Asianet Suvarna News Asianet Suvarna News

ನೆರೆಮನೆಯವರೊಂದಿಗಿನ ಬಾಂಧವ್ಯ ಹೊರೆಯಾಗದಿರಲು ಈ ಟಿಪ್ಸ್ ಫಾಲೋ ಮಾಡಿ!

ತುರ್ತು ಸಂದರ್ಭಗಳಲ್ಲಿ ನಮ್ಮ ನೆರವಿಗೆ ಬರುವುದು ಅಕ್ಕಪಕ್ಕದ ಮನೆಯವರೇ. ನೆರೆಮನೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದು ಎಷ್ಟು ಮುಖ್ಯವೋ, ಆ ಸಂಬಂಧ ಇಬ್ಬರಿಗೂ ಹೊರೆಯಾಗದಂತೆ ಎಚ್ಚರ ವಹಿಸುವುದು ಕೂಡ ಅಷ್ಟೇ ಮುಖ್ಯ
 

Tips for maintaining good relationship with neighbour
Author
Bangalore, First Published Dec 24, 2019, 5:07 PM IST

ನಗರದ ಬಿಡುವಿಲ್ಲದ ಬದುಕಿನಲ್ಲಿ ಅಕ್ಕಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೇ ಬಹುತೇಕರಿಗೆ ತಿಳಿದಿರುವುದಿಲ್ಲ. ಆಫೀಸ್-ಮನೆ ನಡುವಿನ ಜಂಜಾಟದಲ್ಲಿ ಕಳೆದು ಹೋಗಿರುವ ಮನಸ್ಸಿಗೆ ತಿಳಿದುಕೊಳ್ಳುವ ಕುತೂಹಲವೂ ಇರುವುದಿಲ್ಲ. ಆದರೆ, ಏನೋ ಅವಘಡ ಸಂಭವಿಸಿದಾಗ, ತುರ್ತು ನೆರವಿನ ಅಗತ್ಯವಿದ್ದಾಗ ಅಕ್ಕಪಕ್ಕದ ಮನೆಗಳಲ್ಲಿರುವವರೇ ಬೇಕಾಗುತ್ತಾರೆ ಎಂಬುದನ್ನು ಮರೆಯಬಾರದು. ನಾವ್ಯಾರೂ ಇನ್ನೊಬ್ಬರ ನೆರವಿಲ್ಲದೆ ಬದುಕಲು ಸಾಧ್ಯವೇ ಇಲ್ಲ.

ಪರಸ್ಪರ ಸಹಾಯ ಹಸ್ತ ಚಾಚುವುದರಿಂದ ಮಾತ್ರ ನೆಮ್ಮದಿಯ ನಾಳೆಗಳನ್ನು ಕಳೆಯಲು ಸಾಧ್ಯ. ಹೀಗಾಗಿ ಅಪರಿಚಿತ ಊರಲ್ಲಿ ಅಕ್ಕಪಕ್ಕದವರನ್ನು ಚಿರಪರಿಚಿತರನ್ನಾಗಿಸಿಕೊಳ್ಳುವುದು ಅಗತ್ಯ. ಹಾಗಂತ ನಿಮ್ಮೆಲ್ಲ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳುವಷ್ಟು ಆತ್ಮೀಯರಾಗಿ ಎಂದು ಖಂಡಿತ ಹೇಳುವುದಿಲ್ಲ. ಆದರೆ, ಎದುರು ಸಿಕ್ಕಾಗ ಒಂದು ನಗು, ಉಭಯ ಕುಶಲೋಪರಿ, ಅಗತ್ಯ ಸಂದರ್ಭಗಳಲ್ಲಿ ನೆರವು ನೀಡುವಷ್ಟಾದರೂ ಸ್ನೇಹವಿದ್ದರೆ ಚೆನ್ನ.

ಮಗುವಿಗೆ ಗುಡ್ ಟಚ್, ಬ್ಯಾಡ್ ಟಚ್ ಪಾಠ ಮಾಡುವುದು ಹೇಗೆ ಗೊತ್ತಾ?

ಮುಖಾಮುಖಿಯಾದಾಗ ನಗು ಚೆಲ್ಲಿ, ಹಾಯ್ ಹೇಳಿ: ನೆರೆಮನೆಯವರು ಎದುರು ಸಿಕ್ಕಾಗ ಮಂದಹಾಸ ಬೀರಲು ಬೀಗುಮಾನ ಬೇಡ. ಎಂಥ ಮನಸ್ಸಾದರೂ ನಗುವಿನಿಂದ ಅರಳುತ್ತದೆ. ಎಲ್ಲ ಸಂಬಂಧಗಳನ್ನು ಬೆಸೆಯುವ ಶಕ್ತಿ ನಗುವಿಗಿದೆ. ಹಾಯ್ ಅಥವಾ ಹಲೋ ಎಂದು ಕುಶಲೋಪರಿ ವಿಚಾರಿಸಿ. ಇದರಿಂದ ಇಬ್ಬರ ನಡುವೆ ಸಂವಹನಕ್ಕೆ ಒಂದು ಸೇತುವೆ ಸಿಕ್ಕಂತಾಗುತ್ತದೆ. ಊರು, ಕಚೇರಿ, ಕುಟುಂಬದ ಬಗ್ಗೆ ವಿಚಾರಿಸಿ. ಇದರಿಂದ ನಿಮಗೆ ಅವರ ಬಗ್ಗೆ, ಅವರಿಗೆ ನಿಮ್ಮ ಬಗ್ಗೆ ವಿಶ್ವಾಸ ಮೂಡುತ್ತದೆ.

