ಬೆಂಗಳೂರಿನ ಪಾರ್ಕ್‌ನಲ್ಲಿ ಭೇಟಿಯಾದ ಅಕ್ಷಯ ಎಂಬ ಯುವಕನ ಕಥೆ ಇದು. ಪ್ರೀತಿ, ದ್ವೇಷ, ಮತ್ತು ವಿಧಿಯಾಟದ ನಡುವೆ ಸಿಲುಕಿದ ಆತನ ಜೀವನದ ಕಥೆಯನ್ನು ಲೇಖಕರು ಕನಸಿನಲ್ಲಿ ಕಂಡಿದ್ದಾರೆ.

ಅಕ್ಷಯ ಎಂಬ ಅ“ವಿವೇಕಿ” 

ಅಂದುಕೊಂಡ ಹಾಗೆ ಯಾವುದು ಆಗದೆ ಇದ್ದಾಗ ಜೀವನದಲ್ಲಿ ಏನಾದರೊಂದು ಮಾಡಬೇಕು ಎಂಬ ಹಂಬಲದಿಂದ ದಾರಿ ಹುಡುಕುತ್ತಿದ್ದಾಗ ನನಗೆ ಉಳಿದ ಆಯ್ಕೆ ಬೆಂಗಳೂರು. ಕೆಲಸಕ್ಕಾಗಿ ಬೆಂಗಳೂರನ್ನ ಆರಿಸಿ ಬಂದೆ, ಕೊನೆಗೂ ಒಂದು ಕಡೆ ಕೆಲಸ ಗಿಟ್ಟಿಸಿಕೊಂಡೆ. ದಿನವಿಡಿ ದುಡಿದು ವಾರಗಳ, ದಿನಗಳ ಲೆಕ್ಕಗಳೇ ಗೋಚರಿಸದಂತೆ ಆಗಿ ಹೋಗಿತ್ತು. ಬೆಳಿಗ್ಗೆ ಏಳು ಕೆಲಸಕ್ಕೆ ಹೋಗು ರಾತ್ರಿ ಮನೆಗೆ ಬಾ ಇಷ್ಟೆ ಇಲ್ಲಿನ ದಿನಚರಿ.ಆಗಾಗ ಮೊಬೈಲ್ ಜಗತ್ತಿನೊಳಗೆ ಹೋಗಿಬರುವುದು ಏಲ್ಲರಂತೆಯೇ ಸಹಜ ಪ್ರಕ್ರಿಯೆ ನನ್ನದೂ ಆಗಿತ್ತು. ಹಿಗಿದ್ದ ನನಗೆ ಒಂದಿಷ್ಟು ಮನಶಾಂತಿಯ ಅವಶ್ಯಕತೆ ತುಂಬಾ ಇತ್ತು. ಅಂದು ಭಾನುವಾರ ಆದ್ದರಿಂದ ಬೆಳಿಗ್ಗೆ ಎದ್ದವನೇ ಪಾರ್ಕ ಕಡೆ ಪಯಣ ಬೆಳೆಸುವ ಮನಸಾಯಿತು. ಆಗಲೇ ಸಮಯ 7ರ ಗಡಿಗೆ ತಲುಪಿತ್ತು. ಕಾಲಿಗೆ ಶೂ ಸಿಕ್ಕಿಸಿ ಕಿವಿಗೊಂದು ಇಯರ್ ಪೋನ್ ಹಾಕಿಕೊಂಡು ನಡೆದಾಡುವ ಕಾರ್ಪೊರೇಟ್ ಜನರ ಮದ್ಯೆ ಅಂದು ನನ್ನ ಪಾದಗಳು ಕೇವಲ ಚಪ್ಪಲಿಗೇ ತೃಪ್ತಿಗೊಂಡಿದ್ದವು. 

ನಾನು ಕೂಡ ಸುಮಾರು ದೂರ ನಡೆದು ಒಂದಿಷ್ಟು ಮನಸ್ಸಿಗೆ ಹಿತಗೊಳಿಸಿಕೊಂಡು ಸಿಮೆಂಟ್ ಕಂಬದ ಮೇಲೆ ಆಯಾಸಗೊಂಡ ಕಾರಣ ಕುಳಿತು ಕೊಂಡೆ. ಮಿಗಿಲಾಗಿ ಅಲ್ಲಿ ತಣ್ಣನೆ ಗಾಳಿ ಜೊತೆ ಮರದ ನೆರಳು ಕೂಡ ಇತ್ತು. ಮತ್ತು ನಾ ಕೂತಿದ್ದು ಮುಖ್ಯ ರಸ್ತೆಗೆ ಸಮೀಪವಿರುವಂತೆ ಇತ್ತು. ಹೀಗೆ ದಣಿವಾರಿಸಿ ಕೊಳ್ಳುತ್ತಿದ್ದ ನನಗೆ ಸಿಕ್ಕುಗೊಂಡ ಗಡ್ಡ, ತಲೆಗೂದಲು ನೀರನ್ನ ಕಾಣದೆ ಗಟ್ಟಿ ಉಂಡೆಯಾಗಿ ಕೂತವನೊಬ್ಬ ಕಂಡ. ಸಾಮಾನ್ಯ ವಾಗಿ ಅವನೊಬ್ಬ ಹುಚ್ಚನಂತೆ ಕಾಣುತ್ತಿದ್ದ. ಆದರೆ ನಾನು ಅವನನ್ನ ಸುಮಾರು ಸಮಯ ಗಮನಿಸಿದೆ ಅವನಲ್ಲಿ ಏನೊ ಕಳೆದು ಕೊಂಡ ಬಾವವಿತ್ತು, ನಿರಾಶಾದಾಯಕ ಮುಖವು ಕಣ್ಣೀರಲ್ಲಿ ಮಿಂದಿತ್ತು. ಚಳಿಯಿಂದ ನಡುಗುತ್ತಿದ್ದ. ಮೈಯಾಲ್ಲಾ ಕೊಳಕು ಸಣ್ಣ ರೋಧನೆಯ ಧ್ವನಿ ಅವನಿಂದ ಕೇಳಿಬರುತ್ತಿತ್ತು. ನನಗ್ಯಾಕೋ ಅವನ ಮೇಲೊಂದು ಅನುಕಂಪದ ಭಾವ ಮೂಡಿತು. ನನಗೆ ಈ ತರಹದ ವ್ಯಕ್ತಿಗಳನ್ನ ದಿನವಿಡಿ ಬೆಂಗಳೂರಲ್ಲಿ ನೋಡಿ ನೋಡಿ ಅವರ ಮೇಲೆ ಹೆಚ್ಚೆನೂ ಗಮನ ಇರುತ್ತಿರಲಿಲ್ಲ. ಬಹುತೇಕ ಎಲ್ಲರಿಗೂ ಇಲ್ಲಿ ಅದು ಸರ್ವೇ ಸಾಮಾನ್ಯವಾಗಿತ್ತು. ಆದರೆ ಅಂದೆಕೋ ಅವನನ್ನ ನೋಡಿದ ನನಗೆ ಅನುಕಂಪದ ಒಳಮನಸು ಚಡಪಡಿಸಿತು. ಅವನು ಹುಚ್ಚನಲ್ಲ ಎಂದು ಗಾಢವಾಗಿ ಅನಿಸತೊಡಗಿತು. ಅವನ ಬಳಿ ತೆರಳಿ ಏನಪ್ಪಾ ಹಸಿವಾಗಿದಿಯಾ..? ನೀರೆನಾದರೂ ಕುಡಿವೆಯಾ ಎಂದು ಕೇಳಿದೆ. ಏನಕ್ಕೂ ಪ್ರತಿಕ್ರಿಯೆ ಬರಲಿಲ್ಲ ಸ್ವಲ್ಪ ಹೊತ್ತಿನ ಬಳಿಕ ಅವನ ಕಣ್ಣಂಚಲಿ ಕಣ್ಣೀರು ಮಣ್ಣಾದ ಮೀಸೆಯನ್ನ ಒರೆಸುತ್ತಿತ್ತು. ಪಕ್ಕದ ಪೆಟ್ಟಿ ಅಂಗಡಿಗೆ ತೆರಳಿ ಒಂದಿಷ್ಟು ಬಿಸ್ಕತ್ತು, ಬನ್ನು ಹಾಗೆ ಒಂದು ಕಪ್ ಟೀ ಯನ್ನ ತೆಗೆದುಕೊಂಡು ಅವನಿಗೆ ನೀಡಿದೆ. ಹಸಿವು ಅವನಲ್ಲಿ ತಾಂಡವ ಆಡುತ್ತಿದ್ದರೂ ಸಂಕೋಚನದಿಂದ ಒಮ್ಮೆ ಬೇಡ ಎಂದ. ನಾನು ಸ್ವಲ್ಪ ಭಾವನಾತ್ಮಕವಾಗಿ ತಿನ್ನು ಅಣ್ಣ ಪರವಾಗಿಲ್ಲ ನಿನ್ನನ್ನ ನೋಡಿದರೆ ನನ್ನಣ್ಣ ನೆನಪಾಗುತ್ತಾನೆ ಎಂದು ಸುಳ್ಳು ಹೇಳಿದೆ ಅವನಿಗೆ ಆ ಮಾತುಗಳು ನಾಟಿದವು. ಒಂದೆ ಉಸಿರನಲ್ಲಿ ಎಲ್ಲವನ್ನೂ ತಿನ್ನಲಾರಂಭಿಸಿದ. ಹಸಿದ ಹೊಟ್ಟೆಗೆ ಬಿಸಿಯ ಲೆಕ್ಕಾಚಾರಗಳು ಇರಲು ಹೇಗೆತಾನೆ ಸಾಧ್ಯ.? ತಿಂದು ಮುಗಿಸಿ ಸ್ವಲ್ಪ ಸುದಾರಿಸಿಕೊಂಡ ಯಾರು ಸರ್ ನಿವು.... ಎಂದ ಆಗಲೇ ಅಂದುಕೊಂಡ ನನ್ನ ಊಹೆ ಸರಿಯಾಗಿಯೇ ಇತ್ತು ಆತ ಹುಚ್ಚನಲ್ಲ ಬದಲಾಗಿ ವಿದ್ಯಾವಂತ ಅವನು ಸರ್ ಎಂದಾಗ‌ ಅವನ ಒಳವಿದ್ಯಾವಂತಿಕೆ ಅದರದ ಮೂಲಕ ಗೋಚರಿಸುತ್ತಿತ್ತು.

