ನೀವು ವಾಕಿಂಗ್ ಮಾಡ್ಲೇ ಬೇಕಮ್ಮಾ, ಬೆಳಿಗ್ಗೆ ಎದ್ದು ಹೋಗಿ’, ನನ್ನ ಸಲಹೆಗೆ ಬಹು ಜನ ರೋಗಿಗಳ ಉತ್ತರ ‘ಟೈಮೇ ಆಗಲ್ಲ ಡಾಕ್ಟ್ರೇ’. ‘ಟೈಮೇ ಇಲ್ಲ’ ಎನ್ನುವುದು ಕೇವಲ ಬೆಳಿಗ್ಗೆ ವಾಕಿಂಗ್ ಮಾಡದಿರುವುದಕ್ಕಷ್ಟೇ ಅಲ್ಲ, ತಿಂಡಿ  ತಿನ್ನುವುದಕ್ಕೆ, ಸಮಯಕ್ಕೆ ಸರಿಯಾಗಿ ಮಲಗುವುದಕ್ಕೆ, ಪ್ರಯಾಣಕ್ಕೆ ಹೊರಡುವುದಕ್ಕೆ ಮತ್ತೇನೇನಕ್ಕೋ ವಿಸ್ತರಿಸುತ್ತದೆ.

ಹಾಗಿದ್ದರೆ ಸಮಯ ಹುಡುಕಿಕೊಳ್ಳಬಹುದಾದ್ದು ಹೇಗೆ? ಈವರೆಗೆ ಬಹು ಜನ ಉಪಯೋಗಿಸಿರುವ ಹಲವು ತಂತ್ರಗಳಿವೆ. ಅವುಗಳಲ್ಲಿ ಬಹು ಸಾಮಾನ್ಯವಾದದ್ದು ಯಾವುದೆಂದರೆ ಟಿ.ವಿ. ನೋಡುತ್ತಿದ್ದರೆ, ಜಾಹೀರಾತು ಬರುವ ಸಮಯದಲ್ಲಿ ಕೆಲಸ ಮಾಡುವುದು, ಪುಟು ಪುಟು ಓಡಾಡಿ/ಮಧ್ಯೆ ಮಧ್ಯೆ ಕೆಲಸ / ಊಟ/ಹೋಂವರ್ಕ್ ಮುಗಿಸುವುದು. ಅರ್ಧ ಗಂಟೆಯಲ್ಲಿ 8 ನಿಮಿಷ ಉಳಿಸಿದೆವೆಂದು ಸಂತೋಷ ಪಡುವುದು.

ಇದರ ಹಿಂದಿರುವ ‘ಐಡಿಯಾ’ ಏನೆಂದರೆ ಸ್ವಲ್ಪ ಸ್ವಲ್ಪ ಸಮಯವನ್ನು ಅಲ್ಲಲ್ಲಿ ಉಳಿಸಿ, ಅದನ್ನು ಕೂಡಿಸಿ, ಕೊನೆಗೆ ನಾವು ಯೋಜಿಸಿದ್ದೆಲ್ಲವನ್ನೂ ಮಾಡಿ ಮುಗಿಸುವುದು. ಆದರೆ ಕೆಲವು ಅಪರೂಪದ ವ್ಯಕ್ತಿಗಳನ್ನು, ಜೀವನದಲ್ಲಿ ಯಶಸ್ವಿಯಾಗಿಯೂ, ಸಾವಧಾನದಿಂದಿದ್ದು, ನೆಮ್ಮದಿಯನ್ನೂ ಕಾಯ್ದುಕೊಳ್ಳುವವರನ್ನು ನೋಡಿದರೆ ಬೇರೆಯೇ ಅಂಶಗಳು ಕಾಣತೊಡಗುತ್ತವೆ. ಅಂತಹವರು ಮುಂದಿನ ಕೆಲಸದ ಬಗ್ಗೆ ಯೋಚಿಸುವುದೇ ಇಲ್ಲ!

ಸೋಶಿಯಲ್ ಮೀಡಿಯಾದಿಂದ ಒಂದ್ವಾರ ದೂರ ಇದ್ರೆ ಇಷ್ಟೆಲ್ಲಾ ಲಾಭಗಳಿವೆ!

