ಸೋಶಿಯಲ್ ಮೀಡಿಯಾದಿಂದ ಒಂದ್ವಾರ ದೂರ ಇದ್ರೆ ಇಷ್ಟೆಲ್ಲ ಲಾಭ ಇದೆ!

ಒಂದ್ವಾರ ಆಫ್‌ಲೈನ್ ಹೋದ್ರೆ, ಜೀವನದಲ್ಲಿ ಎಲ್ಲ ಕಳೆದುಕೊಂಡು ಬಿಡುತ್ತೀನಿ ಎಂದು ನಿಮಗನಿಸಬಹುದು. ಆದರೆ, ಒಮ್ಮೆ ಇದನ್ನು ಪ್ರಯೋಗ ಮಾಡಿ ನೋಡಿ- ಆಗಲೇ ಕಳೆದು ಹೋದ ಜೀವನ ಮತ್ತೆ ನಿಮಗೆ ಸಿಗುವುದು!

6 Benefits Of Going Offline For A Week

ಈಗಿನ ಕಾಲವೇ ಹಾಗಾಗಿದೆ, ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ಟೆಕ್ನಾಲಜಿ ಅಡಿಕ್ಷನ್. ಸಾವಿಲ್ಲದ ಮನೆಯ ಸಾಸಿವೆ ತರುವುದು ಹೇಗೆ ಸಾಧ್ಯವಿಲ್ಲವೋ, ಪ್ರತಿದಿನ ಇಂಟರ್ನೆಟ್ ಬಳಸದ ಮನೆ ಹುಡುಕುವುದೂ ಅಷ್ಟೇ ಕಷ್ಟವಾಗಿದೆ. ಒಬ್ಬೊಬ್ಬರು ಒಂದೊಂದು ಕಾರಣಗಳಿಗೆ ಬಳಸಬಹುದು- ನ್ಯೂಸ್ ಓದಲು, ಹೊಸ ಟ್ರೆಂಡ್ ಬಗ್ಗೆ ತಿಳಿಯಲು, ಫೇಸ್ಬುಕ್, ವಾಟ್ಸಾಪ್, ಟ್ವಿಟ್ಟರ್‌ಗಾಗಿ, ಸಂದೇಶ ಕಳುಹಿಸಲು, ಶಾಪಿಂಗ್‌ಗಾಗಿ, ಫುಡ್ ಆರ್ಡರ್ ಮಾಡಲು, ಮೇಲ್ ಚೆಕ್ ಮಾಡಲು, ಮಾಹಿತಿ ಸಂಗ್ರಹಿಸಲು ಇತ್ಯಾದಿ. ಕಾರಣಗಳಿಗೆ ಬರವೇ ಇಲ್ಲ. 

ಜಾಲತಾಣದಲ್ಲಿ ಕ್ಲೋಸ್ ಫ್ರೆಂಡು, ಎದುರು ಸಿಕ್ಕಾಗ ಹೂ ಆರ್ ಯೂ!

