ಆಚೆ ನಿಂತು ಮನುಷ್ಯನ ಮನಸ ನೋಡಿದಾಗ ತಿಳಿಯೋ ಕಳ್ಳಾಟಗಳಿವು!

Synopsis
ನಮ್ಮ ಮನಸ್ಸನ್ನು ನಾವು ಹೊರಗೆ ನಿಂತು ನೋಡದೇ ಹೋದರೆ ಅದು ಆಡುವ ಕಳ್ಳಾಟಗಳು ಗೊತ್ತೇ ಆಗುವುದಿಲ್ಲ. ಹೇಗೆ ಭೂಮಿಯಾಚೆಗೆ ನಿಂತು ನೋಡಿದಾಗ ಮಾತ್ರ ಭೂಮಿ ಗುಂಡಗಿರುವುದು ಕಾಣುತ್ತದೆಯೋ ಹಾಗೆಯೇ, ಮನಸ್ಸಿನಾಚೆ ನಿಂತಾಗ ಮಾತ್ರ ಮನಸ್ಸಿನ ಆಕಾರ ತಿಳಿಯುತ್ತದೆ. ಹೊಸ ವರುಷದ ಓದಿಗೆ ಕೆ ಎನ್ ಗಣೇಶಯ್ಯ ವಿಚಾರಧಾರೆ.
ಕೆ ಎನ್ ಗಣೇಶಯ್ಯ
ನಮ್ಮ ಮನಸ್ಸನ್ನು ನಾವು ಹೊರಗೆ ನಿಂತು ನೋಡದೇ ಹೋದರೆ ಅದು ಆಡುವ ಕಳ್ಳಾಟಗಳು ಗೊತ್ತೇ ಆಗುವುದಿಲ್ಲ. ಹೇಗೆ ಭೂಮಿಯಾಚೆಗೆ ನಿಂತು ನೋಡಿದಾಗ ಮಾತ್ರ ಭೂಮಿ ಗುಂಡಗಿರುವುದು ಕಾಣುತ್ತದೆಯೋ ಹಾಗೆಯೇ, ಮನಸ್ಸಿನಾಚೆ ನಿಂತಾಗ ಮಾತ್ರ ಮನಸ್ಸಿನ ಆಕಾರ ತಿಳಿಯುತ್ತದೆ. ಹೊಸ ವರುಷದ ಓದಿಗೆ ಕೆ ಎನ್ ಗಣೇಶಯ್ಯ ವಿಚಾರಧಾರೆ.
ಘಟನೆ- 1: ತಾರಾಲಯದ ಭಿತ್ತಿಯ ಬೋಧೆ
‘ಆ ಚಿತ್ರವನ್ನು ರಚಿಸಿದವರು ಜೆಎಮ್‌ಎಸ್ ಮಣಿ ಎಂಬ ಸುಪ್ರಸಿದ್ಧ ಚಿತ್ರಕಾರರು ಸರ್. ಬೆಂಗಳೂರಿನ ಈ ತಾರಾಲಯ ಪ್ರಾರಂಭವಾದಾಗ, ಅದರ ಉದ್ದೇಶ, ಕಾರ್ಯವೈಖರಿ ಮತ್ತು ವಿಶೇಷತೆಗಳನ್ನು ತಿಳಿಸಲು ಪ್ರೊಫೆಸರ್ ವಿಶ್ವೇಶ್ವರ ಅವರು ನಮ್ಮ ಬ್ರಹ್ಮಾಂಡದ ವಿವಿಧ ವಿಷಯಗಳ ಬಗ್ಗೆ ಕಲೆಗಾರರಿಗೆಂದು ಒಂದು ಕಮ್ಮಟವನ್ನು ಏರ್ಪಡಿಸಿದ್ದರು. ಆಗ ತಾವು ಅರಿತದ್ದನ್ನು ಪ್ರತಿಬಿಂಬಿಸುವ ಒಂದು ಭಿತ್ತಿಯಾಗಿ ಮಣಿ ಅವರು ರಚಿಸಿದ ಚಿತ್ರ ಅದು’ ಎಂದರು ಮಧುಸೂದನ್.
ಬೆಂಗಳೂರಿನ ತಾರಾಲಯದ ಉಪನಿರ್ದೇಶಕರಾದ ಮಧುಸೂದನ್ ಹಾಗೆ ಹೇಳುತ್ತಿದ್ದಂತೆ ನಾನು ಮತ್ತಷ್ಟುಕುತೂಹಲದಿಂದ ಆ ಭಿತ್ತಿಯನ್ನು ವೀಕ್ಷಿಸತೊಡಗಿದೆ- ಅದರಲ್ಲಿ ಬಿಂಬಿತವಾಗಿರುವ ಅರ್ಥವನ್ನು ಹುಡುಕುತ್ತ.
