ಸೋಷಿಯಲ್ ಮೀಡಿಯಾದಲ್ಲೇ ದಿನ ಕಳೆಯುವ ಜನ ನೀವಾ? ಹಾಗಾದ್ರೆ ಇದನ್ನೊಮ್ಮೆ ಓದಿ
ಇಂದು ಸೋಷಿಯಲ್ ಮೀಡಿಯಾ ಬದುಕಿನ ಅವಿಭಾಜ್ಯ ಅಂಗವಾಗಿದೆ. ಆದ್ರೆ ಸೋಷಿಯಲ್ ಮೀಡಿಯಾದ ಬಳಕೆ ಮಿತಿಮೀರಿದ್ರೆ ಮೊದಲ ಏಟು ಬೀಳೋದು ಸಂಬಂಧಕ್ಕೆ. ನಿಮ್ಮನ್ನೇ ನೆಚ್ಚಿಕೊಂಡಿರೋರು ನಿಮ್ಮನ್ನು ಬಿಟ್ಟು ದೂರವಾಗಲು ಇದೊಂದು ಕಾರಣವಾಗಬಲ್ಲದು.
ಇತ್ತೀಚೆಗೆ ಸಂಬಂಧಗಳಲ್ಲಿ ಸೋಷಿಯಲ್ ಮೀಡಿಯಾ ಎಫೆಕ್ಟ್ ಹೆಚ್ಚಿದೆ. ಹಿಂದೆಲ್ಲ ಸಂಬಂಧದಲ್ಲಿ ಪ್ರೈವೇಸಿಗೆ ಹೆಚ್ಚಿನ ಮಹತ್ವವಿತ್ತು. ಆದ್ರೆ ಇಂದು ಪತಿ-ಪತ್ನಿ ಒಂದೇ ಮನೆಯಲ್ಲಿದ್ರೂ ತಮ್ಮ ಪ್ರೀತಿ ತೋರ್ಪಡಿಕೆಗೆ ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಬರ್ತ್‍ಡೇ, ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯಗಳು, ಪತಿ ಅಥವಾ ಪತ್ನಿಯ ಸಾಧನೆಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಂಡ್ರೆ ಮಾತ್ರ ಇಬ್ಬರ ನಡುವೆ ಪ್ರೀತಿಯಿದೆ ಎಂದು ಸಮಾಜ ತಿಳಿದುಕೊಳ್ಳುತ್ತೆ ಎಂಬ ಭಾವನೆ ಅನೇಕರಲ್ಲಿದೆ. ಅದೇನೆ ಇರಲಿ, ಆದ್ರೆ ಮಿತಿಮೀರಿದ ಆನ್‍ಲೈನ್ ಅಭ್ಯಾಸ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರೋದಂತೂ ಸುಳ್ಳಲ್ಲ. ಪತಿ ಮೊಬೈಲ್‍ಗೆ ತಡರಾತ್ರಿ ವಾಟ್ಸ್ಆಪ್ ಮೆಸೇಜ್ ಬಂದ ಸದ್ದು ಪತ್ನಿ ಮನಸ್ಸಿನಲ್ಲಿ ಸಣ್ಣ ಅನುಮಾನದ ಕಿಡಿ ಹೊತ್ತಿಸಬಲ್ಲದು. ಫೇಸ್‍ಬುಕ್‍ನಲ್ಲಿ ಯಾರೂ ಒಬ್ಬ ಅಪರಿಚಿತ ಹುಡುಗನ ಪೋಸ್ಟ್ಗೆ ಪತ್ನಿ ಹಾಕಿದ ಕಾಮೆಂಟ್ ಪತಿಯ ನೆಮ್ಮದಿ ಕೆಡಿಸಬಹುದು. ಹಾಗಾದ್ರೆ ಸಂಬಂಧ ಕೆಡಿಸುವ ಆನ್‍ಲೈನ್ ಅಭ್ಯಾಸಗಳು ಯಾವುವು?
