Asianet Suvarna News Asianet Suvarna News

ಸತ್ತ ನಿನ್ನೆಯ ಬಳಿಕ... ಕಾಣದ ನಾಳೆಯ ನಡುವೆ....

ಲೈಫ್ ಹೀಗೆ. ಫಾರ್ವರ್ಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರೋಗ್ರಾಮಿಂಗ್ ಅಥವಾ ಸ್ಕ್ರಿಪ್ಟ್ ಇಲ್ಲದೆ ಸಾಗುವ ಬದುಕು ನಮ್ಮದು. ಇಂದು ಈ ಕ್ಷಣ ಬದುಕಿದ್ದೇವೆ. ನಾಳೆಯ ಕಥೆ ಗೊತ್ತಿಲ್ಲ. ನಿನ್ನೆಗಳ ಅನುಪಾತದಲ್ಲಿ ನಾಳೆಗಳನ್ನು ಲೆಕ್ಕ ಹಾಕಲು ಸಾಧ್ಯವೇ?

Self realization during India Lockdown for covid19 breakdown
Author
Bengaluru, First Published Apr 14, 2020, 6:56 PM IST

ಕಾರಿನಲ್ಲಿ ಸಾಧಾರಣ ಎಡ, ಬಲ ಹಾಗೂ ಮಧ್ಯದಲ್ಲೊಂದು ಸೇರಿ ಮೂರು ಕನ್ನಡಿಗಳಿರುತ್ತವೆ. ಹಿಂದಿನ ರಸ್ತೆಯ ಬಗ್ಗೆ ನಿಗಾ ವಹಿಸುವುದಕ್ಕೆ. ಎದುರು... ಸುಮಾರು 100ರಿಂದ 200 ಮೀ. ಕಣ್ಣೆವೆಗೆ ನಿಲುಕುವಷ್ಟು ದೂರ ನಾವಾಗಿ ನೋಡಬಹುದು. ಅದರಾಚೆಗೆ, ತಿರುವಿನ ಮತ್ತೊಂದು ಮಗ್ಗುಲಿಗೆ, ಏನಿದೆ, ಹೇಗಿದೆ ಎಂಬುದನ್ನು ಸ್ವತಹ ನೋಡಿ ಕಂಡುಕೊಳ್ಳಬೇಕು. ಹಳೆ ದಾರಿಯಾದರೆ ಹೋದ ಅನುಭವ ತಿಳಿಸುತ್ತದೆ, ಮುಂದಿನ ದಾರಿ ಇದುವೇ ಅಂತ. ಪ್ರಥಮ ಬಾರಿಗೆ ಹೋಗುವಾಗ ಅವರಿವರು ಹೇಳಿದ್ದನ್ನು ಕೇಳಿ ಒಂದು ಅಂದಾಜಿನ ಮೇಲೆ ಪ್ರಯಾಣಿಸಬಹುದೇ ಹೊರತು ನಾವಾಗಿ ಯಾವುದೇ ಕನ್ನಡಿ ಇಟ್ಟು, ಯಂತ್ರವನ್ನು ಅಳವಡಿಸಿ ಮುಂದಿನ ದಾರಿ ಕಾಣುವ ಸಾಧ್ಯತೆ ಇದುವರೆಗೆ ಸೃಷ್ಟಿಯಾಗಿಲ್ಲ. ಗೂಗಲ್ ಮ್ಯಾಪ್ ಕೂಡಾ ದಾರಿಯ ನಕ್ಷೆಯನ್ನು ತೋರಿಸಬಹುದೇ ಹೊರತು ದಾರಿಯ ಅನುಭವವನ್ನು ನೀಡಲು ಸಾಧ್ಯವಿಲ್ಲ....

ಕಾಣದ ದಾರಿ, ಓದದ ಪುಸ್ತಕ, ನೋಡದ ಸಿನಿಮಾ, ಏರದ ಬೆಟ್ಟ ಎಲ್ಲವನ್ನೂ ದೂರದಿಂದ ವಿಮರ್ಶಿಸುವುದಕ್ಕೂ ಹೋಗಿ, ನೋಡಿ, ಓದಿ ಕಂಡುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಸಹನೆ, ಸೂಕ್ಷ್ಮಗ್ರಹಿಕೆಯ ಗಮನಿಸುವಿಕೆ ಮತ್ತು ಬಂದದ್ದನ್ನು ಎದುರಿಸುವ ತಾಕತ್ತು ಇಲ್ಲದೆ, ತೇಲಿಹೋಗುವ ಭಾವದಿಂದಲೇ ಹಾರಿಕೆ ಮನಸ್ಥಿತಿಯಿಂದ ವಿಮರ್ಶೆಗೆ ಹೊರಟರೆ ಸಾಲುಗಳು ತಪ್ಪಿಯಾವು. 

ಬದುಕಲ್ಲಿ ಪರ್ಫೆಕ್ಟ್  ಎಂಬುವುದು ಬೇಕಾ?

ವರ್ಚುವಲ್ ರಿಯಾಲಿಟಿ ಮೂಲಕ ಎಲ್ಲೋ ಇರುವುದನ್ನು ಇಲ್ಲೇ ಇರುವಂತೆ ತೋರಿಸುವ ತಂತ್ರಜ್ಞಾನ ಲಭ್ಯ ಇದೆ. ಆದರೆ ನಮ್ಮದೇ ಬದುಕಿನ ನಾಳೆಗಳನ್ನು ಫಾರ್ವರ್ಡ್ ಮಾಡಿ ನೋಡುವ ಯಾವ ತಂತ್ರವೂ ಸುದೈವವಶಾತ್ ಅನ್ವೇಷಣೆಯಾಗಿಲ್ಲ, ಆಗಲು ಸಾಧ್ಯವೂ ಇಲ್ಲ.  ಏಕೆಂದರೆ     ...

