ಪ್ರಿಯ ಹುಡುಗೀ

ನೀನು ಕಂಡಂತೆ ಇಲ್ಲ. ಕಾಣದಂತೆಯೂ ಇಲ್ಲ. ನನಗೆ ಸಿಕ್ಕಷ್ಟುಸಿಕ್ಕಿದ್ದೀಯೆ. ಮತ್ತಷ್ಟುಮಿಕ್ಕಿದ್ದೀಯೆ. ನಾನು ನಿನ್ನನ್ನು ದೂರುವುದಿಲ್ಲ.

ನೀನು ನಿನ್ನ ಗಂಡನ ಮುಂದೆ ಕುಳಿತುಕೊಂಡು ನಿನ್ನ ಅಹಂಕಾರ, ಪ್ರತಿಷ್ಠೆ, ಮನೆತನದ ಮರ್ಯಾದೆಯೆಲ್ಲ ಹಾಳಾಗಿಹೋಗಲಿ, ನಾನೂ ಒಂದು ಜೀವ, ನನಗೂ ಏನೋ ಒಂದು ಅನ್ನಿಸುತ್ತಿರುತ್ತದೆ. ಅವನ್ನೆಲ್ಲ ಕತ್ತುಹಿಸುಕಿ ಸಾಯಿಸಬೇಡ ಎಂದು ಹೇಳಿದ್ದನ್ನು ನೋಡಿದಾಗ ಸಂತೋಷವಾಯಿತು. ನನಗೂ ನಿನ್ನ ಹಾಗೆ ಮಾತಾಡುವ ಗೆಳತಿ ಇರಬೇಕು ಅನ್ನಿಸಿತು. ನನ್ನಿಷ್ಟದ ಹಾಗೆ ಬದುಕುವ ಸಂಗಾತಿಗಿಂತ ತನ್ನಿಷ್ಟದ ಹಾಗೆಯೇ ಇರಬಲ್ಲವಳು ಜೊತೆಗಿದ್ದರೂ ಚೆಂದ, ಇರದಿದ್ದರೂ ಚೆಂದ. ಅಂಥವಳಿರುವುದೇ ಆನಂದ.

ನಿನ್ನನ್ನು ಇಡೀ ಜಗತ್ತೇ ಆರಾಧಿಸಿತು. ಕೊಂಡಾಡಿತು. ನಿನ್ನ ಕುಡಿನೋಟಕ್ಕೆ ಹರೆಯದ ಹುಡುಗರು ಕಾದು ಕನವರಿಸಿದರು. ಹುಡುಗಿಯರು ನಿನ್ನಂತಾಗಲು ಹವಣಿಸಿದರು. ನಿನ್ನ ಹಾಗೆ ತಲೆಬಾಚಿಕೊಂಡರು, ತೆಳುತುಟಿಗಳಲ್ಲಿ ಮುಗುಳ್ನಕ್ಕರು. ಭುಜ ಅಗಲಿಸಿ ನಡೆದು, ನಿನ್ನೊಳಗಿನ ಗಂಡಸುತನವ ನಕಲು ಮಾಡಲು ನೋಡಿದರು. ಅವರ್ಯಾರಿಗೂ ನೀನು ಸಿಗಲಿಲ್ಲ. ನಿನ್ನ ಉಸಿರಿನ ಘಮ, ನಿನ್ನ ಬೆವರ ಗಂಧ, ನಿನ್ನ ತೇಲುಗಣ್ಣಿನ ಮತ್ತು, ನಿನ್ನ ನಡಿಗೆಯ ಗತ್ತು, ನಿನ್ನ ಪಾದಗಳ ಉನ್ಮತ್ತ ಧಿಮಾಕುಗಳೆಲ್ಲ ಈ ಜಗತ್ತಿನಲ್ಲಿ ಮೊದಲು ಇರಲಿಲ್ಲ, ನೀನು ಹೋದ ನಂತರ ಇರುವುದಿಲ್ಲ.

