ಟಿ.ಎಸ್.ಗೊರವರ

ನೀವು ಬರಹಕ್ಕೆ ಹೇಗೆ ತೆರೆದುಕೊಂಡಿರಿ? ಈಗಲೂ ಕಾಡುವ ನಿಮ್ಮ ಊರಿನ, ಬಾಲ್ಯದ ನೆನಪುಗಳನ್ನ ಹೇಳಿ.

ಬರಹಕ್ಕೆ ಹೇಗೆ ತೆರೆದುಕೊಂಡೆ ಎಂಬ ನಿಮ್ಮ ಈ ಪ್ರಶ್ನೆ ನನ್ನನ್ನು ದಿಗಿಲಾಗಿಸುವಂಥದ್ದು. ಅಪ್ಪ ಅವ್ವ ಇಬ್ಬರೂ ಓದಿಕೊಂಡವರಲ್ಲ. ಧಾರವಾಡದ ದಲಾಲಿ ಅಂಗಡಿಯೊಂದರಲ್ಲಿ ನಮ್ಮಪ್ಪ ಕಾರಕೂನ ಆಗಿದ್ದ. ಆಗ ಅವರಿಗೆ ಇಪ್ಪತ್ತು ರೂಪಾಯಿ ಪಗಾರ ಇತ್ತು. ಆ ಕಾಲದಲ್ಲಿ ಮನೆಗೆ ಕಾಳು ಕಡಿ ಎಲ್ಲ ತರೆಸುತ್ತಿದ್ದ ನಮ್ಮಪ್ಪ. ಆ ಕಾಲಾನ ಹಂಗಿತ್ತು. ನಾನು ಎರಡು ವರ್ಷದಾಂವ ಇದ್ದಾಗ ನಮ್ಮಪ್ಪ ತೀರಿಕೊಂಡ. ನಾವಿದ್ದ ಮನೆ ಅಪ್ಪ ತೀರಿಕೊಂಡ ದಿನಾನ ಮಾರಬೇಕಾತು. ಅಪ್ಪನ ಅಂತ್ಯ ಸಂಸ್ಕಾರಕ್ಕೂ ಸಹಿತ ಹಣ ಇರಲಾರದಂಥ ಪರಿಸ್ಥಿತಿಯಿತ್ತು. ಯಾದವಾಡ ಅವ್ವನ ತವರುಮನಿ. ಅಜ್ಜ ಆ ಮೇಲೆ ಯಾದವಾಡಕ್ಕ ಕರೆದುಕೊಂಡು ಹೋದ್ರು. ಮುಂದ ಅಲ್ಲಿಂದ ಮನಗುಂಡಿಗೆ ಹೋಗಬೇಕಾತು. ಮನಗುಂಡಿಗೆ ಹೋದಾಗ ದನ ಕಾಯ್ದೀನಿ, ಹೊಲದಾಗ ಕೆಲಸಾನೂ ಮಾಡ್ತಿದ್ದೆ.

BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!

ಅಲ್ಲಿಯೇ ಸಂಗಪ್ಪ ಮಾಸ್ತರ್ ಅಂತ ಇದ್ರು. ಅವರು, ನಮ್ಮಜ್ಜ ಬಹಳ ಆತ್ಮೀಯ ಗೆಳೆಯರು. ನಮ್ಮಜ್ಜನ ಚಾದಂಗಡಿಗೆ ದಿನಾ ಬರ‌್ತಿದ್ರು. ಬಂದಾಗೆಲ್ಲ ಅಲ್ಲೇ ಕೆಲಸ ಮಾಡ್ತಿದ್ದ ನನಗೆ ಮಕ್ಕಳ ಕಥೆ ಪುಸ್ತಕ ಕೊಡ್ತಿದ್ರು. ನನ್ನ ಅಕ್ಷರಾಭ್ಯಾಸ ಆರಂಭ ಆಗಿದ್ದು ಅಲ್ಲಿಯೇ. ಮುಂದೆ ಮನಗುಂಡಿಯಲ್ಲಿ ಐದನೇತ್ತೆ ನಂತರ ಶಾಲೆ ಇಲ್ಲದ ಕಾರಣಕ್ಕೆ ಅವ್ವ ನನ್ನನ್ನ ಕರೆದುಕೊಂಡು ಧಾರವಾಡಕ್ಕೆ ಬಂದಳು. ಮುಂದೆ ನವಲಗುಂದ ಮಾಸ್ತರ್ ಅಂತ ಒಂದೇ ವರ್ಷದಾಗ ನನಗ ಛಂದಸ್ಸೆಲ್ಲಾ ಕಲಿಸಿದ್ರು. ಕವಿತೆ ಕಡೆ ಮನಸ್ಸು ವಾಲಿದ್ದು ಆವಾಗಲೇ. ಏಳನೇತ್ತೆ ಇದ್ದಾಗಲೇ ನನ್ನ ಬರಹಗಳು ‘ವೀರಮಾತೆ’ ಎಂಬ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಆಗಲೇ ಆಲೂರು ವೆಂಕಟರಾಯರ ಅಳಿಯ ವರದರಾಜ ಹುಯಿಲಗೋಳರು ಕಾಲೇಜಿನ ಮ್ಯಾಗಜಿನ್‌ಗೆ ನನ್ನ ಕಡೆಯಿಂದ ಕಥೆ ಬರೆಸಿ ಪ್ರಕಟಿಸಿದ್ದರು. ಹೀಂಗ ಬರವಣಿಗೆ ನನಗೆ ಗೊತ್ತಿಲ್ದೇ ಸುರುವಾತು.

