ಇಂದಿನ ಡೇಟಿಂಗ್‌ನಲ್ಲಿ ಹುಡುಗರು, ಹುಡುಗಿಯರ ಸಹನೆ ಮತ್ತು ಆತ್ಮಗೌರವವನ್ನು ಅರಿಯಲು ಹಲವು ಗುಪ್ತ ಪರೀಕ್ಷೆಗಳನ್ನು ಮಾಡುತ್ತಾರೆ. ಈ ಪರೀಕ್ಷೆಗಳನ್ನು ಅರ್ಥ ಮಾಡಿಕೊಂಡು ಸ್ವಾಭಿಮಾನ ಉಳಿಸಿಕೊಂಡರೆ ಹುಡುಗಿ ಉಳೀತಾಳೆ. ಹಾಗಾ‌ದ್ರೆ ಇದನ್ನೆಲ್ಲ ಮೊದ್ಲು ಅರ್ಥ ಮಾಡಿಕೊಳ್ಳೋದು ಹೇಗೆ?

ಇದನ್ನು ಒಪ್ಪಿಕೊಳ್ಳೋದು ಕಷ್ಟವಾದರೂ, ಇವತ್ತಿನ ಬಹುತೇಕ ಡೇಟಿಂಗ್‌ನಲ್ಲಿ ಪ್ರೀತಿ ಕಡಿಮೆ, ಪರೀಕ್ಷೆ ಹೆಚ್ಚು ಅನ್ನೋ ಮಾತು ಈಗ ಜೋರಾಗಿ ಕೇಳಿಬರುತ್ತಿದೆ. ಹುಡುಗರು ನೇರವಾಗಿ ಪ್ರಶ್ನೆ ಕೇಳಿ ಪರೀಕ್ಷೆ ಮಾಡಲ್ಲ. ಬದಲಾಗಿ ಹುಡುಗಿಯ ವರ್ತನೆ ನೋಡಿ ಅಳೆಯುತ್ತಾರೆ. ಸ್ವಲ್ಪ ಡಿಸ್ಟೆನ್ಸ್‌ ಕಾಪಾಡೋದು, ಮೆಸೇಜ್‌ಗೆ ತಡವಾಗಿ ಉತ್ತರ, ಸಣ್ಣ ಅವಮಾನ, ಮೌನ… ಇವೆಲ್ಲಾ ಅಜಾಗರೂಕವಾಗಿ ನಡೆಯೋ ಆಟಗಳೇನಲ್ಲ. “ಅವಳು ಎಷ್ಟು ಸಹಿಸುತ್ತಾಳೆ?” ಅನ್ನೋದನ್ನ ನೋಡೋ ಪರೀಕ್ಷೆಗಳು ಅಂತ ತಜ್ಞರು ಹೇಳ್ತಾರೆ. ಈ ಪರೀಕ್ಷೆಗಳನ್ನು ಅರಿಯದೇ ಆಡ್ತಾ ಹೋದ್ರೆ, ಸಂಬಂಧದಲ್ಲಿ ಹುಡುಗಿಗೆ ಹಿಡಿತ ಕಡಿಮೆಯಾಗುತ್ತೆ ಅನ್ನೋದು ಕಟು ಸತ್ಯ. ಹಾಗಾದ್ರೆ ಈ ಆಟಗಳು ಯಾವುವು? ನೋಡೋಣ.

ಮೊದಲ ಪರೀಕ್ಷೆ: ಅವಳು ತನ್ನನ್ನು ಕಂಟ್ರೋಲ್ ಮಾಡ್ಕೊಳ್ತಾಳಾ?

