ಇಂದಿನ ಯುವ ಪೀಳಿಗೆ, ಅಂದರೆ Gen Z, ಸಾಂಪ್ರದಾಯಿಕ 'ಬಾಸ್' ಆಗುವ ಗುರಿಯನ್ನು ತಿರಸ್ಕರಿಸಿ 'ಕೆರಿಯರ್ ಮಿನಿಮಲಿಸಂ' ಎಂಬ ಹೊಸ ಹಾದಿ ಹಿಡಿದಿದೆ. ಹಿಂದಿನ ತಲೆಮಾರಿನಂತೆ ಹತ್ತು, ಹನ್ನೆರಡು ಗಂಟೆ ದುಡಿಯೋದು, ಬಾಸ್‌ ಆಗೋಕೆ ಹೆಣಗೋದು ಇವೆಲ್ಲಾ ಇವರಲ್ಲಿ ಇಲ್ಲ. ಮತ್ತಿನ್ನೇನು?

ಇಲ್ಲಿಯವರೆಗೆ ಯಶಸ್ಸಿನ ಒಂದು ನಿಗದಿತ ಟ್ರೆಂಡ್‌ ಇತ್ತು: ಕೆಲಸಕ್ಕೆ ಸೇರು, ಹೆಚ್ಚು ಕೆಲಸ ಮಾಡು, ಎಲ್ಲರಿಗಿಂತ ಮೇಲುಗೈ ಸಾಧಿಸು, ತಂಡವನ್ನು ನಿರ್ವಹಿಸು, ನಂತರ ‘ಬಾಸ್’ ಆಗು. ಹಗಲು-ರಾತ್ರಿ ದುಡಿತವೇ ಹೆಮ್ಮೆ. ಪ್ರೋಮೋಶನ್‌ ಒಂದೇ ವ್ಯಕ್ತಿತ್ವದ ಗುರುತು. ಕೆಲಸದ ಹುದ್ದೆಯೇ ನಿಮ್ಮ ಪರಿಚಯ.

ಆದರೆ ಈಗಿನ ಯುವ ಪೀಳಿಗೆ - ಅಂದರೆ Gen Z - ಈ ಪಾಠವನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಿಲ್ಲ. ಅದು ‘ಹಸಲ್ ಕಲ್ಚರ್’ಗೆ ಅಥವಾ ಸದಾ ಬ್ಯುಸಿಯಾಗಿರುವ ರೂಢಿಗೆ ಈ ಪೀಳಿಗೆ ಬ್ರೇಕ್ ಹಾಕಿದೆ. Gen Z ಕೆಲಸಕ್ಕೆ ವಿರೋಧಿಗಳಲ್ಲ. ಆದರೆ ‘ಬರ್ನೌಟ್’ ಜೀವನಕ್ಕೆ ಅವರು ವಿರೋಧಿಗಳು. ಕಾರ್ಪೊರೇಟ್ ಮೆಟ್ಟಿಲೇರಲು ಹಂಬಲಿಸುವುದಕ್ಕಿಂತ, ಹಲವರು ಪಕ್ಕದ ದಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರ ಹೊಸ ಗುರಿ ಬಾಸಿಸಂ ಅಲ್ಲ, ಸ್ಥಿರತೆ. ಈ ಹೊಸ ಚಿಂತನೆಗೆ “ಕೆರಿಯರ್ ಮಿನಿಮಲಿಸಂ” ಎಂದು ಹೆಸರು ಬಂದಿದೆ.

ಕೆರಿಯರ್ ಮಿನಿಮಲಿಸಂ ಅಂದರೆ ಏನು?

ಇದು ಆಲಸ್ಯವಲ್ಲ. ಕೆಲಸ ತಪ್ಪಿಸುವುದು ಕೂಡ ಅಲ್ಲ. ಬದಲಾಗಿ, ಜೀವನದ ಮೌಲ್ಯಗಳು, ಮಾನಸಿಕ ಆರೋಗ್ಯ ಮತ್ತು ಆರ್ಥಿಕ ಸ್ಥಿರತೆಯೊಂದಿಗೆ ಹೊಂದಿಕೆಯಾಗುವ ಕೆಲಸವನ್ನು ಆಯ್ಕೆ ಮಾಡುವುದು.

ಉದ್ಯೋಗ ವೆಬ್‌ಸೈಟ್ Glassdoor ನೀಡಿದ ಇತ್ತೀಚಿನ ವರದಿ ಪ್ರಕಾರ, Gen Z ಯುವಕರಲ್ಲಿ 68 ಶೇಕಡಾ ಜನರು ಮ್ಯಾನೇಜ್ಮೆಂಟ್ ಹುದ್ದೆಯನ್ನು ಪರಿಗಣಿಸುವುದಾದರೆ ಅದು ಹೆಚ್ಚಿನ ಸಂಬಳ ಅಥವಾ ಪ್ರಭಾವಶಾಲಿ ಹುದ್ದೆಯ ಜೊತೆಯಲ್ಲೇ ಇರಬೇಕು ಎಂದು ಹೇಳಿದ್ದಾರೆ. ಅಂದರೆ, ಒತ್ತಡವನ್ನು ಉಚಿತವಾಗಿ ತೆಗೆದುಕೊಳ್ಳಲು ಅವರು ಸಿದ್ಧರಿಲ್ಲ.