ನಾನು ನಿನ್ನಂತೆಯೆ ಅಲೆಮಾರಿ ನೀನು ಸ್ವಲ್ಪ ಕೊಳಕು ಬಟ್ಟೆಯನ್ನ ಧರಿಸಿದ್ದಿಯ ನಾನು ಸ್ವಲ್ಪ ಶುಭ್ರವಾದ ಬಟ್ಟೆ ಧರಿಸಿದ್ದಿನಿ ಅಷ್ಟೇ ನನಗೂ ನಿನಗೂ ಇರುವ ವ್ಯತ್ಯಾಸ ಎಂದೆ. ಅದವನಿಗೆ ಏನೆನಿಸಿತೋ ಏನೋ ನೀವು ಪೋಲೀಸ್‌ ಕಡೆಯವರಾ ..? ನಾನು ಯಾವ ತಪ್ಪು ಮಾಡಿಲ್ಲ ಸರ್ ದಯವಿಟ್ಟು ನನ್ನನ್ನ ನಂಬಿ ಎಂದು ಒಂದೇ ರಾಗದಲ್ಲಿ ಅಪರಾಧಿಯ ಸ್ಥಾನದಲ್ಲಿ ನಿಂತುಕೊಂಡ. ಆಗಲೇ ನನಗೆ ತಿಳಿಯಿತು ಇವನೂ ಯಾವುದೋ ಸಮಸ್ಯೆಯಲ್ಲಿದ್ದಾನೆಂದು ಆದರೆ ಈ ಹುಚ್ಚನ ವೇಷ ಏನಕ್ಕಾಗಿ...? ನಾನು ಅವನನ್ನ ವಿನಯದಿಂದ ಕೇಳಿದೆ ಏನಾಯಿತು ನಿನಗೆ... ನಾನು ಯಾವ ಪೋಲಿಸ್‌ ಕಡೆಯವರು ಅಲ್ಲ ಇಲ್ಲೆ ಪಕ್ಕದಲ್ಲಿ ನನ್ನ ಮನೆಯಿದೆ. ಭಾನುವಾರವಲ್ಲಾ ಅದಿಕ್ಕೆ ಇ ಪಾರ್ಕಿಗೆ ಬಂದೆ ನಿನ್ನ ನೋಡಿದರೆ ಯಾಕೋ ಕನಿಕರ ಬಂದಂತೆ ಭಾಸವಾಯಿತು ಅದಕ್ಕೆ ನಿನ್ನನ್ನ ಮಾತನಾಡಿಸಿದೆ ಎಂದಾಗ ಅವನಿಗೆ ಒಂದು ನಂಬಿಕೆಯ ಭರವಸೆ ಮೂಡಿತು.ತುಟಿ ತೆಗೆದು ಶಬ್ದಬರದೆ ಅಳದೊಡಗಿದ. 

ಹಾಗೆ ಅಳಲು ಅದೆಷ್ಟು ನೊಂದಿರಬೇಕು ಅವನು. ನಿನ್ಯಾರು ಎಲ್ಲಿಯವನು ಏನು ನನಗೆ ಗೊತ್ತಿಲ್ಲ ಆದರೆ ನಿನ್ನ ನೋಡಿದರೆ ಹುಚ್ಚನಂತೆ ಕಾಣುತ್ತಿಲ್ಲ, ಬದಲಾಗಿ ಯಾವುದೋ ಸಮಸ್ಯೆಯಲ್ಲಿರುವಂತೆ ಕಾಣುತ್ತಿರುವೆ ಎಲ್ಲವನನ್ನು ನಿನ್ನ ಮನಸ್ಸಿನ ಭಾರದಿಂದ ಹೊರಹಾಕು ಎಂದೆ. ಕೊಂಚ ಸುದಾರಿಸಿಕೊಂಡು ಮೆಡಮ್‌ ನಾನು ಅಕ್ಷಯ ಅಂತ ದೂರದ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನವನು ಎಂದು ತನ್ನ ಪರಿಚಯವನ್ನ ಪ್ರಾರಂಭಿಸಿದ. ಏಲ್ಲವೂ ಚೆನ್ನಾಗಿಯೇ ಸಾಗುತ್ತಿದ್ದ ಜೀವನ ನನ್ನದು, ಆದರೆ ವಿಧಿಯಾಟ ಬೇರೆಯದೆ ಆಯಿತು. ನಾನು ನನ್ನ ಅಮ್ಮ ಅಷ್ಟೆ ನಮ್ಮ ಪುಟ್ಟ ಪ್ರಪಂಚ. ಚಿಕ್ಕವನಿದ್ದಾಗಲೇ ತಂದೆಯ ಕಳೆದುಕೊಂಡ ನನಗೆ ಅಮ್ಮನೇ ಎಲ್ಲಾ. ಒಂಟಿ ಹೆಣ್ಣೆಂದರೆ ಕಷ್ಟಗಳನ್ನ ನಾನು ವಿವರಿಸಬೇಕಿಲ್ಲ, ಸಮಾಜದ ನೀಚ ಮನಸ್ಥಿತಿಗಳನ್ನು ನಾನು ಹೇಳಬೇಕಿಲ್ಲ ಅಂತಹ ಏಲ್ಲಾ ಕಷ್ಟಗಳ ದಾಟಿ ಬೆಳೆದವಳು ನನ್ನಮ್ಮ ಅವಳ ಹೆಸರು ಶಾಂತಮ್ಮ ನನ್ನ ಪಾಲಿನ ಶಾಂತಿ. ಅವರಿವರ ಮನೆ ಕೆಲಸ‌ ಮಾಡಿ, ಪೋಷಿಸಿ ಬೆಳೆಸಿದಳು‌. ಇದ್ದುದರಲ್ಲೇ ಹೊಂದಿಸಿಕೊಂಡು ಬದುಕುವ ನೆಮ್ಮದಿಯ ಜೀವನ ನಮ್ಮದಾಗಿತ್ತು. ಸಣ್ಣ ವಯಸ್ಸಿನಲ್ಲಿಯೇ ಎಲ್ಲಾ ಕಷ್ಟಗಳ ಅರಿವಿದ್ದ ನನಗೆ ಏನಾದರೂ ಸಾಧನೆ ಮಾಡಿ ಅಮ್ಮನನ್ನ ರಾಣಿಯಂತೆ ನೋಡಿಕೊಳ್ಳಬೇಕೆಂಬ ಗುರಿಯಿತ್ತು. ಅದರಂತೆ ನನ್ನ ಚುರುಕುತನದಿಂದ ತರಗತಿಯಲ್ಲಿ ಪ್ರತಿ ವರ್ಷವೂ ಪ್ರಥಮ ಸ್ಥಾನಗಳಿಸಿ ಕೊಳ್ಳುತ್ತಿದ್ದೆ ಆಗ ನನ್ನಮ್ಮನ ಮೊಗದಲ್ಲಿ ಹೆಮ್ಮೆಯ ಪತಾಕೆ ಕಂಡು ಬರುತ್ತಿತ್ತು, ಹಾಗೆ ಬೆಳೆದು ದೊಡ್ಡವನಾದಂತೆ ಓದಿಗಾಗಿ ಕರ್ಚಿನ ಚೀಟಿಗಳು ಕೂಡ ಜಾಸ್ತಿಆಗುತ್ತಿದ್ದವು.