ಡೇಟಿಂಗ್‌ನ ಆರಂಭದಲ್ಲೇ ಕೆಲ ಹುಡುಗರು ಇಚ್ಛಾಪೂರ್ವಕವಾಗಿ ನಿಧಾನ ಮಾಡ್ತಾರೆ. ಮೆಸೇಜ್‌ಗೆ ರಿಪ್ಲೈ ತಡ ಮಾಡುವುದು, ಹೆಚ್ಚು ಕಾಳಜಿ ತೋರಿಸದಿರುವುದು, ಸ್ವಲ್ಪ ದೂರ ಕಾಪಾಡಿಕೊಳ್ಳುವುದು. ಕಾರಣ ಒಂದೇ – ಹುಡುಗಿಗೆ ತನ್ನ ಭಾವನೆಗಳ ಮೇಲೆ ಹಿಡಿತ ಇದೆಯಾ ಅನ್ನೋದನ್ನು ನೋಡುವುದು. ಅವನ ಮೌನಕ್ಕೆ ನೀನು ಆತಂಕಪಡ್ತೀಯಾ? ಅತಿಯಾಗಿ ವಿವರ ಕೊಡ್ತೀಯಾ? ತಕ್ಷಣ ಎಲ್ಲವನ್ನೂ ಹೇಳಿಬಿಡ್ತೀಯಾ? ಇವುಗಳೆಲ್ಲಾ “ಅತಿಯಾದ ಅಟ್ಯಾಚ್‌ಮೆಂಟ್” ಅನ್ನೋ ಸಿಗ್ನಲ್. ತಜ್ಞರ ಪ್ರಕಾರ, ಆತ್ಮಗೌರವದಿಂದ ತಾಳ್ಮೆ ತೋರಿಸುವ ಹುಡುಗಿಗೆ ತನ್ನ ಮೇಲೆ ಹಿಡಿತ ಇದೆ ಅಂತರ್ಥ. ಅಚ್ಚರಿಯೆಂದರೆ, ಈ ತಾಳ್ಮೆಯೇ ಆಕರ್ಷಣೆ ಹೆಚ್ಚಿಸುತ್ತದೆ.

ಎರಡನೇ ಪರೀಕ್ಷೆ: ಹಿಂದಿನ ಬಾಯ್‌ಫ್ರೆಂಡ್‌ಗೆ ಎಷ್ಟು ಅವಕಾಶ ಕೊಟ್ಟಿದ್ಲು?

ಹುಡುಗಿಯ ಹಳೆಯ ಸಂಬಂಧಗಳ ಬಗ್ಗೆ ಹುಡುಗರು ತುಂಬಾ ಗಮನವಿಟ್ಟು ಕೇಳ್ತಾರೆ. ಅವನು ಮೋಸ ಮಾಡಿದಾಗ ಹೇಗನಿಸ್ತು? ಅವಮಾನಿಸಿದ್ರೂ ಸುಮ್ನಿದ್ದೆಯಾ? ನೀನು ಏನೆಲ್ಲ ಕೊಟ್ಟೆ, ಅವನು ಏನು ಕೊಟ್ಟ? ಇದನ್ನೆಲ್ಲ ಕೇಳೋದು ಕರುಣೆಯಿಂದಲ್ಲ. ಲೆಕ್ಕಾಚಾರ. “ಹಿಂದಿನವನು ಕಡಿಮೆ ಪ್ರಯತ್ನಕ್ಕೆ ಹೆಚ್ಚು ಪಡೆದುಕೊಂಡಿದ್ದರೆ, ನಾನೇಕೆ ಹೆಚ್ಚು ಕೊಡ್ಬೇಕು?” ಅನ್ನೋ ಲಾಜಿಕ್.

ಮೂರನೇ ಪರೀಕ್ಷೆ: ಅವಳು ನನ್ನ ಹಿಂದೆ ಓಡಿಬರ್ತಾಳಾ?

