ಮೂರು ವರ್ಷದ ಬಳಿಕ ಬಂದ ಮಾಲೀಕ : ಶ್ವಾನದ ಖುಷಿ ನೋಡಿ: ವೀಡಿಯೋ ವೈರಲ್
ಇಲ್ಲೊಂದು ಶ್ವಾನ ಮೂರು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ತನ್ನ ಪ್ರೀತಿಯ ಮಾಲೀಕ ಮರಳಿ ಬಂದಿದ್ದನ್ನು ನೋಡಿ ಖುಷಿ ತಡೆಯಲಾರದೇ ವರ್ತಿಸಿದ ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪ್ರಪಂಚದ ಅತ್ಯಂತ ನಿಯತ್ತಿನ ಒಂದು ಜೀವಿ ಯಾವುದಾದರೂ ಇದ್ದರೆ ಅದು ಶ್ವಾನ ಮಾತ್ರ. ಶ್ವಾನಗಳ ನಿಯತ್ತಿನ ಬಗ್ಗೆ ಈಗಾಗಲೇ ಹಲವು ನಿದರ್ಶನಗಳು ಆಗಿ ಹೋಗಿವೆ. ಹಲವು ವರ್ಷಗಳ ಮೊದಲೇ ಪ್ರಾಣ ಬಿಟ್ಟ ಮಾಲೀಕನ ಸಾವಿನ ಅರಿವಿಲ್ಲದೇ ಆತನಿಗಾಗಿ ತನ್ನ ಸಾವಿನವರೆಗೂ 9 ವರ್ಷಗಳ ಕಾಲ ಕಾದ ಶ್ವಾನ ಹಚಿಕೋದ ಕತೆ ಬರೀ ಜಪಾನ್ ಮಾತ್ರವಲ್ಲ ಪ್ರಪಂಚದಾದ್ಯಂತ ಹೆಸರುವಾಸಿ. ತನಗೆ ಒಂದು ಹೊತ್ತು ತುತ್ತು ನೀಡಿದವನನ್ನು ಶ್ವಾನಗಳು ಎಂದೂ ಮರೆಯುವುದಿಲ್ಲ, ಅವರನ್ನು ಚಿರಕಾಲ ನೆನಪಿಡುವ ಶ್ವಾನಗಳು ಸದಾ ಜೊತೆಗಿರುವ ಮಾಲೀಕನನ್ನು ಮರೆಯುವುದುಂಟೆ. ಸಾಧ್ಯವೇ ಇಲ್ಲ. ಹೀಗಿರುವಾಗ ಇಲ್ಲೊಂದು ಶ್ವಾನ ಮೂರು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ತನ್ನ ಪ್ರೀತಿಯ ಮಾಲೀಕ ಮರಳಿ ಬಂದಿದ್ದನ್ನು ನೋಡಿ ಖುಷಿ ತಡೆಯಲಾರದೇ ವರ್ತಿಸಿದ ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ವಾನಗಳು ಮನುಷ್ಯರ ಬೆಸ್ಟ್ ಫ್ರೆಂಡ್, ತನ್ನ ಸಾಕಿದವನ ಜೊತೆ ಸದಾಕಾಲ ಇರಲು ಬಯಸುವ ಈ ಶ್ವಾನಗಳು ಮನುಷ್ಯರಿಗಿಂತ ಮೂರು ಪಾಲು ಹೆಚ್ಚು ಭಾವಜೀವಿಗಳು. ತಮ್ಮ ಆತ್ಮೀಯರ ಅಗಲಿಕೆಗೆ ಶ್ವಾನಗಳು ಬಹಳ ಸಂಕಟ ಪಡುತ್ತವೆ. ಸ್ವಲ್ಪ ಕಾಲವೂ ಮನುಷ್ಯರಿಂದ ದೂರ ಇರಲು ಬಯಸದ ಈ ಶ್ವಾನಗಳು ಎರಡು ದಿನ ಮಾಲೀಕ ಎಲ್ಲಾದರೂ ಹೋದರು ಆತ ಮರಳಿ ಬಂದಾಗ ಎಷ್ಟು ವರ್ಷದ ನಂತರ ಸಿಕ್ಕ ಗೆಳೆಯ/ಗೆಳತಿಯನ್ನು ಭೇಟಿಯಾದವರಂತೆ ಖುಷಿ ಪಡುತ್ತವೆ. ಅದೇ ರೀತಿ ಇಲ್ಲಿ ಮಾಲೀಕ ಬರೋಬ್ಬರಿ ಮೂರು ವರ್ಷದ ಕಾಲ ಮನೆ ಬಿಟ್ಟು ಹೋಗಿದ್ದು, ಬಹಳ ಕಾಲದ ನಂತರ ಬಂದ ತನ್ನ ಮಾಲೀಕ ಹಾಗೂ ಗೆಳೆಯನನ್ನು ನೋಡಿ ಖುಷಿಯಿಂದ ಕುಣಿದಾಡಿದೆ ಈ ಜರ್ಮನ್ ಶೆಫರ್ಡ್ ತಳಿಯ ಶ್ವಾನ.