ಅಗತ್ಯವಿದ್ದಾಗ ನೆರವು ನೀಡಿ: ನಿಮ್ಮ ಪಕ್ಕದ ಮನೆಯಲ್ಲಿ ವೃದ್ಧರಿದ್ದರೆ ತರಕಾರಿಗಳು ತುಂಬಿದ ಚೀಲವನ್ನು ಮೊದಲ ಮಹಡಿಗೆ ಹೊತ್ತು ತರಲು ಹೆಣಗಾಡುತ್ತಿದ್ದರೆ ಅವರ ನೆರವಿಗೆ ಧಾವಿಸಿ. ತರಕಾರಿ ಚೀಲವನ್ನು ಅವರ ಮನೆಯ ತನಕ ಎತ್ತಿಕೊಂಡು ಹೋಗಿ ಕೊಟ್ಟು ಬನ್ನಿ. ಇದೇ ರೀತಿ ನಿಮಗೆ ಅಗತ್ಯವೆನಿಸಿದ ಸಂದರ್ಭದಲ್ಲಿ ಅಥವಾ ಅವರು ನೆರವು ಕೋರಿದ ಸಮಯದಲ್ಲಿ ‘ಇಲ್ಲ’ ಎನ್ನದೆ ಸಹಾಯ ಮಾಡಿ.

ಮರೆಯದೆ ಥ್ಯಾಂಕ್ಸ್ ಹೇಳಿ: ಪಕ್ಕದ ಮನೆಯವರು ಏನಾದರೂ ಸಹಾಯ ಮಾಡಿದರೆ ಅವರಿಗೆ ಥ್ಯಾಂಕ್ಸ್ ಹೇಳಲು ಮರೆಯಬೇಡಿ. ಇದು ತುಂಬಾ ಚಿಕ್ಕ ವಿಷಯವೇ ಎನಿಸಬಹುದು, ಆದರೆ ಸಂಬಂಧಗಳನ್ನು ಬೆಸೆಯುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಕೆಲವರು ತಾವು ಮಾಡಿದ ಸಹಾಯಕ್ಕೆ ಪ್ರತಿಯಾಗಿ ಕೃತಜ್ಞತೆಯನ್ನು ಬಯಸುತ್ತಾರೆ. ಅಲ್ಲದೆ, ಕೃತಜ್ಞತೆ ಸಲ್ಲಿಸುವುದು ಸೌಜನ್ಯದ ಸಂಕೇತ ಕೂಡ ಹೌದು. 

ಮಗುವಿನ ಲಾಲನೆ ಪಾಲನೆಯಲ್ಲಿ ಅಪ್ಪಯಾಕೆ ಅಮ್ಮನಂತಾಗಬಾರದು?

ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಬೇಡಿ: ನೆರೆಮನೆಯವರು ನಿಮಗೆ ಎಷ್ಟೇ ಕ್ಲೋಸ್ ಆಗಿರಲಿ, ಅವರಾಗಿಯೇ ನಿಮ್ಮ ಬಳಿ ವೈಯಕ್ತಿಕ ವಿಚಾರಗಳನ್ನು ಹೇಳಿಕೊಂಡಾಗ ಕೇಳಿಸಿಕೊಳ್ಳಿ ಅಷ್ಟೆ. ಅದುಬಿಟ್ಟು ನೀವಾಗಿಯೇ ಅವರ ಮನೆಯ ವಿಷಯಗಳನ್ನು ಕೆದಕಲು ಹೋಗಬೇಡಿ. ಇದರಿಂದ ನಿಮ್ಮ ಬಗ್ಗೆ ಅವರಿಗೆ ತಪ್ಪು ಭಾವನೆ ಮೂಡಬಹುದು. ಇನ್ನೊಬ್ಬರ ಮನೆಯ ವಿಚಾರದಲ್ಲಿ ಮೂಗು ತೂರಿಸುವುದು ಖಂಡಿತ ತಪ್ಪು. ಇದರಿಂದ ಮುಂದೆ ಎಂದಾದರೂ ಒಂದು ದಿನ ನಿಮ್ಮಿಬ್ಬರ ನಡುವಿನ ಸಂಬಂಧ ಹದಗೆಡುವುದು ಪಕ್ಕಾ. 

ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಬೇಡಿ: ನೆರೆಮನೆಯವರ ವಿಚಾರದಲ್ಲಿ ಹೇಗೆ ನೀವು ಮೂಗು ತೂರಿಸುವುದಿಲ್ಲವೋ ಅದೇ ರೀತಿ ನಿಮ್ಮ ಖಾಸಗಿ ವಿಚಾರಗಳನ್ನು ಅವರ ಬಳಿ ಹಂಚಿಕೊಳ್ಳಲು ಹೋಗಬೇಡಿ. ಕೆಲವರಿಗೆ ಗಾಸಿಪ್ ಮಾಡುವ ಅಭ್ಯಾಸವಿರುತ್ತದೆ. ನೀವು ಹೇಳಿದ ವಿಚಾರಕ್ಕೆ ಇನ್ನಷ್ಟು ಸೇರಿಸಿ ನಿಮ್ಮ ಮನೆಯ ಇತರ ಸದಸ್ಯರ ಬಳಿಯೇ ಚಾಡಿ ಹೇಳಬಹುದು. ಅಥವಾ ಅಕ್ಕಪಕ್ಕದ ಮನೆಯವರ ಬಳಿ ನಿಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಬಹುದು. ಆದಕಾರಣ ನೀವಾಗಿಯೇ ನಿಮ್ಮ ಜುಟ್ಟನ್ನು ನೆರೆ ಮನೆಯವರ ಕೈಗೆ ನೀಡುವ ಕೆಲಸವನ್ನು ಮಾತ್ರ ಯಾವುದೇ ಕಾರಣಕ್ಕೂ ಮಾಡಬೇಡಿ.

ಏಕಾಂತಕ್ಕೆ ಭಂಗ ತರಬೇಡಿ: ನೆರೆಮನೆಯವರು ನಿಮ್ಮೊಂದಿಗೆ ಚೆನ್ನಾಗಿ ಮಾತನಾಡುತ್ತಾರೆ, ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂಬ ಕಾರಣಕ್ಕೆ ಪದೇಪದೆ ಅವರ ಮನೆಗೆ ಭೇಟಿ ನೀಡುವುದು ಸರಿಯಲ್ಲ. ಅವರಿಗೂ ಖಾಸಗಿತನ ಎನ್ನುವುದು ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅವರ ಕುಟುಂಬ ಸದಸ್ಯರೆಲ್ಲ ಒಟ್ಟಾಗಿ ಕುಳಿತು ಮಾತನಾಡುವಾಗ ನೀವಲ್ಲಿಗೆ ಹೋಗಿ ಕುಳಿತುಕೊಳ್ಳುವುದು ಎಷ್ಟು ಸರಿ ಹೇಳಿ?

ಪೋಷಕರನ್ನು ಕಳೆದುಕೊಂಡರೆ ಬದುಕು ಬರಡಾಗುತ್ತದೆ, ಬದಲಾಗುತ್ತದೆ

ಮನಸ್ತಾಪವನ್ನು ಜಾಣತನದಿಂದ ಪರಿಹರಿಸಿಕೊಳ್ಳಿ: ಕೆಲವೊಮ್ಮೆ ಚಿಕ್ಕಪುಟ್ಟ ವಿಷಯಕ್ಕೆ ನೆರೆ ಮನೆಯವರೊಂದಿಗೆ ಮನಸ್ತಾಪವುಂಟಾಗುತ್ತದೆ. ಇಂಥ ಸಮಯದಲ್ಲಿ ಪರಿಸ್ಥಿತಿಯನ್ನು ಶಾಂತಚಿತ್ತದಿಂದ ಹಾಗೂ ಜಾಣತನದಿಂದ ಪರಿಹರಿಸಿಕೊಳ್ಳಿ. ಕೋಪಗೊಂಡು ಬೈಯುವುದು, ಕೆಟ್ಟ ಮಾತುಗಳನ್ನಾಡುವುದು ಮಾಡಬೇಡಿ. ಹೇಳಬೇಕಾಗಿರುವ ವಿಷಯವನ್ನು ಮನಸ್ಸಿಗೆ ಬೇಸರವಾಗದಂತೆ ನೇರವಾಗಿ ತಿಳಿಸಿ. ನಿಮಗೇನು ತೊಂದರೆಯಾಗುತ್ತಿದೆ ಎಂಬುದನ್ನು ವಿವರಿಸಿ. ಇದರಿಂದ ಸಂಬಂಧ ಹದಗೆಡುವುದಿಲ್ಲ.

ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ:  ಬಹುತೇಕ ಸಂಬಂಧಗಳು ಹದಗೆಡಲು ಹಣಕಾಸಿನ ವ್ಯವಹಾರವೇ ಕಾರಣ. ಆದಕಾರಣ ನೆರೆಮನೆಯವರೊಂದಿಗೆ ಸಾಲ ತೆಗೆದುಕೊಳ್ಳುವುದು ಅಥವಾ ಅವರಿಗೆ ಸಾಲ ನೀಡುವಂತಹ ಅಭ್ಯಾಸವನ್ನು ಆದಷ್ಟು ಕಡಿಮೆ ಮಾಡಿ. ಅನಿವಾರ್ಯ ಸಂದರ್ಭಗಳಲ್ಲಿ ಹಣ ತೆಗೆದುಕೊಂಡರೂ ಒಂದೆರಡು ದಿನಗಳಲ್ಲಿ ಹಿಂತಿರುಗಿಸಿ. 

Follow Us:
Download App:
  • android
  • ios