ಅಲ್ಲಿ ಯುದ್ಧ ಇಲ್ಲಿ ಮದುವೆ; ರಷ್ಯನ್ ವರ, ಉಕ್ರೇನ್ ವಧುವಿಗೆ ಧರ್ಮಶಾಲಾದಲ್ಲಿ ವಿವಾಹ
ಪ್ರೀತಿ ಎಂದರೆ ಹಾಗೇನೆ. ಅದಕ್ಕೆ ಜಾತಿ-ಧರ್ಮ, ರಾಜ್ಯ, ದೇಶಗಳ ಹಂಗಿಲ್ಲ. ಯಾರ ಮೇಲಾದರೂ ಯಾವಾಗ ಬೇಕಾದರೂ ಪ್ರೀತಿಯಾಗಿ ಬಿಡುತ್ತದೆ. ಹಾಗೆಯೇ ಇಲ್ಲೊಂದೆಡೆ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ಹೊರತಾಗಿಯೂ, ರಷ್ಯಾದ ವ್ಯಕ್ತಿ ತನ್ನ ಉಕ್ರೇನಿಯನ್ ಗೆಳತಿಯನ್ನು ಮದುವೆಯಾಗಿದ್ದಾನೆ.
ಪ್ರೀತಿ ಎಲ್ಲಾ ಗಡಿಗಳನ್ನು ಮೀರಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆಯು ಹೆಚ್ಚಾಗಿದ್ದರೂ, ಈ ಜೋಡಿ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಆರಿಸಿಕೊಂಡರು. ಭಾಷೆ, ಧರ್ಮ ಅಥವಾ ಸ್ಥಳವನ್ನು ಲೆಕ್ಕಿಸದೆ ತಮ್ಮ ಪ್ರೀತಿಯನ್ನು ಸಾಕಾರ ಮಾಡಿಕೊಂಡರು. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ಹೊರತಾಗಿಯೂ, ಇಸ್ರೇಲ್‌ನಲ್ಲಿರುವ ರಷ್ಯಾದ ನಿವಾಸಿ ಸರ್ಗೆಯ್ ನೊವಿಕೋವ್ ಅವರು ಧರ್ಮಶಾಲಾ ಬಳಿಯ ಹಿಮಾಚಲ ಪ್ರದೇಶದ ದಿವ್ಯ ಆಶ್ರಮ ಖರೋಟಾದಲ್ಲಿ ಉಕ್ರೇನಿಯನ್ ಗೆಳತಿ ಎಲೋನಾ ಬ್ರಮೋಕಾ ಅವರನ್ನು ವಿವಾಹವಾದರು.
ರಷ್ಯನ್ ವರ, ಉಕ್ರೇನ್ ವಧುವಿಗೆ ವಿವಾಹ
ಸೆರ್ಗೆಯ್ ನೊವಿಕೋವ್ ಮತ್ತು ಎಲೋನಾ ಬ್ರಮೋಕಾ ಎರಡು ವರ್ಷಗಳಿಂದ ಸಂಬಂಧ (Relationship)ದಲ್ಲಿದ್ದರು. ಸ್ತುತ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಹೊರತಾಗಿಯೂ, ದಂಪತಿಗಳು ಧರ್ಮಶಾಲಾದಲ್ಲಿ ಮದುವೆ (Wedding)ಯಾಗಲು ನಿರ್ಧರಿಸಿದರು. ವರದಿಯ ಪ್ರಕಾರ, ದಂಪತಿಗಳು ಸನಾತನ ಧರ್ಮ ಪದ್ಧತಿಗಳ ಪ್ರಕಾರ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಖರೋಟಾ ಗ್ರಾಮದ ದಿವ್ಯ ಆಶ್ರಮದ ರಾಧಾ ಕೃಷ್ಣ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಹಿಂದೂ ಸಂಪ್ರದಾಯದಂತೆ ಪವಿತ್ರ ಮಂತ್ರಗಳ ಪಠಣ, ಮೆರವಣಿಗೆ ಬಳಿಕ ವಿವಾಹವಾಗಿದ್ದಾರೆ. ನವ ಜೋಡಿಯ (Couple) ಕುಟುಂಬಸ್ಥರು, ಆಪ್ತರು ಹಾಗೂ ಸ್ಥಳೀಯರು ವಿಶೇಷ ಮದುವೆಗೆ ಸಾಕ್ಷಿಯಾದರು.
ಮದುವೆ ದಿನ ವರ-ವಧು ನಗುವಂತೆಯೇ ಇಲ್ಲ, ಇದೆಂಥಾ ವಿಚಿತ್ರ ಸಂಪ್ರದಾಯ !
