- ಬಿ.ಆರ್‌. ಸುವರ್ಣ ಶರ್ಮ

ಮದುವೆ ಬದುಕನ್ನು ಒಂದು ಸುಂದರ ಮಹಲನ್ನಾಗಿ ನಿರ್ಮಾಣ ಮಾಡಿಕೊಳ್ಳಲು ಹಾಕುವ ಒಂದು ಬುನಾದಿ. ಲೌಕಿಕ ಹಾಗೂ ಅಲೌಕಿಕದಲ್ಲೂ ನಮಗೆ ಉನ್ನತ ಮಟ್ಟದ ಜೀವನ ಮಾಡಲು ಸಹಾಯ ಮಾಡುವ ಸಪೋರ್ಟ್‌ ಸಿಸ್ಟಮ್‌. ನಮ್ಮ ಜೀವನದಲ್ಲಿ ಕಾಮದ ಮೆಟ್ಟಿಲನ್ನು ಹತ್ತಿ ಪ್ರೇಮದ ಪರಮಾವಧಿಯನ್ನು ತಲುಪಿಸಿ, ಪ್ರೇಮವೇ ಮತ್ತೆ ಮತ್ತೆ ಗೆಲ್ಲುವಂತೆ ಮಾಡಿ ‘ಪ್ರೇಮವೇ ದೇವರು’ ಎಂದು ಹೇಳಿಕೊಡುವ ಗುರು.

ರೇವತಿ ಕೈಯಲ್ಲಿ ನಿಖಿಲ್ ಹೆಸರಿನ ಮೆಹಂದಿ ರಂಗು: ಫೋಟೋಸ್ ನೋಡಿ

ಕಂಡೀಶನ್‌ಗಳಿಲ್ಲಿ ವರ್ಕೌಟ್‌ ಆಗಲ್ಲ

ಇಷ್ಟೇ ಸಂಬಳ ಬರುವ ಹುಡುಗ ಬೇಕು, ಹುಡುಗಿ ಇಷ್ಟೇ ತೆಳ್ಳಗೆ ಬೆಳ್ಳಗೆ ಇರಬೇಕು, ಹೀಗೇ ಇನ್ನೂ ಏನೇನೋ ವ್ಯವಾಹಾರಿಕ ದೃಷ್ಟಿಯಲ್ಲಿ ಹುಡುಕಿ ಮದುವೆಯಾಗಿ, ಜೀವನದಲ್ಲಿ ನನಗಿನ್ನೇನೋ ಬೇಕಿತ್ತು ಎಂದು ಕೊರಗುವ, ಈ ಪ್ರಪಂಚದಲ್ಲಿ, ಈ ರೀತಿಯ ವೇದಾಂತವಾಡಿದರೆ ವಿಚಿತ್ರವೆನಿಸಬಹುದೇನೋ.. ಹಾಗಂತ ಆಸೆಗಳ ವಿರುದ್ಧ ಹೋಗಬೇಕು ಎಂದಲ್ಲ. ಆದರೆ ನನಗೆ ಜೀವನದಲ್ಲಿ ಬೇಕಿರುವುದು ಏನು, ಕೊನೆಯವರೆಗೂ ಉಳಿಯುವುದು ಏನು, ಜೀವನಕ್ಕೆ ಪೂರಕವಾದುದು ಏನು, ಆತ್ಮಕ್ಕೆ ಮುದಕೊಡುವ ಸಂಗತಿಗಳೇನು ಎಂದು ತಿಳಿದು ಮದುವೆಯಾಗುವುದು ಎಲ್ಲಕ್ಕಿಂತ ಮುಖ್ಯ.

