ಪುತ್ರ ಶೋಕಂ ನಿರಂತರಂ : ಅಗಲಿದ ಮಗನ ಹಚ್ಚೆ ಹಾಕಿಸಿಕೊಂಡ ಸಿಧು ಮೂಸೆವಾಲಾ ಅಪ್ಪ
ತಿಂಗಳ ಹಿಂದಷ್ಟೇ ದುಷ್ಕರ್ಮಿಗಳಿಂದ ಹತ್ಯೆಗೀಡಾದ ತಮ್ಮ ಪುತ್ರನ ನೆನಪಿನಲ್ಲಿ ದಿನ ಕಳೆಯುತ್ತಿರುವ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಂದೆ ಈಗ ಮಗನ ನೆನಪಿಗಾಗಿ ಆತನ ಮೊಗವನ್ನು ತಮ್ಮ ಕೈಯಲ್ಲಿ ಹಚ್ಚೆ ಹಾಕಿಸಿಕೊಂಡು ಸಮಾಧಾನ ಪಡುತ್ತಿದ್ದಾರೆ.
ತಿಂಗಳು ತುಂಬಿದ ಕೂಸು ಅಕಾಲಿಕವಾಗಿ ಮಡಿದರೇ ಹೆತ್ತವರಿಗೆ ಪೋಷಕರಿಗೆ ಸಹಿಸಲಾಗದು. ಅಂತಹದರಲ್ಲಿ ಎದೆಯೆತ್ತರಕ್ಕೆ ಬೆಳೆದು ನಿಂತ ಪುತ್ರ ಪ್ರಾಣ ಬಿಟ್ಟರೆ ಸಹಿಸಲಾಗುವುದೇ? ಪುತ್ರ ಶೋಕಂ ನಿರಂತರಂ ಎಂಬ ಸಂಸ್ಕೃತ ಶೋಕವಿದೆ. ಪುತ್ರನ ಸಾವು ನಿರಂತರ ಶೋಕ ನೀಡುವುದು ಎಂಬುದು ಈ ಮಾತಿನ ಅರ್ಥ. ಅದೇ ರೀತಿ ಕೆಲ ತಿಂಗಳ ಹಿಂದಷ್ಟೇ ದುಷ್ಕರ್ಮಿಗಳಿಂದ ಹತ್ಯೆಗೀಡಾದ ತಮ್ಮ ಪುತ್ರನ ನೆನಪಿನಲ್ಲಿ ದಿನ ಕಳೆಯುತ್ತಿರುವ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಂದೆ ಈಗ ಮಗನ ನೆನಪಿಗಾಗಿ ಆತನ ಮೊಗವನ್ನು ತಮ್ಮ ಕೈಯಲ್ಲಿ ಹಚ್ಚೆ ಹಾಕಿಸಿಕೊಂಡು ಸಮಾಧಾನ ಪಡುತ್ತಿದ್ದಾರೆ. ಈ ಮೂಲಕ ಅಕಾಲಿಕವಾಗಿ ಅಗಲಿದ ಮಗನಿಗೆ ಭಾವುಕವಾಗಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ಜನಪ್ರಿಯ ರಾಪರ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಅವರು ಹಾಸಿಗೆ ಮೇಲೆ ಮಲಗಿ ತಮ್ಮ ತೋಳಿನ ಮೇಲೆ ಮಗನ ಹಚ್ಚೆ ಹಾಕಿಸಿಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಹಚ್ಚೆ ಹಾಕುವಾತ ತನ್ನ ಫೋನ್‌ನಲ್ಲಿರುವ ಸಿಧು ಫೋಟೋ ನೋಡಿ ಅವರ ತಂದೆಯ ಕೈ ಮೇಲೆ ಹಚ್ಚೆ ಹಾಕುತ್ತಿದ್ದಾನೆ. ಸಿಧು ಅವರು ತಮ್ಮ ಮುಖದ ಹತ್ತಿರ ಗನ್ನು ಹಿಡಿದು ಫೋಸ್ ಕೊಟ್ಟ ಫೋಟೋವನ್ನು ತಂದೆ ತಮ್ಮ ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದು, ಅದರ ಕೆಳಗೆ ಗುರುಮುಖಿ ಲಿಪಿಯಲ್ಲಿ ಸರ್ವನ್ ಪುಟ್ ಎಂಬ ಬರಹವಿದೆ. ಸರ್ವನ್ ಪುಟ್ ಎಂದರೆ ವಿಧೇಯ, ಕಾಳಜಿಯುಳ್ಳ ಪುತ್ರ ಎಂಬ ಅರ್ಥವಂತೆ.