ನನ್ನ ಮಗಳು ಪುಣ್ಯಕೋಟಿ, ಯೂರೋಪಿನಿಂದ ಪಿಹೆಚ್‌ಡಿ ಮುಗಿಸಿ ಬೆಂಗಳೂರಿಗೆ ಬಂದು, ತನ್ನ ಮಾನಸಿಕ ಗುರು ಎಂದೇ ಪರಿಗಣಿಸಿರುವ ಮಧುಸೂದನ್ ಅವರಿಗೆ ಕೃತಜ್ಞತೆ ಸಲ್ಲಿಸಲು ತಾರಾಲಯಕ್ಕೆ ಭೇಟಿ ಕೊಟ್ಟಾಗ, ನನ್ನನ್ನೂ ಜೊತೆಯಲ್ಲಿ ಕರೆದೊಯ್ದಿದ್ದಳು. ಬ್ರಹ್ಮಾಂಡದ ರಚನೆಯ ಬಗ್ಗೆ ಪುಣ್ಯ ಮಾಡಿದ್ದ ಸಂಶೋಧನೆಯ ವಿವರಗಳನ್ನು ಅವರಿಬ್ಬರೂ ತಲ್ಲೀನರಾಗಿ ಚರ್ಚಿಸುತ್ತಿದ್ದಾಗ, ಮೌನವಾಗಿ ಕೂತಿದ್ದ ನನ್ನ ದೃಷ್ಟಿಮಧುಸೂದನ್ ಅವರ ಕುರ್ಚಿಯ ಹಿಂದಿನ ಗೋಡೆಯಮೇಲೆ ನೇತು ಹಾಕಿದ್ದ ಆ ದೊಡ್ಡ ಭಿತ್ತಿಯತ್ತ ಹರಿದಿತ್ತು. ನಾನು ಕಣ್ಣು ಕೀಲಿಸಿ ಅದನ್ನೇ ವೀಕ್ಷಿಸುತ್ತಿದ್ದುದನ್ನು ಕಂಡು ಅವರು ಮುಂದುವರಿಸಿದರು.
'ಇರೂವಷ್ಟು ದಿನ ಅಂಗಡಿ ನಡೆಸೋಣು, ಕೊನೀಗೆ ಅಂಗಡೀನ ಆಗೋಣು'
‘ತಾರಾಲಯದ ಮುಖ್ಯ ಉದ್ದೇಶ ನಮ್ಮ ವಿಶ್ವದ ರಚನೆ ಮತ್ತು ಅದರ ವಿಕಾಸದ ರಹಸ್ಯಗಳನ್ನು ಅರಿಯುವುದು. ಈ ಪ್ರಯತ್ನದಲ್ಲಿ ಮಾನವನಿಗೆ ಅಡ್ಡಿಯಾಗುವ ಒಂದು ದುರದೃಷ್ಟಕರ ಮಿತಿಯನ್ನು ಕೂಡ ಆ ಚಿತ್ರ ಬಿಂಬಿಸುತ್ತದೆ ಸರ್. ಆ ಚಿತ್ರದಲ್ಲಿ ಹಲವು ಅಂಶಗಳಿವೆ. ಅವುಗಳಲ್ಲಿ ಒಂದು ಮಾನವ ತಾನು ನೆಲೆಸಿರುವ ವಿಶ್ವದ ರೂಪರೇಷೆಗಳನ್ನು ತಾನಿದ್ದಲ್ಲಿಂದಲೇ ಅರಿಯಲು ಅಶಕ್ತ ಎಂಬ ಸತ್ಯ. ನಮ್ಮ ಭೂಮಿಯನ್ನೇ ತೆಗೆದುಕೊಳ್ಳಿ. ನಾವು ಭೂಮಿಯ ಯಾವುದೇ ಭಾಗದಲ್ಲಿ ನೆಲೆಸಿದ್ದರೂ, ನಮ್ಮ ಕಣ್ಣಿಗೆ ಮತ್ತು ನಮ್ಮ ಸರಳ ಪ್ರಜ್ಞೆಗೆ ಅದು ಚಪ್ಪಟೆಯಾದ ತಟ್ಟೆಯಿದ್ದಂತೆ ಕಾಣುತ್ತದೆ. ಆದರೆ ನಾವು ನಮ್ಮ ನೆಲೆಯಿಂದ ಅಂದರೆ ಭೂಮಿಯಿಂದ ಹೊರಗೆ ಹೋಗಿ, ದೂರದಲ್ಲಿ ಒಂದು ಆಧಾರದ ಮೇಲೆ ನಿಂತು ಇಡೀ ಭೂಮಿಯನ್ನು ವೀಕ್ಷಿಸಿದರೆ ಅದು ದುಂಡಾಗಿದೆ ಎಂದು ಸ್ಪಷ್ಟವಾಗಿ ಕಾಣುತ್ತದೆ. ಅದುವರೆಗೆ ನಾವು ಅದರ ಆಕಾರವನ್ನು ಅರಿಯಲು ಪರೋಕ್ಷ ವಿಧಾನಗಳನ್ನೆ ಬಳಸಬೇಕು.’