ಮನೆಯತ್ತ ಬಂದ ಚಿರತೆಯನ್ನು ಬೊಗಳಿ ದೂರ ಓಡಿಸಿದ ಶ್ವಾನ: ವೀಡಿಯೋ ವೈರಲ್
@realkingsgive ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಈ ವೀಡಿಯೋವನ್ನು 10 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಈ ವೀಡಿಯೋದಲ್ಲಿ ತನ್ನ ಮಾಲೀಕನನ್ನು ಭೇಟಿಯಾಗಲು ಬಹಳ ಕೌತುಕದಿಂದ ಕಾಯುವ ಶ್ವಾನದ ದೃಶ್ಯವಿದೆ. ಮೆಟ್ಟಿಲ ಮೇಲೆ ಶ್ವಾನವೂ ಕುಳಿತಿದ್ದು, ಈ ವೇಳೆ ಶ್ವಾನದ ಮಾಲೀಕ ಕಾರಿನಲ್ಲಿ ಬಂದಿದ್ದು, ಇದನ್ನು ಮೇಲಿನಿಂದ ನೋಡಿದ ಶ್ವಾನ ಅವಸರ ಅವಸರವಾಗಿ ಕೆಳಗೋಡಿ ಬಂದು ಆತನ ಮೇಲೆ ಜಿಗಿದು ಸುತ್ತ ಸುತ್ತ ಸುತ್ತಲೂ ಆರಂಭಿಸುತ್ತದೆ. ಒಮ್ಮೆ ಕಾರಿನ ಬಳಿ ಹೋಗುವ ಶ್ವಾನ ಮತ್ತೆ ಮಾಲಿನ ಬಳಿ ಬಂದು ಮೇಲೆ ಜಿಗಿಯುತ್ತದೆ. ತನಗೆ ಸುಸ್ತಾಗುವಷ್ಟು ಕಾಲ ಆತ ಮಾಲೀಕನನ್ನು ಅದೇ ಉತ್ಸಾಹದಿಂದ ಶ್ವಾನ ಮುದ್ದಾಡಿದೆ. ಈ ವಿಡಿಯೋ ನೋಡಿದ ಅನೇಕರು ಹೃದಯದ ಇಮೋಜಿಯ ಕಾಮೆಂಟ್ ಮಾಡಿದ್ದಾರೆ.
ಕೆಲವರು ನಾನು ಜಸ್ಟ್ ಹೊರಗೆ ಹೋಗಿ ವಾಪಸ್ ಬಂದರೂ ನನ್ನ ಶ್ವಾನ ಇದೇ ರೀತಿ ವರ್ತಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಶ್ವಾನ ತನ್ನ ಮಾಲೀಕನ ಕರೆತಂದ ಕಾರಿಗೆ ಧನ್ಯವಾದ ಹೇಳುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಆತ ಮಾಲೀಕನ ಜೊತೆ ಆತನ ಕಾರನ್ನು ಕೂಡ ಸ್ವಾಗತಿಸಿದ್ದು, ಇಷ್ಟವಾಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಶ್ವಾನಗಳು ಎಂದೂ ತಮ್ಮ ಮಾಲೀಕರನ್ನು ಮರೆಯುವುದಿಲ್ಲ, ಅವರಿಗೆ ಅವುಗಳು ಸದಾ ನೆನಪಿರುತ್ತವೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
New Study : ನಿಮ್ಮನೆ ನಾಯಿಗೆ ಈ ಬಣ್ಣ ಗೊತ್ತೇ ಆಗಲ್ವಂತೆ!