ಮೆನ್‌ಸ್ಟ್ರುವಲ್ ಕಪ್‌ಯಿಂದ ಕಿರಿಕಿರಿಯಿಲ್ಲದ ಋತುಸ್ರಾವ?
ಯಾರಾದರೂ ಮೆನ್‌ಸ್ಟ್ರುವಲ್ ಕಪ್ ಉಪಯೋಗಿಸು ಎಂದು ಸಲಹೆ ನೀಡಿದರೆ ಕಣ್ಣರಳಿಸಿ, ಸಾಧ್ಯವೇ ಇಲ್ಲ ಎನ್ನುವ ಲುಕ್ ಕೊಟ್ಟು ಬಿಡುತ್ತೇವೆ. ಅದರ ಬಳಕೆಯ ವಿಧಾನ ಗೊತ್ತಿರದೇ, ಅದರ ಪ್ರಯೋಜನಗಳ ಅರಿವಿರದೇ ಮೂಗುಮುರಿಯುವವರೇ ಹೆಚ್ಚು. ಆದರೆ, ನಿಜಕ್ಕೂ ಇವುಗಳ ಬಳಕೆ ಹೆಚ್ಚಾಗಬೇಕಾದ ಅನಿವಾರ್ಯತೆ ಬಂದೊದಗಿದೆ.
ವಿಭಾ ಡೋಂಗ್ರೆ
ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿರುವ ಮೆನ್‌ಸ್ಟ್ರುವಲ್ ಕಪ್ ಪ್ರಶಂಸೆ, ಟೀಕೆಗೆ ಗುರಿಯಾಗುತ್ತಿವೆ. ಪ್ರಕೃತಿ ಸಹಜ ಋತುಚಕ್ರ ಕ್ರಿಯೆಗೆ ನಾವು ಅನೇಕ ಕಂಫರ್ಟ್‌ಗಳನ್ನು ಹುಡುಕಿಕೊಳ್ಳುತ್ತಾ, ಹೈಜಿನ್ ಹೆಸರಿನಲ್ಲಿ ಹೊರತಂದ ಸ್ಯಾನಿಟರಿ ಪ್ಯಾಡ್‌ಗಳು ಅನೇಕ ಅನಾಹುತಗಳನ್ನು ಸೃಷ್ಟಿಸಹತ್ತಿವೆ. ಇದಕ್ಕೆ ಪರ್ಯಾಯವಾಗಿ ಬಳಕೆಗೊಳ್ಳುವ ಟ್ಯಾಂಪೊನ್‌ಗಳು ಸ್ತ್ರೀಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ ತಿರಸ್ಕಾರಕ್ಕೆ ಒಳಗಾಗುತ್ತಿವೆ. ಈ ನಿಟ್ಟಿನಲ್ಲಿ ಮೆನ್‌ಸ್ಟ್ರುವಲ್ ಕಪ್ ಒಂದು ಗುಣಾತ್ಮಕ ಆಲೋಚನೆ.
ಹೇಗಿರುತ್ತೆ?
ಪೀರಿಯಡ್ಸ್ ಕಪ್ ಎಂದೂ ಕರೆಯಲ್ಪಡುವ ಮೆನ್‌ಸ್ಟ್ರುವಲ್ ಕಪ್ ಋತುಸ್ರಾವವನ್ನು ಶೇಖರಿಸಿಕೊಳ್ಳುವ ಸಾಧನ. ಸಿಲಿಕಾನ್ ರಬ್ಬರ್‌ನ ಬಟ್ಟಲಿನಾಕಾರದ ಈ ವಸ್ತುವನ್ನು ಋತುಸ್ರಾವ ಆರಂಭವಾದಾಗ ಯೋನಿಯೊಳಗೆ ಸೇರಿಸಬೇಕು. ಒಂದು ಕಪ್ ಸುಮಾರು 12 ಗಂಟೆಗಳ ಸ್ರವಿಕೆಯನ್ನು ಶೇಖರಿಸುವಷ್ಟು ಸಾಮರ್ಥ್ಯ ಹೊಂದಿರುತ್ತದೆ. ಹದಿ ವಯಸ್ಕರಿಗೆ, 19 ರಿಂದ 25ವರ್ಷ ಹಾಗು 25 ರಿಂದ 50 ಹೀಗೆ ಪ್ರಾಯಕ್ಕನುಗುಣವಾಗಿ ಮೂರು ಗಾತ್ರದ ಕಪ್‌ಗಳು ಲಭ್ಯವಿರುತ್ತವೆ.
ಬಳಕೆ ಹೇಗೆ?
