ಬಾಲಿವುಡ್ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುತ್ತ ಹತ್ತು ಹಲವಾರು ಕಥೆಗಳು ಹರಿದಾಡುತ್ತಿವೆ.ಅವುಗಳಲ್ಲಿ ಜಾಸ್ತಿ ಸದ್ದು ಮಾಡುತ್ತಿರೋದು ಬಾಲಿವುಡ್‍ನ ಕೆಲವು ಪ್ರಭಾವಿ ವ್ಯಕ್ತಿಗಳು ಈ ನಟನಿಗೆ ಅವಕಾಶ ನಿರಾಕರಣೆ ಮಾಡಿದ್ದರು ಎಂಬುದು. ಇದೇ ಕಾರಣಕ್ಕೆ ಪ್ರತಿಭೆ ಇದ್ದರೂ ಸುಶಾಂತ್ ಅವಕಾಶಗಳಿಂದ ವಂಚಿತರಾಗಬೇಕಾಯಿತು. ಈ ನಿರಾಕರಣೆ ಸುಶಾಂತ್ ಅವರನ್ನು ಖಿನ್ನತೆಗೆ ಜಾರುವಂತೆ ಮಾಡಿದ್ದು ಮಾತ್ರವಲ್ಲ, ಬದುಕನ್ನೇ ಕೊನೆಗಾಣಿಸುವ ನಿರ್ಣಯ ಕೈಗೊಳ್ಳಲು ಕಾರಣವಾಯಿತು ಎಂಬ ಸುದ್ದಿ ಸದ್ದು ಮಾಡುತ್ತಿದೆ. ಸುಶಾಂತ್ ನಟನೆ, ಮಾಧ್ಯಮಗಳಿಗೆ ಅವರು ನೀಡಿದ ಸಂದರ್ಶನಗಳನ್ನು ನೋಡಿದಾಗ ಈತ ಆತ್ಮಹತ್ಯೆಯೇಕೆ ಮಾಡಿಕೊಂಡ ಎಂಬ ಪ್ರಶ್ನೆ ಕಾಡದೇ ಇರದು. ಆತ್ಮವಿಶ್ವಾಸ, ಛಲ, ಕನಸು ಎಲ್ಲವೂ ಅವರ ಮಾತು, ಭಂಗಿಗಳಲ್ಲಿ ಇಣುಕುತ್ತವೆ. ಯಾವ ಆಯಾಮದಲ್ಲಿ ನೋಡಿದರೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸು ಆತನಿಗಿದೆ ಎಂದು ಅನಿಸದು. ಇಂಥ ವ್ಯಕ್ತಿತ್ವದ ಸುಶಾಂತ್ ಬದುಕಿಗೆ ಬೆನ್ನು ಹಾಕಿದ್ದು ಏಕೆ? ನಿರಾಕರಣೆ ಅಥವಾ ತಿರಸ್ಕಾರ ವ್ಯಕ್ತಿಯನ್ನು ಅಷ್ಟು ಕುಗ್ಗಿಸುತ್ತಾ? 