ಕಡಿತಗಳು (layoffs), ಕೃತಕ ಬುದ್ಧಿಮತ್ತೆಯ (AI) ಪ್ರಭಾವ ಮತ್ತು ನಿರಂತರ ಒತ್ತಡಗಳಿಂದ ರೂಪುಗೊಂಡ ಉದ್ಯೋಗ ಕ್ಷೇತ್ರದಲ್ಲಿ ಯುವಕರು ವೇಗದ ಪದೋನ್ನತಿಗಿಂತ ಭದ್ರತೆ ಮತ್ತು ಹೊಸ ಕೌಶಲ್ಯಗಳತ್ತ ಹೆಚ್ಚು ಮಹತ್ವ ಕೊಡುತ್ತಿದ್ದಾರೆ.

ಹಳೆಯ ಕಾಲದಲ್ಲಿ ಜನರು ದಶಕಗಳ ಕಾಲ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಈಗಿನ ಯುವಕರು ಕೆಲಸದಿಂದ ಕೆಲಸಕ್ಕೆ ಸರಿ ಕಂಡಂತೆ ಜಿಗಿಯುತ್ತಿದ್ದಾರೆ. ಕಮಲದ ಎಲೆಯ ಮೇಲೆ ನಿಲ್ಲದೆ ಜಾರುವ ನೀರಿನ ಹನಿಯಂತೆ. ಪ್ರತಿ ಬದಲಾವಣೆಯೂ ಲೆಕ್ಕಾಚಾರದಿಂದ ಕೂಡಿರುತ್ತದೆ- ಉತ್ತಮ ಸಂಬಳ, ಉತ್ತಮ ಕೆಲಸ, ಜೀವನ ಸಮತೋಲನ, ಆರೋಗ್ಯಕರ ಕಾರ್ಯಸಂಸ್ಕೃತಿ, ಹೆಚ್ಚಿದ ಕೌಶಲ್ಯ.

ಇಂದಿನ ಕೆರಿಯರ್ ಒಂದು ಸರಳ ಮೆಟ್ಟಿಲಲ್ಲ. ಅದು ವಿವಿಧ ಅನುಭವಗಳ ಪೋರ್ಟ್‌ಫೋಲಿಯೊದಂತೆ ಕಾಣುತ್ತಿದೆ. ಆರ್ಥಿಕ ಅಸ್ಥಿರತೆಯ ಯುಗದಲ್ಲಿ ಬೆಳೆದ ಈ ಪೀಳಿಗೆ, ಒಂದೇ ಸಂಸ್ಥೆಗೆ ನಿಷ್ಠೆ ತೋರಲಾರದು. ಹೊಂದಿಕೊಳ್ಳುವ ಸಾಮರ್ಥ್ಯ ಅದರದು.

ಅದರ ಪ್ರಕಾರ ನಿಜವಾದ ಪ್ರೋಮೋಶನ್ ಅಂದರೆ ಮಾನಸಿಕ ಆರೋಗ್ಯ ಕೆರಿಯರ್ ಮಿನಿಮಲಿಸಂನ ಹೃದಯದಲ್ಲಿ ಒಂದು ಶಾಂತ ಸಂದೇಶ ಇದೆ- ಮನಶ್ಶಾಂತಿ ಮುಖ್ಯ. ನಿರಂತರ ಬದಲಾವಣೆ, ಹೆಚ್ಚುತ್ತಿರುವ ನಿರೀಕ್ಷೆಗಳು ಮತ್ತು ಕೆಲಸದ ಒತ್ತಡದ ನಡುವೆ ಹಲವರು ಸದಾ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ, Gen Z ಸ್ಪಷ್ಟ ಗಡಿಗಳನ್ನು ಇಡುವುದನ್ನು, ಅಗತ್ಯವಿದ್ದರೆ ‘ಇಲ್ಲ’ ಎಂದು ಹೇಳುವುದನ್ನು ಕಲಿಯುತ್ತಿದೆ.

ಇವರಿಗೆ ಯಶಸ್ಸು ಎಂದರೆ ದೊಡ್ಡ ಹುದ್ದೆ ಅಲ್ಲ. ಕೆಲಸವು ಸ್ವಾತಂತ್ರ್ಯಕ್ಕೆ ಹಣ ಒದಗಿಸಬೇಕು - ಜೀವನವನ್ನೇ ನುಂಗಬಾರದು. ಬ್ಯುಸಿ ಸಂಸ್ಕೃತಿ ಎಲ್ಲವನ್ನೂ ಕೊಡುವ ಭರವಸೆ ನೀಡಿದರೆ, ಕೆರಿಯರ್ ಮಿನಿಮಲಿಸಂ “ಸಾಕಿಷ್ಟು” ಎನ್ನುವ ಮಾತನ್ನು ಮುಂದಿರಿಸುತ್ತದೆ. ಹಲವರಿಗೆ, ಆ “ಸಾಕಿಷ್ಟು” ಎಂಬುದೇ ಕ್ರಾಂತಿಕಾರಿ ಭಾವನೆ ಆಗಿದೆ.