ಹಿಂದೂ ವಿವಾಹದ ಪ್ರಮುಖ ಭಾಗವಾದ ಸಪ್ತಪದಿಯ ನಿಜವಾದ ಅರ್ಥ ಅನೇಕರಿಗೆ ತಿಳಿದಿಲ್ಲ. ಆದರೆ, ಇಲ್ಲೊಬ್ಬರು ಪುರೋಹಿತರು ವಧುವರರಿಗೆ ಏಳು ಹೆಜ್ಜೆಗಳ ಪ್ರತಿಯೊಂದು ಪ್ರತಿಜ್ಞೆ ಮತ್ತು ಅದರ ಮಹತ್ವವನ್ನು ಸೊಗಸಾಗಿ ವಿವರಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಪ್ತಪದಿ ಎಂದರೇನು? ನವವಧುವರರಿಗೆ ಸೊಗಸಾಗಿ ವಿವರಿಸಿದ ಪುರೋಹಿತರು
ಮದುವೆಯ ಜನುಮ ಜನುಮಗಳ ಅನುಬಂಧ ಎಂಬ ನಂಬಿಕೆ ಇದೆ. ಮದುವೆಯ ವೇಳೆ ವಧುವರರು ಅಗ್ನಿಸಾಕ್ಷಿಯಾಗಿ 7 ಹೆಜ್ಜೆಗಳನ್ನು ಇಡುತ್ತಾರೆ. ಇದಕ್ಕೆ ಸಪ್ತಪದಿ ಎನ್ನುತ್ತಾರೆ. ಆದರೆ ಸಪ್ತಪದಿ ಎಂದರೆ ಏನು ಎಂಬುದರ ಆಳವಾದ ಅರ್ಥ ಅನೇಕರಿಗೆ ತಿಳಿದಿಲ್ಲ, ಪೂಜೆ ಮಾಡುವ ಅಥವಾ ಮದುವೆಯನ್ನು ನಡೆಸಿಕೊಡುವ ಪುರೋಹಿತರು ಇದನ್ನು ವಧುವರರಿಗೆ ಅರ್ಥ ಮಾಡಿಸುವುದಕ್ಕೆ ಹೋಗುವುದು ಇಲ್ಲ. ಹೀಗಾಗಿ ಅನೇಕರಿಗೆ ಈ ಸಪ್ತಪದಿಯ ಅರ್ಥವೇ ತಿಳಿದಿಲ್ಲ, ಆದರೂ ಇಲ್ಲೊಬ್ಬರು ವಧುವರರ ಮದುವೆ ನಡೆಸಿಕೊಟ್ಟ ಪುರೋಹಿತರು ಬಹಳ ಸೊಗಸಾಗಿ ಸಂಸ್ಕೃತದಲ್ಲಿ ಶೋಕ ಹೇಳುತ್ತಾ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಸಪ್ತಪದಿಯ ಅರ್ಥ ತಿಳಿಸಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
Kiran Kumar S(@KiranKS)ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸಪ್ತಪದಿ ಅಥವಾ ಸಂಸ್ಕೃತದಲ್ಲಿ ಏಳು ಹೆಜ್ಜೆಗಳು ಹಿಂದೂ ವಿವಾಹದ ಪ್ರಮುಖ ಭಾಗವಾಗಿದೆ. ಈ 7 ಹೆಜ್ಜೆಗಳು ದಂಪತಿಗಳ ದಾಂಪತ್ಯವನ್ನು ಗಟ್ಟಿಗೊಳಿಸುತ್ತವೆ. ಪ್ರತಿಯೊಂದು ಹೆಜ್ಜೆಯೂ ವೇದಗಳಿಂದ ನಿರ್ದಿಷ್ಟವಾದ ಪ್ರತಿಜ್ಞೆ ಹಾಗೂ ಅರ್ಥವನ್ನು ಹೊಂದಿದೆ. ಇಲ್ಲಿ ಈ ಪಂಡಿತರು ಪ್ರತಿಯೊಂದು ಹೆಜ್ಜೆಯನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ ಎಂದು ಅವರು ಬರೆದುಕೊಂಡಿದ್ದು, ಸಂಬಂಧಿಕರೊಬ್ಬರು ವಿಡಿಯೋ ಕಳಿಸಿದ್ದು, ಈ ವೀಡಿಯೋದ ಮಾಲೀಕರ ಬಗ್ಗೆ ಮಾಹಿತಿ ಇಲ್ಲ ಎಂದು ಬರೆದುಕೊಂಡು ವೀಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಫೆ. 4 ರಂದು ಸಂಸತ್‌ನಲ್ಲಿ ನಡೆದಿದ್ದೇನು? ವೀಡಿಯೋ ಬಿಡುಗಡೆ ಮಾಡಿದ ಸಚಿವ ಕಿರಣ್ ರಿಜಿಜು
