ಮದುವೆ ಅನ್ನೋದು ಒಂದು ಸುಂದರವಾದ ಸಂಬಂಧ. ಆದರೆ ದಾಂಪತ್ಯವನ್ನ ನಿಭಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹೀಗಾಗಿಯೇ ಹಲವರು ಒಟ್ಟಿಗೆ ಜೊತೆಗಿರಲು ಸಾಧ್ಯವಾಗದೆ ಡಿವೋರ್ಸ್ ಪಡೆದುಕೊಳ್ಳುತ್ತಾರೆ. ಇಂಥಾ ಸಮಸ್ಯೆಯನ್ನು ಮನಗಂಡು ಇಲ್ಲೊಂದು ಸಂಸ್ಥೆ ಸಂಸಾರ ನಿಭಾಯಿಸಲೆಂದೇ ಒಂದು ಕೋರ್ಸ್‌ನ್ನು ಸಿದ್ಧಪಡಿಸಿದೆ.

ಮದ್ವೆ (Marriage) ಅನ್ನೋದು ಒಂದು ಸುಂದರವಾದ ಬಾಂಧವ್ಯ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ಸಂಬಂಧಕ್ಕೆ (Relationship) ಅರ್ಥವೇ ಇಲ್ಲದಂತಾಗಿದೆ. ವಿಚ್ಛೇದನ (Divorce), ಅನೈತಿಕ ಸಂಬಂಧದಿಂದ ದಾಂಪತ್ಯ ಅನ್ನೋದು ಅರ್ಥಹೀನವಾಗುತ್ತಿದೆ. ಲವ್ ಮಾಡಿ ಅರ್ಧದಲ್ಲೇ ಕೈ ಬಿಡುವುದು, ಎಂಗೇಜ್‌ಮೆಂಟ್ ಮಾಡಿ ಕ್ಯಾನ್ಸಲ್ ಮಾಡಿಕೊಳ್ಳುವುದು, ಮದುವೆ ಮನೆಯಲ್ಲೇ ಈ ಹುಡುಗ ನನಗೆ ಬೇಡ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಮದುವೆಯ ನಂತರ ವೈಮನಸ್ಸು, ಜಗಳ, ಮನೆಮಂದಿಯೊಂದಿಗೆ ಹೊಂದಾಣಿಕೆಯಾಗದಿರುವುದು, ಅತ್ತೆ ಸೊಸೆ ಜಗಳ, ನಾದಿನಿ ಜೊತೆ ಫೈಟ್ ಹೀಗೆ ನಾನಾ ಕಾರಣಗಳಿಂದ ಹಲವರು ದಾಂಪತ್ಯದಲ್ಲಿ ಬೇರೆ ಬೇರೆಯಾಗುತ್ತಾರೆ.

ಮದ್ವೆಯೆಂಬ ಸುಂದರವಾದ ಸಂಬಂಧ ಹಲವರ ಪಾಲಿಗೆ ಬಂಧನದಂತೆ ಭಾಸವಾಗುತ್ತಿದೆ. ಹುಡುಗರು ಜವಾಬ್ದಾರಿ ಕಳೆದುಕೊಳ್ಳಲು ಹಿಂಜರಿದರೆ, ಹುಡುಗಿಯರು ಹೌಸ್‌ವೈಫ್‌ ಆಗಲೂ ಇಷ್ಟಪಡುವುದಿಲ್ಲ. ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಹುಡುಗ-ಹುಡುಗಿಯರು ಮದುವೆಯನ್ನು ಮುಂದೂಡುತ್ತಲೇ ಬರುತ್ತಾರೆ. ಯಾಕೆಂದರೆ ಸಂಬಂಧವನ್ನು ನಿಭಾಯಿಸುವ ರಿಸ್ಕ್ ತೆಗೆದುಕೊಳ್ಳಲು ಅವರು ಸಿದ್ಧರಿರುವುದಿಲ್ಲ. ಇಂಥವರಿಗೆಂದೇ ಹೈದರಾಬಾದ್‌ನಲ್ಲೊಂದು ಸಂಸ್ಥೆ ದುಲ್ಹ-ದುಲ್ಹನ್ (ವರ-ವಧು) ಕೋರ್ಸ್ ಆರಂಭಿಸಿದೆ.

ಮದ್ವೆಯಾದ ಒಂದೇ ಗಂಟೆಯಲ್ಲಿ ಡಿವೋರ್ಸ್‌, ವಧುವಿಗೆ ತನ್ನ ತಮ್ಮನ ಜೊತೆಯೇ ಮದ್ವೆ ಮಾಡಿಸಿದ ವರ!

