ನಟಿ ರಶ್ಮಿಕಾ ಮಂದಣ್ಣ ಅವರು ತಾಯ್ತನ ಮತ್ತು ಮಕ್ಕಳ ಪಾಲನೆಯ ಕುರಿತು ಮಾತನಾಡಿದ್ದು, ತಮ್ಮ ಸ್ವಾರ್ಥಕ್ಕಾಗಿ ಮಕ್ಕಳ ಭವಿಷ್ಯವನ್ನು ನಿರ್ಧರಿಸುವ ಪೋಷಕರ ನಡೆಯನ್ನು ಖಂಡಿಸಿದ್ದಾರೆ. ಮಕ್ಕಳನ್ನು ನಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಈ ಸಂಪ್ರದಾಯವು ತನ್ನ ಪೀಳಿಗೆಗೆ ಕೊನೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಇದೀಗ ವಿಜಯ್ ದೇವರಕೊಂಡ ಅವರ ಜೊತೆ ಮದುವೆಯಾಗಿ ಮದ್ವೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ, ಚಿತ್ರದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಅವರು ತಾಯ್ತನ ಮತ್ತು ಮಕ್ಕಳ ಬಗ್ಗೆ ಮಾತನಾಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಗಿದೆ. ತಾಯ್ತನ ಎಂದರೆ ಏನು, ನಾವು ಮಕ್ಕಳನ್ನು ಮಾಡಿಕೊಳ್ಳುವುದು ಏಕೆ, ಇಂಥ ಪರಂಪರೆ ನಮಗೇ ಕೊನೆಯಾಗಬೇಕು ಎಂದೆಲ್ಲಾ ರಶ್ಮಿಕಾ ಮಂದಣ್ಣ ಮಾತನಾಡಿರುವ ಹಿಂದೆ ಕಾರಣವೂ ಇದೆ.
ಬಹುತೇಕ ಅಪ್ಪ-ಅಮ್ಮ ಇರೋದು ಹೀಗೆ
ಬಹುತೇಕ ಅಪ್ಪ-ಅಮ್ಮ ತಮ್ಮ ಮಕ್ಕಳು ಹೀಗೆಯೇ ಬೆಳೆಯಬೇಕು, ಇದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದೆಲ್ಲಾ ಬಯಸುತ್ತಾರೆ. ಮಕ್ಕಳ ಆಸೆ, ಆಕಾಂಕ್ಷೆಗಳನ್ನು ಕೇಳದ ಅಪ್ಪ-ಅಮ್ಮಂದಿರೂ ಸಾಕಷ್ಟು ಮಂದಿ ಇದ್ದಾರೆ. ಅದರಲ್ಲಿಯೂ ಶಿಕ್ಷಣದ ವಿಷಯದಲ್ಲಿ ಮಕ್ಕಳ ಇಂಟರೆಸ್ಟ್ ಏನು, ಅವರು ಯಾವ ವಿಷಯ ಬಯಸುತ್ತಾರೆ, ಅವರು ಏನನ್ನು ಅಧ್ಯಯನ ಮಾಡಲು ಬಯಸುತ್ತಾರೆ, ಯಾವ ವಿಷಯದಲ್ಲಿ ಮುಂದೆ ಹೋಗಲು, ಭವಿಷ್ಯ ರೂಪಿಸಿಕೊಳ್ಳಲು ಬಯಸುತ್ತಾರೆ ಎನ್ನುವುದು ಅಪ್ಪ-ಅಮ್ಮಂದಿರಿಗೆ ಮ್ಯಾಟರ್ ಆಗುವುದೇ ಇಲ್ಲ. ಅಕ್ಕ-ಪಕ್ಕದ ಮನೆಯವರೋ ಇಲ್ಲವೇ ತಮ್ಮ ಸಂಬಂಧಿಕರಲ್ಲಿ ಇನ್ಯಾರೋ ಯಾವುದೇ ವಿಷಯ ಆಯ್ಕೆ ಮಾಡಿಕೊಂಡಿದ್ದಾನೆ/ಳೆ ಅದನ್ನೇ ತಮ್ಮ ಮಕ್ಕಳೂ ಓದಬೇಕು ಎಂದೋ ಅಥವಾ ಅದಕ್ಕಿಂತ ದೊಡ್ಡದ್ದೇ ಮಾಡಬೇಕು ಎನ್ನುವ ತಮ್ಮ ಸ್ವಾರ್ಥವೇ ಮುಖ್ಯವಾಗಿ ಬಿಡುತ್ತದೆ!