‘ಹೋ! ಅಂದರೆ ನಮ್ಮ ನೆಲೆಯ ನಿಜ ರೂಪ ಅರಿಯಲು ನಾವು ಅದರಿಂದ ದೂರಕ್ಕೆ ಹಾರಿ ಹಿಂದಿರುಗಿ ನೋಡಬೇಕೇ?’ ಕೇಳಿದೆ.
‘ಹೌದು. ನಮ್ಮ ಭೂಮಿಯ ಆಕಾರವಷ್ಟೆಅಲ್ಲ. ನಾವು ನಮ್ಮ ಗೆಲಾಕ್ಸಿಯ ಹೊರಗೆ ಹೋಗಿ ದೂರದಲ್ಲಿ ನಿಂತು ಹಿಂದಿರುಗಿ ನೋಡಿದಾಗ ಮಾತ್ರವೇ ನಾವಿರುವ ಈ ಕ್ಷೀರಪಥದ ಸತ್ಯವಾದ ಆಕಾರವನ್ನು ಕಾಣಲು ಸಾಧ್ಯ. ಆದರೆ, ಹಾಗೆ ಹೊರಗೆ ಹೋಗಿ ನೋಡಬೇಕಾದರೆ, ಬೆಳಕಿನ ವೇಗದಲ್ಲಿ ಹೊರಟರೂ ನಾವು ಲಕ್ಷಾಂತರ ವರ್ಷಗಳ ಕಾಲ ಪ್ರಯಾಣಿಸುತ್ತಲೇ ಇರಬೇಕು. ಅದು ಸಾಧ್ಯವಿಲ್ಲ. ಹೀಗಾಗಿ ಅದರ ಒಳಗೆಲ್ಲೋ ಒಂದು ಮೂಲೆಯಲ್ಲಿ ಕುಳಿತಿರುವ ನಮಗೆ ಕಾಣುವುದು ಕೋಟಿ ಕೋಟಿ ನಕ್ಷತ್ರಗಳ ರಾಶಿಯನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ನಮ್ಮ ಕ್ಷೀರಪಥದ ಒಳಗಿನ ಚಿತ್ರಣ ಮಾತ್ರ. ಅದರ ನಿಜ ಸ್ವರೂಪವಲ್ಲ’ ಎಂದರು.
ಅವರ ಮಾತಿನ ಹಿನ್ನೆಲೆಯಲ್ಲಿ ಆ ಭಿತ್ತಿಯನ್ನು ವೀಕ್ಷಿಸುತ್ತಿದ್ದಂತೆ ನನಗೆ ಒಂದು ಸತ್ಯ ಮನದಟ್ಟಾಯಿತು: ನಾವು ಬದುಕು ಸಾಗಿಸುತ್ತಿರುವ ನೆಲೆಯನ್ನು, ನಮ್ಮ ಪ್ರಪಂಚವನ್ನು, ನಮ್ಮ ವಿಶ್ವವನ್ನು ತೊರೆದು ಹೊರಗೆ ದೂರಕ್ಕೆ ಹಾರಿಹೋಗಿ ಹಿಂದೆ ತಿರುಗಿ ನೋಡಿದರೆ ಮಾತ್ರವೆ ಅವುಗಳ ನಿಜವಾದ ರೂಪವನ್ನು ಅರಿಯಲು ಸಾಧ್ಯ. ನಮ್ಮ ಅಂತರಾಳವನ್ನು ಅರಿಯಲು ಕೂಡ ಇಂಥದೇ ಪ್ರಯತ್ನ ಬೇಕು ಎಂಬ ಸತ್ಯವನ್ನು ನಲವತ್ತು ವರ್ಷಗಳ ಹಿಂದೆ ನನ್ನ ಕಾಲೇಜಿನ ಕಾಲದಲ್ಲಿ ಕನ್ನಡದ ಪ್ರಾಧ್ಯಾಪಕರೊಬ್ಬರು ತಿಳಿಹೇಳಿದ್ದರು.
ಘಟನೆ-2: ಕನ್ನಡ ಮಾಸ್ತರ ಕುವೆಂಪು ಬೋಧೆ
ಕಾಲೇಜಿನ ದಿನಗಳಲ್ಲಿ ಕನ್ನಡದ ಪಾಠ ಮಾಡುತ್ತಿದ್ದ, ನನ್ನ ನೆಚ್ಚಿನ ನಾರಾಯಣ ಸ್ವಾಮಿ ಒಮ್ಮೆ ಹೀಗೆ ಹೇಳಿದ್ದರು: ನೀನು ನಾನಾದಾಗ ಮಾತ್ರ ನಿನ್ನನ್ನು ನೀನೇ ಕಾಣಲು ಸಾಧ್ಯ. ಅದನ್ನು ವಿವರಿಸಲು ಕುವೆಂಪು ಅವರ ‘ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು?’ ಎಂಬ ಶೀರ್ಷಿಕೆಯ ಕವನದತ್ತ ಹೊರಳಿದ್ದರು:
ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?
ನಿನ್ನೆದೆಯ ದನಿಯೇ ಋುಷಿ! ಮನು ನಿನಗೆ ನೀನು.
