ಭಾದ್ರಪದ ಮಾಸ ಆರಂಭವಾಗಿದೆ ಅಗಸ್ಟ್ 26, 27 ಶ್ರೀಗೌರೀ_ಗಣಪತಿ ಹಬ್ಬ ಪುನ ಬಂದಿದೆ. ಶಾಸ್ತ್ರ ಪ್ರಕಾರ ಇದೂ ಕೂಡಾ ಚಾತುರ್ಮಾಸ ಅಂತರ್ಗತ ಬರುವ ವ್ರತವೇ ಆಗಿದೆ. ಜನ ಮಾನಸ ಸಾಮಾಜಿಕ ಬದಲಾವಣೆ ಆಗಿ, ಹಬ್ಬ ಉತ್ಸವ ಆಗಿದೆ. 

ದೈವಜ್ಞ ಹರೀಶ್ ಕಾಶ್ಯಪ

ವ್ರತ ಅಂದರೆ, ಇಂದ್ರಿಯ ಭೋಗಗಳ ತ್ಯಾಗ, ಉದರ ಉಪಸ್ಥಗಳ ನಿಗ್ರಹ ಮಾಡಿಕೊಂಡು, ವಿಧಿಯಂತೆ ವ್ರತದ ಅಡುಗೆ ಒಪ್ಪೊತ್ತು, ತ್ರಿಕಾಲ ಪೂಜೆ, ನೆಲದ ಮೇಲೆ ಅಲ್ಪ ವಿಶ್ರಾಂತಿ, ಸ್ನಾನ ಶುಚಿ, ಪುನ ಜಪ ಅರ್ಚನೆ , ನೈವೇದ್ಯ, ಪುರಾಣ ಕಥನ ತನ್ಮೂಲಕ ದೇವ ದೇವಿಯರ ಮಹಿಮೆ ತಿಳಿದು ಶರೀರಾ ಅಂತಃಕರಣಗಳ ಶುದ್ಧಿಯಲ್ಲಿ ಪ್ರಸನ್ನ ಮನಸ್ಕರಾಗಿ ಧನ್ಯರಾಗುವುದೇ ಒಟ್ಟು ಭಾವ.

ಇದಕ್ಕೆಲ್ಲ ನಮ್ಮ ಮನ ಸಂಕಲ್ಪ ಏನಿರಬೇಕು ? ಇದನ್ನು ಶ್ರೀ ಜಗನ್ನಾಥದಾಸರ ಒಂದು ಸೊಗಸಾದ ಪದ್ಯ ಸಾರುತ್ತದೆ.

ವಿಘ್ನರಾಜನೆ ದುರ್ವಿಷಯದೊಳು

ಮಗ್ನವಾಗಿಹ ಮನವ ಮಹ

ದೋಷಘ್ನನಂಘ್ರಿ ಸರೋರುಹ ಯುಗದಿ

ಲಗ್ನವಾಗಲಿ ಮನ ನಿತ್ಯನರಕ ಭಯಾಗ್ನಿಗಳಿಗಾನಂಜೆ

ಗುರುವರ ಭಗ್ನಗೈಸೆನ್ನ ಅವಗುಣಗಳನು ಪ್ರತಿದಿವಸದಲಿ

( ಇಂದ್ರಿಯ ಭೋಗ ಲಾಲಸೆಯೇ ದುರ್ವಿಷಯಗಳು. ಅಂಥ ದೋಷಗಳ ನಾಶ ಮಾಡುವ ಶ್ರೀಹರಿಯ ನಾಮ ಸ್ಮರಣೆ ಕೊಟ್ಟು , ಆತನಲ್ಲಿ ಮನವು ಲಗ್ನವಾಗಲಿ. ಇಷ್ಟಾದರೆ ಸಾಕು, ಯಾವಾವ ಕಷ್ಟ ಕೋಟಲೆ ನಾಟಕಕ್ಕೂ ನಾನು ಹೆದರುವುದಿಲ್ಲ , ಒಟ್ಟು ಭಾವ ಶ್ರೀಹರಿಭಕ್ತಿ ಬೆಳೆಯಲಿ)

ದಕ್ಷಿಣಾಯಣ ಬಂತು ಅಂದರೆ ನಾಲ್ಕು ಮಾಸಗಳೂ ಇದೇ ರೀತಿಯಲ್ಲಿ ಮಣ್ಣು, ಗೋವು, ನಾಗ, ಗೌರೀ, ಗಣಪತಿ, ಪಿತೃ, ನವರಾತ್ರೆ ಸಾಲು ಸಾಲಾಗಿ ವ್ರತಗಳೇ ನಿಯಾಮಿಸಲಾಗಿದೆ. ಆದರೆ,

