ಹುಟ್ಟಿದ ಮಗುವಿನಲ್ಲಿ ಇದು ಕಾಮನ್, ಗಾಬರಿಯಾಗೋದೇನೂ ಬೇಡ
ನವಜಾತ ಶಿಶುಗಳು ಕೆಲವೊಮ್ಮೆ ವಿಚಿತ್ರ ಸಂಗತಿಗಳನ್ನು ನೀವು ಗಮನಿಸಬಹುದು. ಗಾಬರಿಯಾಗಿ ವೈದ್ಯರಲ್ಲಿಗೆ ಓಡಬೇಕಿಲ್ಲ. ಕೆಲವು ಬೇಬಿಗಳಲ್ಲಿ ಇದು ಸಾಮಾನ್ಯ. ಹಾಗಿದ್ದರೆ ಅವು ಯಾವುವು? ತಿಳಿಯೋಣ ಬನ್ನಿ.
1. ಜನ್ಮ ಗುರುತುಗಳು
ಸುಮಾರು ಮೂರನೇ ಒಂದು ಭಾಗದಷ್ಟು ಮಕ್ಕಳು ಕೆಲವು ರೀತಿಯ ಜನ್ಮ ಗುರುತುಗಳೊಂದಿಗೆ ಜನಿಸುತ್ತಾರೆ. ಅತ್ಯಂತ ಸಾಮಾನ್ಯವೆಂದರೆ ಕೊಕ್ಕರೆ ಗುರುತು. ಇದನ್ನು ಸಾಲ್ಮನ್ ಪ್ಯಾಚ್ ಅಥವಾ ಏಂಜೆಲ್ ಕಿಸ್ ಎಂದೂ ಕರೆಯುತ್ತಾರೆ. ಇದು ನಿಮ್ಮ ಮಗುವಿನ ಮುಖ ಅಥವಾ ಕುತ್ತಿಗೆಯ ಮೇಲಿರುವ ಮಸುಕಾದ ಗುಲಾಬಿ ಪ್ಯಾಚ್. ಆಕೊಕ್ಕರೆ ಗುರುತುಗಳು ಸಾಮಾನ್ಯವಾಗಿ ಆರು ತಿಂಗಳೊಳಗೆ ಮಾಯವಾಗುತ್ತವೆ.
ಹೆಚ್ಚಿನ ಜನ್ಮಗುರುತುಗಳು ನಿರುಪದ್ರವಿ. ಕೆಲವು ಕಾಲದ ಮೇಲೆ ಕಣ್ಮರೆಯಾಗುತ್ತವೆ. ಆದರೆ ನಿಮ್ಮ ಮಗುವಿನಲ್ಲಿ ಯಾವುದೇ ವಿವರಿಸಲಾಗದ ಉಬ್ಬುಗಳು ಇದ್ದರೆ ವೈದ್ಯರನ್ನು ಕಾಣಿ.
2. ಹತ್ತಿರದ ದೃಷ್ಟಿ
ನವಜಾತ ಶಿಶುಗಳು ತಮ್ಮ ಮುಖದ ಎದುರಿನ ಸುಮಾರು 20 ಸೆಂಮೀನಿಂದ 30 ಸೆಂಮೀವರೆಗೆ ಮಾತ್ರ ಸ್ಪಷ್ಟವಾಗಿ ನೋಡಬಹುದು. ಉಳಿದಂತೆ ಬೆಳಕು, ಆಕಾರ ಮತ್ತು ಮಸುಕಾಗಿ ಚಲನೆ ಕಾಣುತ್ತವೆ. ನಿಮ್ಮ ಮಗುವಿಗೆ ಒಂದು ತಿಂಗಳು ಅಥವಾ ಎರಡು ತಿಂಗಳ ವಯಸ್ಸಾಗುವ ಹೊತ್ತಿಗೆ, ಮಗು ಆಟಿಕೆ ಮೇಲೆ ತನ್ನ ಕಣ್ಣುಗಳನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ನಾಲ್ಕನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಮಗು ಹತ್ತಿರವಿರುವ ಬಣ್ಣಗಳು ಮತ್ತು ಆಕಾರಗಳನ್ನು ಹೆಚ್ಚು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ. ನಿಮ್ಮ ಮಗುವಿಗೆ ಗಾಢವಾದ, ಎದ್ದುಕಾಣುವ ಬಣ್ಣಗಳಲ್ಲಿ ದಪ್ಪ ಮಾದರಿಯ ಆಟಿಕೆಗಳನ್ನು ತೋರಿಸುವ ಮೂಲಕ ಅವಳ ದೃಷ್ಟಿಯನ್ನು ಅನ್ವೇಷಿಸಲು ಸಹಾಯ ಮಾಡಿ.