ಅವರು ಅರ್ಧಗಂಟೆ ವಿವರಿಸಿದ ಕೊನೆಯ ಸಾಲಿನ ಸಾರಾಂಶ ನನ್ನಲ್ಲಿ ಅಚ್ಚಳಿಯದೇ ಉಳಿದಿದೆ: ನಮ್ಮೆಲ್ಲರ ಹೃದಯದಲ್ಲಿ ನೆಲೆಯಾಗಿರುವ ನ್ಯಾಯವಾದಿ ಸದಾ ನಾವಿಡುವ ಹೆಜ್ಜೆಗಳನ್ನು, ನಮ್ಮ ವರ್ತನೆಯನ್ನು, ನಾವಾಡುವ ಮಾತುಗಳನ್ನು, ವೀಕ್ಷಿಸಿ ತಪ್ಪು ಯಾವುದು ಸರಿ ಯಾವುದು ಎಂದು ಎಚ್ಚರಿಸುತ್ತಲೇ ಇರುತ್ತಾನೆ. ನಾವು ಅವನ ದನಿಯನ್ನು ಕೇಳಿಸಿಕೊಳ್ಳುವುದಿಲ್ಲ. ಅವನ ದನಿ ಕೇಳುವಂತಾದರೆ ನಮಗೆ ಯಾವ ಧರ್ಮಶಾಸ್ತ್ರವೂ ಪೂಜೆ ಪುನಸ್ಕಾರಗಳೂ ಯಜ್ಞಯಾಗಾದಿಗಳೂ ಬೇಕಿಲ್ಲ.
ಪದಗಳ ಸಹವಾಸದಲ್ಲಿ ನೂರೆಂಟು ವರುಷ; ಶಬ್ದಾರ್ಥ ಚಿಂತಾಮಣಿ ಜಿ. ವೆಂಕಟಸುಬ್ಬಯ್ಯ ಸ್ಮರಣೆ!
ಆದರೆ ‘ನಮ್ಮೆದೆಯ ದನಿ ನಮಗೆ ಸ್ಪಷ್ಟವಾಗಿ ಕೇಳಬೇಕಾದರೆ ನಾವು ನಾವಾಗಿ ಇರಬಾರದು. ನಾವು ನಮ್ಮಿಂದ ಹೊರಗೆ ನಿಂತು, ಬೇರೊಬ್ಬರಾಗಿ ನಮ್ಮದೇ ಎದೆಯ ದನಿಯನ್ನು ಪ್ರಜ್ಞಾಪೂರ್ವಕವಾಗಿ ಕೇಳಲು ಪ್ರಯತ್ನಿಸಬೇಕು. ಆಗ ಮಾತ್ರವೇ ನಮ್ಮೆದೆಯಲ್ಲಿನ ಋುಷಿಯ ವಾಣಿ ಸ್ಪಷ್ಟವಾಗಿ ಕೇಳಿಸಲು ಸಾಧ್ಯ. ನೀನು ನಾನಾಗಿ ನಿನ್ನ ಮುಂದೆ ನಿಂತು, ನಾನು ನೀನಾಗಿ ನನ್ನ ಮುಂದೆ ನಿಂತಾಗ ಮಾತ್ರವೇ ನನ್ನೆದೆಯ ದನಿ ಕೇಳೀತು’ ಎಂದಿದ್ದರು.
ಮಧುಸೂದನ್ ಆ ಭಿತ್ತಿಚಿತ್ರದ ಬಗ್ಗೆ ವಿವರಿಸುವಾಗ ನನಗೆ ಕನ್ನಡದ ಮಾಸ್ತರು ಬೋಧಿಸಿದ ಪಾಠ ನೆನಪಾಗಿತ್ತು: ನಾನು ನನ್ನಿಂದ ಹೊರ ಹೋಗಿ ನನ್ನನ್ನೇ ವೀಕ್ಷಿಸಿದಾಗ ಮಾತ್ರವೇ ನನ್ನ ತಪ್ಪು ಒಪ್ಪುಗಳ ಅರಿವಾಗಲು ಸಾಧ್ಯ ಎಂಬ ಸತ್ಯದ ಔಚಿತ್ಯ ಇತ್ತೀಚೆಗೆ ಅನುಭವವಾದದ್ದು ಒಂದು ವಿವಾಹದ ಸಂದರ್ಭದಲ್ಲಿ.