ದಿನಕಳೆದಂತೆ ಅಮ್ಮನಿಗೂ ಹಣಹೊಂದಿಸಲು ಕಷ್ಟವಾಗುತ್ತಿತ್ತು. ನಾನು ಪಿಯುಸಿಯ ವ್ಯಾಸಂಗಕ್ಕೆ ಬೀದರ್ ನಗರಕ್ಕೆ‌ ಅಮ್ಮನ್ನ ಬಿಟ್ಟು ಹೋಗಲೇ ಬೇಕಿತ್ತು. ಒಂದು ದಿನವೂ ಒಬ್ಬರನೊಬ್ಬರು ಬಿಟ್ಟಿರದ ನಮಗೆ ನಿಜಕ್ಕೂ ಅದು ವನವಾಸವೇ ಆಗಿ ಹೋಗಿತ್ತು. ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಎಸ್ಎಸ್ಎಲ್ಸಿ ಯಲ್ಲಿ 74% ಅಂಕಪಡೆದ ಕಾರಣ ದಾರಾಳವಾಗಿ ಹಾಸ್ಟೆಲ್ ದೊರಕಿತು‌. ಪ್ರಥಮ ಪಿಯುಸಿಲ್ಲಿ ಕಾಮರ್ಸ್ ವಿಭಾಗದಲ್ಲಿ ದಾಖಲಾತಿ ಪಡೆದುಕೊಂಡೆ. ಹಾಗೆ ಪಡೆಯಲು ಶಾಲೆಯ ಗಿರೀಶ್ ಸರ್ ಅವರ ಸಲಹೆ, ಸಹಾಯ ತುಂಬಾನೇ ಇತ್ತು. ತಲೆಯಲ್ಲಿ ಒಂದೊಳ್ಳೆ ಕೆಲಸ ಪಡೆಯಲು ಚೆನ್ನಾಗಿ ಓದಬೆಕೆಂಬುದಷ್ಟೆ ಯೊಚನೆ ಇತ್ತು. ಇತ್ತ ಅಮ್ಮ ಎಂದಿನಂತೆ ಬೇರೆಯವರ ಮನೆಯ ಕೆಲಸಕ್ಕೆ ತೆರಳಿ ರಾತ್ರಿ ಒಂಟಿಯಾಗಿ ದಿನಕಳೆಯುತ್ತಿದ್ದಳು. ನನ್ನ ಶಾಂತಿ ವೆಂಕಪ್ಪ ಎಂಬುವರ ಮನೆಗೆ ಕಳೆದ 12 ವರ್ಷಗಳಿಂದ ಸತತವಾಗಿ ಕೆಲಸಕ್ಕೆ ತೆರಳುತ್ತಿದ್ದಳು. ವೆಂಕಪ್ಪ ತುಂಬಾ ಆಸ್ತಿವಂತ ರಿಯಲ್ ಎಸ್ಟೇಟ್ ಗಳಲ್ಲಿ ಪಳಗಿದ ಪ್ರವೀಣನಾಗಿದ್ದ. ಅವನಿಗೆ ಒಬ್ಬಳೇ ಮಗಳು ಹಾಗು ಅನುಸೂಯ ಎಂಬ ಮಡದಿಯಿದ್ದಳು. ರಿಯಲ್ ಎಸ್ಟೇಟ್ ನಲ್ಲಿ ಕೆಲಸಮಾಡುತ್ತಿದ್ದರಿಂದ ವೆಂಕಪ್ಪ ಒಂದಿಷ್ಟ ಪುಡಿ ರೌಡಿಗಳ ಹಾಗು ಪೋಲೀಸ್ ಅಧಿಕಾರಗಳ ಪರಿಚಯಹೊಂದಿದ್ದ.

ವೆಂಕಪ್ಪ ಹೆಂಗಸರ ಸಹವಾಸದ ಮನುಷ್ಯ ಅವನು ಒಮ್ಮೆ ನೋಡಿದರೆ ಅವರನ್ನ ಸಾಮಾನ್ಯವಾಗಿ ಬಿಡುತ್ತಿರಲಿಲ್ಲ. ಆದರೆ ಅವನ ಹೆಂಡತಿ ಅನಸೂಯಾಳಿಗೆ ಇದರ ಅರಿವಿರದಂತೆ ಎಲ್ಲವನ್ನ ಆತ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದ. ಆಗಾಗ ಶಾಂತಮ್ಮಳನ್ನು ತನ್ನ ತೆವಲು ತೀರಿಸಿಕೊಳ್ಳಲು ಪೀಡಿಸುತಿದ್ದಾ ಆದರೆ ಶಾಂತಿ ಅದರಿಂದ ತಪ್ಪಿಸಿಕೊಳ್ಳಲು ಅನುಸೂಯಾಗೆ ತಿಳಿಸುವುದಾಗಿ ಹೆದರಿಸುವ ಉಪಾಯ ಹೂಡುತ್ತಿದ್ದಳು. ಆದ್ದರಿಂದ ತುಂಬು ಮೈ ಕಟ್ಟಿನ ಶಾಂತಿಯನ್ನ ವೆಂಕಪ್ಪನಿಗೆ ಮುಟ್ಟಲು ಸಹ ಆಗಿರಲಿಲ್ಲ. ಏಲ್ಲಾ ಪ್ರಯತ್ನಗಳು ವಿಫಲವಾದಾಗ ವೆಂಕಪ್ಪ ಶಾಂತಮ್ಮಳ‌ ತಂಟೆಗೆ ಹೊಗುತ್ತಿರಲಿಲ್ಲ. ಆದರೆ ಅವಳ ಮೇಲೆ ಅವನಿಗೆ ವಿಪರೀತ ಸಿಟ್ಟಿತ್ತು ಮನೆಯ ಕೆಲಸದವಳಿಗೆ ಎಷ್ಟು ಸೊಕ್ಕಿದೆ ಎಂದು ಒಳಗೊಳಗೆ ಉದ್ರೇಕಿಸುತ್ತಿದ್ದ ಅವಳನ್ನ ಕೆಲಸದಿಂದ ತೆಗೆಯುವಂತೆ‌ ಅನುಸೂಯಾಳಿಗೆ ಎಷ್ಟೋ ಬಾರಿ ಚಾಡಿ ಹೇಳಿದ್ದ ಆದರೆ ಕೆಲಸವನ್ನ ಶಾಂತಿ ಸುಮಾರು ವರ್ಷಗಳಿಂದ ಮಾಡಿಕೊಂಡು ಬಂದಿದ್ದರಿಂದ ಮತ್ತು ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದರಿಂದ ಅನಸೂಯಾ ಶಾಂತಮ್ಮಳೇ ಕೆಲಸಕ್ಕೆ ಬೇಕೆಂದು ಹಠಮಾಡಿ ಇಟ್ಟುಕೊಂಡಿದ್ದಳು. ಇದೆಲ್ಲದರ ಸಿಟ್ಟು ವೆಂಕಪ್ಪನ ಮನಸ್ಸನ್ನ ಕೆಣಕಿತ್ತು

