ಬಂಧಗಳನ್ನು ಕಟ್ಟುವ ಮಾತುಗಳೇ ಬಂಧಗಳಲ್ಲಿ ಬಿರುಕನ್ನೂ ಮೂಡಿಸಬಲ್ಲವು! ನಮ್ಮೊಳಗೆ ಬಚ್ಚಿಟ್ಟುಕೊಂಡ ಭಾವನೆಗಳನ್ನು ಬಿಚ್ಚಿಡುವಲ್ಲಿ ಬಹಳಷ್ಟುಸಲ ವಿಫಲವಾಗುವ ನಾವು ನಮ್ಮವರೇ ಆದ ಸ್ನೇಹಿತರು-ಸಂಗಾತಿಗಳನ್ನೇ ಕೆಲವೊಮ್ಮೆ ದ್ವಂದ್ವದಲ್ಲಿಟ್ಟುಬಿಡುತ್ತೇವೆ. ಮಾತುಕತೆಯಲ್ಲಿ ಅನಿಸಿದ್ದನ್ನು ಸಂವಹಿಸಲು ಬಾರದೇ ಇದ್ದಾಗ ಒಂದೋ ಎಲ್ಲವನ್ನೂ ಮುಚ್ಚಿಟ್ಟುಕೊಂಡು ತಟಸ್ಥರಾಗಿ ನಾವೇ ಅಸಮಾಧಾನಿತರಾಗುತ್ತೇವೆ. 

ಮೆನ್‌ಸ್ಟ್ರುವಲ್‌ ಕಪ್‌ಯಿಂದ ಕಿರಿಕಿರಿಯಿಲ್ಲದ ಋತುಸ್ರಾವ?

ಅನಗತ್ಯವಾದ ಮಾತುಗಳನ್ನಾಡಿ ಎದುರಿನವರನ್ನು ಅಸಮಾಧಾನಿತರನ್ನಾಗಿಸುತ್ತೇವೆ, ಇಲ್ಲವೇ ಅಘೋಷಿತವಾಗಿ ಜಾರಿಯಾಗುವ ಪರಸ್ಪರ ಕೆಸರೆರಚಾಟದಲ್ಲೋ- ಮೌನ ಯುದ್ಧದಲ್ಲೋ ಭಾಗಿಯಾಗಿ ಪರಸ್ಪರ ಜರ್ಝರಿತಗೊಳ್ಳುತ್ತೇವೆ.

ಹಾಗೆ ನೋಡಿದರೆ, ನಾವಾಡುವ ಸಾಕಷ್ಟುಮಾತುಗಳ ಹಿಂದಿನ ಉದ್ದೇಶ ಮಾತನಾಡುವುದಷ್ಟೇ ಆಗಿರುವುದೇ ವಿನಃ ಎದುರಿನವರಿಗೆ ಅರ್ಥ ಮಾಡಿಸುವುದಾಗಿರುವುದೇ ಇಲ್ಲ. ಅಂತೆಯೇ ಬಹಳ ಸಾರಿ ನಾವು ಪರರ ಮಾತುಗಳನ್ನು ಕೇಳಿಸಿಕೊಂಡು ಮಾತನಾಡುವುದಿಲ್ಲ, ಮಾತನಾಡಲೆಂದು ಕೇಳಿಸಿಕೊಳ್ಳುತ್ತಿರುತ್ತೇವಷ್ಟೇ!

ಮಕ್ಕಳ ಮಲಗಿಸುವುದೊಂದು ಕಲೆ....