ಆದರೆ ನೀನು ಇದ್ದಕ್ಕಿದ್ದಂತೆ ಮೌನಕ್ಕೆ ಸಂದೆ. ಮೆರೆಯುವ ವಯಸ್ಸಿನಲ್ಲಿ ಮರೆಗೆ ಸರಿದೆ. ಯಾರ ತುಟಿಯಲ್ಲಿ ನಿರಂತರವಾದ ಮಂದಹಾಸ ಇರುತ್ತದೆಯೋ ಅವರು ತಮ್ಮ ಅಂತರಾಳದಲ್ಲಿ ಬೆಚ್ಚಿಬೀಳಿಸುವಂಥ ಕಠೋರತೆಯನ್ನು ಬಚ್ಚಿಟ್ಟುಕೊಂಡಿರುತ್ತಾರೆ ಅಂತ ನಿನಗೆ ಅರ್ಥವಾಗಿಬಿಟ್ಟಿತ್ತು. ಹಾಗಾಗಿಯೇ ನೀನು ಮುಗುಳುನಗಲು ಅಂಜುತ್ತಿದ್ದೆ.

ಡಸ್ಟ್ ಬಿನ್‌ನಲ್ಲಿ ಸಿಕ್ಕ ಆ ಹಾಳೆಯಲ್ಲಿ ಒಂದು ಪ್ರೀತಿ ಕತೆ ಇತ್ತು! 

ನೀನು ಒಂಟಿಯಾಗಿರಲು ಬಯಸುತ್ತಿ ಅಂತಲೇ ಎಲ್ಲರೂ ಅಂದುಕೊಂಡರು. ಆಗ ನೀನು ಒಂದೇ ಒಂದು ಮಾತಾಡಿದೆ. ನಾನು ಒಂಟಿಯಾಗಿರಬೇಕು ಅಂತ ಯಾವತ್ತೂ ಹೇಳಿಲ್ಲ, ನನ್ನನ್ನು ಏಕಾಕಿಯಾಗಿರಲಿ ಬಿಡಿ ಅಂತ ಹೇಳಿದೆ. ಎರಡಕ್ಕೂ ದೊಡ್ಡ ವ್ಯತ್ಯಾಸ ಇದೆ ಅಂತ ನೀನು ಹೇಳುವ ತನಕ ನಮಗೂ ಅವರೆಡರ ನಡುವಿನ ವ್ಯತ್ಯಾಸ ಗೊತ್ತೇ ಇರಲಿಲ್ಲ.

ನೀನೆಷ್ಟುಸಂಕೋಚದ ಹುಡುಗಿಯೇ. ಏನಂದೆ ನೀನು? ಯಾರೂ ನನ್ನನ್ನು ಕಾಡದಿರಲಿ ಅಂತ ಹಿಂಬಾಗಿಲಿನಿಂದಲೋ ಗುಪ್ತವಾದ ದಾರಿಗಳಿಂದಲೋ ಯಾರಿಗೂ ಗೊತ್ತಿಲ್ಲದ ಓಣಿಗಳಿಂದಲೋ ಹೋಗಿಬರುತ್ತಿದ್ದೆ ಅಂತ ತಾನೇ? ನಿನಗೇಕೆ ಜನರನ್ನು ಕಂಡರೆ ಹಾಗನ್ನಿಸುತ್ತಿತ್ತೋ ಗೊತ್ತಿಲ್ಲ. ವೇದಿಕೆ ಏರುವುದೆಂದರೆ ನಿನಗೆ ಯಾಕೆ ಅಷ್ಟೊಂದು ಸಂಕೋಚವೋ ಕಾಣೆ. ಎಲ್ಲರೆದುರು ವೇದಿಕೆ ಹತ್ತಬೇಕಲ್ಲ ಅನ್ನುವ ಕಾರಣಕ್ಕೇ ನೀನು ಮದುವೆಯಾಗಲಿಲ್ಲ ಅಂತ ಎಲ್ಲರೂ ನಂಬಿದರು. ಕೆಲವರು ಮದುವೆ ಆಗ್ತಾರೆ, ಕೆಲವರು ಆಗಲ್ಲ. ಅದರಲ್ಲೇನಿದೆ ಅಂತ ನೀನು ಯಾರಿಗೋ ಹೇಳಿದೆಯಂತೆ. ನನ್ನನ್ನು ನಡೆಸೋದೂ ಕಷ್ಟ, ಹಿಂಬಾಲಿಸೋದೂ ಕಷ್ಟಅಂದೆಯಂತೆ. ಆದರೆ ಅದಕ್ಕೆ ನೀನು ಯಾರಿಗೂ ಅವಕಾಶವೇ ಕೊಡಲಿಲ್ಲ.