ಹೌದು ಟೆಕ್ನಾಲಜಿ ಎಂಬುದು ಅದ್ಭುತವೇ. ಉಪಯೋಗಿಯೇ. ಪ್ರೀತಿಪಾತ್ರರೊಂದಿಗೆ ಸಂಪರ್ಕವಿಟ್ಟುಕೊಳ್ಳಲು, ಉದ್ಯೋಗಕ್ಕೆ ಸಹಾಯಕವೇ. ಆದರೆ, ಟೆಕ್ನಾಲಜಿ ಅಡಿಕ್ಷನ್ ಎಂಬುದು ಮನುಷ್ಯನ ದೈಹಿಕ ಹಾಗೂ ಮಾನಸಿಕ ನೆಮ್ಮದಿಯನ್ನೂ, ಆರೋಗ್ಯವನ್ನೂ ಕೆಡಿಸಬಲ್ಲದು. ಇಂದು ಆರು ತಿಂಗಳ ಮಗು ಕೂಡಾ ಫೋನ್ ತೋರಿಸದಿದ್ದರೆ ಊಟ ಮಾಡುವುದಿಲ್ಲ ಎಂದು ಹಟ ಮಾಡುತ್ತದೆ ಎಂದರೆ ಟೆಕ್ನಾಲಜಿಗೆ ಅದೆಂಥ ಅಯಸ್ಕಾಂತೀಯ ಶಕ್ತಿ ಇರಬಹುದು?! ಟೆಕ್ನಾಲಜಿಯಿಂದ ಪೂರ್ತಿ ದೂರ ಉಳಿಯಲು ಸಾಧ್ಯವಾಗದಷ್ಟು ದೂರ ಬಂದುಬಿಟ್ಟಿದ್ದೇವೆ. ಆದರೆ, ಕನಿಷ್ಠ ಪಕ್ಷ ಆಗಾಗ ವಾರದ ಕಾಲ ಟೆಕ್ನಾಲಜಿಕಲ್ ಡಿಟಾಕ್ಸ್ ಮಾಡುವ ಅಭ್ಯಾಸವಿಟ್ಟುಕೊಂಡರೆ ಒಳ್ಳೆಯದು. ಹಾಗೆ ಮಾಡಿದಿರಾದರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?

1. ನಿಮ್ಮನ್ನು ನೀವು ಕಂಡುಕೊಳ್ಳಬಲ್ಲಿರಿ

ಈಗ ನೀವು ಆನ್‌ಲೈನ್ ಜಗತ್ತಿನಿಂದ ಹೊರ ಬಂದಿರಾದರಿಂದ, ನಿಮ್ಮೊಂದಿಗೆ ನೀವು ಸಂಪರ್ಕ ಸಾಧಿಸಲು ಸಾಕಷ್ಟು ಸಮಯ ಸಿಗುತ್ತದೆ. ಇಷ್ಟೊಂದು ಸಮಯ ಇರುವುದು ನಿಜವೇ ಎಂದು ನಿಮ್ಮನ್ನು ನೀವೇ ಚೂಟಿ ನೋಡಿಕೊಳ್ಳುವಂತಾಗುತ್ತದೆ. ಎಲ್ಲರೂ ಯಾವುದರ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ನಿಮಗೆ ಯಾವ ಗಾಸಿಪ್ ವಿಷಯಗಳೂ ಗೊತ್ತಾಗುವುದಿಲ್ಲ. ನೀವು ನಿಮ್ಮದೇ ಯೋಚನೆಗಳೊಂದಿಗೆ ಇರಬಲ್ಲಂಥ ಸಮಯ ಅದೆಂಥ ಸ್ವಾತಂತ್ರ್ಯದ ರುಚಿ ತೋರಿಸುತ್ತದೆ ಎಂದು ಸ್ವತಃ ಕಂಡುಕೊಳ್ಳಿ. 

‘ನಾನೇ ಗೆದ್ದೆ’ ಟ್ರೋಲ್ ಮಾಡಿದವರಿಗೆ ರಶ್ಮಿಕಾ ಮಾಸ್ಟರ್ ಪಂಚ್!

