ಕೇವಲ 15 ದಿನಗಳಲ್ಲಿ ಹೊಸ ಉದ್ಯೋಗಿಯೊಬ್ಬಳು ಕೆಲಸ ಬಿಟ್ಟ ಘಟನೆಯು Gen Z ಮನೋಭಾವದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಹಿಂದಿನ ಪೀಳಿಗೆಯವರು ಕಷ್ಟ ಸಹಿಸಿಕೊಂಡು ಕೆಲಸ ಮಾಡುತ್ತಿದ್ದರೆ, Gen Z ಅಸೌಕರ್ಯವನ್ನು ಸಹಿಸದೆ ತಕ್ಷಣ ನಿರ್ಧಾರ ತೆಗೆದುಕೊಳ್ಳುತ್ತಾರೆ. 

ಇತ್ತೀಚೆಗೆ ಕೆಲಸದ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾದ ಒಂದು ಘಟನೆ ವೈರಲ್ ಪೋಸ್ಟ್ ಮೂಲಕ ಹೊರಬಿತ್ತು. ಒಂದು ಕಂಪನಿಯ ಸಿಇಒ, ತಮ್ಮ ಹೊಸ ಉದ್ಯೋಗಿಯೊಬ್ಬಳು ಕೇವಲ 15 ದಿನಗಳಲ್ಲಿ ಕೆಲಸ ಬಿಟ್ಟು ಹೋಗಿದ್ದಾಳೆ ಎಂದು ಹೇಳಿಕೊಂಡರು. ಅದಕ್ಕೆ ಕಾರಣ ದೊಡ್ಡ ಜಗಳವೋ, ವಿವಾದವೋ ಆಗಿರಲಿಲ್ಲ. ಸರಳವಾಗಿ “accountability conversation” ಅಥವಾ ಹೊಣೆಗಾರಿಕೆಯ ಕುರಿತ ಒಂದು ತುಸು ಬಿಗುವಾದ ಚರ್ಚೆ. ನಂತರ ಆ ಉದ್ಯೋಗಿ ಕ್ಲೀನ್ ಎಕ್ಸಿಟ್ ಮಾಡಿದ್ದಳು. ಆ ನಂತರ ಅವರು ಹೇಳಿದ ಒಂದು ಸಾಲು ಹೀಗಿತ್ತು- “ಸ್ಕಿಲ್‌ಗಳ ಕುರಿತು ತರಬೇತಿ ಕೊಡಬಹುದು, ಆದರೆ ಮನೋಭಾವವನ್ನು ಬದಲಾಯಿಸಲು ಸಾಧ್ಯವಿಲ್ಲ” ಅಂತ.

ಈ ಘಟನೆ ಒಂದು ಸಿಂಗಲ್‌ ಪ್ರಕರಣವಲ್ಲ. ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಇದು ನಿಧಾನವಾಗಿ ಸಾಮಾನ್ಯ ಮಾದರಿಯಾಗುತ್ತಿದೆ. ಹೀಗಾಗಿ ಒಂದು ಪ್ರಮುಖ ಪ್ರಶ್ನೆ ಎದ್ದಿದೆ. ಇದು ಕೆಲಸದ ಸ್ಥಳದ ಸಮಸ್ಯೆಯೇ? ಅಥವಾ Gen Z ಮನೋಭಾವದ ಸಮಸ್ಯೆಯೇ?

ಜೆನ್‌ ಝೀಯಲ್ಲಿ ಸ್ವಲ್ಪ ಅಸೌಕರ್ಯವಾದರೂ ಅದನ್ನು ಸಹಿಸುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಹಿಂದೆ ಕೆಲಸಕ್ಕೆ ಸೇರಿದ ಮೊದಲ ಕೆಲವು ತಿಂಗಳುಗಳು ಕಷ್ಟಕರವಾಗಿರುವುದು ಸಾಮಾನ್ಯವೆಂದು ಎಲ್ಲರೂ ಅರ್ಥಮಾಡಿಕೊಳ್ಳುತ್ತಿದ್ದರು. ಮೇಲಧಿಕಾರಿಗಳ ಕಠಿಣ ಪ್ರತಿಕ್ರಿಯೆ, ಫೀಡ್‌ಬ್ಯಾಕ್‌, ಕೆಲಸದ ಒತ್ತಡ, ಸಹೋದ್ಯೋಗಿಗಳ ಸ್ವಭಾವ, ಇವುಗಳನ್ನೆಲ್ಲ ಸಹಿಸಿಕೊಂಡು ಮುಂದುವರೆಯುವುದು ಒಂದು ಭಾಗವಾಗಿತ್ತು.