ನಿನ್ನೆಗಳ ಅನುಪಾತದಲ್ಲಿ ನಾಳೆಗಳನ್ನು ಲೆಕ್ಕ ಹಾಕಲು ಸಾಧ್ಯವೇ? ತಾರ್ಕಿಕತೆ, ಅನುಭವ, ದೂರಾಲೋಚನೆ, ಉಪಾಯಗಳ ಮೂಲಕ ತರ್ಕಿಸಬಹುದು, ಚಿತ್ರಿಸಬಹುದು, ಊಹಿಸಬಹುದು, ಬರೆದಿಡಬಹುದು ನಾಳೆಗಳು ಹೀಗಿರಬಹುದು ಅಂತ. ಆದರೆ ಅದು ಡ್ರಾಫ್ಟ್ ಆಗಬಹುದೇ ಹೊರತು ಸಂಭವಗಳ ಸ್ಕ್ರಿಪ್ಟ್ ಆಗಿರಲು ಸಾಧ್ಯವೇ ಇಲ್ಲ. ವೇಳಾಪಟ್ಟಿಯಂತೆ, ಪ್ರೋಗ್ರಾಮಿಂಗ್ ಮಾಡಿಟ್ಟಂತೆ, ಟೈಮರ್ ಅಳವಡಿಸಿದಂತೆ ನಾಳೆಗಳ ನಡೆಯನ್ನು, ಭವಿಷ್ಯವನ್ನು ಇಂದೇ ರೂಪಿಸಿ ಅದರಂತೆ ನಡೆಯುವುದು ಸಾಧ್ಯವಿದ್ದರೆ ಸಾಮರ್ಥ್ಯ ಇದ್ದಾಗ ಹೇಗೆಯೂ ಬದುಕುವ ಕಾನ್ಸೆಪ್ಟ್ ಹುಟ್ಟಿಕೊಳ್ಳುತ್ತಿತ್ತೋ ಏನೋ. ಆರೋಗ್ಯ ನಾಳೆ ಹೀಗೆಯೇ ಇರಬೇಕೆಂದು ವೈದ್ಯರು ಮದ್ದು ಸಿದ್ಧ ಮಾಡಿಡಬಹುದಿತ್ತು, ಎಂಜಿನಿಯರ್ ಗಳು ಪ್ರೋಗ್ರಾಂಗಳನ್ನು ರೂಪಿಸಿ 10 ವರ್ಷಗಳ ಬಳಿಕ ನಾನು ಹೀಗಿರಬೇಕು, ಇಷ್ಟು ಸಂಬಳ ಬರಬೇಕು ಎಂದು ಅಚ್ಚುಕಟ್ಟಾಗಿ ರೂಪುರೇಷೆ ಮಾಡಿಡಬಹುದಿತ್ತು. ಜನಪ್ರಿಯ ಲೇಖಕ ತನ್ನ 10 ವರ್ಷಗಳ ನಂತರದ ಬದುಕಿನ ಬಗೆಗಿನ ಆತ್ಮಕಥೆಯನ್ನೂ ಈಗಲೇ ಬರೆದು ಮುದ್ರಣಕ್ಕೆ ಕೊಡಬಹುದಿತ್ತು.... ಎಲ್ಲವನ್ನು ರಿವೈಂಡ್, ಸಿಂಹಾವಲೋಕನ ಮಾಡಬಲ್ಲ, ಇತಿಹಾಸವನ್ನು ಮರುಸೃಷ್ಟಿಸಬಲ್ಲ ತಾಕತ್ತಿರುವ ನಮಗೆ ನಾಳೆಗಳನ್ನು ಮಾತ್ರ ಇಂದೇ ಕಂಡುಕೊಳ್ಳಲು ಸಾಧ್ಯವಿಲ್ಲ, ಫಾರ್ವರ್ಡ್ ಮಾಡಿ ನೋಡಲು, ಇಣುಕಲು ಅಸಾಧ್ಯ ಎಂಬುದು ಮಿತಿಯೂ ಹೌದು,ವರವೂ ಹೌದು.

ಆದರೂ...

ನಾವೊಂಥರ ಚಿರಂಜೀವಿಗಳೋ ಎಂಬಂತೆಯೇ ಬದುಕುತ್ತೇವೆ. ಸಾವು ಹಿಂಬಾಲಿಸುತ್ತಿರುತ್ತದೆ, ಭವಿಷ್ಯ ಎನ್ನುವುದು ಅತಂತ್ರ ಎಂಬುದು ಗೊತ್ತಿದ್ದರೂ, ಇಂದೇ ಬದುಕಿನ ಕೊನೆಯ ದಿನ ಅಂದುಕೊಂಡು ದುಡಿ ಮತ್ತಿತರ ಕಿವಿಮಾತುಗಳನ್ನು ಕೇಳಿಸಿಕೊಂಡೂ ಮುಂದೆ ಹೋಗುತ್ತಲೇ ಇರುತ್ತೇವೆ. ಲೈಫ್ ಟೈಂ ವ್ಯಾಲಿಡಿಟಿ ಇರುವ ಮೊಬೈಲ್ ಕರೆಯ ಪ್ಲಾನುಗಳು, ಕ್ಯಾಶ್ ಬ್ಯಾಕ್ ಆಯ್ಕೆಯ ವಿಮಾ ಕಂತುಗಳು, ಹತ್ತಾರು ವರ್ಷಗಳ ನಿರಖು ಠೇವಣಿಗಳು, ನಿವೃತ್ತಿಯ ನಂತರದ ಬದುಕಿನ ಪ್ರಾವಿಡೆಂಟ್ ಫಂಡು.... ಆರೋಗ್ಯವಿಮೆ.... ಹೀಗೆ ಎಷ್ಟೊಂದು ಸಿದ್ಧತೆಗಳು. ಸತ್ತು ಹೋದರೆ ಮತ್ತೇನು ಎಂಬುದಕ್ಕೆ ಉತ್ತರವಾಗಿ ನಾಮಿನಿ ಬರೆದಿಡಲು ಮರೆಯುವುದಿಲ್ಲ. ಸರಳವಾಗಿ ಹೇಳುವುದಾದರೆ ತುಂಬ ಕಾಲ ಬದುಕುತ್ತೇನೆ ಎಂಬ ಧನಾತ್ಮಕ ಚಿಂತನೆ ಮತ್ತು ಬದುಕು ಶಾಶ್ವತವಲ್ಲ ಎಂಬ ನಕಾರಾತ್ಮಕ ಎಂದೇ ಹೇಳಬಹುದಾದ ನಿರುತ್ಸಾಹ ಮೂಡಿಸಬಲ್ಲ ಯೋಚನೆಯ ನಡುವಿನ ವಾಸ್ತವಿಕ ಪ್ರಜ್ನೆ ಇದೆಯಲ್ಲ? ಅದನ್ನೇ ಹಿಡಿದುಕೊಂಡು ಬದುಕುವುದು ಅನಿವಾರ್ಯ ಮಾತ್ರವಲ್ಲ, ಬುದ್ಧಿವಂತಿಕೆಯೂ ಹೌದು.

