ಮೂರು ವರ್ಷದ ಹೆಣ್ಣು ಮಗುವನ್ನು ಸ್ಕೂಲ್‍ಗೆ ಸೇರಿಸುವಾಗ ಅಲ್ಲಿನ ಪರಿಸರ, ಪುರುಷ ಸಿಬ್ಬಂದಿಯ ಬಗ್ಗೆ ಹೆತ್ತವರು ವಿಚಾರಿಸುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಎಷ್ಟೋ ಬಾರಿ ಮನೆಗೆ ಬರುವ ಸ್ನೇಹಿತರು, ಸಂಬಂಧಿಕರನ್ನೇ ಅನುಮಾನದ ದೃಷ್ಟಿಯಿಂದ ನೋಡುವ ಅನಿವಾರ್ಯತೆ ತಾಯಿಗಿದೆ. ಹಾಗಂತ ಮಗುವನ್ನು ಮನೆಯ ನಾಲ್ಕು ಗೋಡೆಗಳೊಳಗೆ ಕೂಡಿ ಹಾಕಿಕೊಂಡು ಸಾಕಲು ಸಾಧ್ಯವೆ? ಮಗು ಆತ್ಮವಿಶ್ವಾಸದಿಂದ ಸ್ವತಂತ್ರವಾಗಿ ಬದುಕಬೇಕೆಂದರೆ ಹೊರ ಜಗತ್ತಿನೊಂದಿಗೆ ಬೆರೆಯುವುದು ಅಗತ್ಯ. ಹೊರಜಗತ್ತನ್ನು ಎದುರಿಸಲು ಹೆಣ್ಣು ಮಗುವನ್ನು ಸಿದ್ಧಪಡಿಸುವ ಕಾರ್ಯವನ್ನು ಪೋಷಕರು ಸಮರ್ಥವಾಗಿ ನಿಭಾಯಿಸಬೇಕಾದ ಅಗತ್ಯ ಇಂದು ಹಿಂದಿಗಿಂತ ಹೆಚ್ಚಿದೆ.  ಈ ಹಿನ್ನೆಲೆಯಲ್ಲಿ ಮಗುವಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ನಡುವಿನ ವ್ಯತ್ಯಾಸಗಳನ್ನು ತಿಳಿಸುವುದು ಅತ್ಯಗತ್ಯ.

ಮಗುವಿಗೆ ಅರ್ಥವಾಗಲ್ಲ ಎಂಬ ಭಾವನೆ ಬಿಡಿ: ನನ್ನ ಮಗಳು ಚಿಕ್ಕವಳಷ್ಟೆ. ಅವಳಿಗೆ ಈಗಲೇ ಗುಡ್ ಟಚ್, ಬ್ಯಾಡ್ ಟಚ್, ಗಂಡು-ಹೆಣ್ಣಿನಲ್ಲಿನ ದೈಹಿಕ ವ್ಯತ್ಯಾಸ ಮುಂತಾದ ವಿಷಯಗಳ ಬಗ್ಗೆ ತಿಳಿಸಿದರೆ ಅರ್ಥವಾಗುತ್ತದಾ? ಎಂಬ ಅನುಮಾನ ಬಹುತೇಕ ಪೋಷಕರಲ್ಲಿದೆ. ಆದರೆ, ಮಕ್ಕಳಿಗೆ ಅವರದ್ದೇ ಭಾಷೆಯಲ್ಲಿ ವಿವರಿಸಿದರೆ ಖಂಡಿತಾ ಅರ್ಥವಾಗುತ್ತದೆ. ಉದಾಹರಣೆಗೆ ಮೂರು ವರ್ಷದ ಮಗುವಿಗೆ ಆಕೆಯ ದೇಹದ ಈ ಭಾಗಗಳನ್ನು ಯಾರಾದರೂ ಅಣ್ಣ ಅಥವಾ ಅಂಕಲ್ ಮುಟ್ಟಿದರೆ ಅಮ್ಮನಿಗೆ ತಿಳಿಸಬೇಕು ಎಂದೇಳಿ. ಖಂಡಿತಾ ಅವಳಿಗೆ ಅರ್ಥವಾಗುತ್ತದೆ. ಶಾಲೆಯಲ್ಲಿ ಅಂಥ ಘಟನೆಗಳೇನಾದರೂ ನಡೆದರೆ ಆಕೆ ನಿಮಗೆ ತಿಳಿಸುತ್ತಾಳೆ. ಅಷ್ಟೇ ಅಲ್ಲ, ಆ ಭಾಗಗಳನ್ನು ಮುಟ್ಟಿದಾಗ ಕಿರುಚುವುದು ಅಥವಾ ಅಳುವ ಮೂಲಕ ಪ್ರತಿರೋಧ ತೋರಿ ಬೇರೆಯವರ ಗಮನವನ್ನು ತನ್ನತ್ತ ಸೆಳೆಯುವ ಮೂಲಕ ಎದುರಾಗಬಹುದಾದ ಅಪಾಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ.