ಮದುವೆಯ ಅರ್ಥವೇ ಎಂದೂ ಮುರಿಯಲಾಗದ ಬಂಧವೆಂದು. ಅದು ಎಂದಿಗೂ ಬಿಡಿಸಿಕೊಳ್ಳಲಾರದ ಸಂಕೋಲೆಯಾಗಬಾರದು. ಎಂದಿಗೂ ಹೊರಬಾರಲು ಇಷ್ಟವಾಗದ ಆನಂದದ ಕಡಲಾಗಿರಬೇಕು. ದೈವಿಕತೆಯ ನೆಲೆಯಾಗಿರಬೇಕು. ಇಬ್ಬರು ವ್ಯಕ್ತಿಗಳು ಒಂದೇ ಜೀವನಕ್ಕೆ ಕಾಲಿಡುವಾಗ, ಸುಖ-ದುಃಖಗಳನ್ನು ಹಂಚಿಕೊಳ್ಳುವ ನಿರ್ಧಾರ ಮಾಡಿದಾಗ, ನಿನ್ನ-ನನ್ನ ಜೀವನ ಇನ್ನು ಬೇರೆ ಬೇರೆ ಅಲ್ಲ ಎಂದು ನಿರ್ಧರಿಸಿ ಒಂದಾಗುವುದು, ಕೇವಲ ಒಂದು ಖುಷಿಯ ಸಮಾರಂಭ ಅಷ್ಟೇ ಅಲ್ಲ. ಇಬ್ಬರು ವ್ಯಕ್ತಿಗಳು ಸ್ವ ಇಚ್ಛೆಯಿಂದ ಮಹತ್ತಿನ ಕಡೆಗೆ ನಡೆಸುವ ಪಯಣ ಅದು.

ಅರೇಂಜ್ಡ್ ಮ್ಯಾರೇಜ್‌ನ ಸಾಮಾನ್ಯ ಸಮಸ್ಯೆಗಳಿವು

ಮುನಿಸಿರಲಿ, ಮುಗ್ಧತೆಯೂ ಇರಲಿ

ಬಾಲ್ಯ ಹಾಗು ಬ್ರಹ್ಮಚರ್ಯವನ್ನ ದಾಟಿದ ಮೇಲೆ, ಯೋಗ್ಯ ಸಂಗಾತಿಯನ್ನ ಆರಿಸಿಕೊಂಡು ಮುಂದಿನ ಇಡೀ ಆಯುಷ್ಯವನ್ನು ಕಳೆಯುವ ನಿರ್ಧಾರ ಅಷ್ಟುಸುಲಭದ್ದಲ್ಲ. ಹೀಗಾಗಿಯೇ ಅನೇಕ ವಚನಗಳನ್ನ, ಪ್ರಮಾಣಗಳನ್ನ, ಮದುವೆಯಲ್ಲಿ ಗಂಡು-ಹೆಣ್ಣು ಮಾಡುತ್ತಾರೆ. ನಂತರ ಅದನ್ನೆಲ್ಲಾ ಪಾಲಿಸಲಾಗದೇ ಮುರಿಯುತ್ತಾರೆ. ಮತ್ತೆ ಮತ್ತೆ ಜೋಡಿಸಿ ಒಂದುಗೂಡಿಸಲು ಪ್ರಯತ್ನಿಸುತ್ತಾರೆ. ಇಟ್ಸ್‌ ಓಕೆ. ಇವೆಲ್ಲಾ ಮನುಷ್ಯ ಸಹಜ ಅಲ್ವಾ.. ತಪ್ಪುಗಳನ್ನ ಮನ್ನಿಸಿ, ಮುನಿಸುಗಳನ್ನ ಮರೆತು, ’ಇವೆಲ್ಲವೂ ಜೀವನದ ಆಯಾಮ’ ಎಂದು ಅರಿತುಕೊಳ್ಳಲು ಆಗದಿದ್ದರೆ ಭಾಂದವ್ಯಕ್ಕೆ ಅರ್ಥವೇನಿದೆ! ನಾನು- ನನ್ನದು- ನನ್ನತನ ಎಂಬ ಅಹಂಕಾರವನ್ನು ಪಕ್ಕಕ್ಕಿಟ್ಟು ಕ್ಷಮೆ ಕೇಳಿ ಪುಟ್ಟಮಗುವಿನಂತೆ ಅಪ್ಪಿಕೊಳ್ಳಲು ಆಗದಿದ್ದರೆ ಆಪ್ತತೆಗೆ ಅರ್ಥವೇನಿದೆ? ಎಲ್ಲಾ ನ್ಯೂನ್ಯತೆಗಳನ್ನ ಬಿಸಾಡಿ, ತಾಯಿಯಂತೆ ಅಪ್ಪಿ ಅಕ್ಕರೆಯಲಿ ಮುಳುಗಿಸದಿದ್ದರೆ ಪ್ರೀತಿಗೆ ಅರ್ಥವೇನಿದೆ? ಸಂಗಾತಿಗಳು, ಕೋಪ-ತಾಪ, ನೋವು-ನಲಿವು ಹೀಗೆ ಜೀವನದ ಅದೆಷ್ಟೋ ಬಿರುಗಾಳಿಯನ್ನ ಜೊತೆಯಾಗಿ ನಿಭಾಯಿಸಿ, ಒಬ್ಬರಿಗೊಬ್ಬರು ಸಮಾಧಾನ ಮಾಡುತ್ತಾ, ಅದೆಷ್ಟೇ ಬಿನ್ನಾಭಿಪ್ರಾಯವಿದ್ದರೂ ಎಲ್ಲವನ್ನೂ ಮೀರಿದ್ದು ಪ್ರೀತಿ-ಭಾಂಧವ್ಯ ಎಂದು ನಿರೂಪಿಸುತ್ತಾರೆ.