ಕವಿತೆ ಬರೆಯುವ ಮುಂಚೆ ನೀವು ಕತೆಯನ್ನೂ ಬರೆದಿದ್ದೀರಿ. ‘ಮಾವ’ ಕತೆ ಆಗ ಹೆಚ್ಚು ಚರ್ಚೆಯಾಗಿತ್ತು. ಆ ಮೇಲೆ ನೀವು ಕತೆ ಬರೆದಂತೆ ಕಾಣುತ್ತಿಲ್ಲ. ಯಾಕೆ ಕಾವ್ಯವನ್ನೇ ಆಯ್ದುಕೊಂಡಿರಿ?

ಮೊದಲಿಗೆ ನಾನು ಕಾವ್ಯ ಮತ್ತು ಕತೆ ಎರಡೂ ಬರೆದಿದೀನಿ. ಆದರೆ ಹೆಚ್ಚು ಚರ್ಚೆಯಾಗಿದ್ದು ಕಾವ್ಯ. ಕತೆ ಪ್ರಸಿದ್ಧವಾಗುವಂತೆ ಮಾಡಿದ್ದು ಪಾ.ವೆಂ. ಆಚಾರ್ಯರು. ಇವರ ಜೊತೆಗೆ ರಾವ್ ಬಹದ್ದೂರ್ ಅವರು ಮನೆಗೆ ಬಂದು ವಸಂತ ಸಂಚಿಕೆಗೆ ಒಂದು ಕತೆ ಬರೆಸಿದರು. ಅವರ ಒತ್ತಾಯಕ್ಕೆ ಬರೆದ ಕಥೆಯೇ ಮಾವ. ನಂತರ ‘ನನ್ನ ಗಂಡನಿಗೆ ವಿಷ ಹಾಕಿದೆ’ ಅಂತಲೂ ಅವರದೇ ಒತ್ತಾಯಕ್ಕೆ ಬರೆದೆ. ಅದು ಕಸ್ತೂರಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಯಿತು. ಕಥೆಯೊಳಗೆ ಹೆಚ್ಚು ಹೇಳಲು ಸಾಧ್ಯವಿದೆ. ನಾವು ಮತ್ತು ನಮ್ಮ ಸುತ್ತಲಿನ ಇಡೀ ಚರಿತ್ರೆಯನ್ನು ಹೇಳಲು ಸಾಧ್ಯವಿದೆ. ಆದರೆ ಕವಿತೆ ಹಾಗಲ್ಲ. ಕವಿತೆಯೊಳಗೆ ಆ ಕ್ರಮವನ್ನು ಹಿಡಿಯಬಹುದು, ಕಾಲವನ್ನಲ್ಲ. ಕತೆಯೊಳಗೆ ಇಡೀ ಕಾಲವನ್ನು ವಿಸ್ತರಿಸಿ ಹೇಳಲು ಸಾಧ್ಯವಿದೆ. ಕತೆಯ ಕ್ಯಾನ್ವಾಸ್ ಮತ್ತು ಸಾಮರ್ಥ್ಯ ಬಹಳ ದೊಡ್ಡದು. ಇವತ್ತಿಗೂ ನಾನು ಕಥೆ ಬರೆಯಬೇಕಾದ ಪ್ರಸಂಗಗಳು, ನೆನಪುಗಳು ಬಹಳಷ್ಟಿದಾವ ಅನಸ್ತದ. ಅವನ್ನೆಲ್ಲ ಬರೀಬೆಕು. 

ನರಸಿಂಹ ಮೂರ್ತಿ ವಯಸ್ಸು ಎಪ್ಪತ್ತು, ಎಪಿಸೋಡು ಹತ್ತು ಸಾವಿರದ ಹತ್ತು!

ನಿಮ್ಮ ಕಾವ್ಯಕ್ಕೂ ಕಥನದ ಗುಣ ಇದೆ..