ಈಗ ಮಾಡುತ್ತಿರುವ ಕೆಲಸವೇ ಅವರ ಒಂದೇ ಧ್ಯೇಯ ಎನ್ನುವ ರೀತಿಯಲ್ಲಿ, ಇದನ್ನು ಬಿಟ್ಟರೆ ಬೇರೆ ಯಾವ ಕೆಲಸವೂ ಉಳಿದಿಲ್ಲ ಎನ್ನುವಂತೆ ಮಾಡುತ್ತಾರೆ! ಅವರದ್ದು ನಗುಮುಖ ! ಆಗ ಮಧ್ಯೆ ಮಧ್ಯೆ ಹೇಗೋ ಮಾಡಿ ಉಳಿಸುವ ೨ ನಿಮಿಷಗಳು ಒಟ್ಟುಗೂಡಿ, ನಾವು ಮಾಡಿ ಮುಗಿಸುವ ಕೆಲಸಗಳು ನಮ್ಮ ಜೀವನವನ್ನು ಮತ್ತಷ್ಟು ಗಡಿಬಿಡಿಯ, ಚಡಪಡಿಕೆಯ ಸರಣಿಯನ್ನಾಗಿ ಮಾಡಿಬಿಡುತ್ತವೆ ಎಂಬುದು ಮನವರಿಕೆಯಾಗುತ್ತದೆ. ನಮ್ಮ ಬದುಕನ್ನು ಸಮಯ ಉಳಿಸುವುದರರಿಂದ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಮಗೆ ಬೇಕಾದ ಬದುಕನ್ನು ನಾವು ಕಟ್ಟಿಕೊಳ್ಳುವ ಧೈರ್ಯ ಮಾಡಿದರೆ, ಸಮಯ ತನ್ನನ್ನು ತಾನೇ ಉಳಿಸಿಕೊಳ್ಳುತ್ತದೆ.

ಅಧ್ಯಯನವೊಂದು ಬಿಡುವಿಲ್ಲದ ಮಹಿಳೆಯರ ಜೀವನದ 1,001 ದಿನಗಳ ದಿನಚರಿಯೊಂದನ್ನು ಪರಿಶೀಲಿಸಿತು. ಇವರೆಲ್ಲ ನಾವು ತುಂಬಾ ‘ಬ್ಯುಸಿ’ ಎಂದು ಕರೆಯುವಂತಹ ಮಹಿಳೆಯರು. ಹಲವು ಕೌಶಲಗಳನ್ನು ಅಪೇಕ್ಷಿಸುವ ಉದ್ಯೋಗ, ಕೆಲವೊಮ್ಮೆ ಅವರದ್ದೇ ಆದ ವ್ಯಾಪಾರ, ನೋಡಿಕೊಳ್ಳಬೇಕಾದ ಪುಟ್ಟ ಮಕ್ಕಳು, ಅಪ್ಪ-ಅಮ್ಮ /ಇತರರ ಆರೈಕೆ ಮಾಡುವ ಜವಾಬ್ದಾರಿ, ಸಾಮಾಜಿಕ ಜವಾಬ್ದಾರಿ- ಹೀಗೆ ಒಂದು ನಿಮಿಷವೂ ಪುರುಸೊತ್ತೇ ಇರದ ದಿನಚರಿ. ಅವರೆಷ್ಟು ಕೆಲಸ ಮಾಡುತ್ತಾರೆ, ಎಷ್ಟು ನಿದ್ದೆ ಮಾಡುತ್ತಾರೆ, ಯಾವ ರೀತಿಯಲ್ಲಿ ತಮ್ಮ ಸಮಯವನ್ನು ನಿಭಾಯಿಸುತ್ತಾರೆ ಎಂಬುದನ್ನು ಈ ಅಧ್ಯಯನ ದಾಖಲಿಸಿತು.

ಒಬ್ಬ ಮಹಿಳೆಯ ದಿನಚರಿಯ ಅಧ್ಯಯನದಲ್ಲಿ ಬುಧವಾರ ರಾತ್ರಿ ಆಕೆ ಹೊರಹೋಗಿ ಮನೆಗೆ ಮರಳಿದಾಗ ನೀರಿನ ಹೀಟರ್ ಮುರಿದದ್ದು ಕಂಡುಬಂತು. ಆಕೆಯ ಮನೆಯ ಬೇಸ್‌ಮೆಂಟ್ ತುಂಬಾ ನೀರು. ಒಮ್ಮೆ ಯೋಚಿಸಿ ನೋಡಿ, ನಮಗೇ ಹೀಗಾಗಿದ್ದರೆ?! ಆಕೆ ತತ್‌ಕ್ಷಣದ ವ್ಯವಸ್ಥೆ ಮಾಡಿ, ಮರುದಿನ ನಲ್ಲಿ ರಿಪೇರಿಯವನನ್ನು ಕರೆಸಿ, ಆ ಮೇಲೆ ಅದರ ನಂತರದಲ್ಲಿ ಅದನ್ನು ಸರಿಮಾಡಿಸಿದ್ದಳು.