ಮೂರಕ್ಷರದ ಅಧ್ಯಾತ್ಮ ಗುರು

ಹೀಗೆ , ಇವೆಲ್ಲವನ್ನೂ ತಿಳಿಸಿಕೊಟ್ಟು , ಕೊನೆಗೆ ಪ್ರೀತಿಯೊಂದೇ ನೆಲೆಗೊಳ್ಳುವಂತೆ ಮಾಡುವ ಮೂರಕ್ಷರದ ’ಮದುವೆ’ ಯಾವ ಅಧ್ಯಾತ್ಮ ಗುರುವಿಗೂ ಕಡಿಮೆಯಿಲ್ಲ. ಪ್ರೀತಿಯು ಮಾಗುತ್ತಾ ಮಾಗುತ್ತಾ ದೈವಿಕತೆಯಾಗಿ ಪ್ರಕಾಶಿಸುತ್ತದೆ. ತನ್ನೆಲ್ಲಾ ಸ್ವಾರ್ಥ, ಮೋಹಗಳನ್ನ ಕಳಚಿ, ಇನ್ನಷ್ಟುಶುದ್ಧವಾಗಿ ಹೊಳೆಯುತ್ತಾ ಜ್ಞಾನ, ತಾಳ್ಮೆ, ಶಾಂತಿಯಿಂದ ನಗುತ್ತದೆ. ಅದು ಕೇವಲ ಇಬ್ಬರು ವ್ಯಕ್ತಿಗಳ ಬಂಧವಲ್ಲ, ಆತ್ಮಗಳ ಅನುಬಂಧ, ನಮ್ಮನ್ನೇ ನಾವು ಅರಿತುಕೊಂಡು ಬೆರೆತುಕೊಳ್ಳುವ ಪ್ರಕ್ರಿಯೆ. ಜೀವನ ಸಂಗಾತಿಯು ನಮ್ಮನ್ನ ಕಾಮ, ಕ್ರೋಧ,ಲೋಭ, ಮೋಹ, ಮದ ಮಾತ್ಸರ್ಯದಿಂದ ಹೊರಗೆ ತಂದು, ಪ್ರೇಮದ ಕಡಲನ್ನ ಸೇರಿಸುವ ಅಂಬಿಗನಾಗಬೇಕು. ಯಾರಿಂದಲೇ ತಪ್ಪಾದರೂ, ತಿದ್ದಿ, ನಾನು ಸದಾ ನಿನ್ನೊಂದಿಗಿದ್ದೇನೆ, ಇದ್ದೇ ಇರುತ್ತೇನೆ ಎಂದು ಭರವಸೆ ಕೊಡುವ ಭೂಮಿಯಂತಿರಬೇಕು.