2. ವರ್ತಮಾನದಲ್ಲಿ ಜೀವಿಸುವುದನ್ನು ಕಲಿಯುತ್ತೀರಿ

ಈಗ ಪದೇ ಪದೇ ನೋಟಿಫಿಕೇಶನ್ ನೋಡಬೇಕಾಗಿಲ್ಲವಾದ್ದರಿಂದ ನೀವು ಯಾರೊಂದಿಗೆ ಸಮಯ ಕಳೆಯುತ್ತಿದ್ದೀರೋ, ಯಾರೊಂದಿಗೆ ಹೊರ ಹೋಗಿದ್ದೀರೋ ಅವರಿಗೆ ಸಂಪೂರ್ಣ ಗಮನ ಕೊಡಬಹುದು. ಇದರಿಂದ ಅವರು ಸ್ಪೆಶಲ್ ಅಟೆನ್ಷನ್ ಸಿಕ್ಕಿ ನಿಮ್ಮ ಬಗ್ಗೆ ಹೆಚ್ಚು ಅಕ್ಕರೆ, ಪ್ರೀತಿ ಬೆಳೆಸಿಕೊಳ್ಳುತ್ತಾರೆ. ಯಾರಿಗಾದರೂ ಪಾರ್ಕ್‌ನಲ್ಲಿ ಕಾಯುತ್ತಿದ್ದೀರಾದರೆ ಪ್ರಕೃತಿಯನ್ನು ಚೆನ್ನಾಗಿ ಅನುಭವಿಸಲು ಸಾಧ್ಯವಾಗುತ್ತದೆ. ಇಷ್ಟು ದಿನ ನೋಡಿದ್ದು ಇದೇ ಪಾರ್ಕಾ ಎಂದು ನಿಮಗೇ ಅನುಮಾನ ಬರುತ್ತದೆ. ಸುಮ್ಮನೆ ಪ್ಲೇ ಆಗುವ ಫನ್ನಿ ವಿಡಿಯೋಗಳನ್ನೆಲ್ಲ ನೋಡುವ ಬದಲಿಗೆ ಈಗ ಪುಸ್ತಕ ಓದಲು ನಿಮ್ಮಲ್ಲಿ ಸಮಯವಿರುತ್ತದೆ.

3. ಗುಣಮಟ್ಟದ ನಿದ್ರೆ

ಪ್ರತಿ ದಿನ ರಾತ್ರಿ ಮಲಗುವಾಗ ಮೆಸೇಜ್‌ಗಳನ್ನು ಚೆಕ್ ಮಾಡುವುದು, ಫೇಸ್ಬುಕ್ ಪೋಸ್ಟ್‌ಗಳನ್ನು ಪರೀಕ್ಷಿಸುವುದು, ಯೂಟ್ಯೂಬ್ ವಿಡಿಯೋಗಳನ್ನು ನೋಡುವುದು ಕಡ್ಡಾಯ ಎನ್ನುವಂತಾಗಿಬಿಟ್ಟಿರುತ್ತದೆ. ಹೀಗೆ ಮಲಗುವ ಮುನ್ನ ಎಲೆಕ್ಟ್ರಾನಿಕ್ ಉಪಕರಣಗಳ ಜೊತೆ ಇರುವುದರಿಂದ ನಿದ್ರೆಯ ಗುಣಮಟ್ಟ ಹಾಳಾಗುತ್ತದೆ ಎಂಬುದನ್ನು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. ಈಗ ಗ್ಯಾಜೆಟ್‌ಗಳಿಂದ ದೂರ ಉಳಿದ ಸಮಯದಲ್ಲಿ ಧ್ಯಾನ ಮಾಡುವುದು, ಬರವಣಿಗೆ, ಓದು ಮಾಡಬಹುದು. ಇದರಿಂದ ವರ್ಷಗಟ್ಟಲೆಯಿಂದ ಇಂಥ ನಿದ್ರೆ ಮಾಡಿಲ್ಲ ಎನಿಸುವಂಥ ನಿದ್ರೆ ಬರದಿದ್ದರೆ ಕೇಳಿ.

