ರಾಜಸ್ಥಾನದಲ್ಲಿ ವಿವಾದಾತ್ಮಕ ಸಂಪ್ರದಾಯವೊಂದಿದೆ ಎಂದು ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ವಕೀಲೆಯೊಬ್ಬರು ಹೇಳಿಕೆ ನೀಡಿದ್ದು, ಇದನ್ನು NCIB ಸುಳ್ಳು ಎಂದು ಖಚಿತಪಡಿಸಿದೆ. ಈ ಹೇಳಿಕೆ ಸುಳ್ಳು ಮತ್ತು ದಾರಿತಪ್ಪಿಸುವಂತಿದೆ ಎಂದು NCIB ಹೇಳಿದೆ.
ಬೆಂಗಳೂರು (ಆ.29): ಸೋಶಿಯಲ್ ಮೀಡಿಯಾ ಬಂದ ಬಳಿಕ ಹಾಗೂ ಸೋಶಿಯಲ್ ಮೀಡಿಯಾದಿಂದಲೂ ಹಣ ಸಂಪಾದಿಸಿ ಜೀವನ ಕಟ್ಟಿಕೊಳ್ಳೋದು ಸಾಧ್ಯ ಎಂದು ಗೊತ್ತಾದ ಬಳಿಕ ಅಣಬೆಯ ರೀತಿಯ ಯೂಟ್ಯೂಬ್ ಚಾನೆಲ್‌ಗಳು ಹುಟ್ಟುಕೊಂಡಿವೆ. ತಲೆ ಬುಡ ಇಲ್ಲದ ವಿಚಾರಗಳನ್ನು ಜನರ ತಲೆಗೆ ತುಂಬಿಸುವ ಕೆಲಸವಾಗುತ್ತಿದೆ. ಎಲ್ಲೂ ಇಲ್ಲದ ವಿಚಾರಗಳನ್ನು ಜನರಿಗೆ ತಿಳಿಸಬೇಕು ಎನ್ನುವ ಧಾವಂತದಲ್ಲಿ ಬರೀ ಸುಳ್ಳುಗಳನ್ನೇ ಜನರಿಗೆ ನೀಡುವ ಪ್ರಯತ್ನವಾಗುತ್ತಿದೆ. ಅದರಲ್ಲೂ ಪಾಡ್‌ಕಾಸ್ಟ್‌ಗಳನ್ನು ಇಂಥವರು ಕುಳಿತುಕೊಂಡರೆ ಹೇಳುವು ವಿಚಾರಗಳು ಬರೀ ಇಂಥದ್ದೇ ದಾಟಿಯವು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಿಪ್‌ವೊಂದು ವೈರಲ್ ಆಗಿದ್ದು, ಅದು ಕೂಡ ಇಂಥದ್ದೇ ಜಾಯಮಾನಕ್ಕೆ ಸೇರಿದವಾಗಿದೆ.
ತನ್ನನ್ನು ತಾನು ವಕೀಲೆ ಎಂದು ಹೇಳಿಕೊಂಡಿರುವ ಯುವತಿ ಇತ್ತೀಚೆಗೆ ರಿಯಲ್‌ಹಿಟ್ ಯೂಟ್ಯೂಬ್ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಳು. ಅದರಲ್ಲಿ ಆಕೆ, ರಾಜಸ್ಥಾನದ ಒಂದು ಪ್ರದೇಶದಲ್ಲಿ ಇರುವ ಸಂಪ್ರದಾಯದ ಬಗ್ಗೆ ಮಾತನಾಡಿದ್ದರು. 'ರಾಜಸ್ಥಾನದಲ್ಲಿ ಇರುವ ಒಂದು ಸಂಪ್ರದಾಯದಲ್ಲಿ ಮದುವೆಯಾದ ಬಳಿಕ ನವವಧು ಮೊದಲು ತನ್ನ ಮಾವನ ಜೊತೆ ಸಂಬಂಧ ಬೆಳೆಸಬೇಕು. ಬಳಿಕ ತನ್ನ ಮೈದುನನ ಜೊತೆ ಹಾಸಿಗೆಯಲ್ಲಿ ಮಲಗಬೇಕು. ಕೊನೆಯದಾಗಿ ಆಕೆ ಗಂಡನ ಜೊತೆ ಲೈಂಗಿಕ ಸಂಬಂಧ ಹೊಂದಬೇಕು. ಇದರಿಂದಾಗಿ ಅಲ್ಲಿ ನವವಧು ತನ್ನ ಮೊದಲ ಗರ್ಭವನ್ನು ತೆಗೆಸಿಹಾಕುವ ಸಂಪ್ರದಾಯವಿದೆ' ಎಂದು ಹೇಳಿದ್ದರು.
ಮಹಿಳೆಯ ಹೇಳಿಕೆ ಸುಳ್ಳು ಎಂದ NCIB, ಕ್ರಮಕ್ಕೆ ಸೂಚನೆ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆದ ಬಳಿಕ ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಷನ್ ಬ್ಯೂರೋ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಇಂಥದ್ದೊಂದು ಸಂಪ್ರದಾಯವೇ ಇಲ್ಲ. ಈ ಹುಡುಗಿ ಹೇಳಿರುವುದು ಬರೀ ಸುಳ್ಳು ಎಂದಿದೆ.