ಒಂದು ಒಳ್ಳೆಯ ಅವಕಾಶಕ್ಕಾಗಿ ವೆಂಕಪ್ಪ ಶಾಂತಳಿಗಾಗಿ ಹೊಂಚುಹಾಕುತ್ತಿದ್ದ. ಇತ್ತ ನಾನು ಏನಾದರು ಸಾಧಿಸಬೇಕೆಂಬ ಹಠದೊಂದಿಗೆ ಕಠಿಣ ಪರಿಶ್ರಮ ಹಾಕಿ ಓದುತಿದ್ದೆ, ನನಗೆ ಹೆಚ್ಚಾರು ಸ್ನೇಹತರಿರಲಿಲ್ಲ. ಒಂದೆ ಜೊತೆ ಬಟ್ಟೆ, ಹರಿದ ಚಪ್ಪಲಿ, ಹಣವೇ ಇಲ್ಲದ ನನಗೆ ಹೆಚ್ಚು ಸ್ನೇಹಿತರಾದು ಎಲ್ಲಿಂದ ಆದರೂ..? ಅದಲ್ಲೆವನ್ನ ಮೀರಿ ಭಾಸ್ಕರ ನನಗೆ ಸ್ನೇಹಿತನಾಗಿದ್ದ. ಕಾಲೇಜಿನಲ್ಲಿ ಎಷ್ಟು ಜನರಿದ್ದಾರೆ ನಮ್ಮ ಕ್ಲಾಸಿನವರೆಷ್ಟು ಎಂಬ ಯಾವ ಪರಿವೆಯೂ ನನ್ನಲ್ಲಿ ಇರಲಿಲ್ಲ. ಕಾಲೇಜು ಇಂದ ಹಾಸ್ಟೆಲ್ - ಹಾಸ್ಟೆಲ್ ಇಂದ ಕಾಲೇಜು ಆಗಾಗ 15 ದಿನಗಳಿಗೊಮ್ಮೆ ಊರಿಗೆ ಹೋಗಿ ಶಾಂತಿಯನ್ನ‌ ನೋಡಿಕೊಂಡು ಬರುವದು ಇಷ್ಟೇ ನನ್ನ ಅಲ್ಪ ಹವ್ಯಾಸ ಹೊಂದಿದ್ದೆ. ಅಂದು ಸೆಪ್ಟೆಂಬರ್ ತಿಂಗಳ ಸಮಯ ಕಾಲೇಜಿನಲ್ಲಿ ಸ್ಪೋರ್ಟ್ಸ್ ಇರುವುದಾಗಿ ಒಂದು ಮೆಮೊ ಬಂದು ಓದಿ ಹೋಗಿತ್ತು. ವಾರದ ಬಳಿಕ ಶುರುವಾದ ಸ್ಪೋರ್ಟ್ಸ್ 3 ದಿನಗಳ ಕಾಲ ನಡೆದಿತ್ತು. ನನ್ನ ಜೀವನ ಹಾಳಾಗಿದ್ದೆ ಅಲ್ಲಿಂದ. ಸ್ಪೋರ್ಟ್ಸ್ ನ ಮೊದಲ ದಿನ ಕ್ರೀಡಾಂಗಣಕ್ಕೆ ಭಾಸ್ಕರನ ಜೊತೆಗೆ ತೆರಳಿದ್ದೆ, ಅಲ್ಲಿ ಕಾಲೇಜಿನ ಆಡಿಟೋರಿಯಂ ರೂಮಿನಿಂದ ಒಂದು‌ ಹುಡುಗಿಯರ ಹಿಂಡು ಕ್ರೀಡಾಂಗಣದತ್ತ ಬರುತ್ತಿತ್ತು. ಅದರಲ್ಲಿ ಕಣ್ಣಿಗೆ ಕಾಡಿಗೆ ಹಚ್ಚಿ, ಮೂಗಿಗೊಂದು ಮೂಗುತ್ತಿ ಸಿಕ್ಕಿಸಿ, ಕೆಂಪು ಮಿಶ್ರಿತ ಕಪ್ಪು ಬಣ್ಣದ ಬಟ್ಟೆತೊಟ್ಟು ಎಲ್ಲರನ್ನೂ ಆಕರ್ಷಿಸುತ ಬಂದವಳೇ ಕೌಸಲ್ಯ.... ನನ್ನ ಬದುಕಿನ ದೀಪ ಆರಿಸಿದ ಮೊದಲ ಬಿರುಗಾಳಿ..!! ಒಮ್ಮೆಲೇ ನನಗೆ ಅವಳ‌ ಮೇಲೆ ಕಣ್ ಹಾಯಿತು. ಆಗಲೇ ಜೀವಶಾಸ್ತ್ರದ ತಲ್ಲಣಗಳು ನನ್ನ ಅಂಗಾಂಗಳಲ್ಲಿ ಬೊಬ್ಬೆ ಹೊಡೆಯಲು ಶುರುಮಾಡಿದ್ದು. ಆದರೆ ಬಡತನ ಬುದ್ದಿಯನ್ನ ಹಿಡಿತಕ್ಕೆ ಆ ಕ್ಷಣಕ್ಕೆ ತಂದಿತ್ತು. ಆದರು ಅವಳನ್ನ‌ ಆ ದಿನ ಆಗಾಗ ಗಮನಿಸುತ್ತಿದ್ದೆ ಕೊಂಚ ನಾಜುಕ ಸ್ವಭಾವ, ತುಂಬಾ ಸರಳವಾಗಿ ಬದುಕುತ್ತಿರುವಳಂತೆ ಕಂಡಿತ್ತು. ಯಾಕೆಂದರೆ ನಾ ಬಯಸುವ ಹುಡುಗಿ ಹಾಗೆ ಇರಬೇಕೆಂಬುದು ನನ್ನ ಆಸೆ ಆಗಿತ್ತು ಆದರೆ ಕೌಸಲ್ಯ ಹಾಗಲ್ಲ ಹಠಮಾರಿ ಹೆಣ್ಣು ಶ್ರೀಮಂತಳಾಗಿ ಬೆಳದವಳು ಯಾರಿಗೂ ಹೆದರದ ಗಯ್ಯಾಳಿ.

ಖೋಖೋ ಕ್ರೀಡಾಂಗಣದತ್ತ ಅವಳ ಹೆಜ್ಹೆಗಳು ಸಾಗುತ್ತಿದ್ದವು, ಅಂದೇಕೊ ನನಗೆ ಮಂಕು ಬುದ್ಧಿಯ ಮೊದಲ ಮೊಳಕೆಯ ಕುಡಿಯೊಡೆದಿತ್ತು. ಮತ್ತೆ ಮತ್ತೆ ಅವಳನ್ನೆ ಗಮನಿಸುತ್ತಿದ್ದೆ, ಅವಳ ಆ ಗುಲಾಬಿ ತುಟಿಯಂಚಿನ ಒಂದು ವಕ್ರ ದಂತ ನನ್ನ ಒಡಲಲಿ ಸಿಡಿಸಿದ ಮೊದಲ ಮಿಂಚಾಗಿ ಉಳಿದಿತ್ತು. ಒಮ್ಮೆಲೆ ಎಲ್ಲವೂ ಮರೆತೋಗಿ ನನ್ನ ಬಾಳಿಗೆ ಇವಳೇ ಅಮೃತ ಕಳಶ, ಎಂದಿಗೂ ಇವಳು ನನ್ನವಳೆ ಎಂಬ ಹುಂಬತನದ ಮೋಹ ಮನದೊಳಗೆ ಗುಃಯ್ಯನೆ ಕೊರೆಯಲಾರಂಭಿಸಿತು