ಹಾಗಿದ್ದಲ್ಲಿ ನಿಷ್ಕ್ರಿಯರಾಗಿ ಉಳಿಯದೇ, ಹೌಹಾರದೇ ಸಂವಹಿಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ.  Assertiveness ಎನ್ನುವಂತೆ ವಿಶ್ವಾಸಾತ್ಮಕವಾದ, ಧೃಡ ಮಾತುಗಳನ್ನಾಡುತ್ತಾ ತನ್ನೊಳಗಿನ ಅನಿಸಿಕೆ, ಭಾವನೆಗಳನ್ನು ಹೇಳಿಕೊಳ್ಳುತ್ತಲೇ ಎದುರಿನವರನ್ನು ನೋಯಿಸದೇ ಅವರ ಅಭಿಪ್ರಾಯಗಳನ್ನೂ ಆಲಿಸಿ-ಗೌರವಿಸುವಂತೆ ನಡೆದುಕೊಳ್ಳಲು ಸಾಧ್ಯವಿದೆ. ಎಲ್ಲಾ ವ್ಯಕ್ತಿಗಳೊಡನೆ, ಸನ್ನಿವೇಶಗಳಲ್ಲಿಯೂ ಹೀಗಿರುವುದು ಅಸಾಧ್ಯವೆಂದೇ ತೋರಿದರೂ, ಕಷ್ಟಕರವೆಂದೇ ಎನಿಸಿದರೂ ಚೆಂದದ ಬಂಧವನ್ನೂ, ಉತ್ತಮ ಮಾನಸಿಕ ಸ್ಥಿತಿಯನ್ನೂ ಹೊಂದುವ ಇಷ್ಟವಿದ್ದಲ್ಲಿ ಒಳ್ಳೆಯದಾಗಿ ಸಂವಹಿಸುವುದನ್ನು ಕಲಿಯುವುದು ಅಗತ್ಯವೂ, ಅನಿವಾರ್ಯವೂ ಆಗಿಬಿಡುವುದು ಸುಳ್ಳಲ್ಲ!

ಹೊಸ ಪರಿಚಯಗಳು, ವೃತ್ತಿ ವಲಯಗಳಲ್ಲಷ್ಟೇ ಅಲ್ಲದೇ ಅತ್ಯಾಪ್ತವಾದ ಸ್ನೇಹ-ಸಂಬಂಧ, ಪ್ರೇಮ ಸಾಂಗತ್ಯಗಳನ್ನು ಕಾಡುವ ಸಂವಹನದ ತೊಂದರೆಯನ್ನು ಸರಿಪಡಿಸಬಲ್ಲ ಕೌಶಲವನ್ನು ರೂಡಿಸಿಕೊಳ್ಳಲು ಕೆಲ ಸಲಹೆಗಳು ಇಲ್ಲಿವೆ:

1. ಸಣ್ಣದಾಗಿ ಪ್ರಾರಂಭಿಸಿ

ದೊಡ್ಡ ವಿಚಾರಗಳನ್ನೆತ್ತಿಕೊಂಡು ದಿಢೀರನೆ ದಿಟ್ಟಮಾತುಗಳನ್ನಾಡಿಬಿಡುವುದು ಕಷ್ಟಸಾಧ್ಯ. ಹಾಗಾಗೇ ಚಿಕ್ಕ ಸಂಗತಿಗಳು ಉದಾ: ನಿಮಗಿಷ್ಟವಿಲ್ಲದಿದ್ದರೂ ಹೇಳಿಕೊಳ್ಳಲಾಗದೇ ಅಪ್ರಿಯ ತಿಂಡಿಗಳನ್ನು ತಿನ್ನುತ್ತಲೋ, ಅಪ್ರಿಯ ಸಂಗೀತವನ್ನು ಆಲಿಸುವುದೋ ಮಾಡುತ್ತಿದ್ದರೆ ಪ್ರಿಯವಾದ ಖಾದ್ಯದ ಆಯ್ಕೆಯನ್ನು, ಸಂಗೀತದ ಅಭಿರುಚಿಯನ್ನು ಸಂವಹಿಸುವುದರೊಂದಿಗೆ ಪ್ರಾರಂಭಿಸಿ