ಇದು ಕ್ಲಾಸಿಕ್ ಆಟ. ಅವನು ಸ್ವಲ್ಪ ಡಿಸ್ಟೆನ್ಸ್‌ ತೋರಿಸ್ತಾನೆ. ರಿಪ್ಲೈ ಸ್ಲೋ. ಎನರ್ಜಿ ಕಡಿಮೆ. ಅವನ ಉದ್ದೇಶ ಇದು- ನೀನು ಪದೇ ಪದೆ ಮೆಸೇಜ್ ಮಾಡ್ತೀಯಾ? ಏನಾಯ್ತು ಅಂತ ಕೇಳ್ತೀಯಾ? ಸಂಬಂಧವನ್ನು ನೀನೇ ಸರಿಪಡಿಸೋ ಪ್ರಯತ್ನ ಮಾಡ್ತೀಯಾ? ನೀನು ಚೇಸ್ ಮಾಡ್ತ ಹೋದ್ರೆ ಅವನಿಗೆ ತೃಪ್ತಿ. ಅವನ ಪ್ರಯತ್ನ ಕಡಿಮೆ. ನಿನ್ನ ಆತಂಕ ಹೆಚ್ಚು. ಆಸೆ ಅಂದ್ರೆ ಸ್ವಲ್ಪ ಅನಿಶ್ಚಿತತೆ ಬೇಕು. ತುಂಬಾ ಬೇಗ ಎಲ್ಲ ಕ್ಲಿಯರ್ ಆದ್ರೆ ಆಸಕ್ತಿ ಕುಸಿತ.

ನಾಲ್ಕನೇ ಪರೀಕ್ಷೆ: ಎಷ್ಟು ಅಧಿಕಾರ ಸ್ಥಾಪಿಸಬಹುದು?

ಡೇಟ್‌ ಅನ್ನು ಲಾಸ್ಟ್ ಮಿನಿಟ್‌ನಲ್ಲಿ ಕ್ಯಾನ್ಸಲ್ ಮಾಡೋದು. ನಿನ್ನ ಬಗ್ಗೆ ಹಾಸ್ಯ ಮಾಡೋದು. ನೀನು ಓವರ್‌ ಆಗಿ ರಿಯಾಕ್ಟ್ ಮಾಡ್ತಾ ಇದ್ದೀ ಅನ್ನೋ ಮಾತು- ಇದು ಪ್ರೀತಿಯ ಪರೀಕ್ಷೆ ಅಲ್ಲ, ಅಧಿಕಾರ ಪರೀಕ್ಷೆ. ನೀನು ಹೇಗೆ ಪ್ರತಿಕ್ರಿಯಿಸ್ತೀಯೋ ಅದ್ರ ಮೇಲೆ ಅವನು ಕಲಿಯೋದು – ನಿನ್ನ ಸಹನೆ ಎಷ್ಟು, ನಷ್ಟದ ಭಯ ಎಷ್ಟು, ಗಡಿಗಳು ಎಷ್ಟು ಗಟ್ಟಿ, ಹೀಗೆ. ತಜ್ಞರು ಹೇಳುವ ಪ್ರಕಾರ ಅತಿ ಕ್ಷಮೆ ಅಪಾಯಕಾರಿ. ಅವಮಾನಕ್ಕೆ ಪ್ರತ್ಯುತ್ತರ ಕೊಡದಿದ್ದರೆ, ಅವನು ಅದನ್ನೇ ಮುಂದುವರಿಸುತ್ತಾನೆ.

ಐದನೇ ಪರೀಕ್ಷೆ: ನನ್ನ ಮಾತು ನಂಬ್ತಾಳಾ?