ಅವಳನ್ನ ಮಾತನಾಡಿಸಬೇಕೆಂಬ ಹಂಬಲ ಒಮ್ಮೆಲೇ ಮೂಡಿತು. ಆದರೆ.... ಆಗಾಗಲೆ ಎಲ್ಲರಿಗೂ ಸಾಮನ್ಯವಾಗಿ ನಾನು ಬಡವನೆಂದು ಹರಿದ ಬಟ್ಟೆಯೊಂದಿಗೆ ಬದುಕುತಿರವನೆಂದು ತಿಳಿದ ವಿಷಯವೇ ಆದ ಕಾರಣ, ಅವಳು ನನ್ನನ್ನ ತಿರಸ್ಕರಿಸ ಬಹುದೆಂದು ಮಾತನಾಡಿಸುವ ಗೋಜಿಗೆ ಹೋಗಲೇ ಇಲ್ಲ. ಆದರೆ ನನ್ನ ಅಂಬಕದ ಚಹರೆಯೊಳಗೆ ಅವಳ ಛಾಯಾಚಿತ್ರ ಎಂದೂ ಅಳಿಸದ ಒಂದು ಲ್ಯಾಮಿನೆಟೆಡ್ ಚೌಕಟ್ಟಾಗಿ ಅಂಟಿಕೊಂಡಿತ್ತು. ಇದೆಲ್ಲವನ್ನ ಹತ್ತಿರದಿಂದ ಗಮನಿಸುತ್ತಿದ್ದ ಭಾಸ್ಕರ ನನ್ನನ್ನ ಬೆರೆಡೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದ. ಅವನು ಹಾಗೆ ಮಾಡಲು ಕಾರಣವೂ ಒಂದಿತ್ತು ಅವನಿಗೆ ಕೌಸಲ್ಯನ ಬಗ್ಗೆ ಸಂಪೂರ್ಣವಾಗಿ ಎಲ್ಲವೂ‌ ತಿಳಿದಿತ್ತು, ಅವಳನ್ನ ನೋಡಿದರೆ ಮನಸೋಲದಿರುವವರು ಯಾರು ಇಲ್ಲ. ಹಾಗೆಯೇ ಅವಳಿಂದ ಜೀವನ ಹಾಳುಮಾಡಿ ಕೊಂಡಿರುವವರು ಸಾಕಷ್ಟು ಹುಡುಗರಿದ್ದರು ಅದಲ್ಲದೆ ಅವಳು ಗಯ್ಯಾಳಿ ಯಾರನ್ನು ಸುಮ್ಮನೆ ಬಿಡುವವಳಲ್ಲ‌.ಅದಕ್ಕಾಗಿಯೆ ಭಾಸ್ಕರ ಬೆರೆಡೆಗೆ ಕರೆದೊಯ್ಯಲು ನನ್ನನ್ನ ಕಾಡಿಸುತ್ತಿದ್ದ. ಆದರೆ ನನಗೆ ಆ ಕ್ಷಣಕ್ಕೆ ಅವಳೆ ಎಲ್ಲವೂ ಆದ ಕಾರಣ ಅವಳನ್ನ ಒಂದೇ ದೃಷ್ಟಿಯಿಂದ ನೋಡುತ್ತಿದ್ದೆ.

ಕೈಗಳಿಂದ ಆಟಕ್ಕಾಗಿ ಪ್ರೊತ್ಸಾಹಿಸುತ್ತಿದ್ದ ಅವಳ ಬೆಣ್ಣೆಯಂತ ಕೈಗಳು ಆಗಾಗ ಕಿವಿಯಂಚಿನ ಕೇಶಗಳ ಸರಿಪಡಿಸಿಕೊಳ್ಳುತ್ತಿದ್ದವು. ಹಠಾತ್ತನೆ ಒಮ್ಮೆ ಅವಳು ನನ್ನ ಗಮನಿಸಿದಳು, ನನಗೆ ಅವಳ ಆ ನೋಟ ಮಳೆಗಾಲದ ಬೊರ್ಗರೆದು ಧುಮುಕುವ ಜಲಪಾತದಂತೆ ಭಯಹುಟ್ಟಿಸಿತು, ಜೊತೆಗೆ ನನ್ನ ಕಣ್ಣುಗಳು ಕಳ್ಳಾಟವಾಡಲು ಸಿದ್ದವಾದವು. ನನ್ನಂತವರನ್ನ ತುಂಬಾ ನೋಡಿದ ಅವಳಿಗೆ ಈ ಕಳ್ಳಾಟದ ಒಳಗುಟ್ಟು ಅರ್ಥವಾಗದೇ ಇದ್ದಿತೇ..?? ನಾನು ಅವಳನ್ನ ಒಂದೆರಡು ನಿಮಿಷಗಳಕಾಲ ನೋಡಲೇ ಇಲ್ಲ ಆದರೆ ತುಡಿತ ಕೇಳಬೇಕಲ್ಲ ಸಣ್ಣದಾಗಿ ಓರೆಗಣ್ಣಲ್ಲಿ ಅವಳ ನೋಡುವ ಪ್ರಯತ್ನ ಮಾಡಿದೆ, ಆದರೆ ಅವಳು ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದಳು. ಭಯಪಟ್ಟು ಏನು ತಿಳಿಯಂತೆ ನಾನು ಸುಮ್ಮನೆ ಖೋಖೋ ನೋಡುತ್ತಿರುವವನಂತೆ ನಟಿಸಿ ಚಪ್ಪಾಳೆ ತಟ್ಟುತ್ತಿದ್ದೆ. ಅಲ್ಲೇ....! ಅಲ್ಲೇ...! ನಾ ಸಿಕ್ಕಾಗಿ ಬಿದ್ದದ್ದು. ಅವಳ ಅಮಲಿನೊಳಗೆ ಮುಳುಗಿ ಹೋಗಿದ್ದ ನನಗೆ ಆಟಮುಗಿದಿದ್ದೆ ಗೊತ್ತಿರಲಿಲ್ಲ, ಎಲ್ಲರೂ ವಿಶ್ರಾಂತಿ ಪಡೆಯಲು ಕುಳಿತಿರುವಾಗ ನಾನು ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದೆ

.ಆಗಲೇ ನನಗೆ ಮೊದಲ ಬಾರಿ ಗ್ರಹಚಾರದ ಗ್ರಹಣ ಹಿಡಿದದ್ದು. ಕೌಸಲ್ಯ ನಾನಿದ್ದ ಬಳಿಗೆ ಸಿಟ್ಟಿನಿಂದ ಬರುತ್ತಿದ್ದಳು, ನನ್ನ ಎದೆಬಡಿತ ವಿಮಾನಿನ ಶಬ್ದಗಿಂತಲೂ ಜೋರಾಗಿ ಬಡಿದುಕೊಳ್ಳುತ್ತಿತ್ತು. ಬಳಿಗೆ ಬಂದವಳೇ “ ಯಾಕಲೇ ಅವಾಗಿನಿಂದ ನನ್ನಾ ನೋಡಕತ್ತಿಯಾ..!! ಮ್ಯಾಚ್ ಮುಗಿದ್ ಮೇಲು ಚಪ್ಪಾಳೆ ಹೊಡಿತಾ ಇದಿಯಲ್ಲ ...ಕಬರ ಇಲ್ಲೆನ್ ನಿಂಗಾ..ಮುಸುಡಿ ನೋಡು ನಿಂದು... ಎದಕ್ ಬರ್ತಿಯಾ ಕಾಲೇಜಿಗ್ ಹುಡ್ಗಿರ್ ನೊಡಕೊಂಡ ಹಲ್‌ಕಿಸ್ಯಾಕ್ ಬರ್ತಿಯೆನ್...! ಅಪ್ಪ ದುಡಿತಾನ ಮಗಾ ಇಲ್ಲಿ ಹುಡ್ಗಿನೊಡ್ತಾನಾ..ಬಾಳ್ ಚಲೋ ಐತಿ ನಿನ್ ಜೀವ್ನಾ...ತೂ...!!” ಎಂದು ತನ್ನ ಗಯ್ಯಾಳಿಯ ವ್ಯಾಕರಣವನ್ನ ನನಗೆ ಪರಿಚಯಿಸಿದಳು. ಏನೆಂದು ಪ್ರತಿಕ್ರಿಯಿಸ ಬೆಕೆಂದು ತಿಳಿಯದೆ “ಅಕ್ಕ ಕ್ಷಮಿಸಿ ನಿಮ್ಮನ್ನ ನೋಡಿದ್ದೇನೋ ನಿಜಾ.. ಆದರೆ ಅದರ ಉದ್ದೇಶ ಕೆಟ್ಟದಲ್ಲ, ನನ್ನ ದೊಡ್ಡಕ್ಕ ಕೂಡ ನಿಮ್ಮಹಾಗೆ ಒಕ್ರಹಲ್ಲಿನವಳು ನಿವು ನಕ್ಕಾಗ ನಮ್ಮಕ್ಕನಂತೆಯೇ ಮುದ್ದಾಗಿ ಕಂಡಿರಿ ಅದಕ್ಕೆ ಒಂದೆರೆಡು ಬಾರಿ ನಿಮ್ಮನ್ನೆ ನೋಡಿದೆ ಎಂದು ಬೀಸುವ ದೊಣ್ಣೆಯಿಂದ ತಕ್ಕ ಮಟ್ಟಿಗೆ ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಆ ಸುಳ್ಳು ಹೇಳಿದೆ. ಅದರ ಜೊತೆಗೆ ನಿವು ತಿಳಿದ ಹಾಗೆ ಅಪ್ಪನ ದುಡ್ಡಲ್ಲಿ ಬದುಕುವ ಹಕ್ಕನ್ನ ದೇವರು ನನಗೆ ಈ ಜನ್ಮದಲ್ಲಿ ಕಲ್ಪಿಸಿಯೇ ಇಲ್ಲ, ನನಗೆ ನನ್ನಮ್ಮನೆ ಏಲ್ಲಾ ಅವಳ ಬೆವರ ಹನಿಯಿಂದ ಈ ಕಾಲೇಜಿನ ಮೆಟ್ಟಿಲೇರಿದ್ದು, ಇನ್ನೊಮ್ಮೆ ಕ್ಷಮಿಸಿ ಎಂದು ಅವಳ ಪ್ರತಿಕ್ರಿಯೆ ಬರದೊರಳಗಾಗಿ ಅಲ್ಲಿಂದ ನಿರ್ಗಮಿಸಿದೆ. ಇದರಿಂದ ಭಾಸ್ಕರನು ಕೊಂಚ ನಿರಾಳಗೊಂಡಿದ್ದ. ಬಹುಶಃ ಭಾವನಾತ್ಮಕವಾಗಿ ಆ ಮಾತುಗಳನ್ನ ಅಂದು ನಾನು ಆಡದೇ‌ ಹೊಗಿದ್ದರೆ ಕೌಸಲ್ಯ ಮುಂದೊಂದು ದಿನ ನನ್ನ ತೋಳಿಗೆ ಒರಗುತ್ತಿರಲಿಲ್ಲವೇನೋ ಅಥವಾ ನನ್ನ ಬದುಕು‌ ಇತರಹದ‌ ಅಸಹ್ಯ ಪರಿಸ್ಥಿತಿಗೆ ಬರುತ್ತಿರಲ್ಲಿಲ್ಲವೋ ಏನೋ ಮುಂದಿನದನ್ನ ಬಲ್ಲವರಾರು...!