2. ಆರೋಪಿಸದೇ ವ್ಯಕ್ತಪಡಿಸಿ

ನೀನು ಹೀಗೆ ಮಾಡಿದೆ, ಹಾಗೆ ಮಾಡಿದೆ ಎನ್ನುವುದರ ಬದಲು ನಿಮಗೇನೆನಿಸುತ್ತಿದೆ ಹೇಳಿಕೊಳ್ಳಿ. ನಾನು- ನನಗೆ ಎನ್ನುವುದರ ಸುತ್ತ ಮಾತಿರಲಿ ಉದಾ: ಫೋನಿನಲ್ಲಿ ಮಾತನಾಡುತ್ತಾ ನನ್ನನ್ನು ನಿರ್ಲಕ್ಷಿಸುತ್ತೀಯಾ ಎಂದು ಆರೋಪಿಸುವುದರ ಬದಲು ‘ಆಫೀಸಿನಿಂದ ಬಂದ ಕೂಡಲೇ ಫೋನಿನಲ್ಲಿ ಮಾತನಾಡಲಾರಂಭಿಸಿದರೆ ನನಗೆ ನೋವಾಗುವುದು’ ಎನ್ನಬಹುದು

ಯಂಗ್ ಆಗಿ ಕಾಣುವಂತೆ ಮಾಡುತ್ತೆ ಬೆಲ್ಲ!

3. ಪಶ್ಚಾತ್ತಾಪಪಡದಿರಿ

ಬಹಳ ಕಾಲ ತನ್ನ ಭಾವನೆಗಳನ್ನು ಅಲಕ್ಷಿಸುತ್ತಲೋ ಇಲ್ಲವೇ ತನ್ನವರಿಗೆ ನೋವಾಗಬಾರದೆಂದು ಎಂದೂ ಅವರಿಷ್ಟದಂತೆಯೇ ನಡೆದುಕೊಳ್ಳುವುದೇ ಅಭ್ಯಾಸವಾಗಿಬಿಟ್ಟಿದ್ದರೆ ಸ್ಪಷ್ಟಮಾತುಗಳನ್ನಾಡುವುದೇ ಪಶ್ಚಾತ್ತಾಪವನ್ನು ತಂದಿಟ್ಟು ಅನಗತ್ಯವಾಗಿ ಕ್ಷಮೆ ಕೇಳುವಂತಾಗಬಹುದು. ಹಾಗಾಗಿ ನೆನಪಿಡಿ; ದ್ವಂದ್ವವಾಗುವುದು ಸಾಮಾನ್ಯ, ಸಹಿಸುವುದರಿಂದ ನಿಮಗಾಗುತ್ತಿರುವ ನೋವಿನಿಂದ ಮುಕ್ತಗೊಂಡರೆ ಪರಸ್ಪರ ತಮಗಿಷ್ಟವಾದ್ದನ್ನು ಮಾಡುತ್ತಾ ಮತ್ತಷ್ಟುಸಂತಸದಿಂದಿರುವ ಸಾಧ್ಯತೆಯೇ ಹೆಚ್ಚು.

4. ಸರಿಯಾದ ಮೌನ ಅಭ್ಯಸಿಸಿ

ಸಂವಹನವೆಂದರೆ ಬರೀ ಮಾತನಾಡುವುದಷ್ಟೇ ಅಲ್ಲ. ಯಾವಾಗ ಮೌನದಿಂದಿರಬೇಕು ಎನ್ನುವುದನ್ನು ತಿಳಿದುಕೊಂಡಿರುವುದೂ ಕೂಡ. ಉದಾ: ಸ್ನೇಹಿತರೋ-ಸಂಗಾತಿಯೋ ತನಗಿಷ್ಟವಿರುವ, ನಿಮಗಷ್ಟೇನು ಪ್ರಿಯವಲ್ಲದ ಆಟದ ಬಗ್ಗೆ ಮಾತನಾಡುತ್ತಿದ್ದರೆ ತಿಳಿಯದಿದ್ದರೂ ಅದರ ಬಗ್ಗೆ ಮಾತನಾಡಿ ಸಾಧಿಸುವುದಕ್ಕಿಂತಲೂ ಮೌನವಾಗಿ ಅವರ ಅಭಿರುಚಿಯ ಸವಿಯನ್ನು ಆಹ್ಲಾದಿಸುವುದು ಹೆಚ್ಚು ಸೂಕ್ತವಾದುದು!