ವೈರಲ್ ಆದ ವೀಡಿಯೋದಲ್ಲಿ ವಧು ಹಾಗೂ ವರ ಸಪ್ತಪದಿ ತುಳಿಯುತ್ತಿದ್ದರೆ, ಪುರೋಹಿತರು ಒಂದೊಂದು ಹೆಜ್ಜೆಯನ್ನು ವಿವರವಾಗಿ ವಿವರಿಸುತ್ತಿದ್ದಾರೆ. ಒಟ್ಟು 7 ಹೆಜ್ಜೆಗಳನ್ನು ಜೊತೆಯಾಗಿ ನಡೆದರೆ ಅವರು ಸ್ನೇಹಿತರಾಗುತ್ತಾರೆ ಎಂದು ವೇದಶಾಸ್ತ್ರಗಳು ಹೇಳುತ್ತವೆ. ಅಕ್ಕಿಯ ರಾಶಿಯ ಮೇಲೆ ಪತ್ನಿ 7 ಹೆಜ್ಜೆ ಇಡುವುದಕ್ಕೆ ನೀವು ಆಕೆಯ ಹೆಜ್ಜೆಯನ್ನು ಒಂದೊಂದೇ ಎತ್ತಿಡಬೇಕು, ನಾನು ಮಂತ್ರವನ್ನು ಹೇಳಿಕೊಡುತ್ತೇನೆ. ನೀವು ಮಂತ್ರ ಹೇಳುತ್ತಾ ಹೆಜ್ಜೆ ಇಡಬೇಕು ಎಂದು ಪುರೋಹಿತರು ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಅಪ್ಪ ಅಮ್ಮನ ಡಿವೋರ್ಸ್ ಬಳಿಕ ಅಮ್ಮನ ಜೊತೆ ಹೋಗಲೊಪ್ಪದೇ ಅಪ್ಪನ ತಬ್ಬಿ ಹಿಡಿದು ಅತ್ತ ಪುಟ್ಟ ಮಗು
ಏಳು ಸಪ್ತಪದಿ ಮಂತ್ರಗಳು ಮತ್ತು ಅವುಗಳ ಅರ್ಥಗಳು:
ಮೊದಲ ಹೆಜ್ಜೆ (ಆಹಾರ ಮತ್ತು ಪೋಷಣೆ):
ಓಂ ಈಶ ಏಕಪಾದಿ ಭವ: ಪರಸ್ಪರ ಆಹಾರ ಮತ್ತು ಪೋಷಣೆಯನ್ನು ಒದಗಿಸಲು ಯಾವಾಗಲೂ ಜೊತೆಯಾಗಿ ಇರಲು ಮೊದಲ ಹೆಜ್ಜೆ ಇಡೋಣ, ನನ್ನನ್ನು ನೀನು ಅನುಸರಿಸು.
ಎರಡನೇ ಹೆಜ್ಜೆ (ದೈಹಿಕ/ಮಾನಸಿಕ ಶಕ್ತಿ):
ಓಂ ಉರ್ಜೆ ದ್ವಿಪಾದಿ ಭವ : ಶಕ್ತಿ, ಚೈತನ್ಯ ಮತ್ತು ಚೈತನ್ಯದಲ್ಲಿ ಬೆಳೆಯಲು ನಾವು ನಮ್ಮ ಎರಡನೇ ಹೆಜ್ಜೆ ಇಡೋಣ. ಅಂದರೆ ನನಗೆ ನೀನು ಬಲ ನಿನಗೆ ನಾನು ಬಲ ಕೊನೆಯವರೆಗೂ ಒಬ್ಬರಿಗೊಬ್ಬರು ಬಲವಾಗಿ ಧೈರ್ಯವಾಗಿ ಇರೋಣ.
ಮೂರನೇ ಹೆಜ್ಜೆ (ಸಮೃದ್ಧಿ):
ಓಂ ರಾಯಸ್ಪೋಶಾಯ ತ್ರಿಪದಿ ಭವ: ನಮ್ಮ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ನಾವು ನಮ್ಮ ಮೂರನೇ ಹೆಜ್ಜೆ ಇಡೋಣ. ನಿನ್ನ ಹಣ ನನ್ನ ಹಣ ಎಂಬ ಬೇಧವಿಲ್ಲದೇ ಒಟ್ಟಾಗಿ ಒಳ್ಳೆಯ ಸಂಪತ್ತನ್ನು ಹೊಂದೋಣ.