ಈಕೆ ಹೇಳಿರುವ ಸಂಪ್ರದಾಯದ ಮಟ್ಟಿಗೆ ನಮ್ಮ ಮಟ್ಟದಲ್ಲಿ ಎಲ್ಲಾ ರೀತಿಯ ತನಿಖೆಗಳನ್ನು ಮಾಡಿದ್ದೇವೆ. ಆದರೆ, ನಮ್ಮ ತನಿಖೆಯಲ್ಲಿ ಇಂಥದ್ದೊಂದು ಸಂಪ್ರದಾಯ ರಾಜಸ್ಥಾನದಲ್ಲಿ ಇರುವ ಬಗ್ಗೆ ಯಾವುದೇ ಸಾಕ್ಷಿ ದೊರೆತಿಲ್ಲ. ಈ ಹೇಳಿಕೆ ಸಂಪೂರ್ಣವಾಗಿ ನಕಲಿ, ಸುಳ್ಳು ಮತ್ತು ದಾರಿತಪ್ಪಿಸುವಂತಿದೆ. ಇದನ್ನು ಪ್ರಚಾರಕ್ಕಾಗಿ ಮತ್ತು ಜನರನ್ನು ದಾರಿತಪ್ಪಿಸಲು ಮಾತ್ರ ಹರಡಲಾಗಿದೆ.
ಸುಳ್ಳು ಸುದ್ದಿಗಳಿಗೆ ಕಿವಿಕೊಡಬೇಡಿ ಎಂದ ಎನ್‌ಸಿಐಬಿ
ಈ ಅಸಂಬದ್ಧ ಮತ್ತು ದ್ವೇಷ ಹರಡುವ ವೀಡಿಯೊ ಮಾಡಿದ ಮಹಿಳೆಯ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಬಂಧಿಸಬೇಕೆಂದು NCIB ಪ್ರಧಾನ ಕಚೇರಿ ರಾಜಸ್ಥಾನ ಪೊಲೀಸ್‌ಗೆ ವಿನಂತಿಸುತ್ತದೆ. ಇದೇ ರೀತಿ, ಇಂತಹ ನಕಲಿ ಸುದ್ದಿ ಮತ್ತು ವದಂತಿಗಳಿಗೆ ಗಮನ ಕೊಡಬೇಡಿ ಎಂದು ನಾವು ನಿಮ್ಮೆಲ್ಲರನ್ನೂ ವಿನಂತಿಸುತ್ತೇವೆ' ಎಂದು ಪೋಸ್ಟ್ ಮಾಡಿದೆ.
ನನ್ನ ಬಳಿ ಬಂದ ಜನರ ಮಾತನ್ನು ಹೇಳಿದ್ದೇನೆ ಎಂದ ಮಹಿಳೆ
ಇನ್ನು ತಮ್ಮ ವಿಡಿಯೋ ವೈರಲ್ ಆಗಿ, ಎನ್‌ಸಿಐಬಿ ತನಿಖೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಮಹಿಳೆ, 'ನನ್ನ ಪಾಡ್‌ಕಾಸ್ಟ್‌ಅನ್ನು ನೋಡಿರುವ ರಾಜಸ್ಥಾನದ ಜನರು, ಸಡನ್ ಆಗಿ ದೇಶಭಕ್ತಿ ಬೆಳೆಸಿಕೊಂಡಿದ್ದಾರೆ. ಫೇಕ್ ಐಡಿಗಳನ್ನು ಬಳಸಿಕೊಂಡು ನನ್ನನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ಇವರುಗಳು ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳುತ್ತೇನೆ. ಆದರೆ, ನನ್ನ ಬಳಿಕ ಬಂದ ಜನರ ಸಮಸ್ಯೆಗಳನ್ನು ಕೇಳಿದ ಬಳಿಕವೇ ಇಂಥದ್ದೊಂದು ಸಂಪ್ರದಾಯ ಇರೋದರ ಬಗ್ಗೆ ಗೊತ್ತಾಗಿತ್ತು. ಅವರ ಅನುಭವವನ್ನೇ ನಾನು ಹಂಚಿಕೊಂಡಿದ್ದೇನೆ. ಅದಲ್ಲದೆ, ಹೀಗೇ ಆಗುತ್ತದೆ ಎಂದೂ ನಾನು ಎಲ್ಲೂ ಹೇಳಿಲ್ಲ. ಹಾಗಾಗಿ ನಮ್ಮ ನಡುವೆ ಏನಾಗತ್ತೆ, ಏನಾಗಲ್ಲ ಅನ್ನೋ ಮಾಹಿತಿ ಇಲ್ಲದೆ ಮಾತನಾಡಲು ಹೋಗಬೇಡಿ. ಇದಲ್ಲಿ ನನ್ನ ವೈಯಕ್ತಿಕ ಲಾಭ ಏನೂ ಇಲ್ಲ. ಅಥವಾ ಯಾರನ್ನಾದರೂ ಹರ್ಟ್ ಮಾಡಬೇಕು ಅನ್ನೋ ಉದ್ದೇಶವಲ್ಲ. ನಾನೇನು ಕೇಳಿದ್ದೇನೋ ಅದನ್ನು ಹೇಳಿದ್ದೇನೆ ಎಂದಿದ್ದಾರೆ.