ಸೋಷಿಯಲ್ ಮೀಡಿಯಾದಲ್ಲೇ ಮುಳುಗಿರೋದು
ಸದಾ ಕೈಯಲ್ಲಿ ಮೊಬೈಲ್ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಮುಳುಗಿರುವವರ ಸಂಖ್ಯೆ ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿದೆ. ಫ್ರೆಂಡ್ಸ್ ಹಾಗೂ ಫಾಲೋವರ್ಸ್‍ಗೆ ತಮ್ಮ ಪ್ರತಿ ಕೆಲಸ-ಕಾರ್ಯಗಳ ಅಪ್ಡೇಟ್ ನೀಡೋದು ಇವರ ಅಭ್ಯಾಸ. ಈ ಕಾರಣದಿಂದ ಸದಾ ಫೇಸ್‍ಬುಕ್, ಇನ್‍ಸ್ಟ್ರಾಗ್ರಾಮ್‍ನಲ್ಲಿ ಮುಳುಗಿರುವ ಇವರಿಗೆ ಮನೆಯವರ ಮಾತು ಕೇಳಿಸಿಕೊಳ್ಳಲು ಅಥವಾ ಅವರಿಗೆ ನೆರವು ನೀಡಲು ಕೂಡ ಟೈಂ ಇರೋದಿಲ್ಲ. ಪತ್ನಿ ಏನೋ ಮುಖ್ಯ ವಿಷಯವನ್ನು ಚರ್ಚಿಸುತ್ತಿದ್ರೆ ಮೊಬೈಲ್‍ನಲ್ಲಿ ಮುಳುಗಿರೋ ಪತಿಗೆ ಅದರ ಗಂಭೀರತೆಯೇ ಅರಿವಾಗೋದಿಲ್ಲ.ಇಂಥ ಅಭ್ಯಾಸ ಸಹಜವಾಗಿ ಪತ್ನಿ ಮನಸ್ಸು ಕೆಡಿಸುತ್ತೆ. ಅಷ್ಟೇ ಅಲ್ಲ,ಮನೆಗೆ ಅತಿಥಿಗಳು ಆಗಮಿಸಿದಾಗಲೂ ಅವರೊಂದಿಗೆ ಸರಿಯಾಗಿ ಮಾತನಾಡದೆ ಮೊಬೈಲ್‍ನಲ್ಲಿ ಮುಳುಗಿದ್ರೆ ಕುಟುಂಬ ಸದಸ್ಯರಿಗೆ ಅಸಮಾಧಾನವಾಗದೆ ಇರುತ್ತಾ? ಸದಾ ಆನ್‍ಲೈನ್‍ನಲ್ಲಿ ಸಕ್ರಿಯವಾಗಿರೋದು ದಾಂಪತ್ಯದಲ್ಲಿ, ಕುಟುಂಬದಲ್ಲಿ ಬಿರುಕು ಮೂಡಲು ಕಾರಣವಾಗಬಲ್ಲದು.
ತಡ ರಾತ್ರಿ ತನಕ ಚಾಟ್ ಮಾಡೋದು
ಬೆಡ್‍ರೂಮ್‍ನಲ್ಲಿ ತಡರಾತ್ರಿ ಮೊಬೈಲ್‍ನಲ್ಲಿ ಮೆಸೇಜ್ ಅಲರ್ಟ್ ಟೋನ್ ಕೇಳಿಸುತ್ತಿದ್ರೆ ಸಹಜವಾಗಿಯೇ ಸಂಗಾತಿಗೆ ನಿಮ್ಮ ಮೇಲೆ ಸಣ್ಣದೊಂದು ಅನುಮಾನ ಹುಟ್ಟಿಕೊಳ್ಳುತ್ತದೆ. ಒಂದೆರಡು ದಿನ ಸುಮ್ಮನಿದ್ದರೂ ನಂತರ ಈ ಬಗ್ಗೆ ಅವರು ವಿಚಾರಿಸದೆ ಬಿಡೋದಿಲ್ಲ. ಮೆಸೇಜ್ ಬಂದ ತಕ್ಷಣ ನೀವು ಎದ್ದು ಚೆಕ್ ಮಾಡೋ ಅಭ್ಯಾಸ ಹೊಂದಿದರಂತೂ ಅನುಮಾನದ ಭೂತ ಸಂಗಾತಿಯ ಮನಸ್ಸಿನೊಳಗೆ ಹೊಕ್ಕುವುದು ಖಚಿತ. ಬೆಡ್‍ರೂಮ್ ಪತಿ-ಪತ್ನಿಯ ನಡುವಿನ ಖಾಸಗಿ ಕ್ಷಣಗಳಿಗಾಗಿಯೇ ಮೀಸಲಾಗಿರುವ ತಾಣ. ಮನೆಯಲ್ಲಿ ಬೇರೆ ಸಮಯದಲ್ಲಿ ಮನಸ್ಸು ಬಿಚ್ಚಿ ಮಾತನಾಡಲು, ಮುದ್ದು ಮಾಡಲು ಸಾಧ್ಯವಾಗದಿದ್ರೆ ರಾತ್ರಿ ಬೆಡ್‍ರೂಮ್‍ನಲ್ಲಿ ಈ ಕೆಲಸ ಮಾಡ್ಬಹುದು. ಆದ್ರೆ ಇಲ್ಲೂ ಸಾಮಾಜಿಕ ಜಾಲತಾಣದಲ್ಲೇ ಕಳೆದು ಹೋದ್ರೆ ಸಂಗಾತಿಗೆ ನಿಮ್ಮ ಮೇಲೆ ಅಸಮಾಧಾನ ಮೂಡೋದು ಪಕ್ಕಾ.