ಇನ್ಮುಂದೆ ಜಗತ್ತಿನಲ್ಲಿ ಶೇಕ್ ಹ್ಯಾಂಡ್ ಇರೋಲ್ವಾ?

Fate doesnt care about your plans (ಹಣೆಬರಹಕ್ಕೆ ನಿಮ್ಮ ಯೋಚನೆಗಳ, ಯೋಜನೆಗಳ ಹಂಗಿಲ್ಲ) ಎಂಬ ಮಾತು ಕೇಳಿಲ್ಲವೆ? ಪದೇ ಪದೇ ಆರೋಗ್ಯ ತಪಾಸಣೆ ಮಾಡಿಸುವ ವ್ಯಕ್ತಿಯೂ ಅಕಾಲ ಮರಣಕ್ಕೀಡಾಗಿಲ್ಲವೇ? ಸಾಕಷ್ಟು ದುಡ್ಡು ಕೂಡಿಟ್ಟ ವ್ಯಕ್ತಿಯೂ ಒಂದು ಹಂತದಲ್ಲಿ ಹತಾಶನಾಗಿ ಬದುಕನ್ನು ಕೊನೆಗೊಳಿಸಿದ ಉದಾಹರಣೆಗಳಿಲ್ಲವೇ? ರಾಜಕೀಯವಾಗಿ ಉತ್ತುಂಗಕ್ಕೇರಿ ಏಕಮೇವ ದ್ವಿತೀಯ ಅಂದುಕೊಂಡ ವ್ಯಕ್ತಿಗಳೂ ಒಂದು ಹಂತದಲ್ಲಿ ಶರಣಾಗಿ ಜೈಲುಪಾಲಾಗಿಲ್ಲವೇ? ಎಲ್ಲಾ ವೈಜ್ನಾನಿಕ ಥಿಯರಿ, ಹವಾಮಾನ ಮುನ್ಸೂಚನೆ, ಜ್ಯೋತಿಷಿಗಳ ಭವಿಷ್ಯವನ್ನೂ ಮೀರಿ ಮಹಾಮಾರಿ ಕೊರೋನಾ ವಕ್ಕರಿಸಿಲ್ಲವೇ? ಇವೆಲ್ಲ ಸರಳವಾಗಿ ಒಂದೇ ವಿಚಾರವನ್ನು ಸಾರಿ ಹೇಳುತ್ತಿವೆ. ವೈಯಕ್ತಿಕ ಚಿಂತನೆಯೋ, ವೈಯಕ್ತಿಕ ಪ್ಲಾನಿಂಗೋ, ವೈಯಕ್ತಿಕ ದೂರದೃಷ್ಟಿಯಿಂದ ಇಡೀ ಜಗತ್ತು ನಡೆಯುತ್ತಿರುವುದಲ್ಲ. ಒಂದು ವ್ಯವಸ್ಥೆ, ಒಂದು ವಿಧಾನ, ಒಂದು ಓಘ ಜಗತನ್ನು ನಡೆಸುತ್ತಿದೆ, ತೀರಾ ವೇದಾಂತದಂತೆ ಕಂಡರೂ ನಿರೀಕ್ಷಿಸದೇ ಬರುವ, ಎದುರಾಗುವ ಸನ್ನಿವೇಶಗಳು ಇವನ್ನು ತಾವಾಗಿಯೇ ಮನದಟ್ಟು ಮಾಡಿಸುತ್ತವೆ. ಅತ್ಯಂತ ಶಿಸ್ತುಬದ್ಧವಾಗಿ ವಾಹನ ಚಲಾಯಿಸುತ್ತಾ, ಎಲ್ಲಾ ದಾಖಲೆಗಳನ್ನು ಹೊಂದಿರುವ, ಆರೋಗ್ಯವಂತನಾಗಿರುವ ವ್ಯಕ್ತಿ ನಿಧಾನಗತಿಯಲ್ಲಿ ವಾಹನದಲ್ಲಿ ಹೋಗುತ್ತಿರುವಾಗಲು ಏಕಾಏಕಿ ಅಡ್ಡ ಬಂದ ನಾಯಿಯ ಜೀವ ಉಳಿಸಲು ಹೋಗಿ ದುರಂತಕ್ಕೀಡಾಗ ಪ್ರಕರಣಗಳು ಎಷ್ಟು ಬೇಕು ಹೇಳಿ? ಇಂತಹ ಪ್ರಕರಣಗಳನ್ನು ಯಾವ ಕೋನದಿಂದ ವಿಶ್ಲೇಷಿಸಬೇಕು?