ಕಾಲ ಕಳೆದಂತೆಲ್ಲ ಜನರಿಗೆ ಭೋಗ ಪ್ರಧಾನ ಜೀವನವೇ ತಲೆಗೆ ಎರಗಿ, ಪರಮ ಪುಣ್ಯಪ್ರದವಾದ ಯಾವುದೇ ವ್ರತ ಆಚರಣೆಗಳ ಕಲ್ಪನೆ ಕೂಡಾ ಇಲ್ಲವಾಗಿದೆ. ಅದೇನಿದ್ದರೂ ಮಡಿ ಬ್ರಾಮರು, ಸ್ವಾಮಿಗಳು ಮತ್ತು ಶಿಷ್ಯವರ್ಗ ಮಾಡುವ ಸಂಪ್ರದಾಯ ಅಷ್ಟೇ, ನಾವು ಸಂಸಾರಿಗಳು, ಅಷ್ಟೆಲ್ಲ ವ್ರತ ಮಾಡಲು ಆಗದು, ಆದರೆ, ಶಾಸ್ತ್ರ ಸಿದ್ಧಾಂತಗಳು ರಚಿಸಿ ಕೊಟ್ಟ ಈ ಎಲ್ಲಾ "ವ್ರತ" ಗಳ ಹೆಸರಿನಲ್ಲಿ "ನಾವು ಹಬ್ಬ" ಮಾಡ್ತೇವೆ.

ಗೌರೀ ಗಣೇಶ ದಿನದ ನಿಮಿತ್ತ ಇಷ್ಟು ಹಿನ್ನೆಲೆ ಹೇಳುವುದು ಒಳ್ಳೇದು ಅಂತ ಹೇಳಿದೆ.

ಶ್ರೀ ಗೌರಿಯನ್ನು ಮೊದಲು ತೃತೀಯದಂದು ಪೂಜಿಸಿ, ಮರುದಿನ ಪುತ್ರನಾದ ಗಣಪನ ಆರಾಧನೆ. ತಾಯಿ ಇದ್ದರೇನೆ ಮನೆ ಮಾಡು ಹೂಡು ಇರುತ್ತದೆ, ಇದು ತಂದೆಯಿಂದ ಆಗುವುದಲ್ಲ. ಸ್ತ್ರೀಯೇ ಕುಟುಂಬದ ಆಧಾರ, ಅವಳಿಂದಲೇ ಎಲ್ಲವೂ ಹೂಡಲ್ಪಡುವುದು. ಅದನ್ನೇ ಸಂಸಾರಿಕ ಜೀವನ ಅನ್ನೋದು. ಅವಳು ಮಾಡುವ ಗೃಹ ಗೃಹಸ್ಥಿಯಿಂದಲೇ ತಂದೆಗೆ ಸತ್ ಸಂಪ್ರದಾಯಗಳ ಬದ್ಧತೆ ಬರುವುದು, ನಿರ್ವಹಣೆ ಮಾಡಲು "ಸಕಾರಣ" ಒದಗುವುದು, ಇದೆಲ್ಲಕ್ಕೂ ಗೌರೀದೇವಿ ಪ್ರತಿನಿಧಿ. ಜಗನ್ಮಾತೆ, ಈ ಜಗತ್ತು ಎಂಬುವ ಸಂಸಾರಕ್ಕೆ ತಾಯಿ ಅವಳೇ. ಅವಳ ವ್ಯವಸ್ಥೆಯಲ್ಲಿ ರುದ್ರನು ಶಿವ ಶಂಕರನಾಗಿ ಬದಲಾಗುವನು, (ಪ್ರಸನ್ನತೆ) ದಾಂಪತ್ಯದ ಮನೋ ವಿಜ್ಞಾನ ಕರ್ಮವಿಜ್ಞಾನವೂ ಇದೇ ಆಗಿದೆ . ಇದೆಲ್ಲ ತಾತ್ವಿಕ ಕಾರಣದಿಂದ "ಮೊದಲು" ತೃತೀಯ(ಚಂದ್ರದರ್ಶನ) ಜಗನ್ಮಾತೆಯ ಪೂಜೆ. ಪ್ರಥಮ ಪೂಜಿತ ಗಣಪನಿಗೂ ಯಾರು ಪ್ರಥಮಳೋ ಆಕೆಯ ಆರಾಧನೆ ಮೊದಲು.