3. ಶಿಶುಗಳು ವಯಸ್ಕರಿಗಿಂತ ಹೆಚ್ಚು ಮೂಳೆಗಳನ್ನು ಹೊಂದಿರುತ್ತವೆ
ನಿಮ್ಮ ಮಗು ಸುಮಾರು 300 ಮೂಳೆಗಳೊಂದಿಗೆ ಜನಿಸುತ್ತದೆ. ಮಗು ಬೆಳೆದಂತೆ, ಇವುಗಳಲ್ಲಿ ಹಲವು ಗಟ್ಟಿಯಾಗುತ್ತವೆ ಮತ್ತು ಕೆಲವು ಒಟ್ಟಿಗೆ ಬೆಸೆಯುತ್ತವೆ. ಉದಾಹರಣೆಗೆ, ತಲೆಬುರುಡೆಯು ಕಾರ್ಟಿಲೆಜ್‌ನಿಂದ ಮೂರು ಮೂಳೆಯ ತುಂಡುಗಳಾಗಿ ಪ್ರಾರಂಭವಾಗುತ್ತದೆ. ಇದರಿಂದಾಗಿ ನಿಮ್ಮ ಮಗುವಿನ ತಲೆಯಲ್ಲಿ ಪೊಳ್ಳುಗಳಿರುತ್ತವೆ. ಆದರೆ ಈ ತುಣುಕುಗಳು ಅಂತಿಮವಾಗಿ ಒಂದು ಘನ ಮೂಳೆಯಾಗಿ ಸೇರಿಕೊಳ್ಳುತ್ತವೆ. ನಿಮ್ಮ ಮಗು ಪ್ರೌಢಾವಸ್ಥೆಯನ್ನು ತಲುಪುವ ಹೊತ್ತಿಗೆ, ಆಕೆಯ ದೇಹದಲ್ಲಿ ಕೇವಲ 206 ಮೂಳೆಗಳು ಇರುತ್ತವೆ.
ಮಗು ಹಾಸಿಗೆ ಒದ್ದೆ ಮಾಡಿಕೊಳ್ಳುತ್ತಾ? ಚಿಂತಿಸಬೇಡಿ ಇಲ್ಲಿವೆ ಪರಿಹಾರ
4. ಮಲಕ್ಕೆ ಹಸಿರು ಬಣ್ಣವಿರಬಹುದು!
ನಿಮ್ಮ ಮಗುವಿನ ಮೊದಲ ವಿಸರ್ಜನೆ ಮೆಕೊನಿಯಮ್ ಎಂಬ ದಟ್ಟ, ಜಿಗುಟಾದ ವಸ್ತುವಿನಿಂದ ಮಾಡಲ್ಪಟ್ಟಿರುತ್ತದೆ. ಹೀಗಾಗಿ ಕಪ್ಪು ಅಥವಾ ಹಸಿರು ಬಣ್ಣವನ್ನೂ ಅದು ಹೊಂದಿರಬಹುದು. ಅದರ ನಂತರ, ನೀವು ಸ್ತನ್ಯಪಾನ ಮಾಡುತ್ತಿದ್ದೀರಾ ಅಥವಾ ಫಾರ್ಮುಲಾ-ಫೀಡಿಂಗ್ ಅನ್ನು ಅವಲಂಬಿಸುತ್ತೀರಾ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಸ್ತನ್ಯಪಾನದ ಒಂದು ಪ್ರಯೋಜನವೆಂದರೆ ಅದು ಮಗುವಿನ ಮಲವನ್ನು ಕಡಿಮೆ ವಾಸನೆಯಿಂದ ಕೂಡಿಸುತ್ತದೆ. ನಿಮ್ಮ ಮಗು ಎಷ್ಟು ಬಾರಿ ವಿಸರ್ಜಿಸುತ್ತದೆ ಎಂಬುದರ ಬಗ್ಗೆ ಹೆಚ್ಚು ಚಿಂತಿಸಬೇಡಿ. ಇದು ದಿನಕ್ಕೆ ಹಲವಾರು ಬಾರಿ ಇರಬಹುದು, ಅಥವಾ ಮೂರು ದಿನಗಳಿಗೊಮ್ಮೆ ಆಗಿರಬಹುದು. ನಿಮ್ಮ ಮಗುವಿಗೆ ಯಾವುದು ಕಾಮನ್ ಎಂಬುದನ್ನು ಕಂಡುಹಿಡಿಯಿರಿ.
