ಮಗುವೊಂದನ್ನು ಮೊದಲ ಬಾರಿ ಕೈಗೆತ್ತಿಕೊಂಡಾಗ ವಿಚಿತ್ರ ಪುಳಕದಲ್ಲಿ ಮಿಂದೇಳುತ್ತಾನೆ ಅಪ್ಪ. ಆತನೂ ಆಗಲೇ ಅಪ್ಪ ಎನಿಸಿಕೊಂಡಿದ್ದು. ಆದರೆ, ನಂತರದ ದಿನಗಳಲ್ಲಿ ಮಗುವಿನ ಅಳು, ರಾತ್ರಿಯೆಲ್ಲ ನಿದ್ದೆ ಮಾಡಲು ಬಿಡದೆ ಹಟ, ಆಟ, ಹತ್ತತ್ತು ನಿಮಿಷಕ್ಕೂ ಮಲಮೂತ್ರ ವಿಸರ್ಜನೆ, ಚೆವಿ, ಜ್ವರ, ಶೀತ, ಕೆಮ್ಮು ಎಂದು ಆಗಾಗ ಕಾಡುವ ಅನಾರೋಗ್ಯ ಇದನ್ನೆಲ್ಲ ನೋಡುವಾಗ ಸಾಕಪ್ಪಾ ಸಾಕು- ಬೆಳೆಸುವ ಹೊಣೆಯೆಲ್ಲ ತಾಯಿಯದು, ಖರ್ಚಿನ ಹೊಣೆ ಮಾತ್ರ ತನ್ನದು ಎಂದುಕೊಳ್ಳುವವರು ಬಹುತೇಕ ಅಪ್ಪಂದಿರು. ಅವರು ಹೊಟ್ಟೆಯಲ್ಲಿ ಮಗು  ಹೊತ್ತಿದ್ದರೆಂದ ಕಾರಣಕ್ಕೆ ಅವರಿಗೇನು ಮಗು ನೋಡಿಕೊಳ್ಳುವುದು ಕರಗತವಲ್ಲ. ಅವರಿಗೂ ಇದು ನಿಮ್ಮಷ್ಟೇ ಹೊಸತು. ಮಗು ಎಂದರೆ ತಾಯಿಯಷ್ಟೇ ಹೊಣೆ ತಂದೆಯದೂ ಅಲ್ಲವೇ? 

ಒಂಬತ್ತು ತಿಂಗಳು ಹೊತ್ತು, ಅತೀವ ನೋವನ್ನನುಭವಿಸಿ ಹೆತ್ತ ಆ ತಾಯಿ ತನ್ನ ಸ್ವಂತ ಆಸೆ, ಕರಿಯರ್ ಎಲ್ಲವನ್ನೂ ಬಿಟ್ಟು ಈಗ ರಾತ್ರಿ ನಿದ್ರೆಯನ್ನೂ ಬಿಟ್ಟು ಇಡೀ ದಿನ ಮಗುವಿನ ಪಾಲನೆ ಪೋಷಣೆಯಲ್ಲೇ ಜೀವ ಸವೆಸಬೇಕೇ? ಇದರಲ್ಲಿ ಹುಟ್ಟಿಸಿದ ತಂದೆ ಪಾಲು ವಹಿಸಿಕೊಳ್ಳಬೇಡವೇ? ಸ್ವಲ್ಪ ಮುದ್ದಾಡಿದರೆ ಎಲ್ಲ ಮುಗಿಯಲಿಲ್ಲ. ಪತ್ನಿಯ ಸುಖವನ್ನು ಹಂಚಿಕೊಂಡಷ್ಟೇ ಕಷ್ಟವನ್ನೂ ಹಂಚಿಕೊಳ್ಳಬೇಕು. ಹೇಗಿದ್ದರೂ ಹೊರುವ, ಹೆರುವ ಅನುಭವದಲ್ಲಿ ನೀವು ಪಾಲುದಾರರಾಗಲು ಸಾಧ್ಯವಿಲ್ಲ. ಕನಿಷ್ಠ ಪಕ್ಷ ಬೆಳೆಸುವ ಅನುಭವವನ್ನಾದರೂ ಪಡೆಯಬಹುದಲ್ಲವೇ? 