ದೊಡ್ಡ ದೊಡ್ಡ ಪ್ರಾಮಿಸ್‌ ಕೊಡೋದು, ಆದರೆ ಬೇರೆ ರೀತಿ ನಡೆದುಕೊಳ್ಳೋದು. ಮೌಲ್ಯ, ಭವಿಷ್ಯ, ಗಂಭೀರತೆ ಎಲ್ಲ ಹೇಳಿ, ನಂತರ ದಿನಗಟ್ಟಲೆ ಕಾಣೆಯಾಗೋದು. ನೀನು ಮಾತುಗಳಲ್ಲಿ ಹೆಚ್ಚು ನಂಬಿಕೆ ಇಟ್ಟು, ಅವನ ನಡೆಯನ್ನು ಕಡೆಗಣಿಸಿದ್ರೆ, ಅದು ಅಪಾಯ. ಅದು ಸುಲಭವಾಗಿ ಮೋಸ ಹೋಗುವ ಗುಣ. ಬುದ್ಧಿವಂತ ಹುಡುಗಿ ನಂಬುವುದಕ್ಕಿಂತಲೂ ಪರಿಶೀಲನೆ ಮಾಡ್ತಾಳೆ.

ಆರನೇ ಮತ್ತು ಅತಿ ಮುಖ್ಯ ಪರೀಕ್ಷೆ: ಅವಳು ಹೇಳಿದಂತೆ ಮಾಡಿ ತೋರಿಸ್ತಾಳಾ?

"ಮತ್ತೆ ಹೀಗೆ ಮಾಡಿದ್ರೆ ನಾನು ಹೋಗ್ತೀನಿ” ಎಂದವಳು ಹೋಗಲ್ಲ. “ಇದು ನನ್ನ ಗಡಿ” ಎಂದವಳು ನಂತರ ರಾಜಿಯಾಗ್ತಾಳೆ. “ಇದನ್ನು ಸಹಿಸಲ್ಲ” ಎಂದವಳು ಆದ್ರೂ ಸಹನೆ ತೋರಿಸ್ತಾಳೆ. ಹೀಗೆ ತನ್ನ ಮಾತಿಗೆ ತಾನೇ ಬೆಲೆ ಕೊಡದಾಗ, ಎಷ್ಟು ಅವಮಾನ ಮಾಡಬಹುದು ಅನ್ನೋದನ್ನ ಅವನೂ ಪರೀಕ್ಷಿಸ್ತಾನೆ. ಇದು ಅವನ ಪಾಲಿಗೆ ಹೊಸ ಹೊಸ ಅವಕಾಶಗಳಾಗಿಬಿಡುತ್ತವೆ.

ಹಾಗಾದ್ರೆ ಪರೀಕ್ಷೆ ಯಾವಾಗ ನಿಲ್ಲುತ್ತೆ? ಹುಡುಗಿಯರು ದುರ್ಬಲ ಅಲ್ಲ. ಮಾನವ ಸ್ವಭಾವವೇ ಇನ್ನೊಬ್ಬನ ಗಡಿಗಳನ್ನು ಪರೀಕ್ಷಿಸೋದು. ಆದರೆ ನೀನು ಭಾವನೆಗಿಂತ ಮಾನದಂಡಕ್ಕೆ ಬೆಲೆ ಕೊಟ್ಟಾಗ, ಮಾತಿಗಿಂತ ಕ್ರಿಯೆಯನ್ನು ನಂಬಿದಾಗ, ಗೊಂದಲ ತನಗೆ ತಾನೇ ಮಾಯವಾಗುತ್ತೆ. ಶಾಂತವಾದ, ಗಟ್ಟಿಯಾದ ಹುಡುಗಿ ಆಟಕ್ಕೆ ಸಿಕ್ಕಾಕೊಳ್ಳಲ್ಲ. ತಾನು ಇಂಥ ಆಟಕ್ಕೆಲ್ಲ ಬಗ್ಗಲ್ಲ, ಅವಮಾನಕ್ಕೆ ಜಗ್ಗಲ್ಲ ಎಂದು ಅವಳು ಕಠಿಣವಾಗಿ ತೋರಿಸಿಕೊಟ್ಟಾಗ ಮಾತ್ರ ಆತನ ಪರೀಕ್ಷೆಗಳು ನಿಲ್ಲುತ್ತವೆ.