Asianet Suvarna News Asianet Suvarna News

ಸಮಸ್ಯೆ ಸುಳಿಯಲ್ಲಿ ಸಿಲುಕಿರುವಾಗ ಹೀಗೊಮ್ಮೆ ಯೋಚಿಸಿ ನೋಡಿ

ಸಮಸ್ಯೆ ಎದುರಾದಾಗ ಆಕಾಶವೇ ತಲೆಮೇಲೆ ಕಳಚಿ ಬಿದ್ದಂತೆ ಆಡುತ್ತೇವೆ. ಆದ್ರೆ ಸಮಸ್ಯೆಯ ಮೂಲ ನಮ್ಮೊಳಗೇ ಇರಬಹುದು, ಆದ್ರೆ ನಾವು ಆ ಬಗ್ಗೆ ಯೋಚಿಸದ ಕಾರಣ ಪರಿಹಾರವೂ ಗೋಚರಿಸೋದಿಲ್ಲ.

Tips to solve a problem in life
Author
Bangalore, First Published Jun 30, 2020, 5:30 PM IST

ಉಗುರಲ್ಲಿ ಸರಿಪಡಿಸಬಹುದಾದ ಸಮಸ್ಯೆಗೆ ಕೊಡಲಿ ತೆಗೆದುಕೊಂಡರು ಎಂಬ ಮಾತಿದೆ. ಅಂದ್ರೆ ಸಮಸ್ಯೆ ಪುಟ್ಟದಾಗಿರುತ್ತೆ, ಆದ್ರೆ ಅದನ್ನು ಸರಿಪಡಿಸಲು ಸರಳ ವಿಧಾನದ ಬದಲು ಜಟಿಲ ಮಾರ್ಗ ಅನುಸರಿಸುತ್ತೇವೆ. ಇದಕ್ಕೆ ಕಾರಣ ಸಮಸ್ಯೆ ಮೂಲ ಹುಡುಕಲು ವಿಫಲವಾಗೋದು. ಬಹುತೇಕ ಸಮಸ್ಯೆ ಮೂಲ ನಮ್ಮೊಳಗೇ ಇರುತ್ತದೆ. ನಮ್ಮೊಳಗೇ ಸೃಷ್ಟಿಯಾಗುವ ಸಮಸ್ಯೆಯನ್ನು ಪತ್ತೆ ಹಚ್ಚಲು ಜಾಗೃತ ಮನಸ್ಸಿನ ಅಗತ್ಯವಿದೆ.ಅಂದರೆ ಸೂಕ್ಷ್ಮವಾದ ಒಳಗಣ್ಣಿನ ಮೂಲಕ ಮಾತ್ರ ನಾವು ಅದನ್ನು ಪತ್ತೆಹಚ್ಚಲು ಸಾಧ್ಯ? ಈ ಸೂಕ್ಷ್ಮವಾದ ಒಳಗಣ್ಣು ನಮಗೆ ಆತ್ಮವಿಮರ್ಶೆ ಮೂಲಕ ಸಿಗುತ್ತದೆ.ಏಕಾಂತದಲ್ಲಿ ಕುಳಿತು ನಮ್ಮನ್ನು ನಾವು ವಿಮರ್ಶೆಗೊಳಪಡಿಸಿದಾಗ ಸಮಸ್ಯೆಯ ಸುಳಿವು ಸಿಗುತ್ತದೆ. ಸಮಸ್ಯೆ ಗೊತ್ತಾದ ಮೇಲೂ ಅದರ ಪರಿಹಾರದ ಬಗ್ಗೆ ಯೋಚಿಸದೆ ಕಾಲಹರಣ ಮಾಡಿದರೆ ಅದರಿಂದ ಇನ್ನಷ್ಟು ತೊಂದರೆ ಎದುರಾಗುತ್ತದೆ. ಕೆಲವೊಮ್ಮೆ ಸಮಸ್ಯೆ ಸಣ್ಣದಿರುವಾಗಲೇ ನಮ್ಮ ಅರಿವಿಗೆ ಬಂದಿರುತ್ತದೆ. ಆದರೆ,ಇದು ಚಿಕ್ಕ ಸಮಸ್ಯೆ, ಇದರಿಂದ ದೊಡ್ಡ ತೊಂದರೆಯಾಗುವುದಿಲ್ಲ ಎಂದು ಭಾವಿಸಿಕೊಂಡು ಸುಮ್ಮನಿದ್ದು ಬಿಡುತ್ತೇವೆ. ಕೆಲವೊಮ್ಮೆ ಸಮಸ್ಯೆ ಚಿಕ್ಕದೆಂದು ನಾವು ತೋರುವ ನಿರ್ಲಕ್ಷ್ಯದಿಂದ ಅದು ದೊಡ್ಡದಾಗಿ ಬೆಳೆದು ನೆಮ್ಮದಿಯನ್ನೇ ಕಸಿದು ಬಿಡುತ್ತದೆ. ಆದಕಾರಣ ಸಮಸ್ಯೆ ಚಿಕ್ಕದಿರುವಾಗಲೇ ಅದನ್ನು ಪರಿಹರಿಸಿಕೊಂಡು ಬಿಟ್ಟರೆ ಭವಿಷ್ಯದಲ್ಲಿ ಅದು ಹೆಮ್ಮರವಾಗಿ ಬೆಳೆಯೋದನ್ನು ತಡೆಯಬಹುದು. 

