ಜೋಗಿ

ರೂಢಿಯ ಪ್ರಕಾರ ಅತಿಥಿ ಎಂದರೆ ಯಾವುದೇ ಒಂದು ಕಾರ್ಯಕ್ರಮಕ್ಕೆ ಅಥವಾ ಮನೆಗೆ ಆಹ್ವಾನಿತನಾಗಿ ಅಥವಾ ಆಹ್ವಾನ ಇಲ್ಲದೇ ಬಂದವನು. ಅಭ್ಯಾಗತ ಅಂದರೆ ಯಾವ ಅಹ್ವಾನವೂ ಇಲ್ಲದೇ ಬಂದವನು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಅತಿಥಿಗಳೂ ಇರುತ್ತಾರೆ, ಅಭ್ಯಾಗತರೂ ಇರುತ್ತಾರೆ. ಮನೆಯ ಸ್ವಂತ ಕಾರ್ಯಕ್ರಮದಲ್ಲಿ ಕೇವಲ ಅತಿಥಿಗಳು ಮಾತ್ರ ಇರುತ್ತಾರೆ. ಅಲ್ಲಿ ಅಭ್ಯಾಗತರು ಇರುವುದಿಲ್ಲ. ಸಂಸ್ಕೃತದಲ್ಲಿ ಈ ಪದಗಳ ಅರ್ಥ ಬೇರೆ ಇರಬಹುದು. ಕನ್ನಡ ಜನಪದ ಅದನ್ನು ಬಳಸಿಕೊಂಡು ಬಂದಿರುವುದು ಹೀಗೆ.

ಚೊಕ್ಕಾಡಿ; ಬಂಟಮಲೆಯ ತಪ್ಪಲಲ್ಲಿ ಒಂಟಿ ಕವಿ 

ಅಲ್ಲಿಗೆ ಚರ್ಚೆ ನಿಂತಿತು. ಹೀಗೆ ಪತ್ರಕರ್ತರ ಪಾಲಿಗಷ್ಟೇ ಅಲ್ಲ, ಕನ್ನಡದ ಕವಿಗಳಿಗೆ, ಬರಹಗಾರರಿಗೆ ಯಾವುದೇ ಪದದ ಅರ್ಥವನ್ನೂ ಆ ಪದದ ವ್ಯುತ್ಪತ್ತಿಯನ್ನೂ ಆ ಪದ ಕನ್ನಡ ಮತ್ತು ಸಂಸ್ಕೃತ ಕಾವ್ಯಗಳಲ್ಲಿ ಎಲ್ಲೆಲ್ಲಿ ಬಳಕೆ ಆಗಿದೆ ಅನ್ನುವುದನ್ನೂ ಆ ಪದ ಕನ್ನಡದ್ದು ಅಲ್ಲದೇ ಹೋದರೆ ಯಾವ ಭಾಷೆಯಿಂದ ಎರವಲು ಪಡೆಯಲಾಗಿದೆ ಅನ್ನುವುದನ್ನೂ ಥಟ್ಟನೆ ಹೇಳಬಲ್ಲ ಪ್ರತಿಭೆ ಇದ್ದವರು ಜಿ. ವೆಂಕಟಸುಬ್ಬಯ್ಯ. ಆ ವಿಚಾರದಲ್ಲಿ ಅವರು ಥೇಟ್‌ ಶಬ್ದಬ್ರಹ್ಮ. ಯಾವುದಾದರೂ ಹೊಸ ಪದ ಸಿಕ್ಕರೆ ಅದರ ಅರ್ಥ ಹುಡುಕುತ್ತಾ ಹೋಗುತ್ತಿದ್ದವರು ಅವರು. ತಕ್ಷಣ ಅರ್ಥ ಗೊತ್ತಿಲ್ಲದೇ ಹೋದರೆ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಎರಡು ಮೂರು ವರ್ಷಗಳ ನಂತರ ಆ ಪದದ ಅರ್ಥ ಹೇಳುತ್ತಿದ್ದದ್ದೂ ಉಂಟು. ಅದು ಜಿ.ವೆಂಕಟಸುಬ್ಬಯ್ಯ ಅವರ ಅಧ್ಯಯನ ಮತ್ತು ಪರಿಶ್ರಮ, ಪ್ರತಿಭೆ.