ಇರಬಹುದು. ಒಂದು ದೊಡ್ಡ ಶಿಲೆಯನ್ನು ಒಡೆಯುವಾಗ ಬಿದ್ದ ತುಣುಕುಗಳು ಕವಿತೆಗಳು. ನಿರ್ಮಾಣವಾದ ಶಿಲ್ಪ ಕತೆ. ಕತೆಯೇ ನಮ್ಮ ಮೂಲದ್ರವ್ಯ.

ಚಹಾದ ಜೋಡಿ ಚೂಡಾದ್ಹಂಗ, ಕಡೀಪುಟ ಒನ್ನೇಪುಟ.. ಹೀಗೆ ಮುಕ್ಕಾಲು ಪಾಲು ಬರಹಗಳು ಧಾರವಾಡ ಸೀಮೆ ಭಾಷೆಯಲ್ಲಿಯೇ ಇವೆ. ನೀವು ಬರೆಯುವಾಗ ನವ್ಯದ ಉತ್ತುಂಗ ಸ್ಥಿತಿ ಅದು. ಆ ಸಂದರ್ಭದಲ್ಲೂ ಸಹಿತ ಗ್ರಾಂಥಿಕ ಭಾಷೆ ಬಿಟ್ಟು ಧಾರವಾಡ ಸೀಮೆ ಭಾಷೆಯನ್ನೇ ನಿಮ್ಮ ಬರವಣಿಗೆಗೆ ಆಯ್ದುಕೊಂಡ್ರಿ. ಯಾಕೆ?

ಮನಸ್ಥಿತಿ ನವ್ಯದ್ದು ಇರಬಹುದು. ಆದರ ಭಾಷಾಸ್ಥಿತಿ ಮಾತ್ರ ಮೊದಲಿನಿಂದ ಹಳ್ಳಿಯದ್ದು. ನನಗೆ ಈ ಗ್ರಾಂಥಿಕ ಮತ್ತು ಶಹರದ ಭಾಷೆಯನ್ನ ಉಳಿಸಿಕೊಳ್ಳಾಕ ಆಗಲೇ ಇಲ್ಲ. ನಂಗ ಸೇರದ ಕಾರಣಕ್ಕ ಬರಬರತ್ತ ನಾನದನ ಬಿಟಗೋಂತ ಹೋದೆ. ನೀವು ಹೆಂಗ ಮಾತಾಡ್ತಿರಿ ಮಾತಾಡ್ರಿ, ಅಪೀಲ್ ಆಗ್ತದ. ಅಪೀಲಿಂಗ್ ಭಾಷೆಯ ಮುಖ್ಯಗುಣ. ಅದನ್ನು ಕಳಕೊಂಡ್ರೆ ಭಾಷೆಯೊಳಗ ಶಕ್ತೀನ ಇಲ್ಲ. ಸಾಧ್ಯವಾದಷ್ಟು ಅದನ್ನು ಬರವಣಿಗೆಯೊಳಗೂ ಮತ್ತು ಭಾಷಣದೊಳಗೂ ಉಳಿಸಿಕೊಂಡೀನಿ. ಬೇಂದ್ರೆಯವರದು ಪಟ್ಟಣದ ಆಡುಭಾಷೆ. ನನ್ನದು ಹಳ್ಳಿಯ ಆಡುನುಡಿ.

ನಿಮ್ಮದು ಹಳ್ಳಿ ಪರಿಸರ. ಮನೆಯ ಆಡುಭಾಷೆ ಕನ್ನಡ. ಆಮೇಲೆ ನೀವು ಹಿಂದಿಯನ್ನು ಕಲಿತು ಅದರ ಮೇಲೆ ಪ್ರಭುತ್ವ ಸಾಧಿಸ್ತೀರಿ. ಹಿಂದಿಯಿಂದ ಕನ್ನಡಕ್ಕೆ ಸಾಕಷ್ಟು ನಾಟಕ ಹಾಗೂ ಪದ್ಯಗಳನ್ನು ಅನುವಾದಿಸಿದ್ದೀರಿ. ಇದೆಲ್ಲ ಸಾಧ್ಯವಾದದ್ದು ಹೇಗೆ?