ಘಟನೆ-3: ತಪ್ಪಿದ ಧ್ಯೇಯ
ಮಗಳ ವಿವಾಹಕ್ಕೆ ಗೆಳೆಯ ದೂರದ ಊರಿಗೆ ಆಹ್ವಾನಿಸಿದ್ದ. ಆಹ್ವಾನ ಪತ್ರಿಕೆಯ ಜತೆ ವಿಮಾನದ ಟಿಕೆಟ್ಟು ಕೂಡ ಇತ್ತು. ಅತೀ ನಿಕಟ ಸಂಬಂಧಿಗಳ ಒಂದು ದೊಡ್ಡ ಗುಂಪು ಮದುಮಗಳ ಜೊತೆ ಆ ವಿವಾಹ ಸಮಾರಂಭಕ್ಕೆ ವಿಮಾನದಲ್ಲಿ ಹೊರಟಿತ್ತು. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಡೀ ಗುಂಪು ಚೆಕ್-ಇನ್ ಮಾಡುವಾಗ, ವಧುವಿನ ಸೂಟ್‌ಕೇಸ್ ಮಾತ್ರವೆ ಚೆಕ್ ಇನ್ ಮಾಡಬೇಕಾಗಬಹುದು ಎಂದು ಯೋಚಿಸಿದ್ದ ನನಗೆ ಅಚ್ಚರಿ ಕಾದಿತ್ತು. ಒಬ್ಬಾಕೆ, ‘ಒಂದು ದೊಡ್ಡ ಪರ್ಫ್ಯೂಮ್ ಬಾಟಲ್ ತಂದಿದ್ದೇನೆ, ಅದನ್ನು ಕೈಚೀಲದ ಜೊತೆ ಒಳಗೆ ಬಿಡುವುದಿಲ್ಲ’ ಎಂದಾಗ ವಿಧಿಯಿಲ್ಲದೆ ತರಾತುರಿಯಲ್ಲಿ ಅದನ್ನೂ ಚೆಕ್ ಇನ್ ಮಾಡಿ ತರಾತುರಿಯಲ್ಲಿ ಲಗ್ಗೇಜ್ ಟ್ಯಾಗ್ ಪಡೆಯಲು ಮರೆತಿದ್ದೆವು.
ವಿಮಾನದಿಂದ ಇಳಿದು ಲಗೇಜಿಗಾಗಿ ಕಾಯುತ್ತಿದ್ದಾಗ ವಧುವಿನ ಸೂಟ್‌ಕೇಸ್ ಬಂತು. ಆ ದೊಡ್ಡ ಪರ್ಫ್ಯೂಮ್ ಹೊತ್ತ ಆಕೆಯ ಸೂಟ್‌ಕೇಸ್ ಮಿಸ್ಸಿಂಗ್! ಸೂಚನಾ ಫಲಕದಲ್ಲಿ ಇದೇ ‘ಕೊನೆಯ ಬ್ಯಾಗ್’ ಎಂಬ ಸೂಚನೆ ಬಂತು. ಬ್ಯಾಗ್ ಬರಲಿಲ್ಲ.
ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಭೇಟಿಮಾಡಿದಾಗ ಅವರು ಅದನ್ನು ಹುಡುಕಿ ತರಿಸುವ ಎಲ್ಲ ಭರವಸೆ ಕೊಟ್ಟರು. ನಾವೂ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪರಿಚಿತರಿಗೆ ಫೋನ್ ಮಾಡಿದೆವು. ಕೊನೆಗೆ ‘ಯೋಚಿಸಬೇಡಿ, ಮದುವೆಯ ವೇಳೆಗೆ ಸೂಟ್‌ಕೇಸ್ ಬರುತ್ತದೆ, ಇಲ್ಲವಾದಲ್ಲಿ, ಬೇರೇನು ಮಾಡಬಹುದೆಂದು ಯೋಚಿಸೋಣ, ಈಗ ಹೋಗೋಣ’ ಎಂದು ಹೇಳುತ್ತಿದ್ದಂತೆ, ಆ ಬ್ಯಾಗಿನೊಡತಿ ಸಿಡಿಮಿಡಿಗೊಂಡು, ‘ನಾನು ಬರಲಾರೆ. ನನ್ನ ಸೂಟ್‌ಕೇಸ್ ಸಿಗಲಿಲ್ಲವೆಂದರೆ ನಾನು ಇಲ್ಲಿಂದಲೇ ಬೆಂಗಳೂರಿಗೆ ವಾಪಸ್ ಹೋಗುತ್ತೇನೆ’ ಎಂದು ಚೀರಿದಾಗ ನಮ್ಮೆಲ್ಲರಿಗೂ ಶಾಕ್.
ಎಲ್ಲರ ಮನಸಿನಲ್ಲೂ ಆಗ ಮೂಡಿದ್ದು ಒಂದೇ ಪ್ರಶ್ನೆ: ಈಕೆ ಬಂದಿರುವುದರ ಮುಖ್ಯ ಉದ್ದೇಶ ಮದುವೆಯಲ್ಲಿ ವಧೂವರರನ್ನು ಆಶೀರ್ವದಿಸುವುದೋ, ತನ್ನ ಮ್ಯಾಚಿಂಗ್ ಸೀರೆ ಧರಿಸಿ ಮೆರೆಯುವುದೋ? ಬಟ್ಟೆಬರದಿದ್ದರೆ ಮದುವೆಗೆ ಬರಲಾರೆ ಎನ್ನುವ ಮನಸ್ಸಿಗೆ ಯಾವುದು ಅತೀ ಮುಖ್ಯಅನಿಸಿದೆ? ವಧುವಿನ ಮದುವೆಯೋ ಅಥವ ತನ್ನ ವರ್ಣಭರಿತ ದಿರಿಸಿನ ಮತ್ತು ಅದನ್ನು ಸಿದ್ಧಪಡಿಸಿರುವ ತನ್ನ ಕಲಾನೈಪುಣ್ಯತೆಯ ಪ್ರದರ್ಶನವೋ?