ನಾನು ಸೋಷಿಯಲ್‌ ಮೀಡಿಯಾಗಳ ಪರ!: ಸಂದರ್ಶನದಲ್ಲಿ ಮೋದಿ ಮಾತು

4. ಮುಖ್ಯ ವಿಚಾರಗಳಿಗೆ ಸಮಯ ಸಿಗುತ್ತದೆ

ಸಮಯವಿಲ್ಲ ಎಂದು ವರ್ಷಗಳಿಂದ ಮುಂದೂಡುತ್ತಾ ಬಂದ ಕೆಲಸಗಳಿಗೆಲ್ಲ ಈಗ ನಿಮಗೇ ಆಶ್ಚರ್ಯವಾಗುವಂತೆ ಸಮಯ ಸಿಗತೊಡಗುತ್ತದೆ. ತಂದಿಟ್ಟ ದಿನದಿಂದ ಅಲ್ಮೆರಾದಲ್ಲಿ ಕುಳಿತು ಧೂಳು ಹಿಡಿದ ಆ ಪುಸ್ತಕವೀಗ ನಿಮ್ಮನ್ನು ಸೆಳೆಯುತ್ತದೆ. ಹೊರ ಹೋಗಲು, ಫಿಟ್ನೆಸ್ ಕ್ಲಾಸ್‌ಗೆ, ಗೆಳೆಯರನ್ನು ಭೇಟಿಯಾಗಲು- ಎಲ್ಲದಕ್ಕೂ ಸಮಯ ಸಿಗುತ್ತದೆ. ಇದರಿಂದ ಮನಸ್ಸಿಗೆ ಹೊಸ ಉಲ್ಲಾಸ ಸಿಗುವುದು ಪಕ್ಕಾ. 

5. ಹೊಸ ಹವ್ಯಾಸ ಅಭ್ಯಾಸವಾಗಬಹುದು

ಆನ್‌ಲೈನ್ ಜಗತ್ತಿನಿಂದ ಹೊರ ಬಂದ ಬಳಿಕ, ಪ್ರತಿದಿನ ನಿಮ್ಮ ಜೋಳಿಗೆಯಲ್ಲಿ ಸಮಯ ಹೆಚ್ಚಿರುವುದು ಕಂಡುಕೊಳ್ಳುತ್ತೀರಿ. ಈಗ ಆ ಸಮಯವನ್ನು ನಿಮ್ಮ ಹವ್ಯಾಸಗಳು, ಆಸಕ್ತಿಗಳಿಗೆ ಬಳಸಿಕೊಳ್ಳಬಹುದು. ಹೊಸ ಹವ್ಯಾಸವನ್ನೂ ರೂಢಿಸಿಕೊಳ್ಳಬಹುದು. ಪೇಂಟಿಂಗ್, ಪಾಟರಿ, ಹೊಲಿಗೆ, ಸಂಗೀತ, ನೃತ್ಯ ಕಲಿಕೆ ಯಾವುದರಲ್ಲಿ ಬೇಕಾದರೂ ತೊಡಗಿಸಿಕೊಳ್ಳಬಹುದು. 

ಮಾತಿಲ್ಲ, ಕಥೆಯಿಲ್ಲ ಬರೀ ಇಮೋಜಿಯಲ್ಲೇ ಆರಂಭ ಪ್ರೇಮ

6. ಮಕ್ಕಳ ಸಂತೋಷ

ನೀವು ಹೀಗೆ ಏಳು ದಿನ ಸಮಯ ಮಾಡಿಕೊಂಡಿದ್ದರಿಂದ ನಿಮಗಿಂತ ಹೆಚ್ಚು ಸಂತೋಷ ಪಡುವವರು ಮಕ್ಕಳು. ಅವರ ಸಂತೋಷ ನೋಡಿದ ಮೇಲಷ್ಟೇ ಇಷ್ಟು ದಿನ ಅವರು ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದರು ಎಂಬುದು ನಿಮಗರಿವಾಗುತ್ತದೆ. ಈಗ ಮಕ್ಕಳನ್ನು ಪಾರ್ಕ್‍‌ಗೆ ಕರೆದುಕೊಂಡು ಹೋಗಲು, ಅವರಿಗೆ ಹೋಂವರ್ಕ್ ಮಾಡಿಸಲು, ಅವರ ಮಾತುಗಳನ್ನು ಕೇಳಲು, ಅವರೊಂದಿಗೆ ಆಡಲು ನಿಮ್ಮಲ್ಲಿ ಸಮಯವಿರುತ್ತದೆ. ಅಷ್ಟೇ ಅಲ್ಲ, ನೀವು ಅವರಿಗೆ ಹೆಚ್ಚು ಗಮನ ಕೊಡಬಲ್ಲಿರಿ. 

Latest Videos
Follow Us:
Download App:
  • android
  • ios