ಓದದ ಪುಸ್ತಕದ ರಕ್ಷಾಪುಟ ನೋಡಿ, ಮುನ್ನುಡಿಯನ್ನು ಮಾತ್ರ ಓದಿ ಒಂದು ಮಟ್ಟಿನ ಪೂರ್ವಾಗ್ರಹದಿಂದಲೇ ಆ ಪುಸ್ತಕದ ಬಗ್ಗೆ ಅಷ್ಟಿಷ್ಟು ಮಾತನಾಡಬಹುದು. ಆದರೆ, ಪುಸ್ತಕದೊಳಗಿನ ಸಮರ್ಥನೆಗಳು, ಸಮಸ್ಯೆಗಳು, ಪ್ರಕರಣಗಳು, ನಿದರ್ಶನಗಳು, ಆಯಾಮಗಳು ಓದಿದರೆ ಮಾತ್ರ ದಕ್ಕುವಂಥದ್ದು. ಮನನ ಮಾಡಿದರೆ ಮಾತ್ರ ದೃಷ್ಟಿಕೋನಗಳನ್ನು ಮೂಡಿಸುವಂಥದ್ದು. ಎತ್ತರದ ಗುಡ್ಡವೂ ಅಷ್ಟೇ.... ಆಳವಾದ ಸಮುದ್ರವೂ ಅಷ್ಟೆ, ದೂರದ ಮರದ ಮೇಲಿನ ಬಣ್ಣದ ಬಣ್ಣದ ಹೂಗಳೂ ಅಷ್ಟೇ... ನಿಂತಲ್ಲೇ ಅವುಗಳನ್ನು ಕಂಡು ಹೀಗ್ಹೀಗೆ... ಅಂತ ನಮ್ಮ ಅನುಭವದ ಮಟ್ಟಕ್ಕೆ ವಿಮರ್ಶೆ ಮಾಡುವುದಕ್ಕೂ ಗುಡ್ಡ ಏರಿ, ಸಮುದ್ರಕ್ಕಿಳಿದು, ಮರ ಹತ್ತಿ ಹೂ ಕೊಯ್ದು ಮಾತನಾಡುವುದಕ್ಕೂ ವ್ಯತ್ಯಾಸವಿದೆ. ಅಂಗಡಿಯಲ್ಲಿ ಮಾರಾಟಕ್ಕಿಟ್ಟ ಹೂಕೋಸು ಚೆಂದಕೆ ನಗುವಂತೆ ಕಂಡರೂ ತಿರುವಿ ಹಾಕಿದರೆ ಮಾತ್ರ ತಾನೆ ಅಡಿಯಲ್ಲಿ ಕೊಳೆತಿರುವುದು ಕಂಡು ಬರುವುದು. ತಿರುವಿ ಹಾಕುವ ಮೊದಲೇ ಹೂಕೋಸನ್ನು ವಿಮರ್ಶೆ ಮಾಡುವ, ಟೀಕಿಸುವ, ಷರಾ ಬರೆಯುವ ಆತುರ ಯಾಕೆ. ಗೋಳವೆಂದರೆ ನಮ್ಮ ಮೂಗಿನ ನೇರಕ್ಕೆ ಕಾಣವು ಭಾಗ ಮಾತ್ರವಲ್ಲ, ಅಷ್ಟೂ ಮಗ್ಗುಲುಗಳು ಸೇರಿ ಗೋಳವಾಗುತ್ತದೆ, ಬೆಟ್ಟವೆಂದರೆ ಈ ಭಾಗದ ಏರು ಹಾದಿ ಮಾತ್ರವಲಲ್ಲ, ತುತ್ತುತುದಿಯ ಆಚೆಗಿನ ಇಳಿಜಾರು ಕೂಡಾ ಬೆಟ್ಟದ್ದೇ ಭಾಗವಾಗಿ. ಇನ್ನೂ ಸರಳವಾಗಿ ಹೇಳಬೇಕೆಂದರೆ ಅವನು ಅಥವಾ ಅವಳು ಎಂಬ ಪದಗಳಲ್ಲಿ ಅವ ಎಂಬ ಎರಡಕ್ಷರ ಹೇಳಿದರ ಮಾತ್ರಕ್ಕೆ ಅದು ಅವರಾಗುವುದಿಲ್ಲ.... ನು ಅಥವಾ ಳು ವ್ಯತ್ಯಾಸವಾದರೆ ವ್ಯಕ್ತಿಗಳೇ ಬೇರೆಯಾಗಿಬಿಡಬಹುದು. ಹಾಗಾಗಿ, ವಿಮರ್ಶೆಗೆ, ವಿವಾದಕ್ಕೆ, ವಿಚಾರಮಂಥನಕ್ಕೆ ಪೂರ್ತಿ ತಿಳಿದುಕೊಂಡು ಮುನ್ನಡಿಯಿಡುವುದು ಸಮರ್ಥನೀಯ...

ಸಂಗಾತಿಯೊಂದಿಗಿನ ಸುಮಧುರ ಸಂಬಂಧಕ್ಕೆ ಹೀಗ್ ಮಾಡಿ

ಗುಂಪಾಗಿದ್ದವರೂ ಸಾಂದರ್ಭಿಕವಾಗಿ ಅವರವ ಪರಿಸ್ಥಿತಿಗನುಗುಣ ತಮ್ಮದೇ ದಾರಿ ಹಿಡಿಯುವುದುಂಟು. ಬರುವಾಗ ಒಂಟಿಯಾಗಿ ಬಂದವರು, ಹೋಗುವಾಗ ಜೊತೆಗೆ ಯಾರನ್ನಾದರೂ ಕರೆದುಕೊಂಡು ಹೋಗಿದ್ದು ಕಂಡಿದ್ದೀರ? ಹಲವು ಸಂದರ್ಭಗಳಲ್ಲಿ ಜೊತೆಗಿದ್ದಾರೆ ಅಂದುಕೊಂಡರೂ ಅವರವರ ತಳಮಳ, ಅವರವರ ಕಗ್ಗಂಟು, ಅವರವರ ಮಿತಿಗಳಲ್ಲಿ ಅವರವರು ಏಕಾಂಗಿಗಳೇ ಎಂಬುದು ಸಾಬೀತಾಗುತ್ತದೆ. ಇಂಥದ್ದೇ ಏಕಾಂಗಿತನ ಕಾಣದ ನಾಳೆಗಳ ಬಗೆಗೂ ಒಂದು ವಿಚಿತ್ರ ಮುನ್ನುಡಿಯಾಗಿ ಕಾಡುತ್ತಲೇ ಇರುತ್ತದೆ.