ನೆನಪಿನ ಶಕ್ತಿ ಹೆಚ್ಚಿಸೋಕೆ ಬೇಕು ಈ ಜೀವನಶೈಲಿ

ದೈಹಿಕ ನೋವಿನಷ್ಟೇ ಭಯಂಕರ
ತಿರಸ್ಕಾರ ಭಾವನಾತ್ಮಕ ಹಾಗೂ ಮಾನಸಿಕ ನೋವನ್ನಷ್ಟೇ ನೀಡೋದಿಲ್ಲ, ಅದರ ತೀವ್ರತೆ ಇತರ ದೈಹಿಕ ನೋವಿನಷ್ಟೇ ಗಾಢವಾಗಿರುತ್ತೆ ಎಂಬುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ‘ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ನಲ್ಲಿ ಪ್ರಕಟವಾದ ಅಧ್ಯಯನವೊಂದು ತಿರಸ್ಕಾರದಿಂದ ಉಂಟಾಗುವ ಮಾನಸಿಕ ಯಾತನೆಗೂ ದೈಹಿಕವಾದ ನೋವಿಗೂ ಸಂಬಂಧವಿರೋದನ್ನು ತುಂಬಾ ಸ್ಪಷ್ಟವಾಗಿ ತೋರಿಸಿದೆ. ಬಿಸಿಯಾದ ಕಾಫಿ ಕೈ ಮೇಲೆ ಬಿದ್ದಾಗ ಎಷ್ಟು ಉರಿಯ ಅನುಭವವಾಗುತ್ತದೋ ಅಷ್ಟೇ ನೋವು ಸಂಬಂಧ ಮುರಿದುಕೊಂಡು ದೂರವಾದ ಎಕ್ಸ್ ಲವರ್ ಫೋಟೋ ನೋಡಿದಾಗ ಆಗುತ್ತದೆ ಎಂಬುದು ಈ ಅಧ್ಯಯನದಲ್ಲಿ ಪಾಲ್ಗೊಂಡವರ ಅನುಭವ. ದೈಹಿಕ ನೋವನ್ನು ಔಷಧಿಯಿಂದ ಕೆಲವೇ ಗಂಟೆ, ದಿನಗಳಲ್ಲಿ ಗುಣಪಡಿಸಬಹುದು. ಆದ್ರೆ ಮನಸ್ಸಿಗಾದ ನೋವು, ಅವಮಾನ ಅಷ್ಟು ಬೇಗ ಮಾಗೋದಿಲ್ಲ. ಎಷ್ಟೋ ಬಾರಿ ಇದು ಪ್ರಾಣಕ್ಕೇ ಸಂಚಕಾರ ತಂದುಬಿಡುತ್ತದೆ. ಆದ್ರೆ ತಿರಸ್ಕಾರಕ್ಕೆ ಗುರಿಯಾದ ಸಂದರ್ಭದಲ್ಲಿ ಆ ವ್ಯಕ್ತಿ ಕೆಲವು ಮಾರ್ಗಗಳ ಮೂಲಕ ಮನಸ್ಸಿನ ನೋವು ಮರೆಯಲು ಸಾಧ್ಯವಿದೆ.

ಆತ್ಮಹತ್ಯೆ ಬಗ್ಗೆ ದೀಪಿಕಾ ಪಡುಕೋಣೆ ಏನಂತಾರೆ ಗೊತ್ತಾ?

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋದು
ಜೀವದ ಒಂದು ಭಾಗವೇ ಅಂದ್ಕೊಂಡು ಪ್ರೀತಿಸಿದ ಪ್ರೇಮಿ ತಿರಸ್ಕರಿಸಿದಾಗ ಅಥವಾ ಆತ್ಮೀಯ ಸ್ನೇಹಿತರು ಅಥವಾ ಬಂಧುಗಳೇ ದೂರ ಮಾಡಿದಾಗ ಮೊದಲ ಏಟು ಬೀಳೋದು ಆತ್ಮವಿಶ್ವಾಸಕ್ಕೆ. ನನ್ನೇಕೆ ತಿರಸ್ಕರಿಸಿದ್ರು? ನನ್ನಲ್ಲಿ ಏನು ಕೊರತೆಯಿದೆ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುವ ಜೊತೆ ನಮ್ಮ ಸಾಮಥ್ರ್ಯದ ಮೇಲೆ ನಮಗೇ ಸಂದೇಹ ಮೂಡುತ್ತದೆ. ಇದು ದಿನೇದಿನೆ ಮಿದುಳನ್ನು ಕೊರೆಯುವ ಜೊತೆ ಮಾನಸಿಕವಾಗಿ ಕುಗ್ಗಿಸುತ್ತದೆ. ಹೀಗಾಗಿ ಯಾರಾದ್ರೂ ನಮ್ಮನ್ನು ತಿರಸ್ಕರಿಸಿದಾಗ ಮೊದಲು ಮಾಡಬೇಕಾದ ಕೆಲಸ ನಮ್ಮ ಆತ್ಮವಿಶ್ವಾಸ ಕುಸಿಯದಂತೆ ಎಚ್ಚರ ವಹಿಸೋದು. ಪ್ರತಿ ಘಟನೆಗೂ ಒಂದು ಕಾರಣವಿರುತ್ತೆ. ಅಷ್ಟೇ ಅಲ್ಲ, ಅತ್ಯುತ್ತಮವಾದ ಏನೋ ಒಂದು ಮುಂದೆ ನಮಗಾಗಿ ಕಾಯುತ್ತಿರುತ್ತೆ ಎಂಬುದನ್ನು ಆಗಾಗ ನೆನಪಿಸಿಕೊಳ್ಳಬೇಕು. ಪ್ರತಿ ವ್ಯಕ್ತಿಯಲ್ಲೂ ಏನೋ ಒಂದು ವಿಶೇಷವಿರುತ್ತೆ. ಇತರರು ತಿರಸ್ಕರಿಸಿದರು ಎಂಬ ಕಾರಣಕ್ಕೆ ನಮ್ಮನ್ನು ನಾವು ಕಡಿಮೆ ಅಂದಾಜಿಸುವ ಅಗತ್ಯವಿಲ್ಲ. 

