ಬಿಹಾರದಲ್ಲಿ ವಿವಾಹಿತ ಪುರುಷನೊಬ್ಬ ಎರಡನೇ ಮದುವೆಯಾಗಿ ಮಕ್ಕಳನ್ನು ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಮೊದಲ ಪತ್ನಿಯ ದೂರಿನ ಮೇರೆಗೆ ಸಲಹಾ ಕೇಂದ್ರದಲ್ಲಿ ವಿಚಾರಣೆ ನಡೆಸಿ, ಪುರುಷನಿಗೆ ವಾರದಲ್ಲಿ ಮೂರು ದಿನ ಮೊದಲ ಪತ್ನಿ, ಮೂರು ದಿನ ಎರಡನೇ ಪತ್ನಿಯೊಂದಿಗೆ ಕಳೆಯಲು ಆದೇಶಿಸಲಾಗಿದೆ. ಉಳಿದ ಒಂದು ದಿನ ಅವನಿಷ್ಟ. ಮೊದಲ ಪತ್ನಿಗೆ ಮಾಸಿಕ ನಾಲ್ಕು ಸಾವಿರ ರೂಪಾಯಿ ನೀಡಬೇಕೆಂದೂ ತೀರ್ಪು ನೀಡಲಾಗಿದೆ.

 ಪತ್ನಿ ಮತ್ತು ಮಕ್ಕಳು ಇದ್ದರೂ, ಈ ವಿಷಯವನ್ನು ಗುಟ್ಟಾಗಿ ಇಟ್ಟು ಇನ್ನೊಂದು ಮದುವೆಯಾಗಿ, ಅವಳಿಂದಲೂ ಮಕ್ಕಳನ್ನು ಪಡೆದ ಇಬ್ಬರು ಹೆಂಡಿರ ಮುದ್ದಿನ ಗಂಡ ಕೊನೆಗೂ ಸಲಹಾ ಕೇಂದ್ರದಿಂದ ಲಾಟರಿ ಹೊಡೆದಿರುವ ವಿಚಿತ್ರ ಘಟನೆಯೊಂದು ಬಿಹಾರದ ಪೂರ್ಣಿಯಾದಲ್ಲಿ ನಡೆದಿದೆ. ರುಪೌಲಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿರುವ ಗ್ರಾಮದಲ್ಲಿ ಒಬ್ಬ ಆಸಾಮಿ ಈ ಕೃತ್ಯ ಎಸಗಿದ್ದಾನೆ. ಮೊದಲ ಮದುವೆಯಿಂದ ಪತ್ನಿ, ಮಕ್ಕಳು ಇದ್ದರೂ, ಮೋಸ ಮಾಡಿ ಎರಡನೆಯ ಮದುವೆಯಾಗಿದ್ದಾನೆ. ಆ ಪತ್ನಿಗೂ ಮಕ್ಕಳಾಗಿದ್ದಾರೆ. ಆಗಾಗ ನಾಪತ್ತೆಯಾಗುತ್ತಿದ್ದ ಗಂಡನ ಬಗ್ಗೆ ಮೊದಲ ಪತ್ನಿಗೆ ಅನುಮಾನ ಮೂಡಿದೆ. 

ಅಷ್ಟಕ್ಕೆ ಸುಮ್ಮಳಾಗದ ಆಕೆ, ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ಮೋಸ ಮಾಡಿರುವ ದೂರು ದಾಖಲು ಮಾಡಿದ್ದಾಳೆ. ನಂತರ ಈ ಪ್ರಕರಣ ಸಲಹಾ ಕೇಂದ್ರಕ್ಕೆ ವಹಿಸಿಕೊಡಲಾಗಿತ್ತು. ಸಲಹಾ ಕೇಂದ್ರದಲ್ಲಿ ಈ ಪತಿ ಮಹಾಶಯ ಮತ್ತು ಇಬ್ಬರೂ ಪತ್ನಿಯನ್ನು ಕರೆಸಿ ಸಮಾಲೋಚನೆ ನಡೆಸಲಾಗಿದೆ. ಕೊನೆಗೆ ತೀರ್ಪು ಮಾತ್ರ ಕುತೂಹಲವಾಗಿದೆ. ಈ ಬಗ್ಗೆ ಮಾಹಿತಿ ನೀಡಿದ್ದಾರೆ ಪೂರ್ಣಿಯಾ ಎಸ್ಪಿ ಕಾರ್ತಿಕೇಯ ಶರ್ಮಾ. ಈ ಆಸಾಮಿ ಏಳು ವರ್ಷಗಳ ಹಿಂದೆ ಎರಡನೇ ಮದುವೆಯಾಗಿದ್ದಾನೆ. ಮೊದಲ ಪತ್ನಿಗೆ ಎರಡನೆಯ ಮದುವೆಯ ವಿಷಯ ಗೊತ್ತಿರಲಿಲ್ಲ. ಆದರೆ ಎರಡನೆಯವಳಿಗೆ ವಿಷಯ ತಿಳಿದಿತ್ತು. ಮೊದಲ ಪತ್ನಿಗೆ ಎರಡನೇ ಮದುವೆ ಬಗ್ಗೆ ತಿಳಿದ ನಂತರ ದೂರು ನೀಡಿದ್ದಳು. ಆದ್ದರಿಂದ ಈ ಪ್ರಕರಣವನ್ನು ಕುಟುಂಬ ಸಲಹಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ ಎಂದರು.