ಹಿಂದಿ ನನಗ ಗಂಟ ಬಿದ್ದಿದ್ದು ಅಥವಾ ನಾನು ಹಿಂದಿಗೆ ಗಂಟ ಬಿದ್ದಿದ್ದು ಒಂದು ದೊಡ್ಡ ಕತೆ. ಏಳನೇತ್ತೆ ಇದ್ದಾಗ ಮುಂಬೈ ಪ್ರಾಂತ್ಯದೊಳಗಿದ್ದೆವು. ಮೊರಾರ್ಜಿ ಮುಖ್ಯಮಂತ್ರಿ ಇದ್ರು. ೧೯೫೧-೫೨ ಇಸವಿ ಇರಬೇಕು. ಹಿಂದಿ ಕಂಪಲ್ಸರಿ ಮಾಡಿದ್ರೀ. ಆವಾಗ ಗುರುನಾಥ ಜೋಶಿ ಅಂತ ಹಿಂದಿ ಕಂಪಲ್ಸರಿ ಮಾಡಿದ ಸರ್ಕ್ಯುಲರ್ ಹಿಡಕೊಂಡು ಬಂದು ಹುಡುಗುರನ್ನ ಪರೀಕ್ಷೆ ಮಾಡ್ತಿದ್ರು. ನಾನಾಗ ಹಳ್ಳಿಯಿಂದ ಬಂದಾವ. ನನ್ನ ಜೊತಿಗೆ ಇದ್ದವರೆಲ್ಲ ಉತ್ತರ ಹೇಳಿದ್ರು. ನಾನು ಹೇಳಾಣ ತಡೀ ಅಂತ ‘ಮೋಟಾ ತಗ್ಡಾ’ ಅಂದ್ರ ಏನು ಎಂಬ ಅವರ ಪ್ರಶ್ನೆಗೆ ಸಟ್ನ ಕೈ ಎತ್ತಿದೆ. ಅವರು ನನಗ ಉತ್ತರ ಹೇಳ ಅಂದ್ರು. ನಾನು ‘ಮೋಟರ್ ತಗಡು’ ಅಂದೆ. ಹುಡುಗ್ರೆಲ್ಲ ಘೊಳ್ ಅಂತ ನಕ್ರು ಆಗ. ನನಗಾಗ ಬಹಳ ಸುಮಾರಾತು. ಮುಂದ ಎಂಟನೇತ್ತರೊಳಗೂ ಮೊಟ್ಟ ಮೊದಲ ಸಲ ಹಿಂದಿ ನಪಾಸಾದೆ. ಅಪಮಾನ ಅನಿಸಿತು. ಆಗಲೇ ಹಿಂದಿ ಕಲಿಬೇಕು ಅನ್ನೂ ಹಠ ಹುಟ್ಟಿದ್ದು. ಮುಂದ ಹತ್ತನೇತ್ತರೊಳಗಡೆಯೇ ಹಿಂದಿಯ ಅಸಂಖ್ಯಾತ ಕತೆಗಳನ್ನು ಓದಿದ್ದೆ ಮತ್ತು ಬರೆದೆ. ಜೈಶಂಕರ್ ಪ್ರಸಾದ್, ಪ್ರೇಮಚಂದ್ ಅಂಥವರನ್ನು ನಾನಾಗಲೇ ಓದಿದ್ದೆ. ಅದನ್ನ ಬೆನ್ನತ್ತಿ ಹೋಗಿ ಹಿಂದಿನೇ ಈಜಿ ಅನಿಸಿಬಿಡ್ತು. ಕಾಲೇಜಿನಲ್ಲೂ ಹಿಂದಿಯನ್ನೇ ಆಯ್ದುಕೊಂಡೆ.

‘ನಿನ್ನ ಮರೆಯೂ ಮಾತು’ ಕವಿತೆ ಎಲ್ಲ ಕಾಲದ ಯುವಕರಿಗೂ ಇದು ನನ್ನದೇ ಕವಿತೆ ಎನಿಸುವಂಥದು. ಆ ಕವಿತೆಯ ಹಿನ್ನೆಲೆ ಬಗ್ಗೆ ತಿಳಿಸಿ..

ಆ ಪದ್ಯ ‘ನೀನಾ’ ಎಂಬ ಸಂಕಲನದಲ್ಲಿ ಬಂತು. ಇದಕ್ಕಿನ್ನ ಮೊದಲು ಆ ಕವಿತೆಯನ್ನೇ ಹೋಲುವ ಪದ್ಯವೊಂದನ್ನು ಬರೆದಿದ್ದೆ. ಆ ಕವಿತೆಯನ್ನು ಬಿ.ಎ. ಒಳಗ ಕಳಕೊಂಡೆ. ಆಗ ಗಿರಡ್ಡಿ ಗೋವಿಂದರಾಜ ಅವರ ರೂಮಿನಲ್ಲಿ ಕೂತು ಆ ಕಳಕೊಂಡ ಪದ್ಯ ಹಾಗೂ ಕಳಕೊಂಡ ಹುಡುಗಿ ಬಗ್ಗೆ ಬರೆದ ಕವಿತೆ ಅದು. ಆ ಪದ್ಯದೊಳಗೆ ನನ್ನ ಊರು, ಭಾಷೆ, ನನ್ನ ಹುಡುಗಿ ಹಾಗೂ ನನ್ನ ಮನಸ್ಥಿತಿ ಎಲ್ಲಾ ಇತ್ತು. ನಾನಿವತ್ತಿಗೂ ಅದನ್ನೇ ಬರೀತಿದ್ದೀನಿ. ಅದಕ್ಕ ಬೇಕಾದ್ದ ಹೆಸರು ಕೊಟ್ಟುಕೋಬಹುದು. ನಾನು ಕತೆಗಳನ್ನ ಬರೆದರೂ ಆ ಹುಡುಗಿಯ ಸುತ್ತಲೇ ಬರೆದಿರುವೆ. ನನಗಿವತ್ತಿಗೂ ಅದರಿಂದ ಹೊರಗಬರಾಕಾಗವಲ್ದು.