ಗುಡ್ ಟಚ್ ಯಾವುದು?: ನಿಮ್ಮ ಮಗುವಿಗೆ ಯಾವುದೇ ಕಿರಿಕಿರಿ ಅನಿಸದೆ ಖುಷಿ ನೀಡುವ ಟಚ್‍ನ್ನು ಗುಡ್ ಟಚ್ ಎನ್ನಬಹುದು. ಗುಡ್ ಟಚ್ ಅಥವಾ ದೈಹಿಕವಾಗಿ ತೋರ್ಪಡಿಸುವ ಅಕ್ಕರೆಯು ಮಗುವಿನೊಂದಿಗೆ ನೀವು ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ನೆರವು ನೀಡುತ್ತದೆ. ಉದಾಹರಣೆಗೆ ಹಣೆಗೆ ಮುತ್ತನಿಡುವುದು, ಅಪ್ಪಿಕೊಳ್ಳುವುದು ಮಗುವಿಗೆ ಖುಷಿ ನೀಡುತ್ತದೆ. ಆ ವ್ಯಕ್ತಿಗೆ ತನ್ನಡೆಗಿರುವ ಪ್ರೀತಿ, ಮಮತೆಯನ್ನು ಅದು ಅರ್ಥ ಮಾಡಿಕೊಳ್ಳುತ್ತದೆ. ಇದರಿಂದ ಖಂಡಿತಾ ಮಗು ಕಿರಿಕಿರಿ ಅನುಭವಿಸುವುದಿಲ್ಲ. 
ಗುಡ್ ಟಚ್ ಬಗ್ಗೆ ಮಗುವಿಗೆ ವಿವರಿಸುವಾಗ ತಾಯಿಗೆ ಆ ಬಗ್ಗೆ ಸ್ಪಷ್ಟತೆಯಿರುವುದು ಅಗತ್ಯ. ಹೀಗಾಗಿ ಗುಡ್ ಟಚ್ ಬಗ್ಗೆ ವಿವರಿಸುವಾಗ ಹೀಗೆ ಮಾಡಿ.

-ಗುಡ್ ಟಚ್ ಖುಷಿ ನೀಡುವ ಜೊತೆಗೆ ಸುರಕ್ಷಿತ ಹಾಗೂ ಸುಭದ್ರತೆಯ ಭಾವನೆಯನ್ನು ಮೂಡಿಸುತ್ತದೆ. ಹೀಗಾಗಿ ಮಕ್ಕಳಿಗೆ ಯಾವ ರೀತಿ ಅಪ್ಪಿಕೊಂಡರೆ, ಮುದ್ದು ಮಾಡಿದರೆ ಖುಷಿಯಾಗುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸಿ.

 -ನೀವು ಅಥವಾ ನಿಮ್ಮ ಪತಿ ಮಗುವಿಗೆ ಮುತ್ತು, ಅಪ್ಪುಗೆ ನೀಡುವ ಮೂಲಕ ಗುಡ್ ಟಚ್ ಹೇಗಿರುತ್ತದೆ ಎಂಬುದನ್ನು ತೋರಿಸಿ.

-ದೇಹದ ಯಾವ ಭಾಗಗಳನ್ನು ಮುಟ್ಟಿದರೆ ಅದು ಗುಡ್ ಟಚ್ ಎಂಬುದನ್ನು ತಿಳಿಸಿ. ಉದಾಹರಣೆಗೆ ತಲೆ ಸವರುವುದು. ಬೆನ್ನು ತಟ್ಟುವುದು ಇತ್ಯಾದಿ.

-ಆಕೆಯ ದೇಹದ ಮೇಲೆ ಅವಳಿಗೆ ಸಂಪೂರ್ಣ ಹಕ್ಕಿದ್ದು, ನೀವೂ ಸೇರಿದಂತೆ ಯಾರಾದರೂ ಮುಟ್ಟಿದಾಗ ಕಿರಿಕಿರಿ ಅನಿಸಿದರೆ ಅದನ್ನು ತಕ್ಷಣ ವ್ಯಕ್ತಪಡಿಸುವಂತೆ ತಿಳಿಸಿ. 
ಬ್ಯಾಡ್ ಟಚ್ ಹೇಗಿರುತ್ತೆ?: ಮಗುವಿಗೆ ದೇಹದ ಯಾವುದಾದರೊಂದು ಭಾಗವನ್ನು ಮುಟ್ಟಿದಾಗ ಕಿರಿಕಿರಿ ಅನಿಸುವ, ಮುಜುಗರ ಮೂಡಿಸುವ ಅಥವಾ ಇಷ್ಟವಾಗದ ಭಾವನೆ ಮೂಡಿದರೆ ಅದನ್ನು ಬ್ಯಾಡ್ ಟಚ್ ಎನ್ನಬಹುದು. ಮಗುವಿಗೆ ಬ್ಯಾಡ್ ಟಚ್ ಎಂದರೇನು ಎಂಬುದನ್ನು ಹೀಗೆ ವಿವರಿಸಿ.