ಬಳಸುವ ಮೊದಲು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಕಪ್ ರಬ್ಬರಿನ ಗುಣಹೊಂದಿರುವುದರಿಂದ ಮೂರು ವಿಧಾನಗಳಲ್ಲಿ (ಹಾಫ್ ಫೋಲ್ಡ್, ಸಿ ಫೋಲ್ಡ್, ೭ ಪ್ಯಾಟರ್ನ್ ಫೋಲ್ಡ್)ಸುಲಭವಾಗಿ ಮಡಿಸಬಹುದು. ಯೋನಿಯೊಳಗೆ ಸೇರಿದ ನಂತರ ವ್ಯಾಕ್ಯೂಮ್ ಟೈಟ್ ರೀತಿಯ ಸ್ಥಿತಿ ಏರ್ಪಡುವುದರಿಂದ ಸ್ರವಿಕೆ ಯೋನಿಯಿಂದ ಹೊರಬರುವ ಯಾವುದೇ ಸಾಧ್ಯತೆ ಇರುವುದಿಲ್ಲ. ಹೊರತೆಗೆಯಬೇಕಾದ ಸಂದರ್ಭದಲ್ಲಿ ಮೆಲ್ಲನೆ ವ್ಯಾಕ್ಯೂಮ್ ರಿಲೀಸ್ ಮಾಡುತ್ತಾ ಆರಾಮವಾಗಿ ಹೊರತೆಗೆದು ಶೇಖರಣೆಗೊಂಡ ಸ್ರಾವವನ್ನು ಚೆಲ್ಲಿ, ಶುಚಿಗೊಳಿಸಿ ಮತ್ತದೇ ವಿಧಾನವನ್ನು ಮುಂದುವರಿಸಬಹುದು.
ವಿಶೇಷತೆಗಳು
ಒಂದು ಮೆನ್‌ಸ್ಟ್ರುವಲ್ ಕಪ್ ಅನ್ನು 10 ವರ್ಷಗಳವರೆಗೆ ಬಳಬಹುದು. ಇದು ಯೋನಿಯೊಳಗೇ ಇರುವುದರಿಂದ ವಾಸನೆ, ಕಿರಿಕಿರಿ ಇರುವುದಿಲ್ಲ. ಇದನ್ನು ಬಳಸುವವರು ನಾನು ಪೀರಿಯಡ್ಸ್ ಅನ್ನೋದೆ ಮರೆತುಬಿಟ್ಟಿದ್ದೆ ಎನ್ನುವುದುಂಟು. ಯೋಗಾಭ್ಯಾಸ, ಈಜು, ಕ್ರೀಡೆ ಎಲ್ಲದರಲ್ಲೂ ನಿಶ್ಚಿಂತೆಯಿಂದ ತೊಡಗಿಕೊಳ್ಳಬಹುದು. ಮುಖ್ಯವಾಗಿ ಇದರಲ್ಲಿ ಟ್ಯಾಂಪೊನ್, ಸ್ಯಾನಿಟರಿ ಪ್ಯಾಡ್‌ನಲ್ಲಿ ಬಳಸಲಾಗುವ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ಇದರಿಂದಾಗಿ ಅಲರ್ಜಿಯನ್ನೂ ದೂರವಿಡಬಹುದು.
ಹತ್ತು ವರ್ಷ ಬಾಳಿಕೆ
ಇದರ ಸಾಧಕ ಬಾಧಕಗಳ ಚರ್ಚೆಗೂ ಮಿಗಿಲಾಗಿ ಇವುಗಳನ್ನು ಬಳಸುವುದರಿಂದ ನಾವು ಪರಿಸರ ಕಾಳಜಿಯೆಡೆಗೆ ಒಂದು ಹೆಜ್ಜೆಯನ್ನಿಟ್ಟಂತೆ. ಅಧ್ಯಯನದ ಪ್ರಕಾರ ಓರ್ವ ಮಹಿಳೆಯು ತನ್ನ ಜೀವಿತಾವಧಿಯಲ್ಲಿ ೧೦ ಸಾವಿರ ಪ್ಯಾಡ್‌ಗಳನ್ನು ಬಳಸುತ್ತಾಳೆ ಹಾಗೂ ಇದು ಜೈವಿಕವಾಗಿ ಕೊಳೆಯಲು 5 ಲಕ್ಷ ವರ್ಷಗಳು ಬೇಕು ಅಂದರೆ ನಾವು ಈವರೆಗೆ ಉಪಯೋಗಿಸುವ ಪ್ಯಾಡ್‌ಗಳು ಇನ್ನೂ ಕೊಳೆಯದೆ ಈ ಭೂಮಿಯ ಮೇಲೆ ಹಾಗೆಯೇ ಇವೆ. ನಿಸರ್ಗದೆಡೆಗೆ ಕೊಂಚ ಅಕ್ಕರೆ ತೋರುವ ದೃಷ್ಟಿಯಿಂದಲಾದರೂ ಇದರೆಡೆಗೆ ಹೊರಳುವ ಅವಶ್ಯಕತೆ ಇದೆ. ಜೊತೆಗೆ ಒಂದೇ ಮೆನ್‌ಸ್ಟ್ರುವಲ್ ಕಪ್ 10 ವರ್ಷ ಬಳಸಬಹುದಾದರೆ ನೀವು ಉಳಿಸಬಹುದಾದ ಹಣದ ಬಗ್ಗೆ ಒಮ್ಮೆ ಯೋಚಿಸಿ.