ಬಡತನದಿಂದ ಬಂದ ಸರಿಗಮಪ ಹುಡುಗ ಕರುನಾಡಿನ ಮನೆಮಾತಾದ ಕಥೆ!

‘ಅಪರಾಂಪರ’ ಸಂಕಲನದ ‘ಶೆಟ್ಟಿಯ ಅಂಗಡಿ’ ಎಂಬ ಪದ್ಯ ಓದಿದರೆ ಅದು ನಿಮ್ಮ ವೈಯಕ್ತಿಕ ಅನುಭವ ಇರಬಹುದು ಅನಿಸುತ್ತೆ. ಆದರೆ, ಆ ಕವಿತೆ ಕಟ್ಟಿಕೊಡುವ ವಿಶ್ವಾತ್ಮಕ ಚಿತ್ರಣದಿಂದ ಓದುಗನನ್ನು ಕಾಡುತ್ತದೆ.

ಆ ಪದ್ಯದಲ್ಲಿ ನನಗನಿಸುವುದು; ಮಾತಾಗಲಿ, ಬರವಣಿಗೆಯಾಗಲಿ, ವೃತ್ತಿಯಾಗಲಿ, ಪ್ರವೃತ್ತಿಯಾಗಲಿ ಎಲ್ಲವೂ ಮಾರಾಟಕ್ಕಿಟ್ಟ ವಸ್ತುಗಳು. ನಮ್ಮ ಭಾವನೆಗಳ ಜೊತೆಗೆ ನಮ್ಮ ಅನಿಸಿಕೆಗಳನ್ನ ಮಾರ‌್ತೇವೆ. ಮಾರೂದರ ಜೊತೆಗೆ ಕೊಳ್ತೇವೆ. ನಮ್ಮ ಅಂಗಡಿಯಲ್ಲಿ ಮಾರಿದರೂ ಇನ್ನೊಬ್ಬರ ಅಂಗಡಿಯಲ್ಲಿ ಕೊಳ್ಳುತ್ತೇವೆ. ಬಾಲ್ಯದಲ್ಲಿ ನಾನು ನಮ್ಮ ಅಂಗಡಿಯಲ್ಲೇ ಕೆಲಸ ಮಾಡ್ತಿದ್ದೆ. ಅಡ್ಡಹೆಸರು ಬೇರೆ ಪಟ್ಟಣಶೆಟ್ಟಿ ಅಂತಿತ್ತು. ದೋಸ್ತರೆಲ್ಲ ನನಗ ಶೆಟ್ಟಿ, ಶೆಟ್ಟಿ ಅಂತಿದ್ರು. ಆ ಶೆಟ್ಟಿ ಅಂತ ಕರೆಯೋದ್ರರೊಳಗೆ ಆತ್ಮೀಯತೆಯೂ ಇತ್ತು, ಅವಜ್ಞೆಯೂ ಇತ್ತು. ಆ ಪದ್ಯದೊಳಗೆ ನಾನೇ ಅಂಗಡಿಕಾರ. ಅದರಲ್ಲಿ ಬರುವ ಹುಡುಗಿ ಪ್ರೇಯಸಿನೂ ಹೌದು, ನನ್ನಾಕೆಯೂ ಹೌದು, ಸಮಾಜವೂ ಹೌದು. ಇರೂವಷ್ಟು ದಿನ ನಾವು ಅಂಗಡಿ ನಡೆಸಬೇಕು. ಕೊನೀಗೆ ನಾವು ಅಂಗಡೀನ ಆಗಿ ಬಿಡ್ತೀವಿ.

ಸಾಹಿತಿಗೆ ಸಿದ್ಧಾಂತ ಇರಬೇಕಾ? ಇರಬೇಕು ಅಂತಾದರೆ ಎಂತಹ ಸಿದ್ಧಾಂತವಿರಬೇಕು. ಯಾವುದೇ ಸಾಹಿತ್ಯಕ ವಾತಾವರಣದಲ್ಲಿ ಸಾಂಸ್ಕತಿಕ ರಾಜಕಾರಣ ಕೆಲಸ ಮಾಡುತ್ತಿರುತ್ತದೆ. ಇದನ್ನು ನೀವು ಒಪ್ತಿರಾ?