ಅಷ್ಟಾಗಿಯೂ ನೀನು ನಮ್ಮೆಲ್ಲರ ಎದೆಬಡಿತ ಹೆಚ್ಚಿಸುವ ಮಾತಾಡಿದ್ದೆ. ಒಬ್ಬ ಒಳ್ಳೆಯ ಗೆಳೆಯನನ್ನು ಸಂಗಾತಿಯಾಗಿ ಪಡೆಯಲು ಮದುವೆಯೇ ಯಾಕಾಗಬೇಕು ಅಂತ ಕೇಳಿದೆ. ಎಲ್ಲರೂ ನಿನ್ನ ಚೆಲುವಿಗೆ ಮಾರುಹೋಗಿದ್ದರೆಂದು ನಿನಗೆ ಗೊತ್ತಿತ್ತು. ಅದನ್ನೂ ನೀನು ಧಿಕ್ಕರಿಸಿದೆ. ಚೆಂದದ ಬಟ್ಟೆಹಾಕಿಕೊಂಡು ಗಂಡಸರನ್ನು ಕೆರಳಿಸುವುದಕ್ಕಲ್ಲ ನಾನು ಹುಟ್ಟಿರೋದು ಅಂತ ಹೇಳಿ ನಿನ್ನ ದೇಹದ ಮೋಹವನ್ನು ನೀನೇ ಮೀರಿಬಿಟ್ಟೆ. ಯಾರು ನಿನ್ನಿಂದ ಏನು ಬಯಸುತ್ತಾರೆ ಅಂತ ನಿನಗೆ ಎಷ್ಟುಚೆನ್ನಾಗಿ ಗೊತ್ತಿತ್ತೇ ಹುಡುಗಿ!

ನಿನಗೆ ಮಹಾನಗರಗಳ ಮೇಲೆ ಸಿಟ್ಟಿತ್ತು. ಅಮೆರಿಕಾದ ಮೇಲೆ ಸಿಟ್ಟಿತ್ತು. ಇಂಥ ಊರುಗಳಲ್ಲಿ ಆಯಸ್ಸು ಹೇಗೆ ಕಳೆಯುತ್ತದೆ ಅಂತಲೇ ಗೊತ್ತಾಗುವುದಿಲ್ಲ ಅಂತ ನೀನು ಅದೆಷ್ಟುಬೇಸರದಿಂದ ಹೇಳಿದ್ದೆ. ನಮ್ಮ ಅತ್ಯುತ್ತಮ ವರ್ಷಗಳು ಅಮೆರಿಕಾದಂಥ ನಾಜೂಕಿಲ್ಲದ ದೇಶದಲ್ಲಿ ಕಣ್ಮರೆಯಾಗಿ ಹೋಗುತ್ತಿವೆ ಅಂದಿದ್ದೆ.

ನೀನೂ ಯಾರನ್ನೂ ನೋಡುತ್ತಿರಲಿಲ್ಲ, ಅಭಿಮಾನಿಗಳನ್ನೂ ದೂರ ಇಟ್ಟಿದ್ದೆ, ಟೀವಿ, ರೇಡಿಯೋ, ಪೇಪರುಗಳತ್ತಲೂ ಕಣ್ಣಾಡಿಸುತ್ತಿರಲಿಲ್ಲ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಎಂಥ ಚೆಂದದ ಹುಡುಗಿ, ಎಷ್ಟುಖ್ಯಾತಿವಂತೆ, ಅದೆಷ್ಟುಶ್ರೀಮಂತೆ, ಪಾಪ, ಆದರೂ ಏಕಾಕಿ ಅಂತ ಬೇಜಾರು ಮಾಡಿಕೊಳ್ಳುತ್ತಿದ್ದರು. ಈಫ್‌ ಯೂ ಆರ್‌ ಬ್ಲೆಸ್ಡ್‌, ಯೂ ಆರ್‌ ಬ್ಲೆಸ್ಡ್‌, ವೆದರ್‌ ಯೂ ಆರ್‌ ಮ್ಯಾರೀಡ್‌ ಆರ್‌ ಸಿಂಗಲ್‌ ಅಂತ ನೀನು ಬಿಡುಬೀಸಾಗಿ ಅಂದುಬಿಟ್ಟೆ.

ನೀನು ನನ್ನ ವಿನಾಕಾರಣ ಬ್ಲಾಕ್ ಮಾಡಬಾರದಿತ್ತು ಹುಡುಗೀ! 