ಸಕಾರಾತ್ಮಕ ಅಂಶಗಳನ್ನು ಗಮನಿಸಿ
ತಿರಸ್ಕಾರಕ್ಕೊಳಗಾದ ತಕ್ಷಣ ಮನಸ್ಸಿನಲ್ಲಿ ಮೊದಲು ನಕಾರಾತ್ಮಕ ಯೋಚನೆಗಳೇ ಮೂಡುತ್ತವೆ. ಲವ್ ಬ್ರೇಕ್ ಅಪ್ ಆದ ತಕ್ಷಣ ಈ ಭೂಮಿ ಮೇಲೆ ನನಗ್ಯಾರೂ ಇಲ್ಲ, ಇಲ್ಲಿ ಬದುಕಲು ನಾನು ಅನರ್ಹ ಎಂಬ ಭಾವನೆ ಮನಸ್ಸಿನಲ್ಲಿ ಮೂಡಬಹುದು. ಆದ್ರೆ ಈ ಸಮಯದಲ್ಲಿ ನಮಗೆ ನಾವೇ ಕೌನ್ಸಿಲಿಂಗ್ ಮಾಡಿಕೊಳ್ಳಬೇಕು. ಕತ್ತಲಿನ ಬಳಿಕ ಬೆಳಕಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಕಷ್ಟದ ಮುಂದೆ ಸುಖ ಇದ್ದೇಇರುತ್ತೆ. ಯಶಸ್ಸೇ ತಿರಸ್ಕಾರಕ್ಕೆ ತಕ್ಕ ಉತ್ತರ. ಹೀಗಾಗಿ ಬದುಕಿನಲ್ಲಿ ಸಾಧನೆಯತ್ತ ದಾಪುಗಾಲು ಹಾಕಲು ಭರವಸೆಯ ಕಿರಣವೊಂದನ್ನು ನಾವೇ ಹುಡುಕಬೇಕು.

ಖಿನ್ನತೆಗೆ ಈ ಗ್ರಹಗಳೇ ಕಾರಣ

ಅಗತ್ಯವೆನಿಸಿದಾಗ ನೆರವು ಪಡೆಯಿರಿ
ಶರೀರದ ಗಾಯ ಆಳವಾಗಿದ್ದಾಗ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುತ್ತೇವೆ. ಆದರೆ, ಮನಸ್ಸಿಗಾದ ಗಾಯಕ್ಕೆ ನಾವೇ ಚಿಕಿತ್ಸೆ ನೀಡಲು ಮುಂದಾಗುತ್ತೇವೆ. ಆ ಗಾಯ ಅದೆಷ್ಟೇ ದೊಡ್ಡದಾಗಿದ್ರೂ ಅದನ್ನು ಆತ್ಮೀಯರಿಗೂ ಹೇಳೋದಿಲ್ಲ. ಅದ್ರಲ್ಲೂ ತಿರಸ್ಕಾರಕ್ಕೊಳಗಾದಾಗ ಆ ನೋವನ್ನು ಇನ್ನೊಬ್ಬರ ಬಳಿ ಹಂಚಿಕೊಳ್ಳೋದು ಬಹುತೇಕರಿಗೆ ಕಷ್ಟವಾಗುತ್ತೆ. ಇದ್ರಿಂದ ಆ ನೋವು ಇನ್ನಷ್ಟು ಹೆಚ್ಚುತ್ತ ಸಾಗಿ ಅದನ್ನು ಗುಣಪಡಿಸಲು ನಿಮ್ಮ ಕೈಯಲ್ಲಿ ಅಸಾಧ್ಯ ಅನ್ನಿಸಿಬಿಡುತ್ತೆ. ಇಂಥ ಸಂದರ್ಭದಲ್ಲಿ ನೀವು ಆಪ್ತಸಲಹೆಗಾರರು ಅಥವಾ ಆತ್ಮೀಯರಾದವರ ಬಳಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳೋದು ಅಗತ್ಯ. ಇದ್ರಿಂದ ಮನಸ್ಸಿನ ನೋವಿನ ಭಾರ ಕಡಿಮೆಯಾಗುತ್ತೆ.