ಅಮ್ಮನೆಂದರೆ ಸುಮ್ಮನೆಯೆ? ಮಕ್ಕಳಿಗಾಗಿ ಈಕೆಯದ್ದು ಬಲು ರೋಚಕ ದಿನಚರಿ! ಅವರ ಬಾಯಲ್ಲೇ ಕೇಳಿ

ಸಲಹಾ ಕೇಂದ್ರದಲ್ಲಿ, ಪತಿ ಮಹಾಶಯ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ದೀರ್ಘ ಸಮಾಲೋಚನೆ ಬಳಿಕ, ಅವನು ತನ್ನ ಮೊದಲ ಹೆಂಡತಿ ಮತ್ತು ಮಕ್ಕಳ ಬಳಿಗೆ ಹಿಂತಿರುಗಲು ಬಯಸುವುದಾಗಿ ಹೇಳಿದ. ಆದರೆ ಅವನ ಎರಡನೇ ಹೆಂಡತಿ ಸುಮ್ಮನಾಗ್ತಾಳಾ? ಅವನನ್ನು ಅಲ್ಲಿಯೇ ತಡೆದಳು. ಏಕೆಂದ್ರೆ ಹಾಗೆ ಮಾಡಿದರೆ ಅವಳು ಮತ್ತು ಇಬ್ಬರು ಮಕ್ಕಳು ಬೀದಿಪಾಲಾಗಬೇಕಿತ್ತು! ಅದಕ್ಕೇ ಅವನಿಗೆ ಏನು ಮಾಡಬೇಕೆಂದು ಅರ್ಥವಾಗಲಿಲ್ಲ. ಮೊದಲ ಹೆಂಡತಿಯ ಬಳಿಗೆ ಹೋದಾಗಲೆಲ್ಲಾ ಎರಡನೇ ಹೆಂಡತಿ ಬೆದರಿಕೆ ಹಾಕುತ್ತಾಳೆ ಎಂದು ಪತಿ ಹೇಳಿಕೊಂಡ. ಆದ್ದರಿಂದ ನಾನು ಮೊದಲ ಪತ್ನಿಯ ಬಳಿಗೇ ಇರುವುದಾಗಿ ಹೇಳಿದ. ಆದರೆ ಇದಕ್ಕೆ ಎರಡನೆಯ ಪತ್ನಿ ಅಲ್ಲಿಯೇ ಗಲಾಟೆ ಶುರು ಮಾಡಿದಳು.

ಇದಾದ ನಂತರ ಕುಟುಂಬ ಸಲಹಾ ಕೇಂದ್ರವು ಒಂದು ವಿಶಿಷ್ಟ ಪರಿಹಾರವನ್ನು ಕಂಡುಕೊಂಡಿತು. ಮೊದಲ ಹೆಂಡತಿಯೊಂದಿಗೆ ನಾಲ್ಕು ದಿನ ಮತ್ತು ಎರಡನೇ ಹೆಂಡತಿಯೊಂದಿಗೆ ಮೂರು ದಿನ ಇರಲು ಗಂಡನಿಗೆ ಅನುಮತಿ ನೀಡಿತು. ಇದು ಎಲ್ಲಾದರೂ ಉಂಟೆ? ತನಗಿಂತ ಆಕೆಗೆ ಒಂದು ದಿನ ಹೆಚ್ಚು ಎಂದು ನೀಡಿದ ಆದೇಶಕ್ಕೆ ಎರಡನೆಯ ಪತ್ನಿ ಸಿಟ್ಟು ಮಾಡಿಕೊಂಡು ಗಲಾಟೆ ಶುರುವಿಟ್ಟುಕೊಂಡಳು. ಇದರಿಂದ ತುಂಬಾ ಗದ್ದಲ ಉಂಟಾಯಿತು. ಕೊನೆಗೆ, ಗಂಡನನ್ನು ಇಬ್ಬರು ಹೆಂಡತಿಯರ ನಡುವೆ ತಲಾ 3 ದಿನಗಳವರೆಗೆ ಹಂಚಲಾಯಿತು. ಇದರರ್ಥ ಪತಿ ವಾರದಲ್ಲಿ ಮೂರು ದಿನ ಮೊದಲ ಹೆಂಡತಿಯೊಂದಿಗೆ ಮತ್ತು ಮೂರು ದಿನ ಎರಡನೇ ಹೆಂಡತಿಯೊಂದಿಗೆ ಇರುತ್ತಾನೆ. ಮತ್ತು ಉಳಿದ ಒಂದು ದಿನವನ್ನು ಅವನು ತನ್ನ ಇಚ್ಛೆಯಂತೆ ಎಲ್ಲಿ ಬೇಕಾದರೂ ಕಳೆಯಬಹುದು. ಇದಲ್ಲದೆ, ಮಕ್ಕಳ ಶಿಕ್ಷಣ ಮತ್ತು ಆಹಾರಕ್ಕಾಗಿ ಪತಿಯು ತನ್ನ ಮೊದಲ ಪತ್ನಿಗೆ ಪ್ರತಿ ತಿಂಗಳು 4 ಸಾವಿರ ರೂಪಾಯಿಗಳನ್ನು ನೀಡಬೇಕೆಂದು ಆದೇಶಿಸಲಾಯಿತು. ಈ ನಿರ್ಧಾರಕ್ಕೆ ಇಬ್ಬರೂ ಹೆಂಡತಿಯರು ಒಪ್ಪಿಕೊಂಡರು.

ಹನಿಮೂನ್​ನಲ್ಲೇ ಗಂಡನ ಮೇಲೆ ನಟಿ ಮೇಘನಾ ಗರಂ! ಕ್ಯಾಮೆರಾ ಎದುರೇ ಇದೇನಿದು ಈ ಪರಿ ಆರೋಪ?