ಯಾರೊಬ್ಬರಿಗೂ ಮಗುವಿನ ಜವಾಬ್ದಾರಿ ಸಾಕಪ್ಪಾ ಸಾಕು ಎನಿಸಬಾರದೆಂದರೆ ಅದನ್ನು ಗಂಡ ಹೆಂಡತಿ ಇಬ್ಬರೂ ಸಾಧ್ಯವಾದಷ್ಟು ಹಂಚಿಕೊಳ್ಳಬೇಕು. ಮಗು ಇನ್ನೂ ಸಣ್ಣದಿರುವಾಗ ಅಪ್ಪನೆನಿಸಿಕೊಂಡವ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕು. ಏಕೆಂದರೆ ಆ ಸಮಯದಲ್ಲಿ ತಾಯಿಯು ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳಷ್ಟು ಜರ್ಝರಿತವಾಗಿರುತ್ತಾರೆ. 
 ಈಗ ಒಂದೆರಡು ವರ್ಷ ಎಲ್ಲವನ್ನೂ ನಿಭಾಯಿಸುವುದು ಕಷ್ಟವಾಗಬಹುದು. ಆದರೆ ಮಗು ಬೆಳೆಯುವುದು ನೋಡುವ ಈ ಅನುಭವ ಮತ್ತೆ ದಕ್ಕೀತೇ? ಇದರಿಂದ ಮಗುವನ್ನು ಹೆಚ್ಚು ಅರ್ಥ ಮಾಡಿಕೊಳ್ಳುವ, ಅದರ ಬಳಿ ತಾಯಿಯಷ್ಟೇ ಸಮಾನ ತಂದೆ ಎನಿಸಿಕೊಳ್ಳುವ ಅವಕಾಶ ನಿಮ್ಮದಾಗಲಿದೆ. ಜೊತೆಗೆ, ಮಗುವಿನ ಮಾನಸಿಕ, ಬೌದ್ಧಿಕ ಬೆಳವಣಿಗೆಗೂ ಸಹಾಯವಾಗಲಿದೆ. ಹಾಗಿದ್ದರೆ ಅಪ್ಪ ಎನಿಸಿಕೊಂಡವರು ಮಗುವಿನ ಕಾಳಜಿಯನ್ನು ಹೇಗೆಲ್ಲ ವಹಿಸಿಕೊಳ್ಳಬಹುದು?

ಡ್ಯಾಡ್ಸ್, ಟೇಕ್ ನೋಟ್

ಮಗು ಅತ್ತ ಕೂಡಲೇ ಅದನ್ನು ಅಮ್ಮನ ಕೈಗಿಡುವ ಯೋಚನೆಯನ್ನು ಸಾಧ್ಯವಾದಷ್ಟು ತಡೆದುಕೊಳ್ಳಿ. ಸ್ವಲ್ಪ ತಾಳ್ಮೆ ವಹಿಸಿದರೆ ಮಗುವನ್ನು ಸಮಾಧಾನಪಡಿಸುವ ಹಲವಾರು ಕೌಶಲಗಳು ನಿಮಗೇ ಅರಿವಿಗೆ ಬರುತ್ತವೆ. ಯಾರಿಗೆ ಗೊತ್ತು? ನೀವು ಯಾವುದೋ ಒಂದು ಸಾಲು ಹಾಡು ಹೇಳಿದರೂ ನಿಮ್ಮ ಮಗು ನಗಬಹುದು. ಅಥವಾ ಸ್ವಲ್ಪ ತೂಗಿದರೆ ಸಮಾಧಾನವಾಗಬಹುದು. 

ಬೇಬಿ-ಡ್ಯಾಡಿ ಟೈಂ

ಪ್ರತಿದಿನ ಒಂದಿಷ್ಟು ಸಮಯ ಮಗುವಿಗಾಗಿ  ನೀಡುವುದರಿಂದ ಅಪ್ಪ  ಮಗುವಿನ ಬಾಂಡಿಂಗ್ ಉತ್ತಮವಾಗಿ ಬೆಳೆಯುತ್ತಾ ಸಾಗುತ್ತದೆ. ಈ ಸಂದರ್ಭದಲ್ಲಿ ಮಗುವನ್ನು ಹೊರಗೆ ಕರೆದುಕೊಂಡು ಹೋಗುವುದು, ಅದರೊಂದಿಗೆ ಅಡಗಿಕೊಳ್ಳುವ ಆಟವಾಡುವುದು, ಕೆಲ ಹಾಡುಗಳನ್ನು ಹೇಳುವುದು, ಸುಮ್ಮನೇ ಮುದ್ದು ಮಾಡುವುದು, ಏನಾದರೂ ಹೇಳಿಕೊಡುವುದು ಎಲ್ಲವೂ ಮಗುವಿನೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಹಕಾರಿ. ಅಲ್ಲದೆ ಈ ಸಮಯದಲ್ಲಿ ನಿಮ್ಮ ಮಗುವನ್ನು ನೀವು ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲಿರಿ. 