5. ಜನನಾಂಗ ಊದಿಕೊಂಡಿರಬಹುದು!
ಶಿಶುಗಳು ತಮ್ಮ ದೇಹದಲ್ಲಿ ಹೆಚ್ಚುವರಿ ದ್ರವದೊಂದಿಗೆ ಜನಿಸುತ್ತವೆ. ಇದು ಮೊದಲ ಕೆಲವು ದಿನಗಳಲ್ಲಿ ಅವುಗಳ ಜನನಾಂಗಗಳು ಸ್ವಲ್ಪ ಊದಿಕೊಳ್ಳುವಂತೆ ಮಾಡುತ್ತದೆ. ಗಂಡು ಮಗುವಿನಲ್ಲಿ ವೃಷಣಗಳು ಊದಿಕೊಂಡಿರಬಹುದು. ಕೆಲವು ದಿನಗಳ ಮೇಲೆ ಇದು ಇಳಿಯುತ್ತದೆ.
6. ಹೆಣ್ಣು ಮಗುವಿಗೆ ಪೀರಿಯೆಡ್!
ಹೆಣ್ಣು ಶಿಶುಗಳು ತಮ್ಮ ತಾಯಿಯ ಕೆಲವು ಹಾರ್ಮೋನುಗಳೊಂದಿಗೆ ಜನಿಸುತ್ತವೆ. ಇದು ಕೆಲವೊಮ್ಮೆ ಬಿಳಿ ದ್ರವ ಸ್ರವಿಸುವಿಕೆಗೆ ಕಾರಣವಾಗಬಹುದು. ಅಥವಾ ಮೊದಲ ಕೆಲವು ದಿನಗಳಲ್ಲಿ ಜನನಾಂಗದಲ್ಲಿ ತುಸು ರಕ್ತದ ಬಿಂದುಗಳೂ ಕಾಣಿಸಬಹುದು. ಇದನ್ನು ಬೇಬಿ ಪೀರಿಯೆಡ್ ಎನ್ನಲಾಗುತ್ತದೆ. ಇದು ತುಂಬಾ ಕಾಮನ್. ಆರು ವಾರಗಳ ನಂತರವೂ ಹೆಣ್ಣು ಮಗುವಿಗೆ ಡಿಸ್ಚಾರ್ಜ್ ಆಗುತ್ತಿದ್ದರೆ ವೈದ್ಯರನ್ನು ನೋಡಬೇಕು.
7. ನಿದ್ದೆಯ ಅವಧಿ ಎಂಬುದೇ ಇಲ್ಲ
ನವಜಾತ ಶಿಶುಗಳಿಗೆ ಸಾಕಷ್ಟು ಕಣ್ಣು ಮುಚ್ಚಬೇಕು, ನಿದ್ರಿಸಬೇಕು. ಮೊದಲ ಕೆಲವು ವಾರಗಳಲ್ಲಿ ನಿಮ್ಮ ಮಗು 24 ಗಂಟೆಗಳ ಅವಧಿಯಲ್ಲಿ 18 ಗಂಟೆಗಳವರೆಗೆ ನಿದ್ರಿಸಬಹುದು. ದಿನ ಮತ್ತು ರಾತ್ರಿಯ ಉದ್ದಕ್ಕೂ ನಿದ್ರೆಯ ಸರಣಿ ಹರಡಬಹುದು. ರಾತ್ರಿ ಮತ್ತು ಹಗಲಿನ ನಡುವಿನ ವ್ಯತ್ಯಾಸವೇ ಇರಲಾರದು. ಕತ್ತಲೆ ಮತ್ತು ಶಾಂತವಾಗಿರುವಾಗ ಕ್ರಮೇಣ ಹೆಚ್ಚು ನಿದ್ದೆ ಮಾಡಲು ಪ್ರಾರಂಭಿಸಬಹುದು. ನಿಮ್ಮ ಮಗುವಿಗೆ ಮೂರು ತಿಂಗಳ ವಯಸ್ಸಿನವರೆಗೆ ಮಲಗುವ ಮತ್ತು ಆಹಾರ ನೀಡುವ ದಿನಚರಿಯು ಕೆಲಸ ಮಾಡದು. ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ನಿದ್ರೆಯ ಅಭ್ಯಾಸ ಉತ್ತೇಜಿಸಲು ನೀವು ಪ್ರಯತ್ನಿಸಬಹುದು.