ಜಗತ್ತಿನಲ್ಲಿ ಫ್ರೊಫೆಶನಲ್ ಆಗಿ ನಾನಾ ರೀತಿಯ ಕೋರ್ಸ್‌ಗಳಿವೆ. ಇದಲ್ಲದೆ ಹವ್ಯಾಸಕ್ಕೆಂದು ಡ್ರಾಯಿಂಗ್‌, ಕುಕ್ಕಿಂಗ್‌, ಸ್ವಿಮ್ಮಿಂಗ್ ಮೊದಲಾದ ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಆದರೆ ಇದು ಅವೆಲ್ಲಕ್ಕಿಂತಲೂ ವಿಭಿನ್ನ. ಇಲ್ಲಿ ದಾಂಪತ್ಯವನ್ನು ನಿಭಾಯಿಸಲು ತರಬೇತಿ ನೀಡಲಾಗುತ್ತದೆ. ಸಂಸಾರ ನಿಭಾಯಿಸಲಿಕ್ಕೂ ತರಬೇತಿ (Training) ನೀಡುತ್ತಾರೆ. ಮದುವೆ ಆಗಲಿರುವವರು, ಮದುವೆ ಆದವರು ಈ ಸಂಸ್ಥೆಯಲ್ಲಿ ಟ್ರೈನಿಂಗ್ ಪಡೆದುಕೊಳ್ಳಬಹುದಾಗಿದೆ.

ದುಲ್ಹ-ದುಲ್ಹನ್ ಕೋರ್ಸ್‌ನಲ್ಲಿ ಏನೇನಿದೆ ?
ದುಲ್ಹ-ದುಲ್ಹನ್ ಕೋರ್ಸ್ ಎಂದೇ ಸಂಸ್ಥೆಯೊಂದು ಈ ವಿಶಿಷ್ಟವಾದ ಕೋರ್ಸ್ ಆರಂಭಿಸಿದೆ. ಮಾತ್ರವಲ್ಲ, ಈ ಕೋರ್ಸ್​ ಮೂಲಕ ವಧು-ವರರಿಗೆ, ಗಂಡ-ಹೆಂಡತಿಗೆ ಸಂಸಾರವನ್ನು ಹೇಗೆ ನಿರ್ವಹಿಸಬೇಕೆಂಬ ತರಬೇತಿ ನೀಡಲಾಗುತ್ತದೆ. ಈ ವಿನೂತನ ರೀತಿಯ ಕೋರ್ಸ್ ಆರಂಭಿಸಿರುವುದು ಹೈದರಾಬಾದ್​ನ ಫ್ಯಾಮಿಲಿ ಇನ್​ಸ್ಟಿಟ್ಯೂಟ್ ಎಂಬ ಸಂಸ್ಥೆ.

ಕೋರ್ಸ್‌ನಲ್ಲಿ ಮದುವೆ ಎಂದರೇನು ?, ಮದುವೆಯ ಮಂತ್ರ, ಮದುವೆ ಮಾಡಿಕೊಳ್ಳುವುದು ಯಾಕೆ, ಕೋಪ ನಿರ್ವಹಣೆ, ನಿಯಮ ಮತ್ತು ಹೊಣೆಗಾರಿಕೆ, ಪತಿಯ ಪ್ರಮಾದಗಳು, ಪತ್ನಿಯ ಮೂಲಭೂತ ಅಗತ್ಯಗಳು, ಪತಿ ಮಾಡಬೇಕಾದ್ದು ಮತ್ತು ಮಾಡಬಾರದ್ದು, ಆದರ್ಶ ಪತಿಯಾಗುವುದು ಹೇಗೆ?, ಹ್ಯಾಪಿನೆಸ್​ ಮಂತ್ರ, ಆದರ್ಶ ಪತ್ನಿಯಾಗುವುದು ಹೇಗೆ?, ಪತಿಯನ್ನು ಗೆಲ್ಲುವುದು ಹೇಗೆ?, ಮನೆ ನಿರ್ವಹಣೆ, ನಿರ್ಧಾರಗಳ ಪರಿಣಾಮ ಮೊದಲಾದ ವಿಚಾರಗಳನ್ನು ಹೇಳಿಕೊಡಲಾಗುತ್ತಿದೆ.

ಕೊಲೀಗ್ ಜೊತೆ ಹೆಂಡ್ತಿಯ ಲವ್ವಿಡವ್ವಿ, ಪ್ರೀತಿಸಿ ಮದ್ವೆಯಾಗಿದ್ರೂ ಬಿಟ್ಕೊಟ್ಟ ಪತಿರಾಯ !