ಹಾಗೆ ಅಷ್ಟೆಲ್ಲಾ ಮಾತನಾಡಿದ ಮೇಲೆ ಅವಳ ಅಂತರಾಳದೊಳಗೆ ನಾನು ಕಾಡದೇ ಇರುವೆನಾ..? ಹೌದು ಅವಳಿಗೆ ನನ್ನ ಮೇಲೊಂದು soft corner (ಕನಿಕರ) ಮೂಡಿತ್ತು. ಅವಳದು ವಿಜ್ಞಾನ ವಿಭಾಗ, ನನ್ನದು ಕಲಾ ವಿಭಾಗ ಆಗಿದ್ದರಿಂದ ದಿನಕ್ಕೆ ಮುರ್ನಾಲ್ಕು ಬಾರಿ ಕಂಡರೆ‌ ಹೆಚ್ಚು ಕಂಡಾಗಲೆಲ್ಲ ಕಣ್ಣಲ್ಲೇ ಒಂದು ನಗುವಿನ ಸಂಭಾಷಣೆ ಆಗುತ್ತಿತ್ತು. ಅವಳಿಗೆ ನನ್ನಲ್ಲಿ ಮಾತನಾಡಿ ಸ್ವಾರಿ ಕೇಳಬೆಕೆಂಬುದು ತುಂಬಾನೆ ಇತ್ತು ಆದರೆ ನಾನು ಅವಳಿಗೆ ಸಿಗುತ್ತಿರಲಿಲ್ಲ ಒಮ್ಮೆ ಸ್ವಾರಿ ಕೇಳಿಮುಗಿದರೆ ಆ ತವಕ ಕಡಿಮೆ ಆಗಬಹುದೆಂದು ನಾನು ತಪ್ಪಿಸಿಕೊಳ್ಳುತ್ತಿದ್ದೆ. ಹೀಗೆ ಶುರುವಾದ ಹಾವು ಏಣಿಯ ಆಟ ಸ್ವಲ್ಪ ದಿನದಲ್ಲೆ ಸ್ನೇಹಿತರಾಗಲು ಅಣಿಮಾಡಿತ್ತು. ವಾರಕ್ಕೊಮ್ಮೆ ನೆನಪಾಗುತ್ತಿದ್ದ ಶಾಂತಿ ತಿಂಗಳಿಗೊಮ್ಮೆ ನೆನಪಾಗುತ್ತಿದ್ದಳು. ಸ್ನೇಹ ತೀರುಗಿ ಪ್ರೇಮಕ್ಕೆ ವಾಲಿದಾಗ ಕೌಸಲ್ಯ ಯಾರೆಂದು ತಿಳಿಯಿತು. ಹೌದು.... ಕೌಸಲ್ಯ ಶ್ರೀಮಂತ ಮನೆಯ ‌ಹುಡುಗಿ, ಆದರೆ‌ ಪ್ರೀತಿಗೆ ಶ್ರೀಮಂತಿಕೆ, ಬಡತನ,ಜಾತಿ, ಧರ್ಮದ ಬೇದವಿಲ್ಲ ವಲ್ಲ. ಅದೆಲ್ಲದರ ಹೊರತಾಗಿ ನನ್ನನ್ನು ಪ್ರೀತಿಸಿದ್ದಳು. ಅಂದಹಾಗೆ ಕೌಸಲ್ಯ ಬೆರೆಯಾರು ಅಲ್ಲ ಶ್ರೀಮಂತ ರೀಯಲ್ ಎಸ್ಟೇಟ್ ಉದ್ದಮಿ ವೆಂಕಪ್ಪನ ಮಗಳು. ಶಾಂತಿ ಕೆಲಸ ಮಾಡುವ ಮನೆಯ ಮರಿ ಯಜಮಾನಿ....!!.

ಆಗಾಗಲೆ ಕೌಸಲ್ಯ ನನ್ನ ಚುರುಕುತನಕೆ, ನಿಷ್ಕಲ್ಮಶ ಮನಸ್ಸಿಗೆ ಮುಗಿಬಿದ್ದು ಪ್ರೀತಿಯ ಪ್ರಪಾತಕ್ಕೆ ಇಳಿದು ಅವಳ‌ ಶ್ರೀಮಂತಿಕೆಯ ಹಣದಲ್ಲಿ ನನಿಗೂ ಒಂದಿಷ್ಟು ಓದಿಗೆ ಸಹಾಯ ಮಾಡುತ್ತಿದ್ದಳು. ಹೀಗೆ ಸಾಗುತ್ತಿದ್ದ‌ ನಮ್ಮ ಪ್ರೇಮದ ಪಯಣ ಡಿಗ್ರಿಯ‌ ಒರೆಗೂ ತಲುಪಿತ್ತು. ಅತ್ತ ಶಾಂತಿ ಪ್ರತಿ ತಿಂಗಳು ಮರೆಯದೆ ಹಣ ಕಳಿಸುತ್ತಿದ್ದಳು ನಾನು ಕೂಡ ಎರಡು ತಿಂಗಳಿಗೊಮ್ಮೆ ಅವಳನ್ನ ನೋಡಿಕೊಂಡು ಬರುತ್ತಿದ್ದೆ. ಶಾಂತಿ ನನಗೆ ಓದು ಹೆಚ್ಚಾದ ಕಾರಣ ಮೊದಲಿನಂತೆ ತಿಂಗಳಿಗೆ ಎರಡು ಬಾರಿ ಬರಲು ಆಗದೆ ಇರುವ ಕಾರಣ ಎರಡು ತಿಂಗಳಿಗೊಮ್ಮ ತನ್ನ ಮಗ ಬಂದುಹೊಗುತ್ತಿದ್ದಾನೆಂದು‌ ನಂಬಿದ್ದಳು. ಆದರೆ ನಾನೋ ಕೌಸಲ್ಯನ ಪ್ರೇಮದ ಕಣಜದೊಳಗೆ ಭದ್ರವಾಗಿ ಶೇಖರಣೆಗೊಂಡಿದ್ದೆ. ಮೊದಲಿನ ಬಡತನವಿಲ್ಲ ಹರಕು‌ ಬಟ್ಟೆಗಳಿಲ್ಲ ಚಪ್ಪಲಿಯ ಕಾಲಿಗೆ ಶೂ ಬಂದಿದ್ದವು ಇವೆಲ್ಲವು ಅವಳ ಕೃಪೆಯಿಂದಲೆ. ಆದರೆ ನಾವಿಬ್ಬರು ಓದಿನಲ್ಲಿ ಹಿಂದಿರಲಿಲ್ಲ. ನನಗೆ ಅವಳ ಮನೆಯ ವಿಷಯ ಸಂಪೂರ್ಣವಾಗಿ ತಿಳಿದಿತ್ತು ಅವಳಿಗೂ ನನ್ನ ಮನೆಯ ಪರಿಸ್ಥಿತಿ ಎಲ್ಲವೂ ತಿಳಿದಿತ್ತು. ಆ ಕ್ಷಣದಲ್ಲಿ ವೆಂಕಟಪ್ಪ ಒಬ್ಬ ಒಳ್ಳೆಯ ಶ್ರೀಮಂತ ವ್ಯಕ್ತಿ ಎಂದು ನಾನು ನಂಬಿದ್ದೆ. ಅವನೊಬ್ಬ ಹೆಣ್ಣು ಗಿರಾಕಿ ಎಂದು ಯಾವ ತಾಯಿಯಾದರು ತನ್ನ ಮಗನ ಬಳಿ ಹೇಳಿಕೊಂಡಾಳು..?? ಹಾಗಾಗಿ ಆಗ ನನಿಗೆ ವೆಂಕಪ್ಪಬಗ್ಗೆ ಕೆಟ್ಟ ವಿಷಯಗಳು ಬಂದಿರಲಿಲ್ಲ

