ಮಕ್ಕಳ ಮಲಗಿಸುವುದೊಂದು ಕಲೆ....
ಇನ್ನೇನು ಅಮ್ಮನಿಗೆ ನಿದ್ರೆ ಹತ್ತಿತ್ತು ಎನ್ನುವಷ್ಟರಲ್ಲಿ ಮಗು ಏಳುತ್ತದೆ. ಎದ್ದ ಮಗು ಮತ್ತೆ ಮಲಗುವುದು ಬೆಳಗ್ಗೆ ಸೂರ್ಯ ಹುಟ್ಟಿದಾಗಲೇ. ಆಗ ತಾನೇ ಹುಟ್ಟಿದ ಮಗುವನ್ನು ಮಲಗಿಸುವುದೊಂದು ಕಲೆ. ಅದಕ್ಕೇನು ಮಾಡಬೇಕು?
ನವಜಾತ ಮಕ್ಕಳನ್ನು ನೋಡಿಕೊಳ್ಳುವುದು ಒಂದು ಕಲೆ. ಅವರನ್ನು ಹಿಡಿಯುವಾಗ, ಎತ್ತುವಾಗ, ಸ್ನಾನ ಮಾಡಿಸುವಾಗ ತುಂಬಾ ನಾಜೂಕಾಗಿರಬೇಕು. ಅದರಲ್ಲೂ ನಿದ್ದೆ ಮಾಡಿಸೋದು ತುಂಬಾ ಕಷ್ಟ. ಒಂದು ವೇಳೆ ನಿಮ್ಮ ಮಗು ನಿದ್ದೆ ಮಾಡದಿದ್ದರೆ ಹೀಗ್ ಮಾಡಿ...
ಒಂದು ಸಮಯ ಫಿಕ್ಸ್ ಮಾಡಿ : ಹುಟ್ಟಿದ ಮಕ್ಕಳಿಗೆ ದಿನ ಯಾವುದು, ರಾತ್ರಿ ಯಾವುದೆಂದು ಗೊತ್ತಾಗುವುದಿಲ್ಲ. ಆದುದರಿಂದ ಮಲಗಲು ಸರಿಯಾದ ಸಮಯ ಮೀಸಲಿಡಿ. ಅಲ್ಲದೆ ಮಲಗಿಸುವಾಗ ಲಾಲಿ ಹಾಡು ಹಾಡಿ. ಇಲ್ಲವಾದರೆ ಬಿಸಿಯಾದ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಮೈಯನ್ನು ಉಜ್ಜಿ. ಇದನ್ನು ಯಾವಾಗಲೂ ಮಾಡಿದರೆ ಮಕ್ಕಳಿಗೆ ನಿರ್ದಿಷ್ಟ ಸಮಯದಲ್ಲಿ ನಿದ್ರಿಸುವಂತೆ ಮಾಡಬಹುದು.
ಸೂರ್ಯನ ಬಿಸಿಲು ಬೀಳಲಿ: ಬೆಳಗ್ಗಿನ ಸಮಯದಲ್ಲಿ ಸರಿಯಾದ ಸೂರ್ಯನ ಬೆಳಕು ಮನೆಯೊಳಗೆ ಬೀಳುವಂತೆ ನೋಡಿಕೊಳ್ಳಿ. ಬಿಸಿಲಿನ ಸಮಯದಲ್ಲಿ ಮಗುವನ್ನು ಹೊರಗೆ ಕರೆದುಕೊಂಡು ಹೋಗಿ.
ಎಸೆನ್ಷಿಯಲ್ ಆಯಿಲ್: ರೋಸ್ ಮೇರಿ, ನೀಲಗಿರಿ ಮೊದಲಾದ ಎಸೆನ್ಷಿಯಲ್ ಎಣ್ಣೆಯನ್ನು ಮಗುವಿನ ಹಾಸಿಗೆ ಅಥವಾ ಮಗುವಿನ ಡ್ರೆಸ್ ಮೇಲೆ ಹಚ್ಚಿ. ಇದರ ಸುಮಧುರ ಪರಿಮಳ ಮಗುವನ್ನು ಬೇಗನೆ ನಿದ್ರಾ ದೇವಿಗೆ ಶರಣಾಗುವಂತೆ ಮಾಡುತ್ತದೆ.
ಲೈಟ್ ಹಾಕಬೇಡಿ : ಮಗು ರಾತ್ರಿ ಹೊತ್ತು ಎದ್ದರೆ ಅವರನ್ನು ಬೆಳಕಿನ ರೂಮ್‌ಗೆ ಕರೆದೊಯ್ಯಬೇಡಿ. ಅಥವಾ ಲೈಟ್ ಹಾಕಬೇಡಿ. ಲೈಟ್ ಹಾಕಿದರೆ ಮಕ್ಕಳ ನಿದ್ರೆ ಹಾಳಾಗುತ್ತದೆ.
ಮಸಾಜ್ ಮಾಡಿ: ಮಕ್ಕಳಿಗೆ ನಿಧಾನವಾಗಿ ಮಸಾಜ್ ಮಾಡಿದರೆ ದೇಹ ಬೆಚ್ಚಗಾಗಿ ನಿದ್ರೆ ಹತ್ತುತ್ತದೆ. ಮಗುವಿಗೆ ನಿದ್ರೆ ಮಾಡುವ ಸಮಯ ಬಂದಾಗ ಅದಕ್ಕೆ ಮಸಾಜ್ ಮಾಡಿ. ಇದನ್ನು ಪ್ರತಿ ದಿನ ಮಾಡುತ್ತಾ ಬಂದರೆ ಮಗು ಬೇಗ ನಿದ್ರಿಸುತ್ತದೆ.