ಒಮ್ಮೆ ಅವರ ಮನೆಗೆ ಹೋಗಿದ್ದಾಗ ಜಿ. ವೆಂಕಟಸುಬ್ಬಯ್ಯ ಕಥಾಸಂಕಲನ ಓದುತ್ತಾ ಕೂತಿದ್ದರು. ಆಗಷ್ಟೇ ಪ್ರಕಟವಾದ ಹೊಸ ಕತೆಗಾರರೊಬ್ಬರ ಮೊದಲ ಕಥಾಸಂಕಲನ ಅದು. ಆ ಬಗ್ಗೆ ಕೇಳಿದಾಗ ಅವರು ಹೇಳಿದ್ದಿಷ್ಟು: ಹೇಗೆ ಹೊಸ ಲೇಖಕರು ಹಿರಿಯ ಲೇಖಕರನ್ನು ಓದಿ ಕನ್ನಡ ಸಾಹಿತ್ಯ ಪರಂಪರೆಯನ್ನು ಅರಿಯಬೇಕೋ, ಹಾಗೆಯೇ ಹಿರಿಯ ಲೇಖಕರು ಹೊಸ ಲೇಖಕರನ್ನು ಓದಿ ಸಾಹಿತ್ಯದ ಹೊಸ ಬೆಳೆಯನ್ನೂ ತಿಳಿಯಬೇಕು. ಇಲ್ಲದೇ ಹೋದರೆ ಸಾಹಿತ್ಯದಲ್ಲಿ ಕಂಟಿನ್ಯೂಯಿಟಿ ಎಂಬುದು ಎಲ್ಲಿಂದ ಬರಬೇಕು. ಹೊಸ ಲೇಖಕರಿಗೆ ಪೂರ್ವಸೂರಿಗಳು ಸಾಹಿತ್ಯದ ಜ್ಞಾನಕೋಶ, ಹಿರಿಯರಿಗೆ ಹೊಸ ಲೇಖಕರು ಜೀವಕೋಶ.

ಲಾಲ್‌ ಬಹದ್ದೂರ್‌ ಶಾಸ್ತ್ರಿ ಕುರಿತ ಅಪರೂಪದ ಸಂಗತಿಗಳು 

ಜೀವಿ ಎಷ್ಟುಚುರುಕಾಗಿದ್ದರೆಂದರೆ ಕೆಲವು ವರ್ಷಗಳ ಹಿಂದೆ ಚಾಮರಾಜಪೇಟೆಯ ಶ್ರೀರಾಮಮಂದಿರದಿಂದ ಬನ್ನಂಜೆ ಗೋವಿಂದಾಚಾರ್ಯರಿಗೆ ಸನ್ಮಾನ ಇತ್ತು. ಸನ್ಮಾನ ಮಾಡಲಿಕ್ಕೆ ಜಿ. ವೆಂಕಟಸುಬ್ಬಯ್ಯ ಬಂದಿದ್ದರು. ವೇದಿಕೆ ಹತ್ತುವಾಗ ಜೀವಿಯವರು ಬನ್ನಂಜೆಯವರ ಕೈ ಹಿಡಿದು ಹತ್ತಿಸಿದರು. ಭಾಷಣ ಮಾಡುತ್ತಾ ಬನ್ನಂಜೆ ಹೇಳಿದರು. 70ರ ಮುದುಕನನ್ನು 90ರ ಯುವಕ ಇವತ್ತು ವೇದಿಕೆ ಹತ್ತಿಸಿದರು. ತಮ್ಮ ದೇಹವನ್ನು ಅಷ್ಟುಸೊಗಸಾಗಿ ಕಾಪಾಡಿಕೊಂಡು ಬಂದವರು ಅವರು. ಇದನ್ನು ನೆನಪಿಸಿಕೊಂಡವರು ಮಂಗಳೂರಿನ ಶ್ರೀನಿವಾಸ ದೇಶಪಾಂಡೆ. ನೂರಕ್ಕೆ ಎರಡು ವರ್ಷ ಇದ್ದಾಗ, 2011ರಲ್ಲಿ ಸಾಹಿತ್ಯ ಸಮ್ಮೇಳನದ ಭಾಷಣವನ್ನು ಸುಮಾರು ಒಂದು ಗಂಟೆ ನಿಂತುಕೊಂಡೇ ಓದಿದವರು ಜೀವಿ.

ಜೀವಿ ಅವರನ್ನು ಶತಾಯುಷಿ ಅಂತ ಕರೆದರೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಶತಾಯುಷಿ ಆಗುವುದಕ್ಕೆ ನಾನೇನೂ ಮಾಡಲಿಲ್ಲ. ಅದು ಹಿರಿಯರಿಂದ ಬಂದ ಬಳುವಳಿ. ಭಾಷಾ ಕ್ಷೇತ್ರದಲ್ಲಿ ನಾನು ಮಾಡಿದ ಕೆಲಸ ನನ್ನ ಶ್ರಮ. ಹೀಗಾಗಿ ಶತಾಯುಷಿ ಅಂತ ಕರೆಯುವ ಬದಲು ಭಾಷಾ ಶ್ರಮಿಕ ಅಂತಾದರೂ ಕರೆಯಿರಿ. ನನ್ನ ಕೆಲಸವನ್ನು ಗೌರವಿಸಿದಂತೆ ಆಗುತ್ತದೆ ಎನ್ನುತ್ತಿದ್ದರು.