ಸೆಲೆಬ್ರಿಟಿ ಸೆಕ್ಸ್ ಗೊಂಬೆಗಳಿಗೆ ಭಾರಿ ಬೇಡಿಕೆ!

ಸಮಸ್ಯೆ ಗುರುತಿಸುವುದು ಹೇಗೆ?
ಮನಸ್ಸಿಗೆ ಕಿರಿಕಿರಿ ಉಂಟು ಮಾಡುವ, ಸದಾ ನೆಮ್ಮದಿ ಕೆಡಿಸುವ ವಿಷಯ ಯಾವುದು ಎಂಬುದನ್ನು ಗುರುತಿಸಿ. ಅದೇ ನಿಮಗೆ ಸಮಸ್ಯೆಯಾಗಿ ಕಾಡುತ್ತಿರುತ್ತದೆ. ಹೀಗೆ ಸಮಸ್ಯೆಯ ಮೂಲ ಸಿಕ್ಕಿದ ಬಳಿಕ ಅದನ್ನು ಪರಿಶೀಲನೆಗೊಳಪಡಿಸಿ. ಆ ಸಮಸ್ಯೆ ಹೇಗೆ ಹುಟ್ಟಿಕೊಂಡಿತು? ಆ ಸಮಸ್ಯೆಯಿಂದ ನಿಮಗೆ ಹೇಗೆ ತೊಂದರೆಗಳು ಎದುರಾಗುತ್ತಿವೆ? ಎಂಬುದನ್ನು ಪತ್ತೆ ಹಚ್ಚಿ. ಆ ಬಳಿಕ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದರ ಬಗ್ಗೆ ಯೋಚಿಸಿ.

Tips to solve a problem in life

ಸಮಸ್ಯೆಯಿದ್ರೇನೆ ಬದುಕು ಸೊಗಸು
ಸಮಸ್ಯೆಯಿಲ್ಲದೆ ಬದುಕುವುದು ಸಾಧ್ಯವೇ ಇಲ್ಲ. ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಅದರಿಂದ ಹೊರಬರುವ ಮಾರ್ಗವನ್ನು ಹುಡುಕಿಕೊಂಡು ನಾವು ಮುಂದೆ ಸಾಗುತ್ತಿರಬೇಕು. ಹೇಗೆ ಬದುಕಿನಲ್ಲಿ ಕಷ್ಟ-ಸುಖಗಳು ಸರ್ವೇಸಾಮಾನ್ಯವೋ,ಅದೇರೀತಿ ಸಮಸ್ಯೆಗಳು ಕೂಡ. ಸಮಸ್ಯೆಯಿದ್ದಾಗ ಮಾತ್ರ ಬದುಕಿಗೊಂದು ರೋಚಕತೆ ಸಿಗುತ್ತದೆ. ಅಷ್ಟೇ ಅಲ್ಲ, ಎಂಥದ್ದೇ ಕಷ್ಟ ಎದುರಾದರೂ ಅದನ್ನು ಧೈರ್ಯದಿಂದ ಎದುರಿಸಿ ಮುನ್ನಡೆಯಲು ಶಕ್ತಿ ಸಿಗುತ್ತದೆ. ಹೀಗಾಗಿ ಸಮಸ್ಯೆ ಎದುರಾದಾಗ ಮೊದಲು ಅದನ್ನು ಗುರುತಿಸಿ. ಆ ಬಳಿಕ ಅದನ್ನು ಎದುರಿಸುವ ಮಾರ್ಗ ಕಂಡುಕೊಳ್ಳಿ. 

ಮದುವೆ ಅಂದ್ರೆ ಸುಮ್ಮನೇನಾ?