Planning For A Baby: ಬೇಗ ಗರ್ಭ ಧರಿಸಲು ಸುಲಭ ಉಪಾಯವಿದು
8. ಮಕ್ಕಳು ವಯಸ್ಕರಿಗಿಂತ ಹೆಚ್ಚು ವೇಗವಾಗಿ ಕಲಿಯುತ್ತಾರೆ
ಹುಟ್ಟುವ ಮುಂಚೆಯೇ ನಿಮ್ಮ ಮಗು ನಿಮ್ಮ ಧ್ವನಿಯನ್ನು ಮತ್ತು ಬಹುಶಃ ನಿಮ್ಮ ಸಂಗಾತಿಯ ಧ್ವನಿಯನ್ನು ಗುರುತಿಸಲು ಕಲಿಯುತ್ತದೆ. ಮಗು ಎಲ್ಲಾ ಸಮಯದಲ್ಲೂ ಕಲಿಯುತ್ತಿರುತ್ತದೆ. ಅವಳ ಮೆದುಳು ನಂಬಲಾಗದ ವೇಗದಲ್ಲಿ ಸಂಪರ್ಕಗಳನ್ನು ರೂಪಿಸುತ್ತಿರುತ್ತದೆ. ಅವಳು ತನ್ನ ಸುತ್ತಲಿನ ಪ್ರಪಂಚದ ಬಗ್ಗೆ ಹೆಚ್ಚು ಕಂಡುಕೊಳ್ಳುತ್ತಾಳೆ. ನಿಮಗೆ ಸಾಧ್ಯವಾದಾಗಲೆಲ್ಲಾ ನಿಮ್ಮ ಮಗುವಿನೊಂದಿಗೆ ಮಾತನಾಡುವ, ಓದುವ ಮತ್ತು ಹಾಡುವ ಮೂಲಕ ಕಲಿಯುವ ಈ ಅದ್ಭುತ ಸಾಮರ್ಥ್ಯದ ಲಾಭವನ್ನು ಪಡೆದುಕೊಳ್ಳಿ. ನೀವು ಏನು ಹೇಳುತ್ತೀರಿ ಎಂಬುದು ಮುಖ್ಯವಲ್ಲ. ಆದರೆ ಮಗು ನಿಮ್ಮ ಧ್ವನಿಯನ್ನು ಇಷ್ಟಪಡುತ್ತದೆ. ಮಗು ತನ್ನ ಮೊದಲ ದಿನಗಳು, ವಾರಗಳು ಮತ್ತು ತಿಂಗಳುಗಳಲ್ಲಿ ಹೆಚ್ಚು ಪದಗಳನ್ನು ಕೇಳುತ್ತದೆ. ಶಾಲೆಗೆ ಹೋಗಲು ಆರಂಭಿಸುವ ಹೊತ್ತಿಗೆ ಅವಳ ಭಾಷಾ ಕೌಶಲ್ಯ ಉತ್ತಮವಾಗಿರುತ್ತದೆ.