ಇದರಲ್ಲೇನಿದೆ ವಿಶೇಷ! ವಿಶೇಷ ಏನೆಂದರೆ ಡೈರಿಯಲ್ಲಿ ಇವಿಷ್ಟನ್ನೂ ದಾಖಲಿಸಲು ಆಕೆಗೆ ಬೇಕಾದ್ದು ಸರಿಸುಮಾರು 40 ನಿಮಿಷ! ಅಂದರೆ ವಾರಕ್ಕೆ ಸುಮಾರು ೫ ಗಂಟೆಗಳು. ಅಂದರೆ ಬೇಸ್‌ಮೆಂಟ್‌ನಲ್ಲಿ ತುಂಬಿದ್ದ ನೀರು ನಿಜವಾಗಿ ಆಕೆಗೆ ದೊರಕಿಸಿದ್ದು ಪ್ರತಿದಿನ ‘೪೦ ನಿಮಿಷ’ಗಳ ಎಕ್ಸ್‌ಟ್ರಾ ಸಮಯವನ್ನು!

ನಾವು ಸಮಯವನ್ನೇ 24 ಗಂಟೆಗಳಿಗಿಂತ ಹೆಚ್ಚು ಮಾಡಲು ಸಾಧ್ಯವಿಲ್ಲ. ಆದರೆ ಇರುವ 24 ಗಂಟೆಗಳನ್ನು ದೀರ್ಘವಾಗಿಸಬಹುದು. ಅಂದರೆ ‘ಎಲಾಸ್ಟಿಕ್’ ನಂತೆ ಎಳೆಯಬಹುದು ! ‘ಸಮಯವಿಲ್ಲ’ ಎನ್ನುವುದರ ನಿಜವಾದ ಅರ್ಥ ಏನು? ‘ಸಮಯವಿಲ್ಲ’ ಎನ್ನುವುದರ ಹಿಂದೆ ‘‘ಈ ಕೆಲಸ ನಮ್ಮ ಆದ್ಯತೆಯಲ್ಲ, ಅದು ನಮಗೆ ಈಗ ಮುಖ್ಯವಲ್ಲ’’ ಎಂಬ ಭಾವವೇ ಇರುತ್ತದೆ. ಅಂದರೆ ನಾವು ಇಷ್ಟಪಟ್ಟು, ನಮ್ಮ ಆಯ್ಕೆಯಾಗಿ ಮಾಡುವ ಯಾವ ಕೆಲಸಕ್ಕೂ ‘ಸಮಯವಿಲ್ಲ’ ಎಂದು ನಾವು ಹೇಳುವ ಸಾಧ್ಯತೆಯೇ ಇಲ್ಲ. ಹೀಗಿದ್ದೂ ಇದನ್ನು ಸದಾ ಮಾಡುವುದು  ಸ್ವಂತಕ್ಕಾಗಿ ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಯೋಜಿಸಿದರೆ, ‘ಸಮಯವಿಲ್ಲ’ ಎಂದು ಹೇಳದೆ ಸಂತೋಷದಿಂದಲೇ ಮಾಡುವುದು
ಅಭ್ಯಾಸವಾಗಿಬಿಡುತ್ತದೆ.

ಮಾನಸಿಕ ಆರೋಗ್ಯ ಕೆಡಿಸೋ ಕೆಟ್ಟ ವರ್ತನೆಗಳಿವು!

ಒಂದು ವಾರದಲ್ಲಿ 168 ಗಂಟೆಗಳವೆ. ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಿ, 8 ಗಂಟೆಗಳ ಕಾಲ ನಿದ್ದೆ ಮಾಡುತ್ತೇವೆಂದರೂ, ಇನ್ನೂ 8 ಗಂಟೆಗಳು ಪ್ರತಿದಿನದಲ್ಲಿ ಉಳಿತಾಯವೇ. ಹೆಚ್ಚಿನ ಸಮಯ ಈ ೮ ಗಂಟೆಗಳಲ್ಲಿ ನಾವು ವ್ಯಯಿಸುವುದು ಯಾವುದು ನಮಗೆ ‘ಬಲು ಮುಖ್ಯ’ ಎನಿಸುತ್ತದೋ ಅದಕ್ಕಾಗಿ. ಮಕ್ಕಳೊಡನೆ ಸಮಯ ಕಳೆಯುವುದು/ ಮಕ್ಕಳಿಗೆ ಓದಿಸುವುದು/ವ್ಯಾಯಾಮ ಮಾಡುವುದು/ ಹಾಗೇ ಸುಮ್ಮನೆ ಟಿ.ವಿ. ಅಥವಾ ಮೊಬೈಲ್ ನೋಡುವುದು ಯಾವುದಕ್ಕಾದರೂ ಇರಬಹುದು. ಅಂದರೆ ಎಲ್ಲದಕ್ಕೂ ಸಮಯವಿದೆ, ನಮಗೆ ಮನಸ್ಸಿದ್ದರೆ!

