ನಾನು ಸೀರೆಯುಟ್ಟರೆ ಅತ್ತೆಗೆ ಖುಷಿಯಾಗುತ್ತದೆ. ಆದಕಾರಣ ಅತ್ತೆಮನೆಗೆ ಹೋಗುವಾಗ ಸೀರೆಯುಟ್ಟುಕೊಂಡು ಹೋಗಬೇಕು. ಬಾಸ್ ಕೇಳುವುದಕ್ಕೂ ಮುನ್ನವೇ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಿದರೆ ಅವರಿಗೆ ಖಂಡಿತಾ ಖುಷಿಯಾಗುತ್ತದೆ, ಈ ಬಾರಿ ಹೊಸ ವರ್ಷದ ಪಾರ್ಟಿ ಮನೆಯಲ್ಲೇ ಮಾಡೋಣ, ಹೋಟೆಲ್ಗೆ ಹೋಗುವುದು ಬೇಡ ಎಂದರೆ ಗಂಡನಿಗೆ ನನ್ನ ಮೇಲೆ ಪ್ರೀತಿ ಹೆಚ್ಚಬಹುದು.

ಹೀಗೆ ಪ್ರತಿ ಕೆಲಸವನ್ನು ಇನ್ನೊಬ್ಬರನ್ನು ಮೆಚ್ಚಿಸಲು ಅಥವಾ ತೃಪ್ತಿ ಪಡಿಸಲು ಮಾಡುವ ಜಾಯಮಾನ ಕೆಲವರಲ್ಲಿರುತ್ತದೆ.  ನಿಮಗೂ ಇಂಥ ಅಭ್ಯಾಸವಿದ್ದಲ್ಲಿ ಬೇರೆಯವರ ಕಣ್ಣಲ್ಲಿ ಒಳ್ಳೆಯವರೆನಿಸಿಕೊಳ್ಳುವುದು ಅಥವಾ ನಮ್ಮ ಸುತ್ತಮುತ್ತಲಿನ ಜನರನ್ನು ಮೆಚ್ಚಿಸಬೇಕು ಎಂಬ ಕಾರಣಕ್ಕಾಗಿ ಅವರಿಷ್ಟದ ಕೆಲಸಗಳನ್ನು ಮಾಡುವುದರಿಂದ ನಿಮಗೇನು ಸಿಗುತ್ತದೆ ಎಂಬುದನ್ನು ಯೋಚಿಸಿದ್ದೀರಾ? ಈ ರೀತಿ ಇನ್ನೊಬ್ಬರನ್ನು ಮೆಚ್ಚಿಸುವ ಭರದಲ್ಲಿ ನೀವು ನಿಮ್ಮತನವನ್ನು ಕಳೆದುಕೊಂಡಿಲ್ಲವೆ? ಆದರೆ, ಕೆಲವೊಮ್ಮೆ ಈ ವಾಸ್ತವದ ಅರಿವಾಗುವಾಗ ತುಂಬಾ ತಡವಾಗಿ ಬಿಟ್ಟಿರುತ್ತದೆ.

ನಮ್ಮ ಸುತ್ತಲಿರೋರನ್ನು ಸಂತೋಷವಾಗಿಡುವುದು ಹೀಗೆ!

ಬದುಕಿನ ಕೊನೆಯ ಘಟ್ಟದಲ್ಲಿ ನನಗಾಗಿ ನಾನೇನು ಮಾಡಿದೆ ಎಂಬ ಪ್ರಶ್ನೆ ನಿಮ್ಮ ಮುಂದೆ ಬಂದು ನಿಂತಾಗ ಉತ್ತರಿಸಲು ತಡವರಿಸಬೇಕಾಗುತ್ತದೆ. ಆದಕಾರಣ ಆಗಾಗ ನಾವು ನಮ್ಮ ಮನಸ್ಸಿನ ಇಚ್ಛೆಗೆ ಅನುಗುಣವಾಗಿ ಬದುಕುತ್ತಿದ್ದೆವೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿಕೊಳ್ಳುವುದು ಅಗತ್ಯ. ಒಂದು ವೇಳೆ ನೀವು ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿಯೇ ನಿಮ್ಮೆಲ್ಲ ಶಕ್ತಿ, ಸಾಮಥ್ರ್ಯಗಳನ್ನು ವ್ಯಯಿಸುತ್ತಿದ್ದರೆ, ಇಂದೇ ಬದಲಾಗಲು ಪ್ರಯತ್ನಿಸಿ. ಅದಕ್ಕಾಗಿ ನೀವು ಏನು ಮಾಡಬೇಕು ಗೊತ್ತಾ?

* ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ: ಮನಶಾಸ್ತ್ರಜ್ಞರ ಪ್ರಕಾರ ಇನ್ನೊಬ್ಬರನ್ನು ಮೆಚ್ಚಿಸಲು ಬಯಸುವ ವ್ಯಕ್ತಿಗಳು ತಮ್ಮ ಸಾಮಥ್ರ್ಯವನ್ನು ಕಡಿಮೆ ಅಂದಾಜಿಸುವ ಜೊತೆಗೆ ಆತ್ಮವಿಶ್ವಾಸದ ಕೊರತೆ ಹೊಂದಿರುತ್ತಾರೆ. ಪ್ರತಿ ಕೆಲಸ ಮಾಡುವಾಗಲೂ ಇದನ್ನು ನಾನು ಮಾಡಬಲ್ಲೇನಾ ಎಂಬ ಅನುಮಾನ ಇವರನ್ನು ಕಾಡುತ್ತದೆ. ಇದೇ ಕಾರಣಕ್ಕೆ ಇವರು ಪ್ರತಿ ಕೆಲಸ ಮಾಡುವಾಗಲೂ ಇನ್ನೊಬ್ಬರ ಬಳಿ ನಾನಿದನ್ನು ಮಾಡಬಹುದೆ ಎಂದು ಕೇಳುವ ಅಭ್ಯಾಸ ಹೊಂದಿರುತ್ತಾರೆ. ಅಷ್ಟೇ ಅಲ್ಲ, ಈ ಕೆಲಸ ಮಾಡುವುದರಿಂದ ಬೇರೆಯವರು ನನ್ನ ಬಗ್ಗೆ ತಪ್ಪಾಗಿ ತಿಳಿಯಬಹುದೇ ಅಥವಾ ನನ್ನನ್ನು ಹೊಗಳಬಹುದೇ ಎಂದಲ್ಲ ಯೋಚಿಸುತ್ತಾರೆ.

ಅಮ್ಮನ ಬೈಗುಳ ಇಷ್ಟವಾಗಬೇಕೆಂದರೆ ಮದುವೆಯಾಗಬೇಕು!

ಇವರು ಮಾಡುವ ಕೆಲಸದ ಮುಖ್ಯ ಉದ್ದೇಶ ಇನ್ನೊಬ್ಬರ ಮೆಚ್ಚುಗೆ ಪಡೆಯುವುದೇ ಆಗಿರುತ್ತದೆ. ಹೀಗಾಗಿ ನಿಮ್ಮಲ್ಲೂ ಇಂಥ ಗುಣ ಕಂಡುಬಂದರೆ ಮೊಟ್ಟಮೊದಲು ಮಾಡಬೇಕಾದ ಕೆಲಸ ನಿಮ್ಮ ಮೇಲೆ ನೀವು ವಿಶ್ವಾಸವಿಡುವುದು. ನೀವು ಮಾಡುವ ಪ್ರತಿ ಕೆಲಸವನ್ನು ನೀವೇ ನಿರ್ಧರಿಸಿ. ಅದನ್ನು ಮಾಡುವುದರಿಂದ ನಿಮಗೆ ಆತ್ಮತೃಪ್ತಿ ಸಿಗುತ್ತದೆಯೇ? ಎಂಬುದನ್ನು ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ. ಪ್ರತಿ ಕೆಲಸವನ್ನು ಆತ್ಮವಿಶ್ವಾಸದಿಂದ ಪ್ರಾರಂಭಿಸಿ.

*ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಎಂಬುದನ್ನು ಅರಿಯಿರಿ: ಈ ಜಗತ್ತಿನಲ್ಲಿ ಎಲ್ಲರಿಗೂ ಒಳ್ಳೆಯವರಾಗಿ ಬದುಕಲು ಸಾಧ್ಯವಿಲ್ಲ. ಅದೇರೀತಿ ನಿಮ್ಮ ಕಾರ್ಯದಿಂದ ಎಲ್ಲರನ್ನೂ ಮೆಚ್ಚಿಸಲು ಕೂಡ ಸಾಧ್ಯವಿಲ್ಲ. ಈ ವಾಸ್ತವವನ್ನು ಅರಿಯಿರಿ. ಎಲ್ಲರನ್ನೂ ಮೆಚ್ಚಿಸುವ ಉದ್ದೇಶದಿಂದ ನೀವು ಯಾವುದೇ ಕಾರ್ಯ ಕೈಗೊಂಡರೂ ಕೊನೆಯಲ್ಲಿ ನಿಮಗೆ ನಿರಾಸೆ ಕಟ್ಟಿಟ್ಟಬುತ್ತಿ. ಆದಕರಣ ನಿಮಗಾಗಿ ಬದುಕಲು ಪ್ರಯತ್ನಿಸಿ.