ತಮ್ಮ ಪುತ್ರನ ನಿಧನದ ನಂತರ ಬಲ್ಕೌರ್ ಸಿಂಗ್ ಹಲವು ಬಾರಿ ದುಃಖ ತಡೆಯಲಾಗದೇ ಸಾರ್ವಜನಿಕವಾಗಿ ಅತ್ತಿದ್ದರು. ಅಲ್ಲದೇ ಪುತ್ರನ ಅಂತ್ಯಸಂಸ್ಕಾರದ ನಂತರ ಅವರು ತಮ್ಮ ಸಿಖ್ ಪೇಟವನ್ನು (turban) ತೆಗೆದು ಸಮುದ್ರದದಂತೆ ಸೇರಿದ ಜನರ ಮುಂದೆ ಹಿಡಿದಿದ್ದರು. ಇದು ನಾನು ಬದುಕಿನಲ್ಲಿ ಎಲ್ಲವನ್ನು ಕಳೆದುಕೊಂಡೆ ಎಂದು ತೋರಿಸುವ ಸೂಚಕ ಎಂದು ಜನ ಊಹೆ ಮಾಡಿದ್ದರು. ಏಪ್ರಿಲ್‌ನಲ್ಲಿ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯ ಸಮಯದಲ್ಲಿ ತಮ್ಮ ಮಗನ ಮೇಲೆ ದಾಳಿ ಮಾಡಲು ಹಲವಾರು ಪ್ರಯತ್ನಗಳನ್ನು ದುಷ್ಕರ್ಮಿಗಳು ಮಾಡಿದ್ದರು. ಆದರೆ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ನೇತೃತ್ವದ ರಾಜ್ಯ ಸರ್ಕಾರ ಅವನ ಭದ್ರತೆಯನ್ನು ಮೊಟಕುಗೊಳಿಸಿ ಅವನ ಜೀವಕ್ಕೆ ಅಪಾಯ ತಂದೊಡಿತ್ತು ಎಂದು ಬಲ್ಕೌರ್ ಸಿಂಗ್ ಹೇಳಿಕೊಂಡಿದ್ದರು.
ಸಿಧು ಮೂಸೆವಾಲಾ ಹತ್ಯೆಗೂ ಮುನ್ನ ಆತನೊಂದಿಗೆ ಸೆಲ್ಫಿ ಕ್ಲಿಕ್ ಮಾಡಿದ್ದ ವ್ಯಕ್ತಿಯ ಬಂಧನ
ತಮ್ಮ ಪುತ್ರ ಸಿಧುವನ್ನು ಕೊಲ್ಲಲು ಅರವತ್ತರಿಂದ ಎಂಭತ್ತು ಜನರು ಆತನನ್ನು ಹಿಂಬಾಲಿಸಿದ್ದರು. ಚುನಾವಣೆಯ ಸಮಯದಲ್ಲಿ ಆತನ ಕೊಲೆಗೆ ಎಂಟು ಬಾರಿ ಪ್ರಯತ್ನಿಸಲಾಗಿತ್ತು. ಇದು ತಿಳಿದಿದ್ದು ಸರ್ಕಾರ ಸ್ವಲ್ಪವೂ ಕಾಳಜಿ ವಹಿಸದೇ ಆತನ ಭದ್ರತೆ ಹಿಂಪಡೆದು ಪ್ರಚಾರ ಪಡೆಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹೊಸದಾಗಿ ರಚನೆಯಾದ ಭಗವಂತ್ ಮಾನ್ ಸರ್ಕಾರ ಸಿಧು ಮೂಸೆವಾಲಾ ಅವರ ಭದ್ರತೆಯನ್ನು ಹಿಂಪಡೆದ ಒಂದೇ ದಿನದ ಅಂತರದಲ್ಲಿ ದುಷ್ಕರ್ಮಿಗಳು 28 ವರ್ಷದ ಗಾಯಕ ಸಿಧು ಮೂಸೆವಾಲಾ ಅವರನ್ನು ಮೇ 29 ರಂದು ಮಾನ್ಸಾದ ಅವರ ಗ್ರಾಮದ ಬಳಿ ಗುಂಡಿಕ್ಕಿ ಕೊಂದಿದ್ದರು. ಬಾಲ್ಕೌರ್ ಸಿಂಗ್ ತನ್ನ ಮಗನನ್ನು ಇಬ್ಬರು ಶಸ್ತ್ರಸಜ್ಜಿತ ಸಿಬ್ಬಂದಿಗಳೊಂದಿಗೆ ಕಾರಿನಲ್ಲಿ ಹಿಂಬಾಲಿಸುತ್ತಿದ್ದಾಗಲೇ ಹಂತಕರು, ಗಾಯಕ ಮತ್ತು ಅವರ ಇಬ್ಬರು ಸ್ನೇಹಿತರ ಮೇಲೆ ಗುಂಡಿನ ಮಳೆಗರೆದಿದ್ದರು.
ನಾನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ವ್ಯಕ್ತಿ ಎಂದು ಸ್ಕೂಲ್ ಆಪರೇಟರ್ ಗೆ ಬಂತು ಬೆದರಿಕೆ ಕರೆ!
ಸಿಧು ಮೂಸೇವಾಲ ಹತ್ಯೆಗೈದ್ದ ಇಬ್ಬರು ಶಾರ್ಪ್ ಶೂಟರ್‌ಗಳನ್ನು ಅಮೃತಸರ್‌ದಲ್ಲಿ ಜುಲೈ21 ರಂದು ಪೊಲೀಸರು 5 ತಾಸು ಘೋರ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದರು. ಎನ್‌ಕೌಂಟರ್‌ನಲ್ಲಿ 3 ಪೋಲಿಸ್ ಸಿಬ್ಬಂದಿಯೂ ಗಾಯಗೊಂಡಿದ್ದರು. ಜಗರೂಪ್ ಸಿಂಗ್ ರೂಪಾ ಹಾಗೂ ಮನ್‌ಪ್ರೀತ್ ಸಿಂಗ್ ಅಲಿಯಾಸ್ ಮನ್ನು ಕೂಸಾ ಹತ್ಯೆಯಾದ ಶಾರ್ಪ್‌ಶೂಟರ್‌ಗಳು.