ಹೀಗೂ ಆಗುತ್ತಾ? ಮೊದಲ ಭೇಟಿಗೆ 2 ವರ್ಷ ಮೊದಲೇ ಪತ್ನಿ ತೆಗೆದ ಸೆಲ್ಫಿಯಲ್ಲಿ ಸೆರೆಯಾಗಿದ್ದ ಪತಿ

ಮಹಿಳೆಯೊಬ್ಬಳಿಗೆ ವ್ಯಕ್ತಿಯೋರ್ವ ತನ್ನ ಸಂಗಾತಿಯಾಗಿ ಸಿಗುವ ಮೊದಲೇ ಸೆಲ್ಪಿಯೊಂದರಲ್ಲಿ ಅಪರಿಚಿತ ವ್ಯಕ್ತಿಯಾಗಿ ಆತ ಆಕೆಯ ಫೋನ್‌ನಲ್ಲಿ ಸೆರೆಯಾಗಿದ್ದ. ಈ ವಿಚಾರವನ್ನು ಆಕೆ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗಿದೆ

The husband was caught in a selfie taken by his wife 2 years before their first meeting akb

ಮದುವೆಗಳು ಸ್ವರ್ಗದಲ್ಲಿ ನಿಗದಿಯಾಗುತ್ತವೆ ಎಂಬ ಮಾತಿದೆ. ಅದೇ ರೀತಿ ಎಲ್ಲೋ ಹುಟ್ಟಿ ಬೆಳೆದ ಹೆಣ್ಣೊಬ್ಬಳಿಗೆ ಇನ್ನೆಲ್ಲೋ ಹುಟ್ಟಿ ಬೆಳೆದ ಗಂಡು ಜೋಡಿಯಾಗುತ್ತಾನೆ. 
ಕೆಲವೊಂದು ಸಂಬಂಧಗಳು ಹೇಗೆ ಕೂಡಿ ಬರುತ್ತೆ ಅಂತ ಹೇಳಲಾಗದು. ಬಡವ ಶ್ರೀಮಂತ ದೇಶ ಭಾಷೆ ಗಡಿಗಳ ಹಂಗಿಲ್ಲದೇ ಕೆಲವು ಸಂಬಂಧಗಳು ಕೂಡಿ ಬರುತ್ತವೆ. ಅದೇ ರೀತಿ ಈಗ ಮಲೇಷಿಯಾದ ಮಹಿಳೆಯೊಬ್ಬಳಿಗೆ ತನ್ನ ಸಂಗಾತಿಯಾಗಿ ಸಿಗುವ ಮೊದಲೇ ಸೆಲ್ಪಿಯೊಂದರಲ್ಲಿ ಅಪರಿಚಿತ ವ್ಯಕ್ತಿಯಾಗಿ ಆಕೆಯ ಸಂಗಾತಿ ಆಕೆಯ ಫೋನ್‌ನಲ್ಲಿ ಸೆರೆಯಾಗಿದ್ದ ಈ ವಿಚಾರವನ್ನು ಆಕೆ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗಿದೆ. 