*ಮನಸ್ಸಿನ ಮಾತು ಕೇಳಿ: ನಿಮ್ಮ ಮನಸ್ಸಿಗೆ ಸರಿ ಅನ್ನಿಸಿದ ಕೆಲಸಗಳನ್ನೇ ಮಾಡಿ. ಇದರಿಂದ ಬೇರೆಯವರಿಗೆ ಖುಷಿಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಕೊನೆಯಲ್ಲಿ ನಿಮಗಂತೂ ಆತ್ಮತೃಪ್ತಿ ಸಿಕ್ಕಿಯೇ ಸಿಗುತ್ತದೆ. 

*ಕಾರಣವಿಲ್ಲದೆ ‘ಕ್ಷಮೆ’ ಕೇಳಬೇಡಿ: ನಿಮ್ಮದ್ದಲ್ಲದ ತಪ್ಪಿಗೆ ಇನ್ನೊಬ್ಬರ ಬಳಿ ಕ್ಷಮೆ ಕೇಳುವ ಗುಣವಿದ್ದರೆ ಇಂದೇ ಬಿಡಿ. ತಪ್ಪು ಮಾಡದಿದ್ದರೂ ಬೇರೆಯವರಿಗೆ ನೋವಾಗುತ್ತದೆ ಎಂಬ ಕಾರಣಕ್ಕೆ ‘ಕ್ಷಮೆ’ ಕೇಳಬೇಕಾದ ಅಗತ್ಯವಿಲ್ಲ. ಇಂಥ ಗುಣ ಹೊಂದಿದ್ದರೆ ಮಾಡದ ತಪ್ಪನ್ನೆಲ್ಲ ತಲೆ ಮೇಲೆ ಹೊತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ನಿಮ್ಮನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ. 

EQ ಹೆಚ್ಚಿರುವವರು ಉದ್ಯೋಗದಲ್ಲಿ ಒತ್ತಡ ನಿಭಾಯಿಸುವುದು ಹೀಗೆ

*ಬದಲಾಗಬೇಕಾದ ಅಗತ್ಯವಿಲ್ಲ: ಬೇರೆಯವರಿಗಾಗಿ ನೀವೇಕೆ ಬದಲಾಗಬೇಕು? ನಿಮ್ಮನ್ನು ನಿಜವಾಗಿಯೂ ಪ್ರೀತಿಸುವ, ಗೌರವಿಸುವ ವ್ಯಕ್ತಿಗಳು ನಿಮ್ಮನ್ನು ನೀವು ಇರುವಂತೆಯೇ ಒಪ್ಪಿಕೊಳ್ಳಬಲ್ಲರು. ಬೇರೆಯವರಿಗೆ ಖುಷಿ ನೀಡಬೇಕು ಎಂಬ ಕಾರಣಕ್ಕೆ ನಿಮ್ಮ ಜೀವನಶೈಲಿ, ಹವ್ಯಾಸ, ಆಯ್ಕೆಗಳನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿಲ್ಲ. 

*ನನ್ನಿಂದ ಆಗದು ಎನ್ನಲು ಹಿಂಜರಿಕೆ ಬೇಡ: ನಿಮ್ಮಿಂದ ಮಾಡಲು ಸಾಧ್ಯವಾಗದ ಕೆಲಸಗಳ ಭಾರವನ್ನು ಹೊರುವ ಕಾರ್ಯಕ್ಕೆ ಮುಂದಾಗಬೇಡಿ. ಇನ್ನೊಬ್ಬರನ್ನು ನಿರಾಸೆಗೊಳಿಸಬಾರದು ಎಂಬ ಕಾರಣಕ್ಕೆ ನಿಮ್ಮಿಂದ ಮಾಡಲು ಸಾಧ್ಯವಿಲ್ಲದ ಕೆಲಸವನ್ನು ಒಪ್ಪಿಕೊಳ್ಳುವುದರಿಂದ ನಿಮ್ಮ ಮನಸ್ಸಿಗೆ ನೀವೇ ಹಿಂಸೆ ಕೊಟ್ಟುಕೊಳ್ಳುತ್ತೀರಿ. ಅನಗತ್ಯ ಒತ್ತಡ ಸೃಷ್ಟಿಯಾಗಿ ಒದ್ದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.