ಹಿರಿಯ ಪತ್ರಕರ್ತ ಜಯರಾಮ ಅಡಿಗರು, ಜೀವಿ ಅವರನ್ನು ದೂರದರ್ಶನಕ್ಕಾಗಿ ಸಂದರ್ಶಿಸುವವರಿದ್ದರು. ಆಗ ಜೀವಿಯವರಿಗೆ 97. ದೂರದರ್ಶನದ ಬಾಗಿಲ ಮುಂದೆ ಕಾರಿಳಿದ ಜೀವಿಯವರಿಗೆ ಮೆಟ್ಟಲು ಹತ್ತಲು ಅನುಕೂಲ ಆಗಲೆಂದು ದೂರದರ್ಶನ ನಿರ್ದೇಶಕರು ಎರಡೂ ಕೈ ಚಾಚಿ ಅವರಿಗೆ ನೆರವಾಗಲು ಹೋದರು. ಜೀವಿಯವರು ಮುಗುಳ್ನಕ್ಕು ‘ಸಶಕ್ತನಿದ್ದೇನೆ, ಅವಮಾನ ಮಾಡಬೇಡಿ’ ಎಂದು ತಾವೇ ಮೆಟ್ಟಿಲೇರಿದರು.

ಬೆಂಕಿ ಬೆಳಕಿನ ತಾರೆ: ಶ್ರೀಧರ ಭಂಡಾರಿ 

ಅಪಾರ ನೆನಪಿನ ಶಕ್ತಿ, ಒಮ್ಮೆ ನೋಡಿದರೆ ಎಂದೂ ಹೆಸರನ್ನು ಕೂಡ ಮರೆಯದ ಏಕಾಗ್ರಚಿತ್ತ ಅವರದು. ಆರು ವರ್ಷಗಳ ಹಿಂದೆ ನನ್ನ ತಾಯಿ ತೀರಿಕೊಂಡ ಸ್ವಲ್ಪ ದಿನಕ್ಕೇ ಜಿವಿಯವರನ್ನು ಭೇಟಿಯಾಗಬೇಕಾಗಿ ಬಂತು. ಹಿರಿಯರ ಮುಂದೆ ಅವರ ಸಮಕಾಲೀನರ ಸಾವಿನ ಸುದ್ದಿ ಹೇಳಬಾರದು ಅಂತ ಸುಮ್ಮನಿದ್ದೆ. ಆದರೆ ಹೇಗೋ ಅವರಿಗೆ ಅದು ತಿಳಿದುಹೋಗಿತ್ತು. ಮಾತಿನ ಮಧ್ಯೆ ಅವರೇ‘ಶಾರದಮ್ಮನಿಗೆ ಏನಾಗಿತ್ತು?’ ಎಂದು ಕೇಳಿದರು. ಏನೂ ತೋಚದೇ ‘ವಯಸ್ಸಾಗಿತ್ತು’ ಅಂತ ಥಟ್ಟನೆ ಹೇಳಿಬಿಟ್ಟೆ. ‘ನನಗಿಂತಲೋ?’ ಅಂತ ಹೇಳಿ ಜೋರಾಗಿ ನಕ್ಕರು. ನಂತರ ಕೊಂಚ ತಗ್ಗಿದ ದನಿಯಲ್ಲಿ ‘ಸುಖವಾಗಿ ಹೊರಟು ಹೋದರು ತಾನೇ? ಅದು ಮುಖ್ಯ. ಹೆಂಗಸರು ಜೀವನ ಪೂರ್ತಿ ನರಳಿರ್ತಾರೆ. ಒಳ್ಳೇ ಸಾವಾದರೂ ಬಂದರೆ ನೆಮ್ಮದಿ’ ಅಂದರು.

ಜೀವನಪ್ರೀತಿ, ಮನುಷ್ಯಪ್ರೀತಿ, ಕಾವ್ಯಪ್ರೀತಿ, ಭಾಷಾಪ್ರೀತಿ ಮತ್ತು ತಾನು ಮಾಡುತ್ತಿದ್ದ ಕೆಲಸದ ಮೇಲೆ ಸಮಾನವಾದ ಪ್ರೀತಿ ಇಟ್ಟುಕೊಂಡಿದ್ದ ಜೀವಿ ಒಂದು ಯುಗದ ಭಾಗ್ಯ. ಒಂದು ಭಾಷೆಯ ಪುಣ್ಯ.