ಮಲೇಷ್ಯಾ ಮೂಲದ ಕಂಟೆಂಟ್ ಕ್ರಿಯೇಟರ್  ಜೆನ್ ಚಿಯಾ ತನ್ನ ಪತಿ ಜಾನ್ ಲಿಡ್ಡೆಲ್ ಅವರನ್ನು ಮೊದಲು ಭೇಟಿಯಾಗಿದ್ದು, 2014ರಲ್ಲಿ ಆದರೆ ಈ ಭೇಟಿಗೂ ಎರಡು ವರ್ಷಗಳ ಮೊದಲು ಆಕೆ ತೆಗೆದ ಸೆಲ್ಫಿಯೊಂದರಲ್ಲಿ ಆತ ಸೆರೆ ಆಗಿದ್ದ. 2012ರ ಅಕ್ಟೋಬರ್‌ನಲ್ಲಿ  ಥಿಯೇಟರ್ ಕೆಫೆ ಪತಿ ಜಾನ್ ಲಿಡ್ಡೆಲ್ ಕ್ಯೂನಲ್ಲಿ ಕಾಯುತ್ತಿರುವಾಗ ಜೆನ್ ಚಿಯಾ ತೆಗೆದ ಸೆಲ್ಫಿ ಅದಾಗಿತ್ತು. ಹೀಗೆ ಕ್ಯೂನಲ್ಲಿ ಕಾಯುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಪತಿಯಾಗಿ ಬರಬಹುದು ಎಂಬುದನ್ನು ಆಕೆ ಊಹೆಯೂ ಮಾಡಿರಲಿಲ್ಲ, ಆದರೆ 2014ರಲ್ಲಿ ಇವರ ಮೊದಲ ಭೇಟಿಯೂ ಆಯ್ತು ನಂತರ ಮದುವೆಯೂ ಆಯ್ತು. ಇದೀಗ ಗ್ಯಾಲರಿಯಲ್ಲಿ ತಾನು ತೆಗೆದ ಹಳೆಯ ಸೆಲ್ಫಿಯಲ್ಲಿ ಗಂಡನ ಕಂಡು ಆಕೆ ಶಾಕ್ ಆಗಿದ್ದಾಳೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಜೆನ್ ಚಿಯಾ ತನ್ನ ಪತಿ ಜಾನ್ ಲಿಡ್ಡೆಲ್ ಅನ್ನು2014ರಲ್ಲಿ ಮೊದಲು ಭೇಟಿಯಾಗಿದ್ದರು. ಆದರೆ ಈ ಭೇಟಿಗೂ 2 ವರ್ಷ ಮೊದಲೇ ಇಬ್ಬರು ಫೋಟೋವೊಂದರ ಮೂಲಕ ಒಂದಾಗಿದ್ದರು.

ಇನ್ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು 'ನಾವು ಸರಿಯಾದ ಸಮಯಕ್ಕೆ ಭೇಟಿಯಾದೆವು.  ಮೊದಲೇ ಆಗಿದ್ದಿದ್ದರೆ, ಈ ಸಂಬಂಧವು ಉಳಿಯುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ತುಂಬಾ ಸ್ವಪ್ರೇಮಿಯಾಗಿದೆ. ನನ್ನದೇ ನಡೆಯಬೇಕೆಂಬ ಛಲವಿತ್ತು. ನನಗೆ ಸಂಬಂಧದ ಬಗ್ಗೆ ಹೆಚ್ಚಿನ ಅರಿವಿರಲಿಲ್ಲ, ಆದರೆ . ನನ್ನ ಸ್ವಂತ ತಪ್ಪುಗಳನ್ನು ಅರಿತುಕೊಳ್ಳಲು ನನಗೆ ಒಂದು ವರ್ಷ ತೆಗೆದುಕೊಂಡಿತು. ನಂತರ ನಾವು ಭೇಟಿಯಾದೆವು. ಸರಿಯಾದ ವ್ಯಕ್ತಿ ಯಾವಾಗಲೂ ಸರಿಯಾದ ಸಮಯದಲ್ಲಿ ನಿಮಗೆ ಸಿಗುತ್ತಾರೆ ಎಂದು 32 ವರ್ಷದ ಜೆನ್ ಚಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ ಜೊತೆಗೆ ತಮ್ಮ ಭೇಟಿಗೂ ಮೊದಲು ತೆಗೆದ ಸೆಲ್ಫಿಯಲ್ಲಿ ಆತ ಸೆರೆಯಾಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ನಾವು ಒಂದೇ ಸ್ಥಳದಲ್ಲಿದ್ದೆವು ಆದರೆ ಪರಸ್ಪರರಿಗೆ ನಾವು ಇದ್ದೇವೆ ಎಂಬುದೇ ತಿಳಿದಿರಲಿಲ್ಲ ಎಂದು ವೀಡಿಯೊದಲ್ಲಿ ಅವರು ಬರೆದಿದ್ದಾರೆ. 