ಅದು ಡಿಗ್ರಿಯ‌ 2ರಡನೆ ವರ್ಷ ಇರಬಹುದು ಚೆನ್ನಾಗಿಯೇ ಸಾಗುತ್ತಿದ್ದ ನಮ್ಮ ಪ್ರೀತಿ ಪಣಯಗಳು ಅಂದು ಅವರ ಮನೆಗೆ ತಿಳಿದಿತ್ತು ವೆಂಕಪ್ಪ ನಿಗಿ ನಿಗಿ ಕೆಂಡದಂತೆ ಆಗಿದ್ದ. ಒಂದೆರಡು ಬಾರಿ ವಾರ್ನಿಂಗ್ ಕೂಡ ಮಾಡಿದ್ದ , ಆದರೆ ನಾವು ಅವುಗಳೆಲ್ಲವನ್ನ ಮೀರಿ ನಿಂತಾಗ ಕೌಸಲ್ಯಳ ಕಾಲೇಜನ್ನ ಬಿಡಿಸಿದ್ದ ವೆಂಕಪ್ಪ. ಆಗ ನನ್ನದು ಕರಿಮೋಡದ ಬದುಕು ,ಏನು ತೋಚದ ಸ್ಥಿತಿಗೆ ತಲುಪಿದ್ದೆ ಭಾಸ್ಕರ ಕೂಡ ವೆಂಕಪ್ಪನ ಬಳಿ ಪ್ರಯತ್ನಿಸಿದ್ದರೂ ಯಾವುದು ಪ್ರಯೋಜನ ವಾಗಲೇ ಇಲ್ಲ. ಇತ್ತ ಶಾಂತಿಗೂ ವಿಷಯ ತಿಳಿದು ಒಳಗೊಳಗೆ ಕೊರಗುತ್ತಿದ್ದಳು. ವೆಂಕಪ್ಪನ ಮಡದಿ ಅನಸೂಯ ಕೂಡ ಕೌಸಲ್ಯಗೆ ಹೊಡೆದು ಬಡಿದು ಚಿಂತಾಜನಕ ಸ್ಥಿತಿಗೆ ತಲುಪಿಸಿದ್ದಳು.... ಕೆಲವೊಮ್ಮೆ ವಿಪರ್ಯಾಸದ ಬದುಕಿಗೆ ಹಣೆಬರಗಳು ಕಾಡುತ್ತವೆ ಹಾಗೆನೆ ನಮ್ಮ ಹಣೆಬರಹಗಳು‌ ಶುರುವಾದದ್ದು ಪ್ರೀತಿಯ ಗೋಜಿಗೆ ಬಿದ್ದಾಗೆ ಎಂದು ಅಳತೊಡಗಿದ ಅಕ್ಷಯ. ಅವನ ಆ ಕಥೆ ಕೇಳಿದ ನನಗೆ ನಿಜಕ್ಕೂ ದುಃಖ ಉಮ್ಮಳಸಿ ಬರುತ್ತಿತ್ತು. ಮುಂದೆನಾಯಿತು ಎಂದೆ ಮತ್ತೆ ಮುಂದುವರೆಸಿದೆ ಅಕ್ಷಯ.

ಇದನ್ನು ಓದಿ..ಹಳೇ ಹುಡುಗ ಬೇಕಿಲ್ಲ, ಗಂಡನೇ ಎಲ್ಲ ಎಂದಿದ್ದ 'ದಾವಣಗೆರೆ ಕುಳ್ಳಿ' ಮಾನಸಿ ಮದುವೇಲಿ 3000 ಜನರು!