ಪತಿಯ ಕಾಲಿಗೆ ಬೀಳಲೊಪ್ಪದ ಪತ್ನಿಯರು
ಸಂಬಂಧದ ಬಗ್ಗೆ ಸಿಕ್ಕಾಪಟ್ಟೆ ಪೋಸ್ಟ್ ಹಾಕೋದು
ಕೆಲವರಿಗೆ ಪತಿ ಅಥವಾ ಪತ್ನಿ ಜೊತೆಗಿನ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳೋ ಉತ್ಸುಕತೆ. ಇದಕ್ಕಾಗಿ ಪ್ರೀತಿ ಉಕ್ಕಿಸುವ ಉದ್ದುದ್ದ ಸಾಲುಗಳು, ಸೆಲ್ಫಿಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಸಂಗಾತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಇವರ ಫೋಟೋ, ಪೋಸ್ಟ್ ನೋಡಿದವರಿಗೆ ಜಗತ್ತಿನಲ್ಲಿ ಇವರಷ್ಟು ರೊಮ್ಯಾಂಟಿಕ್, ಹೊಂದಾಣಿಕೆ ಹೊಂದಿರುವ ಜೋಡಿ ಮತ್ತೊಂದಿಲ್ಲ ಎಂಬ ಭಾವನೆಯೇನೋ ಮೂಡಬಹುದು. ಆದ್ರೆ ಸಂಬಂಧದ ಬಗ್ಗೆ ಅತಿಯಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್, ಫೋಟೋಗಳನ್ನು ಹಾಕೋದು ಆರೋಗ್ಯಕರವಲ್ಲ. ಇದು ಕೆಲವೊಮ್ಮೆ ಸಂಗಾತಿಯ ಮನಸ್ಸಿನಲ್ಲಿ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಮೂಡಲು ಕಾರಣವಾಗಬಹುದು.
ವಿಡಿಯೋ ನೋಡುತ್ತ ಟೈಮ್ ಪಾಸ್ ಮಾಡೋದು
ಕೆಲವರಿಗೆ ವಾಟ್ಸ್‍ಆಪ್, ಫೇಸ್‍ಬುಕ್‍ಗಳಲ್ಲಿ ಸಿಗುವ ಪ್ರತಿ ವಿಡಿಯೋವನ್ನು ನೋಡಿದ್ರೇನೆ ಮನಸ್ಸಿಗೆ ಸಮಾಧಾನ. ಟೈಮ್ ಇಲ್ಲದಿದ್ರೂ ಮಾಡ್ಕೊಂಡಾದ್ರೂ ಇಂಥ ವಿಡಿಯೋಗಳನ್ನು ನೋಡುತ್ತಾರೆ. ಒಬ್ಬರೇ ಕುಳಿತು ವಿಡಿಯೋ ನೋಡುತ್ತ ನಗೋದು, ಮನೆಯಲ್ಲಿ ಯಾರಾದ್ರೂ ಕರೆದ್ರೂ ಕಿವಿಗೆ ಹಾಕಿಕೊಳ್ಳದಿರೋದು ಇಂಥವರ ಜಾಯಮಾನ. ಆದ್ರೆ ಇಂಥ ಚಟ ಸಂಗಾತಿ ನಿಮ್ಮಿಂದ ದೂರವಾಗಲು ಕಾರಣವಾಗಬಲ್ಲದು.
ಪ್ರಮುಖ ಕೆಲ್ಸ ಮಾಡುವಾಗಲೂ ಮೊಬೈಲ್ ನೋಡೋದು
ಇದೊಂಥರ ಮಾನಸಿಕ ವ್ಯಾಧಿ. ಅದೆಷ್ಟೇ ಮಹತ್ವದ ಕೆಲಸವಿರಲಿ, ಕ್ಷಣಕ್ಕೊಮ್ಮೆ ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣು ಹಾಯಿಸದಿದ್ರೆ ಕೆಲವರಿಗೆ ನಿದ್ರೆ ಬರಲ್ಲ. ಆದ್ರೆ ಇಂಥ ಅಭ್ಯಾಸ ಕೆಲ್ಸವನ್ನು ಮಾತ್ರ ಕೆಡಿಸೊಲ್ಲ, ಬದಲಿಗೆ ಸಂಬಂಧದಲ್ಲೂ ಬಿರುಕು ಮೂಡಿಸಬಲ್ಲದು. ಮನೆಯಲ್ಲಿ ಅಡುಗೆ ಮಾಡುತ್ತಿರುವ ಮಹಿಳೆ ಪದೇಪದೆ ಮೊಬೈಲ್ ನೋಡುತ್ತಿದ್ರೆ ಅಡುಗೆ ಕೆಟ್ಟು ಮನೆಮಂದಿಯ ಕೋಪಕ್ಕೆ ತುತ್ತಾಗೋದು ಗ್ಯಾರಂಟಿ. ಮನೆಯಲ್ಲಿ ಯಾವುದೇ ಕೆಲ್ಸ ಸಮರ್ಪಕವಾಗಿ ಆಗದಿದ್ರೆ ಆ ಮಹಿಳೆ ಮೇಲೆ ಪತಿಗೆ ಅಸಮಾಧಾನ ಮೂಡದೇ ಇರದು.