ನಿನಗೆ ಮಾತಾಡಬೇಕು ಅಂತಲೇ ಅನ್ನಿಸಲಿಲ್ಲವಲ್ಲ ಅಂತ ಎಲ್ಲರಿಗೂ ಅಚ್ಚರಿ. ಮಾತಾಡಿ ಏನುಪಯೋಗ ಅಂತ ನೀನಂದೆ. ಇನ್ನೊಬ್ಬರಿಗೆ ಯಾವತ್ತೂ ಹೇಳಲಿಕ್ಕಾಗದ ಸಂಗತಿಗಳು ನೂರೆಂಟಿರುತ್ತವೆ. ಅದು ನನ್ನ ಖಾಸಗಿ ಸಂತೋಷ ಮತ್ತು ಸಂಕಟ, ಅದೇ ನಾನು. ನಾನದನ್ನು ಯಾರೊಂದಿಗೂ ಹಂಚಿಕೊಳ್ಳಲಾರೆ. ಯಾರಿಗಾದರೂ ಅವನ್ನೆಲ್ಲ ಹೇಳಿದರೆ ನಮ್ಮನ್ನು ನಾವು ಅಗ್ಗವಾಗಿಸಿಕೊಂಡಂತೆ, ನಮ್ಮೊಳಗನ್ನು ಚೀಪ್‌ ಮಾಡಿಕೊಂಡಂತೆ ಅಂತ ನೀನು ಸ್ಪಷ್ಟವಾಗಿಯೇ ಹೇಳಿದೆ. ನಿನ್ನೊಳಗು ನಿನ್ನಲ್ಲೇ ಉಳಿಯಿತು, ಇನ್ನ ಇರುಳುಗಳ ಹಾಗೆ.

ಎಷ್ಟೋ ಗಂಡಸರು ನಿನ್ನ ಬೆನ್ನಿಗೆ ಬಿದ್ದರು. ನೀನು ಒಂದರ ಹಿಂದೊಂದರಂತೆ ಸೇದಿದ ಸಿಗರೇಟಿನ ತುಂಡುಗಳಂತೆ ಎಲ್ಲರ ನೋಟವನ್ನೂ ಮೂಲೆಗೆಸೆದೆ. ನಾನೊಬ್ಬ ನಿಷ್ೊ್ರಯೋಜಕ ಹುಡುಗಿ. ನನಗೋಸ್ಕರ ಯಾವ ಗಂಡಸೂ ತನ್ನ ಜೀವವನ್ನು ಬಲಿಕೊಡುವ ಮೂರ್ಖತನ ಮಾಡಬಾರದು ಅಂತ ಹೇಳಿಬಿಟ್ಟೆ. ಪ್ರೀತಿಸಿದ ತಕ್ಷಣ ಅದು ಹೇಗೆ ತಾನೇ ಇಡೀ ಬದುಕೇ ಬದಲಾಗಿಬಿಡುತ್ತದೆ, ಅದು ಹೇಗೆ ಹೊಸ ಜೀವನ ಸಿಕ್ಕಿಬಿಡುತ್ತದೆ. ಕಣ್ಮುಚ್ಚಿ ತೆಗೆಯುವುದರೊಳಗೆ ಎಲ್ಲ ಬದಲಾಗುತ್ತದೆ ಅಂತ ಯಾಕೆ ಸುಳ್ಳು ಹೇಳುತ್ತೀರಿ ಅಂತ ಕೇಳಿದ ನಿನ್ನನ್ನು ನಾವೆಲ್ಲ ಪ್ರೀತಿಯಿಂದಲೇ ನೋಡಿದೆವು. ನಾನು ಕಟ್ಟಿಕೊಳ್ಳುವಂಥ ಗಂಡು ಇನ್ನೂ ಸಿಕ್ಕಿಲ್ಲ ಅಂದವಳೂ ನೀನೇ.

ನಿನ್ನ ಯೌವನ ವ್ಯರ್ಥವಾಗುತ್ತಿದೆ ಅಂತ ನಿನ್ನನ್ನು ಗಾಢವಾಗಿ ಪ್ರೀತಿಸುತ್ತಿದ್ದ ನಮಗೆಲ್ಲ ಅನ್ನಿಸುತ್ತಿತ್ತು. ಆದರೆ ನೀನು ಒಂದೇ ಮಾತು ಹೇಳಿದೆ: ನಾನು ವ್ಯರ್ಥಮಾಡಿಕೊಂಡ ದಿನಗಳೇ, ನನ್ನ ಜೀವನದ ಅತ್ಯುತ್ತಮ ಕ್ಷಣಗಳು. ನಮಗದು ಕ್ರಮೇಣ ಅರ್ಥವಾಯಿತು.