ಡ್ಯಾಡಿ ಡ್ಯೂಟಿ

ಮಗುವಿನ ಡೈಪರ್ ಬದಲಿಸುವುದು, ಸ್ನಾನ ಮಾಡಿಸಿ ಬಟ್ಟೆ ಹಾಕುವುದು, ವಾಕಿಂಗ್ ಕರೆದುಕೊಂಡು ಹೋಗುವುದು, ತೂಗಿ ಮಲಗಿಸುವುದು- ಹೀಗೆ ಯಾವುದಾದರೊಂದು ಮಗುವಿನ ಕೆಲಸವನ್ನು ನಿಮ್ಮದೇ ಆಗಿಸಿಕೊಂಡು ಅದರಲ್ಲಿ ಎಕ್ಸ್‌ಪರ್ಟ್ ಆಗಿ. ಇದು ನಿಮ್ಮಲ್ಲಿ ಮಗುವಿನೆಡೆಗಿನ ಜವಾಬ್ದಾರಿಯನ್ನು ಹೆಚ್ಚಿಸುವ ಜೊತೆಗೆ ಪ್ರೀತಿಯನ್ನೂ ಹೆಚ್ಚಿಸುತ್ತದೆ. 

ಅಮ್ಮನಿಗೊಂಚೂರು ಸಮಯ ನೀಡಿ

ಮಗು ಹುಟ್ಟಿದಾಗಿನಿಂದ ಕ್ಷಣವೂ ತನಗಾಗಿ ಸಮಯ ಸಿಗದೆ ಒದ್ದಾಡುತ್ತಿರುವ ನಿಮ್ಮ ಪತ್ನಿಗೆ ಸ್ವಲ್ಪವಾದರೂ ಬ್ರೇಕ್ ಸಿಗುವಂತೆ ನೋಡಿಕೊಳ್ಳಿ. ಆಕೆ ಮಲಗಿದಾಗ ಮಗು ಅತ್ತರೆ ಎತ್ತಿ ಆಡಿಸಿ. ಅದನ್ನು ಸಮಾಧಾನಪಡಿಸಿ. ಮಧ್ಯರಾತ್ರಿಯಲ್ಲಿ ಡೈಪರ್ ಚೇಂಜ್ ಮಾಡಬೇಕಾಗಿ ಬಂದಾಗ, ಬಾಟಲ್ ಫೀಡ್ ಮಾಡಬೇಕಾಗಿ ಬಂದಾಗ ನೀವದರ ಜವಾಬ್ದಾರಿ ತೆಗೆದುಕೊಳ್ಳಿ. 

ಒಂದೇ ಟಾಸ್ಕ್‌ಗೆ ಮಿತಿಯಾಗಬೇಡಿ

ಮಗುವು ಅಪ್ಪ ಅಪ್ಪ ಎಂದು ನಿಮ್ಮ ಹಿಂದೆಯೇ ಬರಬೇಕೆಂದರೆ ಮಗುವಿಗೆ ಸಂಬಂಧಿಸಿದ ಎಲ್ಲದರಲ್ಲೂ ಸಾಧ್ಯವಾದಷ್ಟು ಕೈಯಾಡಿಸಬೇಕು. ಮಗುವಿಗೆ ಊಟ ಮಾಡಿಸುವುದು, ಬಟ್ಟೆ ಬದಲಿಸುವುದು, ತೇಗಿಸುವುದು, ಡೈಪರ್ ಬದಲಿಸುವುದು, ಅದು ಅತ್ತಿಂದಿತ್ತ ಅಲೆವಾಗ ಅದರ ಹಿಂದೆ ಮುಂದೆ ಅಲೆದು ಪೆಟ್ಟಾಗದಂತೆ ನೋಡಿಕೊಳ್ಳುವುದು- ಹೀಗೆ ಪೇರೆಂಟ್‌ಹುಡ್‌ನ್ನು ಚೆನ್ನಾಗಿ ಅನುಭವಿಸಿ.