ನೀಲೂ,

ಸಣ್ಣ ವಿಷಾದದಲ್ಲಿ ಈ ಲೆಟರ್ ಬರೀತಿದ್ದೇನೆ. ಮೊನ್ನೆ ಗೆಳೆಯನೊಬ್ಬನ ಪಾರ್ಟಿಯಲ್ಲಿ ನೀನು ಅಚಾನಕ್ ಎದುರಾದೆ. ಯಾರ ಜೊತೆಗೀ ನಗು ನಗುತ್ತ ಮಾತಾಡುತ್ತಿದ್ದ ನೀನು ನನ್ನನ್ನು ಕಂಡ ಕೂಡಲೇ ತಬ್ಬಿಬ್ಬಾದೆ. ನಿನ್ನ ಮುಖದ ನಗು ಮರೆಯಾಯ್ತು. ನಿನ್ನ ಟೆನ್ಶನ್ ನನ್ನ ಗಮನಕ್ಕೆ ಬಂತು. ನಿನಗೆ ಬೇಡವಾಗಿದ್ದವನು ನಾನು ಮತ್ಯಾಕೆ ನಿನ್ನ ಮುಂದೆ ಬರಲಿ ಹೇಳು, ನೋಡಿಯೂ ನೋಡದವನ ಹಾಗೆ ಇದ್ದೆ. ಎಷ್ಟೋ ವರ್ಷಗಳ ನಂತರ ಸಿಕ್ಕ ಗೆಳೆಯರನ್ನು ಮಾತನಾಡಿಸಲು ಉತ್ಸಾಹವೇ ಇರಲಿಲ್ಲ ನನಗೆ. ಪಾರ್ಟಿಯಲ್ಲಿ ಹೆಚ್ಚು ಹೊತ್ತು ಕೂರಲೂ ಆಗಲಿಲ್ಲ. ಹೊರಬಂದೆ. ನೀನೂ ಅದೇ ಸ್ಥಿತಿಯಲ್ಲಿದ್ದದ್ದು ಗೊತ್ತಾಯ್ತು. ಗೆಳೆಯನ ಬಳಿ ನಿನ್ನ ಅಡ್ರೆಸ್ ತಗೊಂಡು ಈ ಪತ್ರ ಬರೀತಿದ್ದೀನಿ. ಯಾಕಂದರೆ ಕಳೆದ ಒಂದು ವರ್ಷದಿಂದ ನಿನಗೆ ಕಾಲ್ ಮಾಡಲಾಗುತ್ತಿಲ್ಲ. ನನ್ನ ಯಾವ ಕರೆಗಳೂ ನಿನ್ನ ರೀಚ್ ಆಗಲ್ಲ. ಮೆಸೇಜ್ ಮಾಡಿದರೆ ಒಂದೇ ಟಿಕ್ ಮಾರ್ಕ್. ಎಫ್ ಬಿ ಯಲ್ಲೂ ಅನ್ ಫ್ರೆಂಡ್, ಬ್ಲಾಕ್. ಕಾಲವೇ ಹಾಗಿದೆ ನೋಡು. ಒಂದು ಕ್ಷಣದಲ್ಲಿ ಎದುರಿದ್ದವರ ಯಾವುದೋ ಒಂದು ಸ್ವಭಾವ ಇಷ್ಟ ಆಗಲಿಲ್ಲ ಅಂದರೆ ಮರುಕ್ಷಣವೇ ಎಲ್ಲ ಸಂಬಂಧಗಳಿಂದಲೂ ಕಳಚಿಕೊಳ್ಳಬಹುದು. ಇಬ್ಬರ ನಡುವಿನ ಸಂಪರ್ಕದ ಸೇತುವೆಯನ್ನು ಬಹಳ ಬೇಗ ತುಂಡು ಮಾಡಿ ಬಿಸಾಕಿ ಬಿಡಬಹುದು. ಮಳೆಗಾಲದಲ್ಲಿ ಭೋರ್ಗರೆವ ಮಳೆಗೆ ಬೀಳುವ ಮರದ ಸೇತುವೆಯಾದರೂ ರಭಸದಿಂದ ಹರಿಯುವ ನೀರಿನ ಜೊತೆಗೆ ತನ್ನ ಕೊನೆಯ ಕ್ಷಣದವರೆಗೂ ಪ್ರತಿರೋಧ ಒಡ್ಡಿಯೇ ಕೊನೆಯ ಕ್ಷಣದಲ್ಲಿ ಶರಣಾಗಿಬಿಡುತ್ತದೆ. ಆದರೆ ಸೋಷಲ್ ಮೀಡಿಯಾದಲ್ಲಿ ಜನರ ನಡುವೆ ಸೇತುವೆಯಂತಿರುವ ಯ್ಯಾಪ್ ಗಳಿಗೆ ಸಂವೇದನೆ ಎಲ್ಲಿಂದ ಬರಬೇಕು ಹೇಳು..