ಅಷ್ಟುಹೊತ್ತಿಗಾಗಲೇ ನೀನು ಸಮುದ್ರವನ್ನು ಪ್ರೀತಿಸಲು ಆರಂಭಿಸಿದ್ದೆ. ನನಗೆ ಸಾಗರವೆಂದರೆ ಇಷ್ಟ. ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ತನಗೆ ಯಾವತ್ತೂ ದೊರಕದ್ದಕ್ಕೆ ಹಂಬಲಿಸುತ್ತಾ, ನಿಟ್ಟುಸಿರಿಡುತ್ತಾ ಇರುವ ಸಮುದ್ರದಂತೆಯೇ ನಾನು ಅಂದೆ.

ನಿನ್ನ ಮಾತನ್ನಂತೂ ನಾವು ಪ್ರೀತಿಸದೇ ಇರಲಾರೆವು. ಎಲ್ಲರಿಗೂ ಇರುವುದು ಒಂದೇ ಜನ್ಮ, ನಾವು ಪ್ರಾಮಾಣಿಕವಾಗಿದ್ದರೆ ಒಂದು ಜನ್ಮ ಸಾಕು ಅಂದೆ. ನನ್ನ ಹಿಂದೆ ಬೀಳಬೇಡಿ. ನಾನು ಪ್ರೀತಿಗೆ ಅರ್ಹಳಲ್ಲ. ಸದಾ ನಾನು ಸಂಕಟದಲ್ಲೋ, ಒದ್ದಾಟದಲ್ಲೋ, ಕಾಯಿಲೆ ಬಿದ್ದೋ, ವಿಚಿತ್ರ ಉಲ್ಲಾಸದಲ್ಲೋ ಇರುವವಳು.

ಆದರೂ ನೀನು ಯಾರನ್ನೋ ಪ್ರೀತಿಸುತ್ತಿದ್ದೆ ಅಂತ ನಮಗೆ ಗುಮಾನಿ. ಒಮ್ಮೆ ನೀನೇ ಅಂದಿದ್ದೆ, ನೆನಪಿದೆಯಾ? ಬಹುಶಃ ನಿನ್ನ ಹೃದಯದಲ್ಲಿ ವಾಸ ಮಾಡುವುದೇ ಒಳ್ಳೆಯದು. ಯಾಕೆಂದರೆ ಅದು ಜಗತ್ತಿಗೆ ಕಾಣುವುದಿಲ್ಲ, ನಮ್ಮ ಪ್ರೇಮದ ಮೇಲೆ ಯಾವ ರಾಡಿಯೂ ರಾಚುವುದಿಲ್ಲ.

ಇವತ್ತು ನೀನಿಲ್ಲ. ನಿನ್ನನ್ನು ನಖಶಿಖಾಂತ ಪ್ರೀತಿಸಿದವರ ನಿಟ್ಟುಸಿರು, ನಿನಗಾಗಿ ಹಂಬಲಿಸಿದವರ ದೀನ ಕಣ್ಣೋಟ, ನಿನಗಾಗಿ ಕಾದವರ ದುರ್ಬರ ಯೌವನ, ನಿನ್ನನ್ನು ಬಯಸಿದವರ ವಿಹ್ವಲ ಏಕಾಂತ ಮಾತ್ರ ಹಾಗೆಯೇ ಉಳಿದಿದೆ.

ಕೈ ಚಾಚಿದರೆ ನನ್ನದಾಗುತ್ತದೆ ಅಂತ ಗೊತ್ತಿದ್ದರೂ ಕೈ ಚಾಚದೇ ಅದಕ್ಕಾಗಿ ಹಂಬಲಿಸುತ್ತಾ ಇರುವುದರಲ್ಲಿ ಎಂಥ ಸುಖವಿದೆ ಗೊತ್ತೇ ಅಂತ ನೀನು ಕೇಳಿದ್ದೆ. ಪ್ರೇಮವನ್ನು ಅಮರವಾಗಿಸುವ ಉಪಾಯ ಅದು ಅಂತ ಈಗೀಗ ಅನ್ನಿಸುತ್ತಿದೆ.

ನಿನ್ನ ಮಧುರ ಸ್ಮೃತಿ ಪ್ರೇಮವನ್ನು ಪ್ರತಿಕ್ಷಣವೂ ಅರಳಿಸುತ್ತದೆ. ನಾವು ಹಂಬಲಿಸುತ್ತಾ ಇದ್ದುಬಿಡುತ್ತೇವೆ.

- ನಿನ್ನ ಚಿರವಿರಹಿ