ಸ್ವರ್ಗಲೋಕದಲ್ಲಿ ಹಗಲಿರುಳು ಆಗುವುದಿಲ್ಲವಂತೆ, ಬೆವರುವುದಿಲ್ಲವಂತೆ, ಕಣ್ಣ ರೆಪ್ಪೆ ಮುಚ್ಚುವುದಿಲ್ಲವಂತೆ, ಯಾರಿಗೂ ವಯಸ್ಸಾಗುವುದಿಲ್ಲವಂತೆ... ಕಷ್ಟಗಳೇ ಇಲ್ಲವಂತೆ ಅದಕ್ಕೆ ಇಂತಹ ನಿರ್ಲಿಪ್ತ ವ್ಯವಸ್ಥೆಯಿಂದ ಬೇರಸಗೊಂಡು ದೇವತೆಗಳು, ಯಕ್ಷರು ಆಗಾಗ ಕರ್ಮಭೂಮಿಯಾದ ಭೂಮಿಗೆ ಇಳಿದು ಬಂದು ಸದಾ ಬದಲಾವಣೆಗಳ ಆಗರವಾಗಿರುವುದರ ಸುಖ ಅನುಭವಿಸುತ್ತಾರಂತೆ. ಯಕ್ಷಗಾನದ ಪೌರಾಣಿಕ ಕಥೆಗಳಲ್ಲಿ ಇಂತಹ ಸಂದರ್ಭಗಳು ಬರುತ್ತವೆ.

ಕಂಡಿರದ ನಾಳೆಗಳ ಬಗ್ಗೆ ಅಂದಂದು ಹೋರಾಡುವ ಬದಲು ಇಂದಿನಿಂದಲೇ ಹೋರಾಡುವ ಸನ್ನಿವೇಶಗಳು, ಇಂದು ಸರಿಯಿದ್ದರೂ ನಾಳೆ ಏನಾಗುವುದೋ ಎಂಬ ವಿಲಕ್ಷಣ ಆತಂಕಕ್ಕೆ ಸಾಂತ್ವನ ಹುಡುಕುವ ಸಂದರ್ಭ, ಅನಾರೋಗ್ಯ ಬಾರದಂತೆ ಲಸಿಕೆ ಹಾಕಿಸಿಕೊಳ್ಳುವ ಧಾವಂತ, ಅನಾರೋಗ್ಯ ಬಂದರೆ ವಾಸಿ ಮಾಡಲು ಓಡಾಟ, ಪರಿಸ್ಥಿತಿ ಗಂಭೀರವಾಗಿ ಆಸ್ಪತ್ರೆ ಸೇರಿದರೆ, ಐಸಿಯು ವಾಸ ಸಿಕ್ಕರೆ ಜೀವ ಉಳಿಸಿಕೊಳ್ಳಲು ಹೋರಾಟ, ಜೀವ ಉಳಿಯದೇ ಹೋದರೆ ತೊರೆದು ಹೋದವರ ನಂಬಿದವರು ಮತ್ತೆ ಬದುಕು ಮುಂದುವರಿಸಲು ಆರ್ಥಿಕವಾಗಿ, ಸಾಮಾಜಿಕವಾಗಿ ಅನುಭವಿಸುವ ಪರದಾಟಗಳು... ಹೇಗೋ ಇದ್ದ ಬದುಕುಗಳನ್ನು ಕೆಲ ದಿನಗಳು, ಕೆಲ ಸನ್ನಿವೇಶಗಳು ಏಕಾಏಕಿ ಬದಲಾಯಿಸಬಲ್ಲ ವಿಚಿತ್ರ ಸಂದರ್ಭಗಳು, ನಿರಾಕರಿಸಲಾಗದ ಸತ್ಯಗಳು ಮಾತ್ರವಲ್ಲ, ಅರಗಿಸಿಕೊಳ್ಳಲೇಬೇಕಾದ ವಾಸ್ತವಗಳೂ ಹೌದು.