ಬ್ರೇಕ್‌ಅಪ್‌ನಲ್ಲಿ ಹುಟ್ಟಿದ ವೈರಾಗ್ಯ ಎಲ್ಲೀತನಕ.. ‘

ಅಷ್ಟಕ್ಕೂ ನೀನು ನನ್ನ ಜೊತೆಗೆ ಮಾತು, ಸಂದೇಶ ಕಟ್ ಮಾಡಲು ಒಂದು ಕಾರಣವೇ ಇರಲಿಲ್ಲ. ಅದರ ಹಿಂದಿನ ಸಂಜೆ ನಾವಿಬ್ಬರೂ ಬೈಕ್ ನಲ್ಲಿ ಲಾಂಗ್ ರೈಡ್ ಹೋಗಿದ್ದೆವು. ಪ್ರತೀ ವೀಕೆಂಡ್ ನಂತೆ ಆ ವೀಕೆಂಡ್ ಮೋಜಿನಿಂದ ತುಂಬಿತ್ತು. ಆದರೆ ಆ ಖುಷಿ ಮುಗಿದ ಮೇಲೆ ಕರಾಳ ನೋವೊಂದು ಬರಬಹುದು ಅನ್ನುವ ಸಣ್ಣ ಹಿಂಟ್ ಅನ್ನೂ ದೇವರು ಬಿಟ್ಟು ಕೊಡಲಿಲ್ಲ. ನಾವಿಬ್ಬರೂ ತುಂಬಿ ಹರಿವ ಕಾವೇರಿಯಲ್ಲಿ ನೀರಾಟ ಆಡಿದೆವು. ತೆಪ್ಪದಲ್ಲಿ ಆಚೆ ಬದಿ ಹೋಗಿ ಚಿತ್ರ ವಿಚಿತ್ರದ ಬಂಡೆಗಳನ್ನು ನೋಡಿ ಕಣ್ಣರಳಿಸಿದೆವು. ಸೊಕ್ಕಿ ಸುಸ್ತಾಗಿ ಮರದಡಿ ಕೂತು ಸೊಂಪಾದ ನಿದ್ದೆ ತೆಗೆದೆವು. 

ನಾವಿಬ್ಬರೂ ಕ್ಲಾಸ್ ಮೇಟ್ಸ್. ಕ್ಲಾಸ್ ನಲ್ಲಿ ಜಗಳ ಆಡುತ್ತಲೇ ಹತ್ತಿರಾದವರು. ಅದಕ್ಕೋ ಏನೋ ನಮ್ಮಿಬ್ಬರ ಒಡನಾಟದಲ್ಲಿ ಒಂದು ತುಂಟತನ ಇತ್ತು. ನಾವ್ಯಾವತ್ತೂ ಪ್ರೇಮಿಗಳ ಹಾಗೆ ಇದ್ದವರೇ ಇಲ್ಲ. ನಿನ್ನನ್ನೊಮ್ಮೆ ಗಾಢವಾಗಿ ತಬ್ಬಿಕೊಂಡು ಆವರಿಸಿಬಿಡಬೇಕು ಅಂತ ಬಹಳ ಸಲ ಅನಿಸಿತ್ತು. ಆದರೆ ಯಾವತ್ತೂ ನಾನು ಆ ಥರ ಮಾಡಿಲಿಲ್ಲ. ಫ್ರೆಂಡ್ ಥರ ಅಷ್ಟೇ ಇರುತ್ತಿದ್ದೆ. ನಿನ್ನ ವರ್ತನೆಯೂ ಹಾಗೇ ಇತ್ತು. ನೀನು ಬೇರೆ ಹುಡುಗರ ಜೊತೆಗೆ ಮಾತನಾಡಿದಾಗ ಕಸಿವಿಸಿ ಆಗುತ್ತಿದ್ದರೂ ಎಂದೂ ನಾನದನ್ನು ಹೇಳಿದವನಲ್ಲ. ಒಂದು ದಿನ ನಿನ್ನ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿಲ್ಲ. ಆದರೂ ನಾವಿಬ್ಬರೂ ಎಂದೂ ಬೇರೆಯಾಗದ ಗೆಳೆಯರ ಹಾಗೆ ಜೊತೆಗೇ ಇರುತ್ತಿದ್ದೆವು. ಓದು ಮುಗಿಸಿ, ಕೆಲಸಕ್ಕೆ ಸೇರಿದ ಮೇಲೂ ಅದು ಮುಂದುವರಿಯಿತು. ವೀಕೆಂಡ್ ನಲ್ಲಿ ಲಾಂಗ್ ಡ್ರೈವ್ ನಮ್ಮ ದಿನಚರಿಯ ಭಾಗವೇ ಆಗಿತ್ತು.