ಕೆಲಸದ ಮಧ್ಯೆ ಅಥವಾ ನಮ್ಮ ನಿದ್ರೆಯನ್ನು ಹೊರತುಪಡಿಸಿ, ಉಳಿದ 16 ಗಂಟೆಗಳಲ್ಲಿ ಚಿಕ್ಕ ಚಿಕ್ಕ ಅವಧಿಗಳಲ್ಲಿ ನಾವು ಏನೂ ಮಾಡದಿರುವಾಗ ನಿಜವಾಗಿ ನಡೆಯುವುದೇನು? ಮೊಬೈಲ್ ಕೈಗೆತ್ತಿಕೊಂಡು ಮೆಸೇಜುಗಳನ್ನು ‘ಡಿಲಿಟ್’ ಮಾಡುವುದು, ಅಥವಾ ಸುಮ್ಮನೇ ಅತ್ತಿಂದಿತ್ತ ನಡೆಯುವುದು, ಟಿ.ವಿ. ಛಾನಲ್‌ಗಳನ್ನು ಒಂದಾದ ಮೇಲೊಂದರಂತೆ ಬದಲಾಯಿಸುವುದು! ಆದರೆ ಇಂಥ ಚಿಕ್ಕ ಚಿಕ್ಕ ಅವಧಿಗಳು ‘ಪವರ್ ಮೊಮೆಂಟ್ಸ್’- ಶಕ್ತಿಯ ಕ್ಷಣಗಳು.

ನಿಮಗಿಷ್ಟವಾದದ್ದನ್ನು ಓದಬಹುದು, ಪ್ರಾರ್ಥಿಸಬಹುದು, ಕುಟುಂಬದೊಂದಿಗೆ ಊಟ ಮಾಡುವುದು ಸಾಧ್ಯವಾಗುತ್ತಿಲ್ಲ ಎಂದರೆ, ಇಂಥ ಚಿಕ್ಕ ಅವಧಿಗಳಲ್ಲಿ ಅವರೊಂದಿಗೆ ಮಾತನಾಡಬಹುದು, ಆಟವಾಡಬಹುದು. ಅಂದರೆ ಸಮಯವಿದೆ! ನಾವೇ ಮಾಡ ಬಯಸುವ ಎಲ್ಲಕ್ಕೂ ಸಮಯವಿದೆ! ಬಿಡುವಿಲ್ಲದ ದುಡಿತದ ನಡುವೆಯೂ ನಮಗೆ ಮುಖ್ಯ  ವಿಷಯಗಳಿಗೆ ನಮ್ಮ ಬಳಿ ಸಮಯವಿದ್ದೇ ಇದೆ.

ಅಂಥ ವಿಷಯಗಳು ನಮ್ಮ ಬದುಕನ್ನು ಬೆಳೆಸುವಂತಿರ ಬೇಕು. ಬದುಕನ್ನು ಕಟ್ಟುವ ಒಳ್ಳೆಯ ಸಂಬಂಧಗಳು, ನಮ್ಮ ಆರೋಗ್ಯ - ನಮ್ಮ ವೃತ್ತಿ ಇವುಗಳಿಗೆ ನಮ್ಮ ಸಮಯವನ್ನು ಸುಲಭವಾಗಿ ಹಿಗ್ಗಿಸಬಹುದು. ಸಮಯ ನಿರ್ವಹಣೆ ನಿಜವಾಗಿ ದಾರಿ ಮಾಡುವುದು ಉತ್ತಮ ಒತ್ತಡ ನಿರ್ವಹಣಾ ಕೌಶಲಗಳಿಗೆ. ಹಾಗೆ ನೋಡಿದರೆ ಒತ್ತಡ ಏರುವುದು, ದೈಹಿಕ- ಮಾನಸಿಕ ಒತ್ತಡಗಳಾಗಿ ಬದಲಾಗುವುದು ಸಮಯ ನಿರ್ವಹಣಾ ಕೌಶಲವನ್ನು ರೂಢಿಸಿಕೊಳ್ಳದಿದ್ದಾಗ ಎಂಬುದು ಸುಷ್ಪಷ್ಟ. ಆದರೆ ಈ ಸಂಬಂಧ ಹಿಂದು ಮುಂದಾಗಲೂ ಸಾಧ್ಯವಿದೆ. ಅಂದರೆ ಕೆಲವರನ್ನು ನೋಡುತ್ತೇವೆ.