ಎಲ್ಲಕ್ಕಿಂತ ಮುಖ್ಯವಾದ ವಿಷ್ಯ ಅಂದ್ರೆ ಓರ್ವ ಸ್ಪಿರಿಚ್ಯುವಲ್‌ ಕಂಪ್ಯಾನಿಯನ್‌ ಏನನ್ನೂ ಬಯಸದೇ ಕೇವಲ ಕೊಡಲು ತಯಾರಾಗಿರಬೇಕು. ಸಂಗಾತಿಯ ಒಳ್ಳೆಯ ಗುಣಗಳನ್ನ ಹುರಿದುಂಬಿಸೋದರ ಜೊತೆಗೆ, ದೌರ್ಬಲ್ಯತೆಗಳನ್ನೂ ಅರ್ಥ ಮಾಡಿಕೊಂಡು ಸರಿಮಾಡುವುದರ ಕಡೆ ಸಹಾಯ ಮಾಡಬೇಕು. ಎರಡು ಖಾಲಿ ಬಟ್ಟಲುಗಳಂತೆ ಕೊಡಲು ಏನೂ ಇಲ್ಲದೆ, ಕೇವಲ ಮತ್ತೊಬ್ಬರಿಂದ ಬಯಸುವುದೇ ಜೀವನವಾದರೆ, ಜೀವನ ಒಂದು ಮುಳ್ಳಿನ ಹಾದಿಯಾಗಿಬಿಡುತ್ತದೆ. ಕೊಟ್ಟುಬಿಡೋದ್ರಲ್ಲಿ ಇರೋ ಸುಖ, ಪಡೆದುಕೊಳ್ಳೋದ್ರಲ್ಲಿ ಇಲ್ಲ ಎಂಬುದು, ಪ್ರತಿಯೊಬ್ಬ ಪ್ರೇಮಿ, ಧ್ಯಾನಿ, ಯೋಗಿ, ಹಾಗೂ ಗೃಹಸ್ಥ ತಿಳಿದುಕೊಳ್ಳಬೇಕಾದ ವಿಷಯ.

ಸಂಸಾರ ಯೋಗ

ಒಟ್ಟಿನಲ್ಲಿ ಅಧ್ಯಾತ್ಮದಿಂದ, ಸುಖೀ ಸಂಸಾರ ಸಾಧ್ಯ ಎಂಬುದು ಎಷ್ಟುಸತ್ಯವೋ, ಸುಖೀ ಸಂಸಾರವೂ ಆಧ್ಯಾತ್ಮದ ಮೆಟ್ಟಿಲು ಎಂಬುದು ಅಷ್ಟೇ ಸತ್ಯ. ಹೀಗಾಗಿಯೇ ವೃದ್ಧ ದಂಪತಿಗಳನ್ನ ನೋಡಿದರೆ ಜೀವನದ ಆಯಾಮಗಳನ್ನ ದಾಟಿಬಂದ ಯೋಗಿಗಳಂತೆ ಕಾಣುತ್ತಾರೆ. ಕೈಮುಗಿಯುವಷ್ಟುದೈವಿಕತೆಯಿಂದ ಕಂಗೊಳಿಸುತ್ತಿರುತ್ತಾರೆ. ಅದೇನೇ ಆಗಲಿ, ಒಂದು ಸುಖಕರ ವೈವಾಹಿಕಜೀವನ, ಆನಂದದ ಬದುಕು, ಹೊಂದಾಣಿಕೆ ಎಲ್ಲವೂ ಫೇರಿ ಟೇಲ್‌ ಕಥೆಗಳಾಗದಿರಲಿ. ಅದು ನಮ್ಮನ್ನ ಮತ್ತು ನಮ್ಮ ಆತ್ಮ ಬಂಧುವನ್ನ ಅರಿತುಕೊಂಡು, ಅರಳುವ ಹಾದಿಯ ಆಧ್ಯಾತ್ಮ ಗುರುವಾಗಲಿ ಎಂಬುದೇ ನನ್ನ ಹಾರೈಕೆ.