9. ನಿರಂತರ ಸೀನುವಿಕೆ
ಮಗು ಸೀನುತ್ತಾ ಇರಬಹುದು. ಇದೂ ಸಾಮಾನ್ಯ. ನೀವು ಈಗಾಗಲೇ ಪ್ರತಿರೋಧ ಶಕ್ತಿ ಬೆಳೆಸಿಕೊಂಡಿರುವ ಎಷ್ಟೋ ವಿಷಯಗಳು ಬೇಬಿಗೆ ಇನ್ನೂ ಹೊಸದು. ಅವುಗಳಿಗೆ ಆಕೆ ಹೆಚ್ಚು ಸೂಕ್ಷ್ಮವಾಗಿರುತ್ತಾಳೆ. ಆದ್ದರಿಂದ ಅವಳು ತುಂಬಾ ಸೀನುತ್ತಿದ್ದರೆ, ಬಹುಶಃ ತನ್ನ ಮೂಗಿನ ಒಳಗೆ ಪ್ರವೇಶಿಸಿದ ಯಾವುದೋ ಅನ್ಯ ಕಣಗಳನ್ನು ಆಕೆಯ ದೇಹ ಬಹಿಷ್ಕರಿಸುತ್ತಿದೆ ಎಂದರ್ಥ. ಮಗುವಿನ ಸೀನುಗಳು ಉಬ್ಬಸದಿಂದ ಕೂಡಿದ್ದರೆ, ಆಕೆಗೆ ಚಿಕಿತ್ಸೆಯ ಅಗತ್ಯವಿರಬಹುದು.
10. ಆಗಾಗ ಗಾಬರಿಯಾಗುವುದು
ಕೆಲವೊಮ್ಮೆ ಮಗು ಸಣ್ಣ ಸದ್ದಿಗೂ ಬೆಚ್ಚಿ ಬೀಳುವುದು, ಪ್ರಖರ ಬೆಳಕಿಗೆ ಬೆಚ್ಚುವುದು- ಹೀಗೆ ಆಕಸ್ಮಿಕ ಜರ್ಕ್‌ಗಳನ್ನು ತೋರಿಸಬಹುದು. ಯಾಕೆಂದರೆ ಮಗುವಿನ ಕಿವಿ ಹಾಗೂ ಕಣ್ಣುಗಳು ಅತಿ ಸೂಕ್ಷ್ಮವಾಗಿರುತ್ತವೆ. ಅವು ಈ ಲೋಕಕ್ಕೆ ಇನ್ನೂ ಹೊಂದಿಕೊಂಡಿಲ್ಲ. ಸುಮಾರು ಮೂರು ಅಥವಾ ನಾಲ್ಕು ತಿಂಗಳುಗಳಲ್ಲಿ ಅಭ್ಯಾಸವಾಗಲು ಆರಂಭಿಸುತ್ತದೆ. ಮಗು ಯಾವುದೇ ಜರ್ಕಿನೆಸ್ ಚಲನೆಯನ್ನು ಪ್ರದರ್ಶಿಸದಿದ್ದರೆ ಮಾತ್ರ ನೀವು ಚಿಂತಿಸಬೇಕು.
11. ವಾರೆ ಕಣ್ಣುಗಳು
ಕೆಲವೊಮ್ಮೆ ಮಗುವಿನ ಕಂಗಳು ವಾರೆ ಕಂಗಳಾಗಿವೆ ಎಂದು ನಿಮಗೆ ಅನಿಸಬಹುದು. ಇದು ಸಹಜ. ಮಗು ಈಗ ಕಣ್ಣಿನ ಸ್ನಾಯು ನಿಯಂತ್ರಣವನ್ನು ಪಡೆಯಲು ಮತ್ತು ಫೋಕಸಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮೂರು ತಿಂಗಳಲ್ಲಿ ಈ ಚಲನೆ ಸರಿಹೋಗುತ್ತದೆ. ನಾಲ್ಕು ತಿಂಗಳಾದರೂ ಮಗುವಿನ ಕಂಗಳ ಚಲನೆ ಸರಿಯಾಗಿಲ್ಲ ಅನಿಸಿದರೆ ಮಾತ್ರ ವೈದ್ಯರನ್ನು ಕಾಣಬೇಕು.
Parenting: ಈಗಿನ ಮಕ್ಕಳ ಸಂಭಾಳಿಸೋದ್ರಲ್ಲಿ ಅಪ್ಪಂದಿರು ಸುಸ್ತೋ ಸುಸ್ತು