ಕೊನೆಗೆ ಮದುಮಗಳು ‘ನಮ್ಮಲ್ಲಿ ಬೇಕಾದಷ್ಟುಸೀರೆಗಳಿವೆ, ದಯವಿಟ್ಟು ಬನ್ನಿ ಏನಾದರೂ ಮಾಡುವ’ ಎಂದು ಕೇಳಿಕೊಂಡಾಗಲೂ ಆಕೆಯ ಮುನಿಸು ಕ್ಷೀಣಿಸಲಿಲ್ಲ. ಕೊನೆಗೆ, ಅಲ್ಲಿದ್ದ ಹಿರಿಯರೊಬ್ಬರು, ಆಕೆಯ ಕೈ ಹಿಡಿದು ತಾನು ಅಂದೇ ಹೊಸದಾದ, ಆಕೆಗೆ ಮೆಚ್ಚುಗೆಯಾಗುವ ಸೀರೆಯನ್ನೇ ಕೊಡಿಸುವೆ ಎಂದು ಬಲವಂತಪಡಿಸಿ, ಒತ್ತಾಯಿಸಿ ವಿಮಾನ ನಿಲ್ದಾಣದಿಂದ ಹೊರಗೆ ಕರೆದೊಯ್ಯಬೇಕಾಯಿತು. ಆದರೆ ಕ್ಷಣಕ್ಷಣಕ್ಕೂ, ಆಕೆ ತನ್ನ ಹತಾಶೆಯನ್ನು ತೋರಿಸುತ್ತಲೇ ಇದ್ದದ್ದು ಇಡೀ ಸಮೂಹದಲ್ಲಿ ಬೇಸರದ ಛಾಯೆಯನ್ನೇ ಬಿತ್ತಿತ್ತು. ಮದುವೆಯ ಆನಂದವನ್ನೇ ಕಸಿದಿತ್ತು.
ಸಾಹಿತ್ಯ ಅಕಾಡೆಮಿಗೂ ಜ್ಞಾನಪೀಠ ಪ್ರಶಸ್ತಿಗೂ ಸಂಬಂಧ ಇಲ್ಲ: ಚಂದ್ರಶೇಖರ ಕಂಬಾರ
ಕೊನೆಗೂ ಆಕೆ ಅಂದೇ ಮತ್ತೊಂದು ಸೀರೆ ಕೊಂಡು ಅದನ್ನೇ ಮರುದಿನ ಧರಿಸಿ ಎಲ್ಲರಿಗೂ ಕಾಣಿಸಿಕೊಳ್ಳುತ್ತಿದ್ದಂತೆಯೇ, ಆಕೆಯ ಸೂಟ್‌ಕೇಸ್ ಕೂಡ ತಲುಪಿತ್ತು- ಮದುವೆಗೆ ಮುನ್ನವೇ. ಆಕೆ ಮತ್ತೆ ತನ್ನ ಉದ್ದೇಶಿತ ಸೀರೆ, ಮ್ಯಾಚಿಂಗ್ ಮಾಸ್ಕ್, ಪರ್ಸ್,ಚಪ್ಪಲಿ ಧರಿಸಿ ಕಾಣಿಸಿಕೊಂಡಾಗ ಎಲ್ಲರಲ್ಲೂ ನಿರಾಳಭಾವ ನೆಲೆಯಾಗತೊಡಗಿತ್ತು.
ಈ ಘಟನೆ ಕ್ಷುಲ್ಲಕ ಎನಿಸಿದರೂ ನನಗಂತೂ ಇದರಲ್ಲಿ ಅತ್ಯದ್ಭುತ ಪಾಠವಿದೆ ಅನಿಸಿತು: ಮೊದಲ ಎರಡು ಘಟನೆಗಳಲ್ಲಿ ಕಲಿತ ಪಾಠದ ನೈತಿಕ ಸತ್ವವನ್ನು ಪ್ರಯೋಗಕ್ಕೆ ಹಚ್ಚಿ, ತಾತ್ವಿಕ ನಿರ್ಣಯಗಳನ್ನು ರೂಪಿಸುವಲ್ಲಿ ಕಂದೀಲು ಹಿಡಿಯಲು ಉತ್ತಮ ಉದಾಹರಣೆ ಒದಗಿಸುತ್ತದೆ ಅನಿಸಿತು. ನಾವು ನಮ್ಮ ನಡೆಗಳ, ನಡತೆಗಳ, ವರ್ತನೆಗಳ ತುಲನೆ ಮಾಡುವುದು ಎಷ್ಟುಅವಶ್ಯಕ ಹಾಗೂ ಆ ತುಲನೆ ಮಾಡುವುದಾದರೂ ಹೇಗೆ ಎಂಬ ಬಗ್ಗೆ ಕಲಿಸುವ ಪಾಠಗಳು ಈ ಘಟನೆಯಲ್ಲಿ ಅಡಗಿ ಕೂತಿವೆ ಎನ್ನಬಹುದು.