ಆದರೆ ವಿಚಿತ್ರ ಎನಿಸುವ ಈ ಕಾಕಾತಾಳೀಯ ವಿಚಾರವನ್ನು ಕೇಳಿ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ವಿಧಿ ಲಿಖಿತ ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಅವರು ನಿಮ್ಮಂತೆಯೇ ಅದೇ ಫೋಟೋದಲ್ಲಿದ್ದಾರೆ ಎಂದು ನಿಮಗೆ ಯಾವಾಗ ತಿಳಿಯಿತು ಎಂದು ಪ್ರಶ್ನಿಸಿದ್ದಾರೆ. ಇದೊಂದು ಮಾಂತ್ರಿಕತೆಯಂತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.  ಇದೊಂದು ಚೆಂದದ ಲವ್‌ ಸ್ಟೋರಿ ಎಂದು ಕಾಮೆಂಟ್ ಮಾಡಿದ್ದಾರೆ ಬಹುಶಃ ಇದು ಜೀವನದ ಗುರಿ ಆಗಿದ್ದಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರು ಇನ್‌ವಿಸಿಬಲ್ ಸ್ಟ್ರಿಂಗ್  ಥಿಯರಿಗೆ (ಅಂದರೆ ಅದೃಶ್ಯ ಸ್ಟ್ರಿಂಗ್ ಸಿದ್ಧಾಂತ ಅಥವಾ ಇನ್‌ವಿಸಿಬಲ್ ಸ್ಟ್ರಿಂಗ್  ಥಿಯರಿ ಪ್ರಕಾರ ಬ್ರಹ್ಮಾಂಡವು ಕಾಣದ ಎಳೆಗಳಿಂದ ಒಟ್ಟಿಗೆ ಸೇರಿಸಲ್ಪಟ್ಟಿದೆ ಎಂಬ ಕಲ್ಪನೆಯಾಗಿದೆ, ಇವೆಲ್ಲವೂ ನಮ್ಮನ್ನು ನಮ್ಮ ಹಣೆಬರಹಕ್ಕೆ ಕರೆದೊಯ್ಯುತ್ತವೆ ಎಂಬ ನಂಬಿಕೆ ) ಒಂದು ಉತ್ತಮ ಉದಾಹರಣೆ ಎಂದಿದ್ದಾರೆ. ಈಕೆಯ ಪೋಸ್ಟ್‌ಗೆ ಪತಿಯೂ ಪ್ರತಿಕ್ರಿಯಿಸಿದ್ದು, ನೀನು ಆ ಮೊದಲ ಫೋಟೋದಲ್ಲಿರುವ ಸಮಯದಲ್ಲಿ ನನ್ನನ್ನು ಭೇಟಿಯಾಗದೇ ಇರುವುದು ನನ್ನ ಅದೃಷ್ಟ ಕೆಲವು ವರ್ಷದ ಏಕಾಂಗಿ ಪ್ರಯಾಣದ ನಂತರ ನಾವು ಒಳ್ಳೆ ಸಮಯದಲ್ಲಿ ಮತ್ತೆ ಜೊತೆಯಾಗಿದ್ದೇವೆ ಎಂದು ಅವರು ಕಾಮೆಂಟ್ ಮಾಡಿದ್ದಾರೆ. 

ಎಂಥಾ ವಿಚಿತ್ರ ಅಲ್ವಾ ಈ ಸಂದರ್ಭದಲ್ಲಿ ನಾವು ಪ್ರಿಯಾಂಕಾ ಹಾಗೂ ನಿಕ್ ಜೋನಾಸ್ ಅವರ ಸಂಬಂಧವನ್ನು ನೆನೆಯಬಹುದು, ನಿಕ್ ಜೋನಾಸ್ ವಿವಾಹವಾಗುವ 7 ವರ್ಷಗಳ ಮೊದಲೇ ಸಂದರ್ಶನವೊಂದರಲ್ಲಿ ಟ್ಯಾರೋ ಕಾರ್ಡ್ ರೀಡ್ ಮಾಡಿದಾಗ ಅದರಲ್ಲಿ ಪ್ರಿಯಾಂಕಾಗೆ ನಿಕ್ ಜೋನಾಸ್ ಫೋಟೋವೇ ಸಿಕ್ಕಿತ್ತು. ಖ್ಯಾತ ಸಂದರ್ಶನಕಾರ್ತಿ ಸಿಮಿ ಗೆರೇವಾಲ್ ನಡೆಸಿಕೊಡುವ ಶೋದ ಈ ತುಣುಕು ಪ್ರಿಯಾಂಕಾ ನಿಕ್ ಜೋನಾಸ್ ವಿವಾಹದ ನಂತರ ವೈರಲ್ ಆಗಿತ್ತು. ಟ್ಯಾರೋ ಕಾರ್ಡ್ ರೀಡರ್ ಮನೀಶಾ ಕತ್ವಾನಿ ಈ ಕಾರ್ಡ ರೀಡ್ ಮಾಡಿದ್ದರು.

 

 

Latest Videos
Follow Us:
Download App:
  • android
  • ios