'ಅತ್ಯುತ್ತಮ ತಾಯಿ'ಯಾಗುವುದು ಹೇಗೆಂಬ ಕೋರ್ಸ್ ಸಹ ಲಭ್ಯ
ವಿಚ್ಛೇದನ, ಲಿವ್-ಇನ್ ಸಂಬಂಧದಲ್ಲಿ ಬದುಕುವುದು ಈ ಸಮಾಜದಲ್ಲಿ ನಿಜವಾಗಿಯೂ ದೊಡ್ಡ ವಿಷಯವಾಗಿದೆ. ಅದರ ಬಗ್ಗೆ ಮುಕ್ತವಾಗಿ ಮಾತನಾಡಿದರೆ ಕೀಳಾಗಿ ಕಾಣಲಾಗುತ್ತದೆ. ಏಕೆಂದರೆ ನಮ್ಮ ಸಮಾಜವು ಹುಡುಗಿಯರಿಗೆ ಕಲಿಸುವುದು ಅದನ್ನೇ: ಪ್ರತಿಯೊಂದು ಸಂದರ್ಭಕ್ಕೂ ಹೊಂದಿಕೊಳ್ಳಲು, ಮೌನವಾಗಿರಿ ಮತ್ತು ಉತ್ತರಿಸಬೇಡಿ ಎಂದು ಚಿಕ್ಕಂದಿನಲ್ಲೇ ಹೇಳಿಕೊಡುತ್ತಾರೆ. ಮದುವೆಯನ್ನು ನಿರ್ವಹಿಸುವುದು ಕೇವಲ ಹೆಣ್ಣಿನ ಜವಾಬ್ದಾರಿ ಎಂಬಂತೆ ಸಮಾಜ ನೋಡುತ್ತದೆ. ಹೀಗಿರುವಾಗ ಹೈದರಾಬಾದ್ ಇನ್ಸ್ಟಿಟ್ಯೂಟ್ ದುಲ್ಹ ದುಲ್ಹನ್ ಕೋರ್ಸ್ ಏರ್ಪಡಿಸಿರುವುದು ಅರ್ಥಪೂರ್ಣವಾಗಿದೆ. 

ಈ ಕೋರ್ಸ್ 'ಪ್ರಿ-ಮದುವೆ ತರಬೇತಿ', 'ಮದುವೆ ನಂತರದ ತರಬೇತಿ' ಮತ್ತು 'ಅತ್ಯುತ್ತಮ ತಾಯಿ' ಕೋರ್ಸ್ ಅನ್ನು ನೀಡುತ್ತದೆ, ಇದು ಅಮ್ಮಂದಿರಿಗೆ ಪೋಷಕರ ಸಲಹೆಗಳನ್ನು ನೀಡುವುದನ್ನು ಒಳಗೊಂಡಿರುತ್ತದೆ. ಸಂಸ್ಥೆಯು ತಿಂಗಳಿಗೆ 5,000 ರೂ.ಗಳಿಗೆ ಕಾರ್ಯಾಗಾರಗಳು ಮತ್ತು ಸೆಮಿನಾರ್‌ಗಳನ್ನು ಸಹ ನೀಡುತ್ತದೆ.

'ಸಂಸ್ಥೆ, ಲಿಂಗ, ಧರ್ಮ, ಶೈಕ್ಷಣಿಕ ಅರ್ಹತೆ ಅಥವಾ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಎಲ್ಲರಿಗೂ ತೆರೆದಿರುತ್ತದೆ. ನಾವು ಕಳೆದ ಎರಡು ವರ್ಷಗಳಿಂದ ಜನರಿಗೆ ಯಶಸ್ವಿಯಾಗಿ ಕೌನ್ಸಿಲಿಂಗ್ ಮಾಡುತ್ತಿದ್ದೇವೆ' ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ. 'ಇಂದು ದಂಪತಿಗಳ ನಡುವಿನ ದೊಡ್ಡ ಸಮಸ್ಯೆ ಎಂದರೆ ಅಹಂಕಾರ ಮತ್ತು ತಪ್ಪು ತಿಳುವಳಿಕೆ. ಇದರಿಂದ ಹೆಚ್ಚಿನ ವಿಚ್ಛೇದನದ ಪ್ರಕರಣಗಳು ಉಂಟಾಗುತ್ತವೆ ಆದರೆ ಇದು ಡಿವೋರ್ಸ್‌ನಲ್ಲಿ ಕೊನೆಗೊಳ್ಳಬೇಕೆಂದಿಲ್ಲ. ಮಾತುಕತೆಯ ಮೂಲಕವೂ ಬಗೆಹರಿಸಬಹುದು. ಅದಕ್ಕಾಗಿ ಇಂಥಾ ಕೋರ್ಸ್‌ನ ಅಗತ್ಯವಿದೆ' ಎಂದು ಮಾಲೀಕರು ತಿಳಿಸಿದ್ದಾರೆ.