ತಾನು ಆ ಮದುವೆಯಲ್ಲಿ ಸಂಭ್ರಮದಿಂದ ಓಡಾಡಿಕೊಂಡು, ಆನಂದದಿಂದ ಕಾಲ ಕಳೆಯಬೇಕು ಎಂಬ ಆಶಾಭಾವದಿಂದ, ಆಕಾಂಕ್ಷೆಯಿಂದ ಸುಮಾರು ತಿಂಗಳುಗಳಿಂದ, ತಯಾರಿ ನಡೆಸಿದ್ದ ಮನಸ್ಸಿಗೆ, ಒಮ್ಮೆಗೆ, ಹಾಗೆ ಕಟ್ಟಿಕೊಂಡಿದ್ದ ಆಶಾಭಾವದ ಭವನದ ಸೂರು ಧುತ್ತೆಂದು ಕುಸಿದರೆ ಆಘಾತವಾಗುವುದು ಸ್ವಾಭಾವಿಕವೆ. ಆ ಅಘಾತದಿಂದ ಸದ್ಯಕ್ಕೆ ಬೇಸರವಾಗುವುದು ಕೂಡ ನಿರೀಕ್ಷಿತವೆ. ಆದರೆ ಈ ಆಘಾತವು ಜೀವನವನ್ನೆ ಏರುಪೇರು ಮಾಡುವಷ್ಟುರಭಸವಾದದ್ದೆ ಎಂದು ಯೋಚಿಸುವುದು ಅವಶ್ಯಕವಲ್ಲವೆ? ಆ ದಿನದ ಸಂಭ್ರಮಕ್ಕೆಂದೇ ಅಷ್ಟುತಯಾರಿ ನಡೆಸಿ ಸಿದ್ಧಪಡಿಸಿದ್ದ ಧಿರಿಸು ಲಭಿಸದಿದ್ದರೆ ಒಂದು ರೀತಿಯ ಕೊರತೆಯ ಭಾವ ಮೂಡುವುದು ಸ್ವಾಭಾವಿಕವೆ. ಆದರೆ ಆ ಕೊರತೆ ಮನಸ್ಸನ್ನೂ ಕೊರೆದು, ಆಳಕ್ಕೆ ಇಳಿದು ನಮ್ಮನ್ನು ಹತಾಶರಾಗಿಸಿ, ಇತರರನ್ನೂ ಹತಾಶರಾಗಿಸಿ, ಇಡೀ ಸಂಭ್ರಮದ ವಾತಾವರಣದಲ್ಲಿ ಬೇಸರ ಬಿತ್ತುವುದರಲ್ಲಿ ಅರ್ಥವಿದೆಯೇ?
ಬಹುಶಃ ಈ ಇಡೀ ಘಟನೆಯನ್ನು ಮೊದಲ ಎರಡೂ ಘಟನೆಗಳು ಕಲಿಸುವ ತಾತ್ವಿಕ ಮಸೂರದ ಮೂಲಕ ವೀಕ್ಷಿಸಿದರೆ ನಮ್ಮ ವರ್ತನೆಯೇ ಬದಲಾಗುವುದು ಖಂಡಿತ ಎಂದು ನಂಬುತ್ತೇನೆ. ಕಾರಣ ನಾವು ನಾವಾಗಿಯೇ ಉಳಿದರೆ ನಮ್ಮ ಮನಸ್ಸು ಆ ಕ್ಷಣದಲ್ಲಿ ಇಂತಹ ಘಟನೆಗಳ ಬೇಸರಕ್ಕೆ ನೇಣುಹಾಕಿಕೊಂಡು ಸೋತು ಸೊರಗುತ್ತದೆ ಎನ್ನುವುದು ಸತ್ಯ. ಆ ಸ್ಥಿತಿಯಲ್ಲಿ ನಮ್ಮಿಂದ ಹೊರಗೆ ಬಂದು ನಮ್ಮನ್ನು ನಾವೇ ದೂರದಿಂದ ದಿಟ್ಟಿಸಿ ನೋಡಿದರೆ ಬಹುಶಃ ನಮ್ಮ ವರ್ತನೆಯ ವಿಕೃತ ಚಿತ್ರಣ ಎದ್ದು ಕಾಣುತ್ತದೆ. ಬೇರೊಬ್ಬರ ಕಣ್ಣಿನ ಮೂಲಕ ನಮ್ಮನ್ನೇ ನಾವು ನೋಡಿಕೊಳ್ಳಬೇಕು. ಒಟ್ಟಿನಲ್ಲಿ ನಾವು ಬೇರೊಬ್ಬರಾಗಬೇಕು. ಹಾಗಾಗಿ ನಾರಾಯಣ ಸ್ವಾಮಿ ಹೇಳಿದ ಆ ವಿಶೇಷ ಬೋಧೆ- ನೀನು ನಾನಾದಾಗ ಮಾತ್ರ ನಿನ್ನನ್ನು ನೀನೇ ಕಾಣಲು ಸಾಧ್ಯ ಎನ್ನುವ ಮಾತು ಇಂಥ ಘಟನೆಗಳ ಕತ್ತಲಲ್ಲಿ ದಾರಿ ದೀಪವಾಗುತ್ತದೆ.
