ಬ್ರೇಕ್‌ಫೇಲ್ ಆದರೂ ಗಾಡಿ ಮುಂದೆ ಹೋಗಲೇಬೇಕು?
ವಾಹನ ಎಷ್ಟೇ ವೇಗವಾಗಿ ಸಾಗುತ್ತಿದ್ದರೂ ಅಡೆತಡೆ ಬಂದಾಗ ಅಯಾಚಿತವಾಗಿ ಕಾಲು ಬ್ರೇಕನ್ನು ಅದುಮುತ್ತದೆ. ಕಣ್ಣಿಗೆ ಇನ್ನೇನೋ ಬೀಳುತ್ತದೆ ಎಂಬಷ್ಟರಲ್ಲಿ ತನ್ನಿಂತಾನೆ ರೆಪ್ಪೆಗಳು ಮುಚ್ಚಿಕೊಳ್ಳುತ್ತವೆ. ಅದು ಸಮಯಪ್ರಜ್ಞೆ. ದೇವರು ಕೊಟ್ಟವರ. ನಾವು ಚಿಂತಿಸುವ ಮೊದಲೇ ಯಾಂತ್ರಿಕವಾಗಿ ನಡೆಯುವ ಪ್ರಕ್ರಿಯೆಗಳವು. ಮಾತನಾಡುತ್ತಲೇ ಡ್ರೈವ್ ಮಾಡುವಾಗ ಗೇರು ತನ್ನಷ್ಟಕೇ ಬದಲಾಗುತ್ತಿರುವ ಹಾಗೆ.
-ಕೃಷ್ಣಮೋಹನ ತಲೆಂಗಳ
ಎಲ್ಲ ಸಂದಿಗ್ಧಗಳನ್ನೂ ಬರೆದಿಟ್ಟಂತೆ ಎದುರಿಸಲು ಆಗುವುದಿಲ್ಲ. ಅಗ್ನಿಶಾಮಕ ಯಂತ್ರವನ್ನು ಬೆಂಕಿ ನಂದಿಸಲು ಸಿದ್ಧಪಡಿಸಿ ಇರಿಸಲಾಗಿರುತ್ತದೆಯೇ ವಿನಹ ಇಷ್ಟೇ ಬೆಂಕಿ, ಇಂಥದ್ದೇ ದಿವಸ ಹೊತ್ತಿಕೊಂಡರೆ ಉರಿಸುವುದಕ್ಕಲ್ಲ. ತೀವ್ರ ನಿಗಾ ಘಟಕದಲ್ಲಿರುವ ರೋಗಿಯ ಜೀವ ಉಳಿಸುವುದು ಮೊದಲ ಆದ್ಯತೆ ಆಗಿರುತ್ತದೆಯೇ ವಿನಹ ಇಂತಿಷ್ಟೇ ವರ್ಷ ಆತನ ಆಯುಷ್ಯವನ್ನು ವೃದ್ಧಿಸುವಂತೆ ಮಾಡುವುದಲ್ಲ. ನೀರನ್ನು ನಾವಾಗಿ ಬೇಕಾದಲ್ಲಿಗೆ ಹರಿಸಲು ಅಸಾಧ್ಯವಾದ ಸಂದರ್ಭಗಳಲ್ಲಿ ನೀರು ಹರಿದಲ್ಲೇ ನಾವೂ ತೇಲಬೇಕಾದ ದಿನಗಳೂ ಬರುತ್ತವೆ. ಕಂಡು ಕೇಳರಿಯದ ಲಾಕ್‌ಡೌನ್ ನಡುವೆ ಸಿಕ್ಕಿಕೊಂಡ ಹಾಗೆ. ಆಕಸ್ಮಿಕ, ಅನಿರೀಕ್ಷಿತಗಳೇ ಹೊಸ ಸಾಧ್ಯತೆಗಳನ್ನು ತೆರೆಯುವುದು. ಹಾಗಂತ ನಮಗೆ ಗೋಚರವಾಗುವಾಗ ನಾವು ತುಂಬ ಮುಂದೆ ಬಂದಾಗಿರುತ್ತದೆ.
1) ನಾಳೆ ಬದುಕಿನಲ್ಲಿ ಹೀಗಾದರೆ ಹೇಗೆ ಅಂತ ಟೈಮ್ ಟೇಬಲ್ ಬರೆದಿಡಬಹುದು. ಆದರೆ ಅಲ್ಲಿ ಕೊನೆಯ ಕ್ಷಣದ ಬದಲಾವಣೆಗಳಿಗೆ ಮನಸ್ಸೂ, ವ್ಯವಸ್ಥೆಯೂ ಸಿದ್ಧವಿರಲಿ.
2) ಕೆಲವೊಂದು ಸನ್ನಿವೇಶಗಳಿಗೆ ನಾವು ಪ್ರೇಕ್ಷಕ ಮಾತ್ರರು, ನಾವು ತೀರ್ಮಾನಗಳಲ್ಲಿ ನಿರ್ಣಾಯಕರಲ್ಲ. ಅಂತಹ ಪರಿಸ್ಥಿತಿಗಳಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮ ಎಂಬಂಥ ಪರಿಸ್ಥಿತಿ ಬಂದಾಗ ಅದನ್ನು ಪಾಲಿಸಲು ಮನಸ್ಸು ಸಿದ್ಧವಿರಬೇಕು, ಪ್ಲಾನ್ ಬಿ ಎಂಬುದಿದ್ದರೆ ಇಂತಹ ಸಂದರ್ಭ ದಾಟಲು ಅನುಕೂಲ.