ಕಾಣದೇ ಇರುವ ನಾಳೆಗಳ ಕಂಡವರ ಹಾಗೆ ಯಾರಿಗೋ ಏನೋ ಮಾತು ಕೊಟ್ಟಿರುತ್ತೇವೆ, ಠೇವಣಿಗೆ, ಯಾವುದೋ ಪ್ರಾಜೆಕ್ಟಿಗೆ ಭವಿಷ್ಯದ ಒಂದು ತಾರೀಕಿನ ಡೆಡ್ ಲೈನ್ ಇಟ್ಟಿರುತ್ತೇವೆ, ಹೀಗಿದ್ದರೆ ಹೀಗಾದೀತು ಎಂಬ ಧೈರ್ಯದಲ್ಲಿ ಲಕ್ಷ, ಲಕ್ಷ ಸಾಲ ಮಾಡಿರುತ್ತೇವೆ, ಕಟ್ಟಡ ಲೀಸಿಗೆ ಪಡೆದಿರುತ್ತೇವೆ, ಕಂತುಗಳಲ್ಲಿ ಏನೇನನ್ನೋ ಖರೀದಿಸಿಟ್ಟಿರುತ್ತೇವೆ, ಇಂತಿಷ್ಟು ವರ್ಷಗಳ ಅವಧಿಗೆ ವಿದೇಶದಲ್ಲಿ ದುಡಿಯಲು ಒಪ್ಪಂದ ಮಾಡಿಕೊಂಡಿರುತ್ತೇವೆ, ಮಕ್ಕಳಿಗೆ ಇಂಥದ್ದೇ ಕಲಿಸಿ, ಅವರನ್ನು ಇಂಥವರೇ ಆಗಿ ಮಾಡುವ ಗುರಿ ಇರಿಸಿರುತ್ತೇವೆ. ಇದು ಯಾವುದೂ ವಾರಂಟಿ ಇಲ್ಲದ, ಗ್ಯಾರಂಟಿ ಕಾಣದ ನಮ್ಮದೇ ಬದುಕಿನ ಮೇಲಿನ ಹುಚ್ಚು ನಂಬಿಕೆಯಿಂದ. ಗುರಿಗಳನ್ನು ನಿರ್ಧಿರಿಸುವವರು ಮಾತ್ರ ನಾವು, ಪರಿಸ್ಥಿತಿಯನ್ನು ನಿರ್ಧರಿಸುವವರು, ಬರೆಯುವವರು ನಾವಲ್ಲದ ಕಾರಣ ಎಲ್ಲಿಗ ತಲಪೀತು ಎಂಬುದರ ಫಲ ನಮ್ಮ ಕೈಲಿಲ್ಲ, ಪ್ರಯತ್ನ ಮಾತ್ರ ಇರುವುದು. ಈ ಹೋರಾಟದಲ್ಲೆ ಧನಾತ್ಮಕ ಚಿಂತನೆ ಅನ್ನಿ, ಋಣಾತ್ಮಕ ವಸ್ತುಸ್ಥಿತಿ ಅನ್ನಿ ವಾಸ್ತವಿಕತೆ ತನ್ನ ಪಾಡಿಗೆ ನಗುತ್ತಲೇ ಇರುತ್ತದೆ... !

ಬದುಕು ಇಷ್ಟು ಸರಳವೇ?

ಆಕಸ್ಮಿಕ, ದುರಂತ, ಅನಿರೀಕ್ಷಿತಗಳೆಲ್ಲ ಘಟಿಸುವುದೇ ಹಾಗೆ. ಅಪ್ಪಣೆ ವಿನಹ ಅವುಗಳಿಗೆ ಎಲ್ಲಿಗೂ ಪ್ರವೇಶ ಇರುವುದರಿಂದ. ಶನೀಶ್ವರನಿಗೆ ವಿಷ್ಣು ದೇವರ ಅನುಗ್ರಹ ಇದೆಯಂತೆ ಇಂತಹ ನಿರ್ದಿಷ್ಟ ಸಂದರ್ಭದಲ್ಲಿ ಶನಿ ದೆಸೆಯ ಸಂದರ್ಭದಲ್ಲಿ ಯಾರನ್ನೂ ಕಾಡಬಹುದು ಎಂಬ ಹಾಗೆ. ಶನಿಗೆ ದಯ, ದಾಕ್ಷಿಣ್ಯ ಇರುವುದಿಲ್ಲವಂತೆ ಶನಿ ದೆಸೆ ಪೀಡಿತರ ಮೇಲೆ ತನ್ನ ಪ್ರಭಾವ ಬೀರುವುದಕ್ಕೆ. ವಿಧಿಯೂ ಹಾಗೆಯೇ.... ಅದಕ್ಕೇ ಹೇಳಿದ್ದು ಹಣೆಬರಹಕ್ಕೆ (ಹಣೆಬರಹವನ್ನು ಆಸ್ತಿಕತೆಯ ಜ್ಯೋತಿಷ್ಯಕ್ಕೆ ಹೋಲಿಸಬೇಕಾಗಿಲ್ಲ, ಪರಿಸ್ಥಿತಿ ಅಂತ ನಾಸ್ತಿಕರು ಅಂದುಕೊಳ್ಳಬಹುದು) ನಿಮ್ಮ ಕನಸುಗಳ ಹಂಗಿಲ್ಲ ಅಂತ...

ಕೆಲವು ಸಹಜವಾಗಿ ಕಾಣಿಸುತ್ತದೆ, ಕೆಲವು ಆ ಥರ ಕಂಡುಬರುತ್ತದೆ, ಕೆಲವನ್ನು ನಾವಾಗಿ ಕಂಡುಕೊಳ್ಳಬೇಕಾಗುತ್ತದೆ, ಕೆಲವು ಕಂಡೂ ಕಾಣದಂತಿರುತ್ತದೆ, ಕೆಲವನ್ನು ಕಂಡರೂ ನಾವೇ ಕಾಣದಂತೆ ಮುಂದೆ ಹೋಗಬೇಕಾಗುತ್ತದೆ. ಕಾಣದೇ ಇರುವುದು ಆಕಸ್ಮಿಕವಾಗಿ ಧುತ್ತನೆ ಕಂಡಾಗಲೇ ಅನಿರೀಕ್ಷಿತವಾಗಿರುವುದು ಸಂಭವಿಸುವುದು. ಈ ಹಿಂದೆ ಕಂಡದ್ದು, ಕಂಡುಕೊಂಡದ್ದು, ಕಾಣದಂತೆ ಮಾಡಿದ್ದು ಯಾವುದೂ ಆ ಹಂತದಲ್ಲಿ ಹಿಡಿತಕ್ಕೆ ಸಿಕ್ಕದೇ ಹೋದಾಗ ಹೊಸದಾಗಿ ಏನನ್ನಾದರೂ ಕಾಣುವುದು ಅನಿವಾರ್ಯವಾಗುತ್ತದೆ. ಮಾಡುವ ಹೋರಾಟವೆಲ್ಲ ಮಾಡಿ ಮರಣಶಯ್ಯೆಗೆ ತಲುಪಿದ ವ್ಯಕ್ತಿಗೆ ತನಗೆ ಐಶಾರಾಮದ ಕಾರು ಬೇಕು, ಹೊಟ್ಟೆ ತುಂಬಾ ಮೃಷ್ಟಾನ್ನ ಭೋಜನ ಬೇಕು ಎಂಬಿತ್ಯಾದಿ ಆಸೆಗಳಿರುವುದಿಲ್ಲ, ಆತನನ್ನು ನಂಬಿದವರಿಗೆ ಕೂಡಾ. ಈ ಹೊತ್ತಿಗೆ ಪ್ರಾಣ ಉಳಿದರೆ ಸಾಕೆಂಬ ಪ್ರಬಲ ಪ್ರಾರ್ಥನೆ ಮಾತ್ರ ಮನಸ್ಸನ್ನು ಆವರಿಸಿರುತ್ತದೆ.