ಸಿದ್ಧಾಂತ ಇರಬೇಕೂಂತ ನನಗೇನೂ ಅನಿಸುವುದಿಲ್ಲ. ಮಾಡಿಕೊಂಡ ಸಿದ್ಧಾಂತಕ್ಕೂ ಸಹ ಕೊನೀವರೆಗೂ ಅಂಟಿಕೊಂಡ ಇರಾಕಾಗೂದಿಲ್ಲ. ಕಾಲ ತನಗೆ ತಕ್ಕಂಗ ಸಿದ್ಧಾಂತಗಳನ್ನು ಬದಲಿ ಮಾಡ್ತದ. ಕಾಲಕ್ಕ ತಕ್ಕಂಗ ಹೊಂದಿಕೊಳ್ಳಲಿಲ್ಲಂದ್ರ ನಮ್ಮನ್ನ ಪಕ್ಕಕ್ಕ ತಳ್ಳಿಬಿಡ್ತದೆ. ಒಂದು ನೌಕರಿಗೆ ಸೇರೂವಾಗ ಅವರ ಕಾನೂನುಗಳನ್ನು ಒಪ್ಪಿಗೊಳ್ತಿವಿ ಅಂತ ಬರದುಕೊಡ್ತೀವಿ. ಒಪ್ಪಗೊಳ್ಳದಿದ್ರ ನೌಕರಿ ಮಾಡೂ ಅಗತ್ಯಾನೇ ಇಲ್ಲ. ಇದು ಸಿದ್ಧಾಂತವನ್ನು ಹೊಂದಾಣಿಕೆ ಮಾಡಿಕೊಳ್ಳುವ ರೀತಿ. ಕಮ್ಯೂನಿಸ್ಟರಲ್ಲೂ ಸಹ ಮಂಗಳೂರಿನವರು ಹೇಳುವುದು ಬೇರೆ, ಧಾರವಾಡದವರು ಹೇಳುವುದು ಬೇರೆ, ಉತ್ತರ ಭಾರತದವರು ಹೇಳುವುದು ಬೇರೆ. ಪ್ರಗತಿಶೀಲ ಚಳವಳಿ ಸೋತಿದ್ದು ಇದೇ ಕಾರಣಕ್ಕೆ. ಪ್ರತಿಯೊಬ್ಬರ ಚಿಂತನೆಯೂ ಬದಲಾಗುತ್ತಾ ಹೋಯಿತು. ಕಮ್ಯೂನಿಸಂ ಸಹಿತ ಅಧ್ಯಕ್ಷರು ಬದಲಾದಂತೆ ಬದಲಾಗುತ್ತಾ ಹೋಯಿತು. ಹಾಗಾದರೆ ವ್ಯಕ್ತಿ ಮುಖ್ಯ. ಸಿದ್ಧಾಂತ ಅಲ್ಲ ಅಂತ ಆಯ್ತಲ್ಲ. ಯಾವುದೇ ಸಿದ್ಧಾಂತ ಅಂತಿಮವಲ್ಲ, ಪರಿಪೂರ್ಣವಲ್ಲ, ಕೊನೆಯೂ ಅಲ್ಲ. ಸಾಂಸ್ಕೃತಿಕ ರಾಜಕಾರಣ ಅನ್ನೋದು ಟೆಂಪರರಿ. ಈ ರಾಜಕಾರಣ ನಮಗ ಅಗತ್ಯ ಇಲ್ಲ. ಲೇಖಕರು ಅದರಾಗ ತೊಡಗಬಾರದು. ಸಾಹಿತ್ಯದ ವ್ಯಾಪಾರ ಮಾಡೂಣು, ರಾಜಕಾರಣ ಬ್ಯಾಡ. ರಾಜಕಾರಣಿಗಳಿಗೆ ಬೆಲೆ ಇಲ್ಲ. ನೆಲೆಯೂ ಇಲ್ಲ. ಸಾಹಿತಿಗಳಿಗೆ ನೆಲೆ ಮತ್ತು ನೆಲ ಎರಡೂ ಇವೆ.

ವಿಜ್ಞಾನಿ ಆಗುವ ಆಸೆ ಕೊನೆಗೂ ಈಡೇರಿತು: ದತ್ತಣ್ಣ

ಹೊಸ ತಲೆಮಾರಿನ ಸಾಹಿತ್ಯದ ಬಗ್ಗೆ ಏನಂತೀರಿ?