ಮರುದಿನ ಶಿವಾತ್ಮಜ ಗಣೇಶ ಚತುರ್ಥಿ. ತಾಯಿಯಿಂದ ಮಾನಸ ಸಂಕಲ್ಪದಿಂದ ಹುಟ್ಟು ಪಡೆದ, ತಂದೆಯ ಅನುಸಾರ ಇಲ್ಲದೇ ಜನ್ಮಪಡೆದ ಕೂಸು "ಗಣೇಶನಲ್ಲ". ಇದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದ ನಡೆ, ತಂದೆ ಇಲ್ಲದೇ ಮಗು ಹುಟ್ಟಿತು ಅಂದರೆ ಅದು ಅಶಾಸ್ತ್ರೀಯ. ಹೀಗಾಗಿ ಮಡದಿಯ ಮನವನ್ನೂ ಗೆಲ್ಲಬೇಕು, ಮಗುವನ್ನೂ ಸ್ವೀಕರಿಸಬೇಕು ಎಂಬ "ಶಿವಸಂಕಲ್ಪ" ದಂತೆ ಒಂದು ಸೀನ್ ಕ್ರಿಯೇಟ್ ಮಾಡಿ, ಆ ಮಗುವಿನ ಶಿರ ಕಡಿದು ( ಶಿಕ್ಷೆ) ಶಾಸ್ತ್ರ ತಪ್ಪಿ ನಡೆದರೆ ಶಿಕ್ಷೆ ತಪ್ಪದು, ಇದು ಕರ್ಮಯೋಗದ ನಿಯಮ. ಒಡನೆಯೇ, ಬುದ್ಧಿವಂತ ರುದ್ರಗಣದ ಒಂದು ಆನೆಯ ಶಿರವ ಕಡಿದು ತಂದು ಈ ರುಂಡ ಇಲ್ಲದ ಮಗುವಿಗೆ ಜೋಡಿಸಿ( divine transplant) , ಇನ್ನು ಪತ್ನಿಯು ಕೊಟ್ಟ ದೇಹವೂ ಉಳಿಯಿತು, ಅದಕ್ಕೆ ಪತಿಯು ಕೊಟ್ಟ ಶಿರವೂ(ಪ್ರಾಣ) ಉಳಿಯಿತು...ಈಗಿನ್ನು ಮಾತಾ ಪಿತರ ಮಗುವಾಯಿತು

ಈಗ ಆ ಮಗುವು "ಗಣೇಶ" ಎಂದಾಯಿತು

ಹಳೆಯ ತಲೆಗೆ ಸರಿಯಾದ ವಿಳಾಸ(ಬ್ರಹ್ಮ ಬರಹ) ಇರಲಿಲ್ಲ, ಈಗ ಹೊಸತಲೆಗೆ ಸರಿಯಾದ ವಿಳಾಸ ಬಂತು, ಆದಿ ದಂಪತಿಗಳು ತಮ್ಮ ವಿಶೇಷ ಶಕ್ತಿಗಳ ನೂತನ ಮಗನಿಗೆ ಕೊಟ್ಟು, ದೇವತಾ ಗಣಕ್ಕೂ ಆಹ್ವಾನ ಕೊಟ್ಟು ಅವರಿಂದಲೂ ನಾನಾ ಶಕ್ತಿಗಳ ಅನುಗ್ರಹ ಕೊಡಿಸಿ, ಎಲ್ಲಾ ರುದ್ರಗಣಕೂ ಈತನೇ "ಗಣನಾಥ" ಮತ್ತು ಎಲ್ಲಾ ದೇವತೆಗಳಿಗೂ ಜ್ಞಾನದಲ್ಲಿ ಶ್ರೇಷ್ಠ, ಹಾಗಾಗಿ ಈತನೇ "ಪ್ರಥಮ" ...ಪ್ರಮಥರಿಗೂ ನಾಯಕ, ಹೀಗಾಗಿ "ವಿನಾಯಕ" ಎಲ್ಲರಿಗೂ ನಾಯಕನು ಯಾರೋ ಆತನೇ ವಿನಾಯಕ.

ಶಿವ, ಶಕ್ತಿ, ವಿಷ್ಣು ಈ ಮೂರೂ ಬ್ರಹ್ಮ ತತ್ವದ ಜ್ಞಾತನು(ಬಲ್ಲವನು) ಮಹಾಗಣಪತಿ. ಹಾಗಾಗಿ ಅವನೇ ನಾಯಕನು. ಅವನಿಲ್ಲದೆ ಐಹಿಕ , ಪಾರತ್ರಿಕ ಯಾವ ಕೆಲಸವೂ ಸುಸೂತ್ರವಾಗಿ ನಡೆಯದು.

ಕುಜನರಿಗೆ ವಿಘ್ನಗಳನ್ನೂ, ಸುಜನರಿಗೆ ವಿಘ್ನ ಹರ್ತನೂ ಎಂದೇ ಆತನ ಮಹಿಮೆ. ಇಂಥ ಅಚಿಂತ್ಯವಾದ ಬ್ರಹ್ಮತತ್ವದ ಮೇರು ಜ್ಞಾನಿ ಶ್ರೀಗಣಪತಿಯು ಎಂದೇ ಅಥವಶೀರ್ಷ ಮಂತ್ರಗಳು ಈತನನ್ನು " ತತ್ವಮಸಿ, ಬ್ರಹ್ಮಾಸಿ , ಗಂ ,ತ್ವಂ" ಎಂಬ ಮಹಾರಹಸ್ಯ ಬೀಜಮಂತ್ರಗಳಿಂದ ಕೊಂಡಾಡಿದೆ. ಗ ಅಂದರೆ ಗತಿ ಚಲನೆ, ಹೊಳಪು, ಬಿರುಸು, ತಡೆ ಇಲ್ಲದ್ದು. ಅಂಥ ಸಕಲ ತತ್ವಕ್ಕೆ ಗಣಪತಿ, ಒಡೆಯ.