ಮಿಲೇನಿಯಲ್ಸ್ ಪೀಳಿಗೆ ಈ ಪರಿಸ್ಥಿತಿಯಲ್ಲಿ ತಮ್ಮ ಕರಿಯರ್ ಕಟ್ಟಿಕೊಂಡಿತ್ತು. ವಿಶೇಷವಾಗಿ 2008ರ ಆರ್ಥಿಕ ಸಂಕಷ್ಟದ ನಂತರ ಉದ್ಯೋಗದ ಭದ್ರತೆ ಕಡಿಮೆ ಇತ್ತು. ಆದ್ದರಿಂದ, ಕೆಲಸ ಸಂತೋಷಕರವಾಗಿರದಿದ್ದರೂ ಕೂಡ, ಅದು ಅಗತ್ಯವಾಗಿತ್ತು. ಆದರೆ ಇಂದಿನ Gen Z ದೃಷ್ಟಿಯಲ್ಲಿ, 15 ದಿನಗಳಲ್ಲೇ “ಈ ಕೆಲಸ ನನಗೆ ಸರಿಹೊಂದುತ್ತಿಲ್ಲ” ಎಂಬ ನಿರ್ಧಾರಕ್ಕೆ ಬರುವುದು ಸಾಮಾನ್ಯವಾಗಿದೆ.

ಫೀಡ್‌ಬ್ಯಾಕ್ ಅರ್ಥವೇ ಬದಲಾಗಿದೆ. ಹಿಂದೆ ಫೀಡ್‌ಬ್ಯಾಕ್ ಅಂದರೆ ಮಾರ್ಗದರ್ಶನ. ಇದು ಕೆಲವೊಮ್ಮೆ ಕಠಿಣವಾಗಿರಬಹುದು, ಆದರೆ ಉಪಯೋಗವಾಗುತ್ತಿತ್ತು. ಇಂದು ಫೀಡ್‌ಬ್ಯಾಕ್ ಅಂದರೆ ಟೀಕೆ ಎಂದು ಕಾಣಲಾಗುತ್ತಿದೆ. ಅಕೌಂಟಬಿಲಿಟಿ ಒತ್ತಡ ಎಂದು ಅನುಭವಿಸಲಾಗುತ್ತಿದೆ. ಹಿಂದೆ ಅಸೌಕರ್ಯವನ್ನು ಬೆಳವಣಿಗೆ (growth) ಎಂದು ನೋಡಲಾಗುತ್ತಿತ್ತು. ಇಂದು ಅದನ್ನು “ನಾನು ಇಲ್ಲಿ ಹೊಂದಿಕೊಳ್ಳುತ್ತಿಲ್ಲ” (misalignment) ಎಂದು ಅರ್ಥೈಸಲಾಗುತ್ತಿದೆ.

15 ದಿನಗಳ ಟ್ರಯಲ್ ಪೀರಿಯಡ್

ಈ ಘಟನೆಯು ಇನ್ನೊಂದು ಹೊಸ ಟ್ರೆಂಡ್ ಅನ್ನು ತೋರಿಸುತ್ತದೆ. ಈಗ ಕೆಲಸ ಒಂದು ಕಡೆ ಮಾತ್ರ ಪರೀಕ್ಷೆಯಾಗುವುದಿಲ್ಲ. ಕಂಪನಿ ಉದ್ಯೋಗಿಯನ್ನು ಅಳೆಯುತ್ತದೆ. Gen Z ಉದ್ಯೋಗಿ ಕಂಪನಿಯನ್ನು ಅಳೆಯುತ್ತಾನೆ. ಕೆಲಸದ ವಾತಾವರಣ, ಸಂಸ್ಕೃತಿ, ನಿರೀಕ್ಷೆಗಳು ತೃಪ್ತಿಕರವಾಗಿರದಿದ್ದರೆ, ತಕ್ಷಣ ಕೆಲಸ ಬಿಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ಗೊಂದಲವಲ್ಲ, ಸ್ಪಷ್ಟ ನಿರ್ಧಾರ. ಆದರೆ ಕಡಿಮೆ ಸಹನೆ ಜೊತೆಗೆ ಇದು ಇದ್ದಾಗ ಅಸಹನೆಯಂತೆ ಕಾಣುತ್ತದೆ.

ಮಿಲೇನಿಯಲ್ಸ್ vs ಜೆನ್‌ ಝೀ ವ್ಯತ್ಯಾಸ

ಮಿಲೇನಿಯಲ್ಸ್ ಕೊರತೆಯ ಪರಿಸ್ಥಿತಿಯಲ್ಲಿ ಬೆಳೆದವರು. ಕೆಲಸವನ್ನು ಹಿಡಿದುಕೊಳ್ಳುವುದು ಮುಖ್ಯವಾಗಿತ್ತು. ಕಷ್ಟಗಳನ್ನು ಸಹಿಸಿಕೊಂಡು ಮುಂದುವರೆದರು. ಜೆನ ಝೀಗೆ ಹೆಚ್ಚು ಅವಕಾಶಗಳಿರುವ ಜಗತ್ತಿನಲ್ಲಿ ಪ್ರವೇಶವಿದೆ. ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ಇದೆ. ಕೆಲಸ ತೃಪ್ತಿಕರವಾಗಿರದಿದ್ದರೆ ತಕ್ಷಣ ಬದಲಾಯಿಸುವ ಮನೋಭಾವ ಇದೆ.