ಇಸ್ಪೀಟ್ ಎಲೆಗಳಲ್ಲಿ ಕಟ್ಟಿದ ಸೌಧ ಕುಸಿದು ಹೋದರೆ ನೀವು ಎಷ್ಟೇ ಅತ್ತರೂ, ಎಷ್ಟೇ ಶಪಿಸಿದರೂ, ಕಿರುಚಿದರೂ ನಿಮ್ಮ ಕಿರುಚಾಟಕ್ಕೆ ಸೌಧ ಮತ್ತೆ Un Do (CTROL+Z) ಆಗಿ ಪುನಹ ತನ್ನಿಂತಾನೆ ನಿರ್ಮಾಣವಾಗುವುದಿಲ್ಲ. ಒಂದೋ ಮತ್ತೊಂದು ಪ್ರಯತ್ನ ಮಾಡಬೇಕು, ಅಥವಾ ಇಸ್ಪಿಟ್ ಎಲೆಯ ಬದಲು ಬೇರೆ ಕಚ್ಛಾವಸ್ತು ಬಳಸಿ ಸೌಧ ನಿರ್ಮಿಸಬೇಕು ಅಥವಾ ಸೌಧವೇ ಇಲ್ಲದ ಸ್ಥಿತಿಯನ್ನು ಒಪ್ಪಲು ಮನಸ್ಸನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು ಇಷ್ಟೇ ಆಯ್ಕೆಗಳಿರುವುದು....

ಒಂದು ದೋಣಿಯಲ್ಲಿ ಏಕಕಾಲದಲ್ಲಿ ಮೂರೇ ಮಂದಿ ಸಾಗಬಹುದು. ಆಗ ಒಂದು ಹುಲಿ, ಒಂದು ದನ, ಹುಲ್ಲಿನ ಕಟ್ಟು ಮಾತ್ರ... ಯಾರನ್ನು ಕರೆದೊಯ್ಯುತ್ತೀರಿ? ಎಂಬಿತ್ಯಾದಿ ಮಾದರಿಯ ಪ್ರಶ್ನೆಗಳನ್ನು ನೀವು ಎದುರಿಸಬಹುದು, ಉತ್ತರಿಸಬಹುದು. ಇದು ಮನರಂಜನೆ ಮಾತ್ರವಲ್ಲ, ವಾಸ್ತವವೂ ಆಗಬಹುದು. ಕೆಲವೊಂದನ್ನು ಮಾಡಲು ಹೋಗಿ ಕೆಲವನ್ನು ಕಳೆದುಕೊಳ್ಳುವುದು, ಕೆಲವೊಂದಕ್ಕೋಸ್ಕರ ಹಲವನ್ನು ಬಿಡುವುದು ಸಹಜ.... ಪದೇ ಪದೇ ಹೇಳುತ್ತಿರುವ ಹಾಗೆ ಹಣೆಬರಹಕ್ಕೆ ಕರುಣೆಯೂ ಇರುವುದಿಲ್ಲ, ಕಣ್ಣೀರಿಗೂ ಅದು ಕರಗುವುದಿಲ್ಲ. ವೃತ್ತಿ ಬದುಕಿಗೋಸ್ಕರ ಪ್ರವೃತ್ತಿಯನ್ನೇ ಬಿಟ್ಟವರು, ಊರು ತ್ಯಜಿಸಿ ಪರದೇಶಿಗಳಾದವರು, ಹೊಟ್ಟೆಪಾಡಿನ ಕೆಲಸಕ್ಕೋಸ್ಕರ ಆರೋಗ್ಯ ಹಾಳು ಮಾಡಿಕೊಂಡವರು, ಚಟಗಳಿಂದಾಗಿ ಆರೋಗ್ಯವನ್ನೂ, ಮರ್ಯಾದೆಯನ್ನೂ ಕಳೆದುಕೊಂಡವರು, ದಿಢೀರ್ ಶ್ರೀಮಂತರಾಗಲು ಇದ್ದ ಬದ್ದ ದುಡ್ಡನ್ನೆಲ್ಲ ಒಂದರಲ್ಲೇ ಹೂಡಿಕೆ ಮಾಡಿ, ಅದು ಮುಳುಗಿದ ಮೇಲೆ ಅಳುವವರು... ವಿವಿಧ ಸಿದ್ಧಾಂತಗಳಿಗೆ ಕಟ್ಟುಬಿದ್ದು ಗೆಳೆಯರಿಂದ ದೂರವಾಗವವರು, ಎಲ್ಲರಿಂದ ಪ್ರತ್ಯೇಕವಾಗುವವರು, ಗುಂಪಿಗೆ ಸೇರದ ಪದಗಳಾಗವವರು, ಹತ್ತರಲ್ಲಿ ಹನ್ನೊಂದನೆಯರಾಗಲು ಅಸಾಧ್ಯವಾದ ವಿಚಿತ್ರ ಸ್ವಾಭಿಮಾನದಿಂದಾಗಿ ಒಂಥರಾ ವ್ಯಕ್ತಿ ಅಂತ ಅನ್ನಿಸಿಕೊಳ್ಳುವವರು, ಎಲ್ಲಿಯೂ ಹೊಂದಿಕೊಳ್ಳದವರು...  ಹೀಗೆ ಎಷ್ಟೊಂದಿಲ್ಲ ಕಳೆದುಕೊಳ್ಳುವುದಕ್ಕೆ ಉದಾಹರಣೆಗಳು?
 