 ವೆಂಕಪ್ಪ ಶಾಂತಿಯ ಮೇಲೆ ಮೊದಲಿಂದಲು ಹೊಂಚು ಹಾಕುತ್ತಿದ್ದ, ಅವನಿಗೆ ಶಾಂತಿ ಒಲಿಯಲಿಲ್ಲ ಎಂಬ ರಸಿಕತೆಯ ಬಂಗ ಕಾಡುದರ ಜೊತೆಗೆ ವಿಪರೀತ ಸಿಟ್ಟಿತ್ತು. ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಆತ ಒಮ್ಮೆ ನಮ್ಮ ಮನೆಗೆ ನುಗ್ಗಿ ಶಾಂತಿಗೆ ಗದರಿಸಿ ಹೆದರಿಸಿ ಹೋಗಿದ್ದ. ನನಿಗೂ ಅವನ ಚೇಲಗಳಿಂದ ಹೊಡೆಸಿ ಅವನ ಅಧಿಕಾರ ಬಳಸಿ ಪೋಲಿಸ್ ಮೆಟ್ಟಿಲನ್ನು ಹತ್ತುವಂತೆ ಮಾಡಿದ್ದ. ಕೌಸಲ್ಯಳ ನೋಡುವ ಬಯಕೆ ದಿನ ಹೋದಂತೆ ಹೆಚ್ಚುತ್ತಿತ್ತು. ಆದರೆ ಕೌಸಲ್ಯ ನಿಧಾನವಾಗಿ ಬದಲಾಗುತ್ತಿದ್ದಳು. ಸ್ವಲ್ಪ ದಿನಕಳೆದ ಮೇಲೆ ಕೌಸಲ್ಯಳ ತಾಯಿ ಅನುಸೂಯ ವಿಡಿಯೋ ಕರೆಮಾಡಿದಳು. ಅದರಲ್ಲಿ ಕೌಸಲ್ಯ ಮನೆಯಲ್ಲಿ ನೋಡಿದ ಹುಡಗನ ಜೊತೆ ಕುಳಿತು. ಲಲ್ಲೆ ಹೊಡೆಯುತ್ತಿದ್ದಳು ಮನಸ್ಸಿಗೆ ಘಾಸಿಯಾಯಿತು ನಿಜಕ್ಕೂ ಇದು ನನ್ನಾ ಕೌಸಲ್ಯನಾ ಎಂಬ ಸಂದೇಹಗಳು ಬಂದವು. ಸಿಟ್ಟು ಕೂಡ ಮೆದುಳಿನ ತುದಿಗೆ ತಲುಪಿತ್ತು. ವೆಂಕಪ್ಪನ ಬಳಿ ಮೊದಲ‌ ಬಾರಿ ಜಗಳಕ್ಕೆ ಇಳಿದೆ. ನನ್ನ ತಲೆಯಲ್ಲಿ ಆ ವಿಡಿಯೋ ಕಾಲಿನ ಚಿತ್ರಣ ಮಾತ್ರ ಕಾಡುತ್ತಿತ್ತು. ಪರಿಸ್ಥಿತಿ ಮಿತಿಮಿರುತ್ತಿದೆ ಎಂದಾಗ ವೆಂಕಪ್ಪ ಮಾಡಿದ್ದು ತನ್ನ ಸಂವತ್ಸರದ ಸೇಡನ್ನ ತೀರಿಸಿ ಕೊಳ್ಳಲು ನನಗೆ ಎದರಾಗುವ ಬದಲು ನಾನಿರದ ಸಮಯದಲ್ಲಿ ನನ್ನ ಮನಗೆ ನುಗ್ಗಿ ನನ್ನಾ ಶಾಂತಾಳ ಕುಂಕುಮ ಅಳಿಸಿ, ಮುಖದ ತುಂಬಾ ಗಾಯ ಮಾಡಿ ಅವಳನ್ನ ಹಾಳು ಮಾಡಿ ಕೊಂದಿದ್ದ. ಆ ಕೊಲೆಯನ್ನ ನಾನು ಮಾಡಿರುದಾಗಿ ಎಲ್ಲರಿಗೂ ಹಬ್ಬಿಸಿ ಅರೆಸ್ಟ ಕೂಡ ಮಾಡಿಸಿದ್ದ. ನನ್ನ ಬದುಕು ಎನಾಯಿತು ಎನ್ನುವುದರ ಅರಿವೆ ಇಲ್ಲದಂತಾಯಿತು. ನನ್ನ ಶಾಂತಳ ಜೀವನ್ನೇ ನಾನು ಹಾಳು ಮಾಡಿದೆ ಇದಕ್ಕೆಲ್ಲಾ ವೆಂಕಪ್ಪನೆ ಕಾರಣ ಅವನನ್ನ ಸುಮ್ಮನೆ ಬಿಡಬಾರದೆಂದು ಪೋಲಿಸ್ ಸ್ಟೇಷನ್ ನಿಂದ ತಪ್ಪಿಸಿಕೊಂಡು ವೆಂಕಪ್ಪನ ಮನೆಗೆ ಹಿಂಬಾಗಿಲಿನಿಂದ ನುಗ್ಗಿ ಆತನ ಕೊಣೆಯೊಳಗೆ ಕಾದು ಕುಳಿತಿದ್ದೆ. ಊಟ ಮುಗಿಸಿ ಬಂದ ವೆಂಕಪ್ಪ ಅಡಕೆ ಎಲೆ ಹಾಕಿ ಬಾಲ್ಕನಿಯ ಬಳಿ ಬರಲು ನಾನು ಅಲ್ಲೆ ಇದ್ದ ಒಂದು ಕಬ್ಬಿಣ ರಾಡಿನಿಂದ ಜೋರಾಗಿ ಅವನ ತಲೆಗೆ ಒಂದೇ ಕ್ಷಣ ಹೊಡೆಯ ತೊಡಗಿದೆ ರಕ್ತ ತಲೆಯಿಂದ ಚಿಮ್ಮತೊಡಗಿತ್ತು ಅವನು ಕೂಗಿಕೊಳ್ಳಲು ಆಗದಂತೆ ಒಮ್ಮೆ ಹೊಡೆದು ಹಾಕಿದ್ದೆ ಹಾಗು ಅಲ್ಲಿಂದ ಕಾಲು ಕಿತ್ತವನು ಬೆಂಗಳೂರಿಗೆ ಬಂದು ಬಿಕ್ಷುಕನಂತೆ ಜೀವನ ನಡೆಸುತ್ತಿದ್ದೆನೆ ಮೆಡಮ್‌. ನೀವೆ ಹೇಳಿ ಇದರಲ್ಲಿ ನನ್ನದು ಏನು ತಪ್ಪಿದೆ ಎಂದು ಪ್ರಶ್ನಿಸಿದ ಅವನ ಸಂಪೂರ್ಣ ಕಥೆ ಕೇಳಿದ ನನಗೆ ಅವನಿಗೆ ಏನಾದರೂ ಸಹಾಯ ಮಾಡಬೆಕೆಂದೆನಿಸಿತು. ಆತನ್ನ ಪೋಲಿಸರು ಈಗಾಗಲೇ ಹುಡುಕುತ್ತಿದ್ದರು ಆಗ ನನಗೆ ನೆನಪಾದದ್ದು ಮಿತ್ರ ಸುಂದರ್ ರಾಜ್ ಬೀದರಿನ ಎಸ್ಐ ಅವನಿಗೆ ಕಾಲ್ ಮಾಡಿ ನಡೆದ ವಿಷಯನೆಲ್ಲವನ್ನ ಕುಲಕುಂಶವಾಗಿ ವಿವರಿಸಿದೆ ಸುಂದರ್ ಕೂಡ ಒಳ್ಳೆ ಮನಸ್ಸಿನ ವ್ಯಕ್ತಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಸುಳ್ಳವನು. ಅವನಿಗೆ ತಿಳಿಸಿದ ನಂತರ ಅವನು ಸಹಾಯ ಮಾಡುವುದಾಗಿ ತಿಳಿಸಿದ ನಾನು ಇತ್ತ ಅಕ್ಷಯಗೆ ಬೀದರ್ಗೆ ತೆರಳುವಷ್ಟು ಹಣನೀಡಿ ಅವನನ್ನ ಕಳುಹಿಸಿಕೊಟ್ಟೆ.

ಅಕ್ಷಯನ ಬದುಕು ಅವನ ಅಂದು ತೆಗೆದುಕೊಂಡ ಒಂದೇ ದೃಷ್ಟಿಯ ನೋಟದಿಂದ ಇಲ್ಲಿಯವರೆಗೆ ತಂದು ನಿಲ್ಲಿಸಿತ್ತು. ಇನ್ನೊಂದು ವಿಪರ್ಯಾಸವೆಂದರೆ ಎಲ್ಲವೂ ಇನ್ನು ಸರಿಹೋಗ ಬಹುದೆಂದು ಅಕ್ಷಯನನ್ನ ಕಳುಹಿಸಿ ಕೊಟ್ಟ ನನಗೆ ಶಾಕಿಂಗ್ ವಿಷಯ ಕಾದಿತ್ತು. ಸುಂದರರಾಜ್ ಬೇರೆಯಾರು ಅಲ್ಲ ಕೌಸಲ್ಯಳನ್ನ ಮದುವೆಯಾದ ಎಸ್ಐ ಆಗಿದ್ದ. ಅವನೇ ಅಕ್ಷಯನ್ನನ್ನ ಕಳೆದ ಒಂದು ವರ್ಷದಿಂದ ಹುಡುಕುತ್ತಿದ್ದ. ಹಸಿದ ಹುಲಿಯ ಬಾಯಿಗೆ ಮಾಂಸ ಹಾಕಿದ ಹಾಗೆ ಅಕ್ಷಯನನ್ನ ನಾನು ಸುಂದರ್ ಗೆ ಒಪ್ಪಿಸಿಬಿಟ್ಟಿದೆ.

ಹೀಗೊಂದು ಪಾಪ ಪ್ರಜ್ಞೆ ಕಾಡುತ್ತಿದ್ದ ನನಗೆ ರೈಲಿನ ಶಬ್ದ ಕೇಳಿಸಿತು. ಎದ್ದು ನೋಡಿದರೆ ನಾನು ರೈಲಿನಲ್ಲಿ ಊರಿಗೆ ತೆರಳುತ್ತಿದ್ದೆ. ಅರೆ ಹಾಗದರೆ ಇ ಕಥೆಯೆಲ್ಲ ಒಂದು ಕನಸಾ..?? ಖಂಡಿತವಾಗಿಯೂ ಹೌದು ಯಶವಂತಪುರ ತಲುಪುತ್ತಿದಂತೆ ಗಾಢವಾಗಿ ನಿದ್ರೆಗೆ ಜಾರಿದ ನನಗೆ ಎಚ್ಚರವಾದದ್ದೆ ಸಾಗರದ ರೈಲ್ವೆ ನಿಲ್ದಾಣ ಬಂದಾಗ. ಆ ನಿದ್ರೆಯ ಕಲ್ಪೆನೆಯೊಳಗೆ ಈ ತರತಹದ ಕಥೆಯೊಂದು ಮತಿಯ ಒಳಗೆ ಹೊಕ್ಕು ಅಕ್ಷರ ರೂಪದಲ್ಲಿ ರೂಪಗೊಂಡದ್ದು.

ಇದನ್ನು ಓದಿ ..ಕಲ್ಯಾಣ ಮಂಟಪಕ್ಕೆ ಬಂದ, ಧನಸ್ಸು ಮುರಿದ... ವಧುವಿಗೆ ತಾಳಿ ಕಟ್ಟೇಬಿಟ್ಟ : ಆಧುನಿಕ ಸೀತಾ ಸ್ವಯಂವರ ವೈರಲ್‌!