ನೀವೇಕೆ ಸಂತೋಷವಾಗಿಲ್ಲ ಗೊತ್ತಾ?

ಅವರು ಅನುಸರಿಸುವ ಒತ್ತಡ ನಿರ್ವಹಣಾ ಕೌಶಲವನ್ನು ‘ವಿಳಂಬ ನೀತಿ’ ಎಂದೇ ಕರೆಯಬಹುದು! ಉದಾಹರಣೆಯೊಂದನ್ನು ತೆಗೆದುಕೊಳ್ಳೋಣ. ಬರಬೇಕಾದ ವ್ಯಕ್ತಿಯೊಬ್ಬರು ಸಮಯಕ್ಕೆ ಸರಿಯಾಗಿ ಬರಲಿಲ್ಲ ಎಂದುಕೊಳ್ಳೋಣ. ಆಗ ಸಾಮಾನ್ಯವಾಗಿ ನಾವೆಲ್ಲರೂ ಮಾಡುವುದೇನು? ಚಡಪಡಿಸಿ, ಹತ್ತಾರು ಸಾರಿ ಕರೆ ಮಾಡಿ, ಸಿಗ್ನಲ್ ಇರದ್ದಕ್ಕೆ ಶಪಿಸಿ, ಮಾಡುತ್ತಿದ್ದ ಕೆಲಸವನ್ನು ಬಿಟ್ಟು, ನಾವೂ ಒತ್ತಡಕ್ಕೊಳಗಾಗಿ, ಇತರರನ್ನೂ ಒತ್ತಡಕ್ಕೊಳಗಾಗುವಂತೆ ಮಾಡಿಬಿಡುತ್ತೇವೆ. ಆದರೆ ಈ ‘ಕೆಲವರು’ ಮಾಡುವುದೇನು? ಒತ್ತಡಕ್ಕೊಳಗಾಗದೆ, ‘ಏನೋ ಕಾರಣ ಇರಬಹುದು’ ಎಂದು ನಂಬಿ, ‘ಕಾಲ ತನ್ನ ದಾರಿಯನ್ನು ತಾನೇ ಹುಡುಕಿಕೊಳ್ಳಲಿ’ ಎಂದು ಕಾಯುತ್ತಾರೆ. ಹೆಚ್ಚಿನ ಸಮಯ ಎರಡೂ ರೀತಿಗಳ ಫಲಿತಾಂಶ ಒಂದೇ ಎನ್ನುವುದು ಗಮನಾರ್ಹ.

ಸಮಯ ನಿರ್ವಹಣೆಯೂ ಇತರ ಕೌಶಲಗಳಂತೆ ಅಭ್ಯಸಿಸಬೇಕಾದ, ಸತತ ಅಭ್ಯಾಸದಿಂದ ಪಕ್ವಗೊಳ್ಳುವ ಕೌಶಲ. ಜೀವನದಲ್ಲಿ ಪ್ರತಿಯೊಬ್ಬರೂ ತಮಗೆ ಅರಿವಿಲ್ಲದೆಯೇ ಅದನ್ನು ಕಲಿತೇ ಕಲಿಯುತ್ತಾರೆ. ಆದರೆ ಅದರ ಬಗ್ಗೆ ಜಾಗೃತವಾಗಿ, ನಮ್ಮದೇ ಅನುಭವಗಳನ್ನು ಮಧ್ಯೆ ಮಧ್ಯೆ ಪರಿಶೀಲಿಸಿಕೊಂಡು, ನಮ್ಮ ‘ನೆಮ್ಮದಿ’ ಯನ್ನೇ ಗುರಿಯಾಗಿಸಿಕೊಂಡರೆ ಸಹಜವಾಗಿ ಸಮಯ ನಿರ್ವಹಣೆ ಸುಲಭವಾಗುತ್ತದೆ. ಅದರ ಮೂಲಕ ಒತ್ತಡ ಇಳಿಯುತ್ತದೆ. ಒಂದಿಷ್ಟೇ ಸಮಯದಲ್ಲಿ ಎಲ್ಲವನ್ನು ಮುಗಿಸಿಯೂ ‘ನಮಗಾಗಿ’ ಇನ್ನಷ್ಟು ಸಮಯವನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ. its a busy women who finds time ಎಂಬ ಮಾತು ನಿಜವಾಗುತ್ತದೆ!