ಸ್ವಾರ್ಥಕ್ಕಾಗಿ ಮಕ್ಕಳ ಬಳಕೆ
ಅವನು ಎಂಜಿನಿಯರಿಂಗ್ ಓದ್ತಾ ಇದ್ದಾನೆ, ನನ್ನ ಮಕ್ಕಳು ಡಾಕ್ಟರ್ ಆಗಬೇಕು, ಅವನು ಆ ವಿಷಯ ತೆಗೆದುಕೊಂಡ, ನನ್ನ ಮಕ್ಕಳು ಈ ವಿಷಯ ತೆಗೆದುಕೊಳ್ಳಬೇಕು... ಎಂದೆಲ್ಲಾ ಯೋಚಿಸುವ ಅಪ್ಪ-ಅಮ್ಮ ಎಷ್ಟು ಮಂದಿ ಇಲ್ಲ ಹೇಳಿ? ಆ ವಿಷಯಕ್ಕೆ ಇಂದು ಸ್ಕೋಪ್ ಇದ್ಯಾ, ಹೋಗಲಿ ಸ್ಕೋಪ್ ಇದ್ದರೂ ಮಕ್ಕಳಿಗೆ ಅದರ ಮೇಲೆ ಇಂಟರೆಸ್ಟ್ ಇದ್ಯಾ, ಹೂಂ ಹೂಂ ಯಾವುದೂ ಬೇಡ, ಅವರಿಗೆ ತಮ್ಮ ಇಗೋ, ತಮ್ಮ ಸ್ವಾರ್ಥ, ತಮ್ಮ ಸ್ಟೇಟಸ್, ತಮ್ಮ ಪ್ರೆಸ್ಟೀಜ್ ಮುಖ್ಯವಾಗುತ್ತದೆ. ಇದನ್ನೇ ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಇಲ್ಲಿ ಹೇಳಿದ್ದಾರೆ.
ಇದು ನನ್ನ ಜನರೇಷನ್ಗೇ ಮುಗಿಯಲಿ
ಇಂಥ ಒಂದು ಸಂಪ್ರದಾಯ ನನ್ನ ಜನರೇಷನ್ಗೇ ಮುಗಿಯಬೇಕು. ಮಕ್ಕಳು ನಾನು ಹುಟ್ಟುತ್ತೇನೆ ಎಂದು ಬರುವುದಿಲ್ಲ. ಅವರನ್ನು ನಮ್ಮ ಸ್ವಾರ್ಥಕ್ಕಾಗಿ ಹುಟ್ಟಿಸಿಕೊಳ್ತೇವೆ. ನಮ್ಮ ವಂಶ ಬೆಳೆಯಲಿ ಎಂದು ಮಕ್ಕಳು ಮಾಡಿಕೊಳ್ತೇವೆ. ಆದರೆ, ಆ ಬಳಿಕ ಸ್ವಾರ್ಥಿ ಆಗಿಬಿಡುತ್ತೇವೆ. ನನ್ನ ಅನಿಸಿಕೆ ಪ್ರಕಾರ, ಪೋಷಕರು ತಮ್ಮ ಮಕ್ಕಳನ್ನು ಬಳಲುವಂತೆ ಮಾಡಬಾರದು ಅಥವಾ ತಮ್ಮಿಂದ ಈಡೇರಿಸಿಕೊಳ್ಳಲು ಆಗದ್ದನ್ನು ಮಕ್ಕಳು ಈಡೇರಿಸಲಿ ಎಂದು ಬಯಸಬಾರದು. ಒಂದು ಮಗುವನ್ನು ಅಸ್ತಿತ್ವಕ್ಕೆ ತಂದರೆ, ಸುರಕ್ಷಿತ ಮತ್ತು ಸಂತೋಷದ ಜೀವನವನ್ನು ಒದಗಿಸುವುದು ಸಂಪೂರ್ಣವಾಗಿ ಪೋಷಕರ ಜವಾಬ್ದಾರಿಯಾಗಿದೆ. ನಮ್ಮ ಸ್ವಾರ್ಥಕ್ಕೆ ಅವರನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ಒಳ್ಳೆಯ ಅಮ್ಮನ ಗುಣ
ಮಕ್ಕಳು ಜೀವನಕ್ಕೆ ಒಂದು ವಿಶಿಷ್ಟ ರೀತಿಯ ಸಂತೋಷವನ್ನು ತರುತ್ತಾರೆ ಎಂದು ನಂಬುವ ಮೂಲಕ ಒಂದು ದಿನ ನನ್ನದೇ ಆದ ಮಕ್ಕಳನ್ನು ಮಾಡಿಕೊಳ್ಳಲು ಬಯಸುವವಳು ನಾನು. ಸ್ವಾರ್ಥವನ್ನು ಮಕ್ಕಳ ಮೇಲೆ ಹೇರುವ ಸಂಪ್ರದಾಯ ನಮ್ಮ ಪೀಳಿಗೆಗೆ ಕೊನೆಯಾಗಲಿ ಎನ್ನುವ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದಾರೆ ನಟಿ. ಇದಕ್ಕೆ ಬಂದಿರುವ ಕಮೆಂಟ್ಸ್ ನೋಡಿದರೆ, ಎಷ್ಟು ಮಂದಿ ತಮ್ಮ ತಂದೆ-ತಾಯಂದಿರ ಸ್ವಾರ್ಥಕ್ಕೆ ಬಲಿಯಾಗಿದ್ದಾರೆ ಎನ್ನುವುದು ತಿಳಿಯುತ್ತದೆ. ನಾನು ಹೇಳಬೇಕು ಎಂದುಕೊಂಡಿದ್ದನ್ನೇ ನಟಿ ಹೇಳಿದ್ದಾರೆ, ಅವರು ಒಳ್ಳೆಯ ತಾಯಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹಲವರು ಹೇಳುತ್ತಿದ್ದಾರೆ.