ದಾರಿ ನಿಂತಾಗ ಮುಂದೆ ಸಾಗಲೇಬೇಕು, ಅದೇ ಜಗದ ನಿಯಮ
3) ಇತಿಹಾಸ ಪಾಠ ಕಲಿಸುತ್ತದೆ ನಿಜ. ಆದರೆ ಹೊಸ ಹೊಸ ಇತಿಹಾಸಗಳು ಸೃಷ್ಟಿಯಾಗುವ ಕಾಲಘಟ್ಟದಲ್ಲಿ ನಾವು ಇತಿಹಾಸದ ನಿರ್ಮಾತೃಗಳಾಗಿರುತ್ತೇವೆ. ಆಗ ನಾವೊಂದು ದಾರಿ ಹುಟ್ಟು ಹಾಕಬೇಕಾಗುತ್ತದೆ, ಅದಕ್ಕೆ ನೀಲನಕಾಶೆ ಸಿಕ್ಕುವುದಿಲ್ಲ. ಅದು ನಮ್ಮಿಂದ ಸೃಷ್ಟಿಯಾಗಬೇಕು. ಅದಕ್ಕೆ ಆತ್ಮವಿಶ್ವಾಸ ಬೇಕು.
4) ನಿನ್ನ ಭವಿಷ್ಯ ನಾಳೆಯಿಂದ ಹೀಗಲ್ಲ, ಹಾಗೆ ಎಂಬಂಥ ಕಠಿಣ ಸನ್ನಿವೇಶ ಬಂದಾಗ ಮನಸ್ಸು ಅದನ್ನು ಒಪ್ಪಲು ಕಷ್ಟಪಡಬಹುದು. ಆದರೆ ಪರಿಸ್ಥಿತಿಗೆ ಒಪ್ಪಬೇಕಾದ ಅನಿವಾರ್ಯತೆ ಇದೆ. ಎಷ್ಟುಬೇಗ ಮನಸ್ಸು ಒಪ್ಪುತ್ತದೋ ಅಷ್ಟುಬೇಗ ಬದಲಾವಣೆಗಳಿಗೆ ನಾವು ತೆರೆದುಕೊಳ್ಳುತ್ತೇವೆ. ತೆರೆದುಕೊಳ್ಳದಿದ್ದರೆ ನಾವಲ್ಲೇ ಬಾಕಿ ಆಗುತ್ತೇವೆ. ಕೆಲವು ಪರಿಸ್ಥಿತಿಗಳಿಗೆ ಪ್ಲಾನ್ ಬಿ ಅನ್ವಯಿಸುವುದಿಲ್ಲ. ಅಂತಹ ಸಂದರ್ಭ ಉಪಯೋಗಕ್ಕೆ ಬರುವ ವಿಚಾರವಿದು.
ಜೀವನದಲ್ಲಿ ಯಶಸ್ಸು ಪಡೆಯಲು ಭಗವಂತನನ್ನು ಹೀಗೆ ಆರಾಧಿಸಿ
5) ಕೆಲವೊಂದು ಸಲ ನಿರ್ಧಾರ ತೆಗೆದುಕೊಳ್ಳುವಷ್ಟುಸಮಯ ಇರುವುದಿಲ್ಲ. ಬೈಕಿನೆದುರು ನಾಯಿ ಏಕಾಏಕಿ ಅಡ್ಡ ಬಂದಾಗ ಬ್ರೇಕ್ ಹಾಕಬೇಕೋ, ನಾಯಿಯ ಮೇಲೆ ವಾಹನ ಓಡಿಸಬೇಕು, ಮಾರ್ಗ ಬಿಟ್ಟು ಪಕ್ಕಕ್ಕೆ ಬೈಕು ತಿರುಗಿಸಬೇಕೋ... ಮೂರೇ ಆಯ್ಕೆ ಇರುವುದು. ಒಂದೆರಡು ಸೆಕೆಂಡುಗಳಲ್ಲಿ ಮನಸ್ಸು ಅಷ್ಟೆಲ್ಲ ಪ್ರೊಸೆಸಿಂಗ್ ಮಾಡಲು ಅಸಾಧ್ಯ. ಹಾಗಾಗಿ ಅನುಭವ ಮತ್ತು ವಿವೇಚನೆಯ ಸಮ್ಮಿಶ್ರಣದ ತೀರ್ಮಾನ ಮಾತ್ರ ಆ ಕ್ಷಣ ಸ್ವಯಂಚಾಲಿತವಾಗಿ ಲಾಗೂ ಆಗುತ್ತದೆ.
ಸಂದಿಗ್ಧತೆಗಳಿಗೆ ಪರಿಹಾರ ಕೂಡಿಟ್ಟಕಾಸಿಗೆ ಬರುವ ಬಡ್ಡಿಯ ಹಾಗಲ್ಲ. ಕೆಲವು ಪ್ರಯೋಗದಿಂದ, ಕೆಲವು ಹುಚ್ಚು ಧೈರ್ಯದಿಂದ ಇನ್ನು ಕೆಲವು ನಿರ್ಲಿಪ್ತ ನಿರ್ಧಾರಗಳಿಂದ ಸಿಗುತ್ತವೇ ಹೊರತು ಭಾವುಕ ಹತಾಶೆಯಿಂದಲ್ಲ.