ಇವತ್ತಿನ ಸಾಹಿತ್ಯವನ್ನು ನಾನು ಓದಿದ್ದು ಕಡಿಮೆ. ಫೇಸ್ಬುಕ್ ಮತ್ತಿತರ ಕಡೆ ಬರುವ ಬರವಣಿಗೆಯನ್ನ ನನಗೆ ನೋಡಾಕಾಗಿಲ್ಲ. ಬರೆದ ಗೆಳೆಯರು ಹೇಳಿದ್ದನ್ನು ಕೇಳಿ ಗ್ರಹಿಸುವ ತೀವ್ರತೆ ನನ್ನೊಳಗಿದೆ. ಈಗ ಬರೆಯೋರಿಗೆ ಸಂಯಮ ಇದ್ದಂತಿಲ್ಲ. ಸಾಹಿತ್ಯ ತಾಳ್ಮೆ, ಸಂಯಮ, ಸಹನೆಯನ್ನ ಅಪೇಕ್ಷಿಸುತ್ತ. ನಾಲ್ಕು ದಿನದಲ್ಲಿ ಹತ್ತತ್ತು ಮಾತು ಬರೆಯೋದಕ್ಕಿಂತ ನಾಲ್ಕು ದಿನ ಸೇರಿಸಿ ಹತ್ತು ಮಾತು ಬರೆದರೆ ಅವರಿಗೇ ಒಳ್ಳೆಯದು. ಆಗ ಆ ಬರವಣಿಗೆ ಶಕ್ತಿಯುತವಾಗಿರುತ್ತೆ.

ನಿಮ್ಮ ಕಾಲದಲ್ಲಿ ಸಾಹಿತ್ಯಕ ಜಗಳ, ವಾಗ್ವಾದ, ಸಂವಾದಗಳು ಸಾಕಷ್ಟಿದ್ದವು. ಅವು ಹೊಸ ಬಗೆಯ ಸಾಹಿತ್ಯ ಸೃಷ್ಟಿಗೂ ಕಾರಣವಾಗುತ್ತಿದ್ದವು. ಸದ್ಯ ಆ ತರಹದ ವಾಗ್ವಾದಗಳು ಇಲ್ಲ. ಈ ಬಗೆಗೆ ಒಂದಿಷ್ಟು ಹೇಳಿ?

ಸಂವಾದಗಳಲ್ಲಿ ಕೊಡುಕೊಳ್ಳುವಿಕೆಯಿತ್ತು. ವಾಗ್ವಾದಗಳಲ್ಲಿ ಹಠ ಮತ್ತು ತರ್ಕ ಹೆಚ್ಚಿತ್ತು. ಅಡಿಗರು ಸಾಕ್ಷಿ ಪತ್ರಿಕೆ ಮೂಲಕ ಆ ಕೆಲಸ ಮಾಡುತ್ತಿದ್ದರು. ಸಾಹಿತಿಗಳನ್ನು ಕರೆದು ಸಂವಾದ ನಡೆಸುತ್ತಿದ್ದರು. ನಮ್ಮ ಕಡೆಯಿಂದ ಅವರು ಕವಿತೆಗಳನ್ನು ಓದಿಸಿ ಜನರ ಕಡೆಯಿಂದ ಪ್ರತಿಕ್ರಿಯೆಗಳನ್ನು ಹೇಳಿಸುತ್ತಿದ್ದರು. ಆಗ ನಮಗೆ ತಿದ್ದಿಕೊಳ್ಳಲು ಅನುಕೂಲವಾಗುತ್ತಿತ್ತು. ಧಾರವಾಡದಲ್ಲಿ ಶಂಕರಮೊಕಾಶಿ ಪುಣೇಕರ, ಶಾಂತಿನಾಥ ದೇಸಾಯಿ, ಚಂಪಾ ಸಂವಾದಕ್ಕೆ ಕಾರಣರಾಗಿದ್ದರು. ಆಮೇಲೆ ಸಂವಾದ ಹೋಗಿ ಆಕ್ರಮಣ ಶುರುವಾಯಿತು. ವ್ಯಕ್ತಿ ಪ್ರತಿಷ್ಠಾಪನೆ ಯಾವಾಗಲೂ ಆತಂಕಕಾರಿಯಾಗಿರುತ್ತೆ.ಹೊಸ ತಲೆಮಾರಿನ ಲೇಖಕರ ಬಗ್ಗೆ ಹಿರಿಯರು ಉಪೇಕ್ಷೆ ಮಾಡುತ್ತಿದ್ದಾರೆ ಎಂಬುದು ಎಲ್ಲ ಕಾಲಕ್ಕೂ ಇರುವ ಆರೋಪ. ಈಗಲೂ ಆ ಥರ ಇದೆ ಎಂದು ನಿಮಗನಿಸ್ತದಾ? ಸ್ವಲ್ಪ ಮಟ್ಟಿಗಿದೆ. ಅಸಡ್ಡೆ ಅನ್ನುವುದಕ್ಕಿಂತ ಅಸಮಾಧಾನ ಅಂತ ಹೇಳಬಹುದು. ನಮ್ಮ ಮುಂದಿನ ತಲೆಮಾರಿನ ಲೇಖಕರ ಬಗ್ಗೆ ನಾವು ಒಂದು ಕುಟುಂಬ ಎಂದು ಯೋಚಿಸಬೇಕು. 