Sorry ಏಕೆ ಕೇಳಬೇಕು?

ವೇಗವಾಗಿ ಓಡುವ ವಾಹನದಡಿಗೆ ನಾಯಿ ಓಡಿಬಂದಾಗ ನಾಯಿ ಸತ್ತರೆ ಸಾಯಲಿ ಅಂತ ಚಕ್ರದಡಿಗೆ ಸಿಲುಕಿಸುತ್ತೀರೋ? ಸಡನ್ ಬ್ರೇಕ್ ಒತ್ತಿ ನಾಯಿಯನ್ನು ಬದುಕಿಸಿ ನೀವು ಕೆಳಗೆ ಬೀಳುತ್ತೀರೋ?  ಗಂಭೀರ ಅನಾರೋಗ್ಯ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಪರಿಸ್ಥಿತಿ ಗಂಭೀರ ಇದೆ, ನಾವು ಏನೂ ಹೇಳಲು ಬರುವುದಿಲ್ಲ, ಇನ್ನೊಂದು ಪ್ರಯತ್ನ ಮಾಡಿ ನೋಡುವ, ಇಂತಿಷ್ಟು ಖರ್ಚಾಗುತ್ತದೆ ಅಂತ ಹೇಳುವಾಗ ಈ ಮನುಷ್ಯ ಬದುಕಿದರೆ ಎಷ್ಟು ಲಾಭ ಅಂತ ನಿರ್ವಿಕಾರವಾಗಿ ಯೋಚಿಸುತ್ತೀರೋ? ಖರ್ಚೆಷ್ಟೇ ಆಗಲಿ ಆತನನ್ನು ಉಳಿಸಿಕೊಳ್ಳಿ ಅಂತ ಹೇಳುತ್ತೀರೋ? ಸಡನ್ ಬ್ರೇಕ್ ಅದುಮಿದರೆ ಬೈಕ್ ಬೀಳುತ್ತದೆ, ತನಗೆ ಏಟಾಗುತ್ತದೆ ಎಂಬುದು ಬೈಕ್ ಸವಾರಿ ಮಾಡುವ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಎಷ್ಟು ಖರ್ಚಾದರೂ ಪರವಾಗಿಲ್ಲ ಎಂಬ ಮಾತಿನ ಹಿಂದೆ ತನ್ನ ಕೈಯ್ಯಲ್ಲಿ ಅಷ್ಟೊಂದು ದುಡ್ಡಿಲ್ಲ ಎಂಬ ಸತ್ಯತಿಳಿದಿರುತ್ತದೆ, ಆದರೂ ಆ ಸಂದರ್ಭ, ಆ ಕ್ಷಣಾರ್ಧದಲ್ಲಿ ಮನಸ್ಸು ಅಯಾಚಿತವಾಗಿ ನಮ್ಮ ಸಾಧಾರಣ ಮನಸ್ಥಿತಿಯನ್ನು ಮೀರಿ ತೆಗೆದುಕೊಳ್ಳುವ ನಿರ್ಧಾರ ಮಹತ್ವದ್ದಾಗಿರುತ್ತದೆ. ಅದು ನಮ್ಮೊಳಗಿರುವ ವಿಚಿತ್ರ ಸಾಮರ್ಥ್ಯವೂ ಆಗಿರಬಹುದು. ಬದುಕು ಅಸಹಜ ಅನ್ನಿಸಿದಾಗ, ಅತಿರೇಕಕ್ಕೆ ತಲುಪಿದಾಗ, ಇಸ್ಪಿಟ್ ಎಲೆಗಳ ಸೌಧ ಅನಿರೀಕ್ಷಿತವಾಗಿ ಕುಸಿದಾಗ, ಎಲ್ಲ ಪದಾರ್ಥಗಳನ್ನು ಬಡಿಸಿದ ಬಟ್ಟಲಿನಿಂದ ಮೊದಲ ತುತ್ತು ಬಾಯಿಗೆ ಹಾಕುವ ಮೊದಲೇ ಬಟ್ಟಲು ಮಗುಚಿ ಆಹಾರ ಮಣ್ಣು ಪಾಲಾದಾಗ, ಖುಷಿ ಖುಷಿಯಾಗ ಪ್ರಯಾಣದ ನಡುವೆ ಮುನ್ಸೂಚನೆ ಇಲ್ಲದೆ ನಿರ್ಜನ ಪ್ರದೇಶದಲ್ಲಿ ನಿಮ್ಮ ವಾಹನ ಕೈಕೊಟ್ಟಾಗ.... 

ಇಂತಹ ಸಾವಿರ ಸಾವಿರ ಸನ್ನಿವೇಶಗಳಲ್ಲಿ ಯಾವ ಪ್ಲಾನೂ ಆ ಹೊತ್ತಿಗೆ ನಿಮಗೆ ಊರುಗೋಲಾಗಿರಬೇಕಾಗಿಲ್ಲ. ಇಂಟರ್ನಲ್ ಮೆಮೊರಿಯಲ್ಲಿ ಅನುಭವಗಳ ಪಾಠ ಕಲಿಸಿದ ಸಾಮಾನ್ಯ ಜ್ನಾನ ಮತ್ತು ಆ ಹೊತ್ತಿಗೆ ಮೆದುಳಿನಲ್ಲಿ ಸ್ಟಾಕ್ ಇರುವ ಸಹನೆ ಹಾಗೂ ಧೈರ್ಯ ಮಾತ್ರ ಆರದಿರಲಿ ಬೆಳಕು ಅಂತ ಹಾಡಬಹುದು.... ಅಷ್ಟೆ!

-ಕೃಷ್ಣಮೋಹನ ತಲೆಂಗಳ

Follow Us:
Download App:
  • android
  • ios