ಸಮಾರಂಭದಲ್ಲಿ ಭಾಗವಹಿಸಿದ ಸ್ಥಳೀಯರು ಎಲ್ಲಾ ವಿಧಿಗಳನ್ನು ನೆರವೇರಿಸಿದರು. ಸಾಂಪ್ರದಾಯಿಕ ಹಿಮಾಚಲಿ ಜಾನಪದ ಹಾಡುಗಳಿಗೆ ನೃತ್ಯ ಮಾಡಿದರು. ಕಾಂಗ್ರಿ ಧಾಮ್‌ನಲ್ಲಿ ಅತಿಥಿಗಳಿಗೆ 'ದೇಶಿ ಶೈಲಿಯಲ್ಲಿ ವಿದೇಶೀ ಶಾದಿ' ವ್ಯವಸ್ಥೆ ಕಲ್ಪಿಸಲಾಯಿತು. ಜಾನಪದ ಸಂಗೀತಕ್ಕೆ ನೃತ್ಯ, ವಧು ಮತ್ತು ವರರನ್ನು ಸಾಂಪ್ರದಾಯಿಕ ಭಾರತೀಯ ಉಡುಪಿನಲ್ಲಿ ಅಲಂಕಾರ ನೋಡುಗರ ಕಣ್ಮನ ಸೆಳೆಯಿತು. ಸೆರ್ಗೆಯ್ ಕುರ್ತಾ ಪೈಜಾಮಾ, ಅಚ್ಕನ್, ಪಗ್ಡಿ ಮತ್ತು ಸೆಹ್ರಾವನ್ನು ಧರಿಸಿದ್ದರು ಮತ್ತು ಎಲೋನಾ ಲೆಹಂಗಾ-ಚೋಲಿ ಮತ್ತು ಕೆಂಪು ಕಸೂತಿ ದುಪಟ್ಟಾವನ್ನು ಧರಿಸಿದ್ದರು. ದಿವ್ಯಾ ಆಶ್ರಮ ಖರೋಟಾದ ಪಂಡಿತ್ ಸಂದೀಪ್ ಶರ್ಮಾ ಪ್ರಕಾರ, ಸೆರ್ಗೆಯ್ ಮತ್ತು ಎಲೋನಾ ಕಳೆದ ವರ್ಷದಿಂದ ಧರ್ಮಶಾಲಾ ಬಳಿಯ ಧರ್ಮಕೋಟ್‌ನಲ್ಲಿ ತಂಗಿದ್ದರು.
ಪಂಡಿತ್ ರಾಮನ್ ಶರ್ಮಾ ಅವರ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಸನಾತನ ಧರ್ಮದ ಸಂಪ್ರದಾಯಗಳ ಪ್ರಕಾರ ಮದುವೆಯ ಪ್ರಾಮುಖ್ಯತೆಯ ಬಗ್ಗೆ ಅವರಿಗೆ ತಿಳಿಸಿದರು. ವಿನೋದ್ ಶರ್ಮಾ ಕುಟುಂಬದವರು ಎಲೋನಾ ಅವರ 'ಕನ್ಯಾದಾನ' ಸೇರಿದಂತೆ ವಿವಾಹ ಸಮಾರಂಭಗಳನ್ನು ನಡೆಸಿದರು. ನೂತನ ದಂಪತಿಗಳು ಪಂಡಿತ್ ರಮಣ್ ಶರ್ಮಾ ಅವರು ಪಠಿಸುತ್ತಿದ್ದ ಸ್ತೋತ್ರಗಳನ್ನು ಆಸಕ್ತಿಯಿಂದ ಉಚ್ಛರಿಸಿದರು. ಅನುವಾದಕರ ಸಹಾಯದಿಂದ ದಂಪತಿಗಳು ಅವರು ಪಠಿಸುತ್ತಿರುವ ಪ್ರತಿಯೊಂದು ಮಂತ್ರ ಅರ್ಥವನ್ನು ಗ್ರಹಿಸುವಂತೆ ಮಾಡಿದರು.
ಇಲ್ಲಿ ವಿಜೃಂಭಣೆಯಿಂದ ನಡೆಯುತ್ತೆ ಮಂಗಳಮುಖಿಯರ ಮದುವೆ, ಮರುದಿನವೇ ವಿಧವೆ!
ರಷ್ಯಾ-ಉಕ್ರೇನ್ ಯುದ್ಧದ ನಡುವೆಯೊಂದು ಪ್ರೀತಿ
ಕಳೆದ ಆರು ತಿಂಗಳಿಂದ ಸಣ್ಣ ದೇಶ ಉಕ್ರೇನ್ ಮೇಲೆ ಬಲಿಷ್ಠ ರಷ್ಯಾ ಯುದ್ಧವನ್ನು ಮಾಡುತ್ತಲೇ ಇದೆ. ಕೆಲ ದಿನಗಳ ಹಿಂದಷ್ಟೇ ಉಕ್ರೇನ್‌ನ ದಕ್ಷಿಣ ಖೆರ್ಸನ್ ಪ್ರದೇಶದಲ್ಲಿ ರಷ್ಯಾದ ಹಿಡಿತದಲ್ಲಿರುವ ನೋವಾ ಕಾಖೋವ್ಕಾ ಪಟ್ಟಣದ ಮೇಲೆ ಉಕ್ರೇನ್ ಸೇನಾ ಪಡೆಗಳು ದಾಳಿ ನಡೆಸಿತ್ತು. ರಾತ್ರಿ ವೇಳೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿ, 70 ಮಂದಿ ಗಾಯಗೊಂಡಿದ್ದರು. ಇಂಥಾ ಯುದ್ಧದ ಪರಿಸ್ಥಿತಿಯಲ್ಲಿ ಉಭಯ ದೇಶಗಳ ಜೋಡಿಯೊಂದು ಮದುವೆಯಾಗಿರುವುದು, ಈ ಅಪರೂಪದ ಪ್ರೀತಿಯ ಸಂಬಂಧವೊಂದಕ್ಕೆ ಭಾರತ ಸಾಕ್ಷಿಯಾಗಿರುವುದು ಖುಷಿಯ ವಿಚಾರ.