ಎಷ್ಟೊಂದ್ ಜನ; ಇಲ್ಲಿ ಯಾರು ನನ್ನೋರು!
ನಾನು ಉದ್ದೇಶಪೂರ್ವಕವಾಗಿಯೇ ಈ ಕ್ಷುಲ್ಲಕ ಘಟನೆಯನ್ನು ಸವಿವರವಾಗಿ ನಿರೂಪಿಸಿ, ಮೊದಲ ಎರಡೂ ಘಟನೆಗಳಿಗೆ ಮುಖಾಮುಖಿಯಾಗಿಸಲು ವಿಶೇಷವಾದ ಕಾರಣವಿಲ್ಲ. ಅದೊಂದು ಉದಾಹರಣೆ ಅಷ್ಟೆ. ಆದರೆ ತಾರಾಲಯದ ಭಿತ್ತಿಯಿಂದ ಚಿಮ್ಮಿದ ಬೋಧೆಯಾಗಲಿ, ಕುವೆಂಪು ಅವರ ಕಾವ್ಯದ ಬಗೆಗಿನಅವಲೋಕನದಿಂದ ಹೊಮ್ಮಿದ ಬೋಧೆಯಾಗಲಿ ಕೇವಲ ಜೀವನ ಪಾಠಗಳಷ್ಟೆಆಗಿರದೆ, ತಾತ್ವಿಕ ಮೀಮಾಂಸೆಗಳನ್ನೇ ಹೆಣೆಯಬಲ್ಲ ಶಕ್ತಿಯುಳ್ಳ ಪಾಠಗಳು ಕೂಡ ಎಂದು ನನ್ನ ನಂಬಿಕೆ.
ನಮ್ಮ ನೆಲೆ ನಮಗೆ ಕಾಣದು ಎನ್ನುವುದು ವಿಶ್ವದ ಒಂದು ಭೌತಿಕ ಸತ್ಯವಾದರೆ ನಮ್ಮದೇ ಮನಸ್ಸು ನಮಗೇ ಕಾಣದು ಎನ್ನುವುದು ನಮ್ಮ ಆಂತರ್ಯದ ಘೋರ ಸತ್ಯ. ಮೊದಲನೆಯದು ಬ್ರಹ್ಮಾಂಡದ ಸೃಷ್ಟಿಯ ನಿಯಮಗಳಿಂದ ಉದ್ಭವಿಸಿದ ಸತ್ಯವಾದರೆ, ಎರಡನೆಯದು ಮನಸ್ಸಿನ ಕಳ್ಳಾಟದಿಂದ ಜನಿಸಿದ ಸತ್ಯ. ಅದನ್ನು ಅರಿಯಲು ನಮ್ಮಿಂದ ನಾವೇ ಹೊರಗೆ ಹೋಗಬೇಕಾಗುತ್ತದೆ- ವಿಶ್ವದ ಭೌತಿಕ ಸತ್ಯವನ್ನು ಭೇದಿಸಲು ಹೊರಗೆ ಹೋಗಬೇಕಾದಂತೆ. ಹಾಗಾಗಿ ನಮ್ಮನ್ನು ನಾವು ಅರಿಯಲು ನಮ್ಮಿಂದ ನಾವೇ ಹೊರಹೋಗಬೇಕು ಎನ್ನುವುದು ಮಾನಸಿಕ ಅಣುಅಂಶಗಳಿಂದ ಹಿಡಿದು ಬೃಹದಾಕಾರದ ಬ್ರಹ್ಮಾಂಡದವರೆಗೆ ಹರಡಿಕೊಂಡಿರುವ ಕಾಲಾತೀತ ಸತ್ಯ. ನಮ್ಮಲ್ಲಿಯೇ ಅಡಗಿ ಕುಳಿತಿರುವ ಮಾನಸಿಕ ಸತ್ಯ. ಸೃಷ್ಟಿಯ ವಿಚಿತ್ರ ಸತ್ಯ.
(ತಾರಾಲಯದಲ್ಲಿ ಕಂಡ ಬಿತ್ತಿ ಚಿತ್ರ. ಚಿತ್ರಕೃಪೆ: J N Planetarium, ಬೆಂಗಳೂರು. ಕಲೆಗಾರರು: J M S Mani, ಛಾಯಾಗ್ರಾಹಕರು:ಮಧುಸೂದನ್)