5. ಭಾವನೆಯ ಬೆನ್ನೇರದಿರಿ

ಮಾತುಕತೆಯ ಹಾದಿ ತಪ್ಪಿಸುವುದೇ ಭಾವೋದ್ವೇಗ. ಚರ್ಚೆಯ ಕಾವು ಹೆಚ್ಚುತ್ತಿದ್ದಂತೆ ಮಾತು ತರ್ಕದಿಂದ ದೂರವಾಗಿ ಭಾವನೆಯ ಮಡಿಲಿಗೆ ಬೀಳುವುದು. ಕೋಪ, ನೋವು ದಾಳಿಯಿಡುವುದು. ಅಂತಹ ಸಂದರ್ಭ ಎದುರಾದಾಗ ಗಮನವನ್ನು ಮಾತಿನಿಂದ ಬೇರೆಡೆ ಸೆಳೆಯಿರಿ. ದೀರ್ಘವಾದ ಉಸಿರಾಟವಾಡುತ್ತಾ ಎದುರಿಗಿರುವ ವ್ಯಕ್ತಿ, ಸಂಬಂಧ ಈ ಮಾತುಗಳಿಗಿಂತ ಎಷ್ಟುಮುಖ್ಯ ಕೇಳಿಕೊಳ್ಳಿ. ಇಲ್ಲವೇ ಕ್ಷಣಿಕವಾಗಿ ಸನ್ನಿವೇಶದಿಂದ ಹೊರ ನಡೆಯಿರಿ.

6. ಸಂಧಾನಕ್ಕೂ ಮುಂದಾಗಿ

ಕೆಲ ಸಂದರ್ಭ ವಿಶ್ವಾಸಾತ್ಮಕ ಮಾತನ್ನು ಬೇಡಿದರೆ, ಕೆಲವು ಸಂಧಾನವನ್ನೂ, ಸಣ್ಣದೊಂದು ಕ್ಷಮೆಯನ್ನೂ ಬೇಡುತ್ತದೆ. ನಿಮ್ಮ ಆಯ್ಕೆಯನ್ನು ಖಚಿತವಾಗಿ ಹೇಳುವುದರೊಟ್ಟಿಗೆ ಸಂಬಂಧಕ್ಕೇನು ಮುಖ್ಯ ಎಂದು ಅವಲೋಕಿಸುವುದೂ ಪ್ರಮುಖವಾದುದು. ನೆನಪಿರಲಿ, ರಾಜಿಯಾಗುವುದೆಂದರೆ ಸೋಲುವುದಲ್ಲ, ನನಗೆ ಸಂಬಂಧ ಎಷ್ಟುಮುಖ್ಯ ಎಂಬುದನ್ನು ಸಾರುವುದು!

7. ಪ್ರಜ್ಞಾಪೂರ್ವಕವಾಗಿ ಆಲೋಚಿಸಿ

ಅಪ್ರಜ್ಞೆ ಹೆಚ್ಚಿದ್ದಲ್ಲಿಯೇ ಚುಚ್ಚು ಮಾತುಗಳು, ಅಸಂಬದ್ಧ ಚರ್ಚೆಗಳು ಹೆಚ್ಚು. ಏನೇ ನಡೆದರೂ ಮೂರನೆಯ ವ್ಯಕ್ತಿಯಾಗಿ ಹೊರ ನಿಂತು ಘಟನೆಯನ್ನು ನೋಡಿ. ಏನು ಮಾಡಬಹುದಿತ್ತು? ಎನ್ನುವುದರೊಟ್ಟಿಗೆ ಮುಂದೇನು ಮಾಡಬಹುದು ಎಂಬ ಹೊಳವು ಮೂಡಲು ಪ್ರಜ್ಞಾಪೂರ್ವಕವಾದ ಸ್ವ-ವಿಮರ್ಶೆ ಅತ್ಯಗತ್ಯ.