ಈ ವ್ಯತ್ಯಾಸದಿಂದಾಗಿ ನಿರೀಕ್ಷೆಗಳು ಹೆಚ್ಚಾಗಿವೆ, ಸಹನೆ ಕಡಿಮೆಯಾಗಿದೆ. ಆದರೆ ಕಂಪನಿಗಳ ಸಂಕಷ್ಟ ನೋಡಿ. ಈ ಹೊಸ ಮನೋಭಾವ ಕಂಪನಿಗಳಿಗೆ ದೊಡ್ಡ ಸವಾಲು. ಮತ್ತೆ ಮತ್ತೆ ನೇಮಕಾತಿ ಮಾಡುವಿಕೆ, ತರಬೇತಿ ವೆಚ್ಚ ನಷ್ಟ, ತಂಡದ ಸ್ಥಿರತೆ ಕುಸಿತ ಆಗುತ್ತದೆ.

ಇಂದು ಇರುವ ಮ್ಯಾನೇಜರ್‌ಗಳು ಹೆಚ್ಚಾಗಿ ಮಿಲೇನಿಯಲ್ಸ್. ಇವರು ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುವ Gen Z ತಂಡವನ್ನು ನಿರ್ವಹಿಸಬೇಕಾಗಿದೆ. ಹೀಗಾಗಿ ಕೆಲವು ಕಂಪನಿಗಳು ಈಗ ಹೆಚ್ಚು ಕೌಶಲ್ಯಕ್ಕಿಂತ ಸಹನಶಕ್ತಿ ಇರುವವರನ್ನು ಹುಡುಕಲು ಪ್ರಾರಂಭಿಸಿವೆ. ಹಾಗಾದರೆ ಇವರ ಮನೋಭಾವವೇ ಸಮಸ್ಯೆಯೇ?

ಇಲ್ಲಿ ಸಂಪೂರ್ಣವಾಗಿ ಮ್ಯಾನೇಜ್ಮೆಂಟ್ ದೋಷವೂ ಇಲ್ಲ. ಜೆನ್‌ ಝೀ ಪೂರ್ತಿ ತಪ್ಪೆಂದೂ ಹೇಳಲಾಗುವುದಿಲ್ಲ. ಸ್ವಾಭಿಮಾನ ಎಂಬುದು ಜೆನ್‌ ಝೀಯಲ್ಲಿ ಕೆಲವೊಮ್ಮೆ ಪಲಾಯನವಾದ ಆಗುತ್ತದೆ. ಆರಾಮವನ್ನು ಹುಡುಕುವುದು ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಕೆಲಸದ ಜಗತ್ತು ಎಂದಿಗೂ ಸುಲಭವಾಗಿರಲಿಲ್ಲ. ಅದು ತಿಕ್ಕಾಟ ಇಲ್ಲದ ಸ್ಥಳವಲ್ಲ. ಬೆಳವಣಿಗೆ ಎಂಬುದು ಬಹುಪಾಲು ಅಸೌಕರ್ಯದ ಮಧ್ಯೆ ಆಗುತ್ತದೆ.

ಇದೆಲ್ಲ ಜಾಬ್‌ ಎಂಬುದುರ ಅರ್ಥದ ಬಗ್ಗೆ ಎರಡು ಪೀಳಿಗೆಯ ನಡುವಿನ ಆಲೋಚನೆಯ ವ್ಯತ್ಯಾಸವನ್ನು ತೋರಿಸುತ್ತದೆ. ಮಿಲೇನಿಯಲ್ಸ್ ಕೆಲಸವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವವರು. ಜೆನ್‌ ಝೀ ಕೆಲಸವನ್ನು ನಿರಂತರವಾಗಿ ಮೌಲ್ಯಮಾಪನ ಮಾಡುವವರು. ಎರಡೂ ತಪ್ಪಲ್ಲ, ಸರಿಯೂ ಅಲ್ಲ. ಆದರೆ ಫಲಿತಾಂಶಗಳು ವಿಭಿನ್ನ. ಇವರ ಮಧ್ಯೆ ಇಂದಿನ ಜಾಬ್‌ ಜಗತ್ತು ತನ್ನ ಸಮತೋಲನವನ್ನು ಹುಡುಕುತ್ತಿದೆ. ನಿರೀಕ್ಷೆಗಳು ಬದಲಾಗಿದೆ, ಸಹನೆ ಬದಲಾಗಿದೆ.