳುವುದು ಅತ್ಯಗತ್ಯ.ಎರಡನೇ ಮಗು ಜನಿಸಿದ 3-4 ತಿಂಗಳ ಕಾಲ ಮೊದಲ ಮಗುವಿನೆಡೆಗೆ ಪ್ರೀತಿ ಹಾಗೂ ಕಾಳಜಿ ಕಡಿಮೆಯಾಗದಂತೆ ನೋಡಿಕೊಂಡರೆ ಸಹಜವಾಗಿ ಅದು ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುತ್ತದೆ.ಜೊತೆಗೆ ಎರಡನೇ ಮಗುವಿನ ಕಡೆಗೆ ಅಸೂಯೆ, ಕೋಪವನ್ನು ತೋರ್ಪಡಿಸುವುದಿಲ್ಲ ಕೂಡ. 

•ಪ್ರತಿದಿನ ಒಂದಿಷ್ಟು ಸಮಯ ಕಳೆಯಿರಿ: ಪೋಷಕರು ಪ್ರತಿದಿನ ಒಂದಿಷ್ಟು ಸಮಯವನ್ನು ಮೊದಲ ಮಗುವಿನೊಂದಿಗೆ ಕಳೆಯಬೇಕು. ಆ ಮಗುವಿನ ಬೇಕು, ಬೇಡಗಳನ್ನು ವಿಚಾರಿಸಬೇಕು.ಸ್ಕೂಲ್‍ನಲ್ಲಿ ನಡೆದ ಘಟನೆಗಳ ವಿವರ ಪಡೆಯುವುದು,ಕಥೆ ಹೇಳುವುದು, ಆಟ ಆಡುವುದು, ಸಾಧ್ಯವಾದರೆ ಪಾರ್ಕ್‍ಗೆ ಕರೆದುಕೊಂಡು ಹೋಗುವುದು ಮಾಡಿ. 

•ಬೈಯುವುದು, ಹೊಡೆಯುವುದು ಮಾಡಬೇಡಿ: ಮೊದಲ ಮಗು ಎರಡನೇ ಮಗುವಿಗೆ ಹೊಡೆದರೆ ಬಹುತೇಕ ಪೋಷಕರು ಮಾಡುವ ಮೊದಲ ತಪ್ಪೆಂದರೆ ಆ ಕೂಡಲೇ ಮೊದಲ ಮಗುವಿಗೆ ಹೊಡೆಯುವುದು ಇಲ್ಲವೆ ಬೈಯುವುದು. ಹೀಗೆ ಮಾಡುವುದರಿಂದ ಮೊದಲ ಮಗುವಿಗೆ ಎರಡನೇ ಮಗುವಿನ ಮೇಲಿನ ದ್ವೇಷ, ಅಸೂಯೆ ಇನ್ನಷ್ಟು ಹೆಚ್ಚಾಗಬಹುದು.ಆದಕಾರಣ ಇಂಥ ಸಂದರ್ಭಗಳಲ್ಲಿ ಮಗುವನ್ನು ಬಳಿ ಕರೆದು ಮೃದುವಾದ ಮಾತುಗಳ ಮೂಲಕ ನೀನು ಮಾಡುತ್ತಿರುವುದು ತಪ್ಪು ಎಂಬುದನ್ನು ತಿಳಿಸಬೇಕು.

ಮಕ್ಕಳು ಅಂದರೆ ಇಷ್ಟಾನೇ ಆಗಲ್ಲ!

•ತಮ್ಮ/ತಂಗಿಯ ಕೇರ್‍ಟೇಕರ್ ನೀನೇ ಅನ್ನಿ: ಮಗುವಿಗೆ ಸ್ನಾನ ಮಾಡಿಸುವುದು, ಪೌಡರ್ ಹಚ್ಚುವುದು ಸೇರಿದಂತೆ ಪ್ರತಿ ಚಟುವಟಿಕೆಯಲ್ಲೂ ದೊಡ್ಡ ಮಗುವನ್ನು ತೊಡಗಿಸಿಕೊಳ್ಳಿ.ನೀನು ಚಿಕ್ಕವನಿರುವಾಗ ಹೀಗೆ ಇದ್ದೆ,ನಿನಗೂ ನಾನು ಹೀಗೆ ಸ್ನಾನ ಮಾಡಿಸಿ ಪೌಡರ್ ಹಚ್ಚುತ್ತಿದ್ದೆ ಎಂದೆಲ್ಲ ಹೇಳಿ. ಹಾಗೆಯೇ ನಿನ್ನ ತಮ್ಮ ಅಥವಾ ತಂಗಿ ಈಗ ಪುಟ್ಟ ಮಗುವಾಗಿದ್ದು, ಅವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವುದು ನಿನ್ನ ಜವಾಬ್ದಾರಿ ಎಂದು ತಿಳಿಸಿ. ಇಂಥ ಮಾತುಗಳು ಸಹಜವಾಗಿಯೇ ದೊಡ್ಡ ಮಕ್ಕಳಿಗೆ ಖುಷಿ ನೀಡುತ್ತದೆ.ತಮ್ಮ/ತಂಗಿ ಜವಾಬ್ದಾರಿಯನ್ನು ಅವರಿಗೆ ವಹಿಸಿದರೆ ಖುಷಿಯಿಂದಲೇ ಒಪ್ಪಿಕೊಂಡು,ಮಾಡಲು ಮುಂದಾಗುತ್ತಾರೆ.