ನಾಲ್ಕನೇ ಹೆಜ್ಜೆ (ಸಂತೋಷ/ಸಾಮರಸ್ಯ)
ಓಂ ಮಾಯೋಭಾವಾಯ ಚತುಷ್ಪದಿ ಭವ: ಸಂತೋಷ, ಸಾಮರಸ್ಯ ಮತ್ತು ಸಂತೋಷಕ್ಕಾಗಿ ನಾವು ನಮ್ಮ ನಾಲ್ಕನೇ ಹೆಜ್ಜೆ ಇಡೋಣ. ನಾನು ನಿನ್ನನ್ನು ಪ್ರೀತಿಸುವೆ ನೀನು ನನ್ನನ್ನು ಪ್ರೀತಿಸಬೇಕು. ಹೀಗೆ ಇಬ್ಬರು ಪರಸ್ಪರ ಪ್ರೀತಿಸುತ್ತಾ ಕಡೆವರೆಗೂ ಜೊತೆಯಾಗಿರೋಣ.
ಐದನೇ ಹೆಜ್ಜೆ (ಸಂತತಿ):
ಓಂ ಪ್ರಜಾಭ್ಯಾಃ ಪಂಚಪದಿ ಭವ :ಮಕ್ಕಳ ಯೋಗಕ್ಷೇಮ ಮತ್ತು ಆಶೀರ್ವಾದಕ್ಕಾಗಿ ನಾವು ನಮ್ಮ ಐದನೇ ಹೆಜ್ಜೆ ಇಡೋಣ. ಪರಸ್ಪರ ಒಳ್ಳೆಯ ಸಂತಾನಕ್ಕಾಗಿ ಮಕ್ಕಳ ಭಾಗ್ಯಕ್ಕಾಗಿ 5ನೇ ಹೆಜ್ಜೆ ಇಡೋಣ.
ಆರನೇ ಹೆಜ್ಜೆ (ಋತುಮಾನ ಸಾಮರಸ್ಯ):
ಓಂ ಋತುಭ್ಯಃ ಷಡ್ಪದಿ ಭವ: ಎಲ್ಲಾ ಋತುಗಳಲ್ಲೂ ಸಾಮರಸ್ಯದಿಂದ ಬದುಕಲು ನಾವು ನಮ್ಮ ಆರನೇ ಹೆಜ್ಜೆ ಇಡೋಣ. ಎಲ್ಲಾ ಕಾಲಕ್ಕೂ ಹೊಂದಿಕೊಂಡು ಜೀವನ ಮಾಡೋಣ. ಫ್ಯಾನ್ ನಂಗೆ ಬೇಡ ನಿಂಗೆ ಬೇಕು ಅಂತ ಹೇಳದೇ ಹೊಂದಿಕೊಂಡು ಬಾಳೋಣ ಎಂಬುದು ಅರ್ಥ ಎಂದು ಪುರೋಹಿತರು ಹಾಸ್ಯಮಯವಾಗಿ ವಿವರಿಸಿದ್ದಾರೆ.
ಏಳನೇ ಹೆಜ್ಜೆ (ಸ್ನೇಹ/ನಿಷ್ಠೆ):
ಓಂ ಸಖ ಸಪ್ತಪದಿ ಭವ: ನಿನಗೆ ನಾನು ಸ್ನೇಹಿತ ನನಗೆ ನೀನು ಸ್ನೇಹಿತೆ ಹೀಗೆ ಸ್ನೇಹದಿಂದ ಪರಸ್ಪರ ನಿಷ್ಠರಾಗಿ ಮತ್ತು ಸಮರ್ಪಿತರಾಗಿರಲು ನಾವು ನಮ್ಮ ಏಳನೇ ಹೆಜ್ಜೆ ಇಡೋಣ. ಹೀಗೆ 7 ಹೆಜ್ಜೆ ನಡೆದ ನಂತರ ಒಳ್ಳೆಯ ಸ್ನೇಹಿತರಾಗಿ ಚೆನ್ನಾಗಿ ಜೀವನ ಮಾಡಿ ಎಂದು ಪುರೋಹಿತರು ನವಜೋಡಿಗೆ ಕಿವಿಮಾತು ಹೇಳಿದ್ದಾರೆ. ಸಪ್ತಪದಿ ತುಳಿದು ಜೀವನ ಮಾಡಿದರೆ ಚೆನ್ನಾಗಿರುತ್ತಾರೆ ಎಂಬುದನ್ನು ನ್ಯಾಯಾಲಯವೂ ಒಪ್ಪಿಕೊಂಡಿದೆ. ಸಪ್ತಪದಿ ಸಂಪೂರ್ಣಗೊಂಡರೆ ಮದುವೆ ಸಂಪೂರ್ಣಗೊಂಡಂತೆ ಎಂದು ಕಾನೂನು ಹೇಳುತ್ತದೆ ಎಂದು ಪುರೋಹಿತರು ಹೇಳಿದ್ದಾರೆ.
ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