- ಆಕೆಯ ದೇಹದಲ್ಲಿನ ಕೆಲವು ಭಾಗಗಳನ್ನು ಬೇರೆಯವರು ಟಚ್ ಮಾಡುವುದು ತಪ್ಪು ಎಂಬುದನ್ನು ತಿಳಿಸಿ ಹೇಳಿ. ಎದೆ ಭಾಗ, ಜನನಾಂಗ, ಪೃಷ್ಠದ ಭಾಗಗಳನ್ನು ಬೇರೆಯವರು ಮುಟ್ಟಬಾರದು ಎಂಬುದನ್ನು ತಿಳಿಸಿ. 

-ಆಕೆಯ ಖಾಸಗಿ ಜಾಗಗಳನ್ನು ಯಾರಾದರೂ ಮುಟ್ಟಿದರೆ ತಕ್ಷಣ ಎಚ್ಚೆತ್ತುಕೊಂಡು ಆ ಪರಿಸ್ಥಿತಿಯಿಂದ ಪಾರಾಗಲು ಪ್ರಯತ್ನಿಸಬೇಕು ಎಂಬುದನ್ನು ತಿಳಿಸಿ.

-ಆಕೆಯ ಜೊತೆಗೆ ಯಾರಾದರೂ ಅಸಭ್ಯವಾಗಿ ನಡೆದುಕೊಂಡರೆ ತಕ್ಷಣ ಸಹಾಯಕ್ಕಾಗಿ ಏನು ಮಾಡಬೇಕು ಎಂಬುದನ್ನು ತಿಳಿಸಿ ಕೊಡಿ. ಉದಾಹರಣೆಗೆ ಶಾಲೆಯಲ್ಲಿ ಅಂಥ ಅನುಭವವಾದ ತಕ್ಷಣ ತರಗತಿಯ ಶಿಕ್ಷಕಿ ಅಥವಾ ಮಗುವಿಗೆ ಆತ್ಮೀಯರಾಗಿರುವ ಶಿಕ್ಷಕಿಯ ಗಮನಕ್ಕೆ ತರುವಂತೆ ತಿಳಿಸಿ. 

ಅನುಮಾನದ ಕಣ್ಣು ಸದಾ ಜಾಗ್ರತವಾಗಿರಲಿ: ಮಗುವಿನ ಪ್ರತಿ ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಹಾಗಂತ ನಿಮ್ಮ ಸುತ್ತಮುತ್ತಲಿರುವ ಎಲ್ಲರ ಮೇಲೂ ಅನುಭವ ಪಡಬೇಕು ಎಂದು ಹೇಳುತ್ತಿಲ್ಲ. ಆದರೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ನಡೆದ ಅನೇಕ ಅಧ್ಯಯನಗಳ ಪ್ರಕಾರ ಅಪರಿಚಿತರಿಗಿಂತ ಮಕ್ಕಳಿಗೆ ಚಿರಪರಿಚಿತವಾಗಿರುವ ವ್ಯಕ್ತಿಗಳೇ ಇಂಥ ಕೃತ್ಯವನ್ನು ಎಸಗುವ ಸಾಧ್ಯತೆ ಅಧಿಕ. 

ಮಗುವಿನ ಕುಟುಂಬದ ಆತ್ಮೀಯ ಸ್ನೇಹಿತರು, ಬಂಧುಗಳು ಇಲ್ಲವೆ ಮನೆಯೊಳಗಿನ ಸದಸ್ಯನೇ ಮಗುವಿನ ಮೇಲೆ ಇಂಥ ದೌರ್ಜನ್ಯ ನಡೆಸಿರುತ್ತಾರೆ. ಇಂಥವರು ಮನೆಗೆ ಬಂದ ತಕ್ಷಣ ಮಗು ಕಿರಿಕಿರಿ ಅನುಭವಿಸಬಹುದು ಇಲ್ಲವೆ ಅಲ್ಲಿಂದ ಬೇರೆಡೆ ತೆರಳಲು ಪ್ರಯತ್ನಿಸಬಹುದು. ಹೀಗಾಗಿ ನಿಮ್ಮ ಮಗು ಇಂಥ ವರ್ತನೆ ತೋರ್ಪಡಿಸಿದಾಗ ಸೂಕ್ಷ್ಮವಾಗಿ ಗಮನಿಸಿ. ಈ ಬಗ್ಗೆ ಮಗುವಿನ ಬಳಿ ಮುಕ್ತವಾಗಿ ಮಾತನಾಡಿ. ಒಂದು ವೇಳೆ ನಿಮ್ಮ ಅನುಮಾನ ನಿಜವಾಗಿದ್ದರೆ ಎಷ್ಟೇ ಹತ್ತಿರದವರಾಗಿದ್ದರೂ ಅವರೊಂದಿಗಿನ ಸಂಬಂಧ ಕಡಿದುಕೊಳ್ಳುವುದು ಉತ್ತಮ. ಏಕೆಂದರೆ ಮಗುವಿಗೆ ತಾಯಿಯೇ ರಕ್ಷಾ ಕವಚ ಎಂಬುದು ನೆನಪಿರಲಿ.