'ಮಹಾದೇವಿ’ ಧಾರಾವಾಹಿಯ ಶ್ರೀದತ್ತ ಸ್ಲಂ ಮಕ್ಕಳಿಗೆ ಟೀಚರ್!

ಗಿರಿಜವ್ವನ ಮಗ’ ಬರೆದ ನಂತರ ಮತ್ತೆ ಹೊಸದಾಗಿ ಏನು ಬರೆದಿರಿ?

ಆರೇಳು ಪುಸ್ತಕ ಇದಾವ. ರೆಡಿ ಮಾಡಿ ಇಟ್ಕೊಂಡಿದೀನಿ. ಬಹಳ ಹಳೆಯ ಪದ್ಯಗಳಿವೆ. ಅವೇನು ಈಗಿನವರಿಗೆ ಹಿಡಿಸ್ತಾವೋ ಇಲ್ವೋ ಗೊತ್ತಿಲ್ಲ. ಯಾಕೆಂದ್ರ ಈಗಿನ ತಲೆಮಾರಿನ ಕವಿತೆ ಹಾಗೂ ಕವಿಗಳ ಜೊತೆಗೆ ನನಗೆ ಏಗಲಿಕ್ಕಾಗುವುದಿಲ್ಲ. ನಾನಿದನ್ನು ಪ್ರಾಂಜಲ ಮನಸ್ಸಿನಿಂದ ಹೇಳ್ತೇನೆ. ಬರವಣಿಗೆಯ ನನ್ನ ರೀತಿಯೇ ಬೇರೆ. ಈಗಿನ ರೀತಿಗೆ ನನಗೆ ಹೊಂದಿಕೊಳ್ಳಾಕಾಗವಲ್ಲದು. ಪ್ರಕಟ ಮಾಡಿದರೂ ಇತಿಹಾಸದ ಒಂದು ಭಾಗ ಅಂತ ಪ್ರಕಟ ಮಾಡೋದಷ್ಟೇ. ಅದರಲ್ಲೂ ಯಾರಿಗಾದರೂ ಏನರ ಉಪಯೋಗ ಆದೀತು. ಅಥವಾ ಇನ್ನೊಂದು ಹತ್ತು ವರ್ಷಕ್ಕೆ ಹಳೇ ಪದ್ಯಗಳನ್ನೇ ಮತ್ತ ಓದಕೋಂತ ಹೋಗಬಹುದು. ಆ ಕವಿತಾ ಪುಸ್ತಕದ ಹೆಸರು ‘ಚಿಂತಾಮಣಿ’. ಇದು ನನ್ನ ಕವಿಸಮಯ. ಪ್ರಕಟ ಮಾಡಬೇಕು.

ಕವಿಸಮಯ ಅಂತ ಒಂದು ಪದ ಬಳಸಿದ್ರಿ. ಎಲ್ಲರಿಗೂ ಅವರದೇ ಆದ ಕವಿಸಮಯ ಇರ್ತದೆ. ನಿಮ್ಮ ಕವಿಸಮಯ ಯಾವುದು? 

ಆ ಥರದ್ದು ಏನಿಲ್ಲ. ಗದ್ದಲದೊಳಗೆ, ಚರ್ಚೆಯೊಳಗೆ ನನಗೆ ಬರವಣಿಗೆ ಸಾಧ್ಯಾ ಆಗೂದಿಲ್ಲ. ಬರವಣಿಗೆಗೆ ಕುಂತ್ರ ನನಗ ಏಕಾಂತ ಬೇಕು. ಶಾಸ್ತ್ರೀಯ ಸಂಗೀತ ಕೇಳ್ತಾ ಬರಿತೀನಿ. ಇದಾ ದೇಶದ್ದು ಅಂಥಲ್ಲ. ಯಾವುದೇ ದೇಶದ್ದೇ ಆಗಿರಲಿ. ಕರ್ನಾಟಕಿ ಇರಲಿ, ಹಿಂದೂಸ್ತಾನಿ ಇರಲಿ, ಅದನ್ನು ಹಾಕ್ಕೋಂಡು ಕೇಳಕೋತ ಕೇಳಕೋತ ಬರವಣಿಗೆ ಮಾಡ್ತೀನಿ. ಅದು ತಾಸು, ಯಾಡು ತಾಸಿನ ಶಾಸ್ತ್ರೀಯ ಸಂಗೀತ ಇದ್ರಂತೂ ಇನ್ನೂ ಚೊಲೊ. ಅದ್ನ ಕೇಳ್ತಾ ಬರಿಯೋದು ನನಗ ಯಾವಾಗಲೂ ಇಷ್ಟ.