ದಾಂಪತ್ಯ ಸೂಪರ್‌ ಆಗಿರಬೇಕಂದ್ರೆ ಫರ್ಸ್ಟ್‌ ಈ ಅಭ್ಯಾಸ ರೂಢಿಸಿಕೊಳ್ಳಿ! 

 ಆದರೆ ಇದ್ದಕ್ಕಿದ್ದ ಹಾಗೆ ಸಣ್ಣದೊಂದು ಸುಳಿವೂ ಕೊಡದೇ ನನ್ನಿಂದ ದೂರ ಆದೆ. ನನ್ನ ನಂಬರ್ ಬ್ಲಾಕ್ ಮಾಡುವಂಥ ದ್ರೋಹ ನಾನೇನು ಮಾಡಿದ್ದೆ ಹೇಳು?

ಅಮ್ಮಂಗೆ ನಿನ್ನ ಕಂಡರೆ ತುಂಬ ಇಷ್ಟ. ನೀನು ಮಾಡಿ ಕೊಡುವ ಜೋಳದ ಸೂಪ್ ನನ್ನ ಹಾಗೆ ಅವಳ ಫೇವರೆಟ್. ನೀನು ಹೋದ ಮೇಲೆ ಅಮ್ಮಂಗೆ ಹುಷಾರು ತಪ್ಪಿತು. ಅದನ್ನು ನೆನೆಸಿಕೊಳ್ಳಲು ನನ್ನಿಂದ ಆಗ್ತಿಲ್ಲ. ತನ್ನ ಕೊನೆಯ ಕ್ಷಣಗಳಲ್ಲಿ ಅವಳು ನಿನ್ನಿಂದ ಜೋಳದ ಸೂಪ್ ಕೇಳಿದ್ದಳು. ನಾನೆಲ್ಲಿಂದ ತರಲಿ ಹೇಳು, ನಿನ್ನ ಜೊತೆಗೆ ಮಾತನಾಡಲು ಬಹಳ ಹಂಬಲಿಸಿದಳು. ನಾನು ಅಸಹಾಯಕನಾಗಿ ಕೂತಿದ್ದೆ. ನನಗೆ ನಿನ್ನ ಬಿಟ್ಟರೆ ನೋವನ್ನೆಲ್ಲ ಹೇಳಿಕೊಳ್ಳುವಂಥಾ ಸ್ನೇಹಿತರಿಲ್ಲ. ಅಮ್ಮ ಹೋದ ಮೇಲೆ ತಬ್ಬಲಿಯಾದೆ. ನನ್ನೆಲ್ಲ ನೋವುಗಳನ್ನು ನಿನ್ನ ತೊಡೆ ಮೇಲೆ ಮಲಗಿ ಹೇಳಿ ಹಗುರಾಗಬೇಕು ಅಂದುಕೊಂಡೆ. ಊಹೂಂ. ಅಮ್ಮ ಹೋದ ಮೇಲೆ ಆದ ಗಾಯ ಇನ್ನೂ ಹಸಿಯಾಗಿಯೇ ಇದೆ. 
ನೀನು ಹೋದದ್ದಕ್ಕೆ ನನಗೆ ಬೇಜಾರಿಲ್ಲ. ಆದರೆ ನನ್ನಿಂದ ನಿನಗೇನಾಯ್ತು, ಯಾಕೆ ಸಡನ್ನಾಗಿ ತೊರೆದೆ ಅನ್ನೋದನ್ನಾದರೂ ಹೇಳು. ನನ್ನ ಬಗ್ಗೆ ನನಗಿರುವ ಕೀಳರಿಮೆ ಕಡಿಮೆ ಮಾಡು. ಮತ್ತೊಮ್ಮೆ ಬಾ ಅನ್ನಲ್ಲ. ಜಸ್ಟ್ ಕಾರಣವನ್ನಷ್ಟೇ ಆದರೂ ಗೀಜಿ ನನ್ನ ಅಡ್ರೆಸ್ ಗೆ ಪೋಸ್ಟ್ ಮಾಡು. 

ಗುಡ್ ಬೈ
ನಿನ್ನ ಸಂತು