ಸಮಸ್ಯೆಗೊಂದು ಪರಿಹಾರ ಇದ್ದೇಇರುತ್ತೆ
ಸಮಸ್ಯೆಯಿದೆ ಎಂದ ಮೇಲೆ ಅದಕ್ಕೊಂದು ಪರಿಹಾರವೂ ಇರುತ್ತೆ. ಅದನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕಷ್ಟೆ. ಈ ಪರಿಹಾರದ ಪತ್ತೆಗೆ ಧೈರ್ಯ, ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪ ಅಗತ್ಯ. ಸಮಸ್ಯೆ ಎದುರಾದ ತಕ್ಷಣ ಬಹುತೇಕರು ಭಯ ಬೀಳುತ್ತಾರೆ. ಈ ಭಯ ನಮ್ಮೊಳಗಿನ ಆತ್ಮವಿಶ್ವಾಸವನ್ನೂ ಉಡುಗಿಸುತ್ತದೆ. ಪರಿಣಾಮ ಮನಸ್ಸು ಸಮಸ್ಯೆಯಿಂದ ಹೊರಬರುವ ಹಾದಿಗಳತ್ತ ಹೆಚ್ಚು ಯೋಚಿಸಲು ಸಾಧ್ಯವಾಗೋದೆ ಇಲ್ಲ. ಸಮಸ್ಯೆಯ ಬಗ್ಗೆಯೇ ಯೋಚಿಸಿ ಯೋಚಿಸಿ ಅದರ ಸುಳಿಯೊಳಗೆ ಸಿಲುಕುತ್ತದೆ. ಕೊನೆಗೂ ಸಮಸ್ಯೆಗೆ ಪರಿಹಾರ ಸಿಗೋದೇ ಇಲ್ಲ. ಆದ್ರೆ ಸಮಸ್ಯೆ ಎದುರಾದಾಗ ಧೈರ್ಯದಿಂದ ಅದನ್ನು ವಿಶ್ಲೇಷಿಸಿ ಹೊರಬರುವ ಮಾರ್ಗಗಳತ್ತ ತಾಳ್ಮೆಯಿಂದ ಯೋಚಿಸಿದಾಗ ಪರಿಹಾರವೊಂದು ಸಿಕ್ಕೇಸಿಗುತ್ತದೆ.

ಸಲಹೆ ಕೇಳೋದು ತಪ್ಪಲ್ಲ
ಸಮಸ್ಯೆಯಿಂದ ಹೊರಬರುವ ಯಾವ ಮಾರ್ಗವೂ ಗೋಚರಿಸದಿದ್ದಾಗ, ಬದುಕೇ ಮುಗಿಯಿತೆಂದು ಆತ್ಮಹತ್ಯೆಯಂತಹ ಅತಿರೇಕದ ನಿರ್ಣಯಕ್ಕೆ ಕೆಲವರು ಹೋಗುತ್ತಾರೆ. ಆದ್ರೆ ಇನ್ನೂ ಕೆಲವು ದುರ್ಬಲ ಮನಸ್ಥಿತಿಯವರಿಗೆ ಸಮಸ್ಯೆ ಚಿಕ್ಕದಾಗಿದ್ದು, ಪರಿಹಾರ ಮುಂದಿದ್ದರೂ ಕಾಣಿಸೋದೆ ಇಲ್ಲ. ಇಂಥವರು ಸಮಸ್ಯೆಯನ್ನು ಆತ್ಮೀಯರ ಬಳಿ ಹಂಚಿಕೊಳ್ಳೋದು ಒಳ್ಳೆಯದು. ಇದ್ರಿಂದ ನಿಮಗೆ ಹೊಳೆಯದ ಪರಿಹಾರ ಅವರಿಗೆ ಗೋಚರಿಸಬಹುದು. ಅಲ್ಲದೆ, ನಿಮ್ಮ ಮನಸ್ಸಿನ ಭಾರ ತಗ್ಗಿ, ಒಂದಿಷ್ಟು ಧೈರ್ಯ ಹಾಗೂ ಆತ್ಮವಿಶ್ವಾಸವೂ ಮೂಡುತ್ತೆ.

ತಿರಸ್ಕಾರದ ನೋವು ಬೆಂಬಿಡದೆ ಕಾಡುತ್ತಿದೆಯಾ?

ಆತ್ಮವಿಶ್ವಾಸವೇ ಆಯುಧ
ಆತ್ಮವಿಶ್ವಾಸ ಎಂಥದ್ದೇ ಕಠಿಣ ಸಮಸ್ಯೆಗೂ ಪರಿಹಾರ ಒದಗಿಸಬಲ್ಲದು. ಆದಕಾರಣ ಸಮಸ್ಯೆ ಬಂದಾಗ ಆತ್ಮವಿಶ್ವಾಸ ಕುಗ್ಗದಂತೆ ಎಚ್ಚರ ವಹಿಸೋದು ಅಗತ್ಯ. ಆತ್ಮವಿಶ್ವಾಸ ಕುಗ್ಗಿಸುವಂತಹ ಮಾತುಗಳು, ಪರಿಸ್ಥಿತಿಗಳು ಎದುರಾಗಬಹುದು. ಆದ್ರೆ ಅದ್ಯಾವುದಕ್ಕೂ ಸೊಪ್ಪು ಹಾಕಬೇಡಿ. ಆತ್ಮವಿಶ್ವಾಸ ಹೆಚ್ಚಿಸುವ ಸಂಗತಿಗಳತ್ತ ಗಮನ ಹರಿಸಿ. ಸಕಾರಾತ್ಮಕ ಯೋಚನೆಗೆ ಹೆಚ್ಚು ಮಹತ್ವ ನೀಡಿದಾಗ ಸಹಜವಾಗಿ ಆತ್ಮವಿಶ್ವಾಸವೂ ಹೆಚ್ಚುತ್ತೆ.

Follow Us:
Download App:
  • android
  • ios