ಮಕ್ಕಳನ್ನು ಇಂಡಿಪೆಂಡೆಂಟ್ ಆಗಿ, ಧೈರ್ಯವಂತರಾಗಿ, ತಮ್ಮನ್ನು ತಾವೇ ನೋಡಿಕೊಳ್ಳುವವರಾಗಿ ಬೆಳೆಸಬೇಕೆಂದು ಯಾವ ಪೋಷಕರಿಗೆ ತಾನೇ ಆಸೆ ಇರುವುದಿಲ್ಲ? ಆದರೆ, ಹತ್ತು ಹಲವಾರು ಬಗೆಯ ಪೇರೆಂಟಿಂಗ್ ಶೈಲಿಗಳ ಮಧ್ಯೆ ಯಾವುದು ಸರಿ, ಯಾವುದು ತಪ್ಪು ಎಂದು ತಡಕಾಡಿ ತಿಳಿದುಕೊಳ್ಳುವ ಹೊತ್ತಿಗಾಗಲೇ ಮಕ್ಕಳು ಭುಜದೆತ್ತರಕ್ಕೆ ಬೆಳೆದಾಗಿರುತ್ತದೆ. ಪೇರೆಂಟಿಂಗ್ ಶೈಲಿಗಳು ಹೊಸ ಹೊಸತು ಸೇರಿಕೊಳ್ಳುತ್ತಲೇ ಇರುತ್ತವೆ, ಅದಕ್ಕೀಗ ಪ್ರಾಣಿಗಳ ಪ್ರಪಂಚವನ್ನೂ ತಂದು ಹೆಸರಿಡಲಾಗುತ್ತಿದೆ. ಅವುಗಳ ಮಧ್ಯೆ ಪಾಂಡಾ ಪೇರೆಂಟಿಂಗ್‌ಗೆ ಹೆಚ್ಚಿನ ಶ್ಲಾಘನೆ ಸಿಗುತ್ತಿದೆ. ಈ ಪರಿಣಾಮಕಾರಿ ಪೇರೆಂಟಿಂಗ್ ಶೈಲಿಯ ಮುಖ್ಯ ವಿಷಯಗಳೇನು? ಇದರಿಂದ ಲಾಭಗಳೇನು?

ಐದು ತಿಂಗಳಿಗೇ ಹುಟ್ಟಿದ ಮಗು, ಅಪ್ಪ-ಅಮ್ಮನ ಮಡಲಲ್ಲಿ ಕೊನೆಯುಸಿರೆಳೆಯಿತು ...

ನಿರ್ಧರಿಸುವ ಸ್ವಾತಂತ್ರ್ಯ
ಬಹಳ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಟ್ಟಾಗ, ವಯಸ್ಸಿಗೆ ಸರಿಯಾಗಿ ತಮ್ಮ ಬಗ್ಗೆ ತಾವೇ ಯೋಚಿಸಲು ಬಿಟ್ಟಾಗ ಅವರಲ್ಲೊಂದು ಜವಾಬ್ದಾರಿಯ ಭಾವ ಮೂಡುತ್ತದೆ. ಪಾಂಡಾ ಪೇರೆಂಟಿಂಗ್‌ನಲ್ಲಿ ಕೂಡಾ ಮಕ್ಕಳನ್ನು ತಮ್ಮ ನಿರ್ಧಾರಗಳು ಹಾಗೂ ಅವುಗಳ ಪರಿಣಾಮಗಳ ಬಗ್ಗೆ ಸ್ವತಃ ಜವಾಬ್ದಾರಿಯುತರಾಗಿರಲು ಮಕ್ಕಳಿಗೆ ಕಲಿಸಲಾಗುತ್ತದೆ. ಮಕ್ಕಳಿಗೆ ಅವರ ಬಗ್ಗೆ ಅವರೇ ಯೋಚಿಸಲು ಬಿಡಬೇಕೆಂದ ಮಾತ್ರಕ್ಕೆ ಇದರರ್ಥ  ಅವರನ್ನು ಪೂರ್ತಿ ಸ್ವೇಚ್ಛೆಯಾಗಿ ಬಿಡಬೇಕೆಂದಲ್ಲ. ಬದಲಿಗೆ, ಅವರ ನಿರ್ಧಾರಗಳನ್ನು ಗಮನಿಸುತ್ತಿರಬೇಕು. ಅದರ ಪರಿಣಾಮಗಳಿಗೆ ಅವರು ಪ್ರತಿಕ್ರಿಯಿಸುವುದನ್ನು ಗಮನಿಸುತ್ತಿರಬೇಕು. ಅಗತ್ಯ ಬಿದ್ದಾಗ ಅವರ ಸಹಾಯಕ್ಕೆ ನಿಲ್ಲಬೇಕು ಎನ್ನುತ್ತದೆ ಪಾಂಡಾ ಪೇರೆಂಟಿಂಗ್. ಸದಾ ಮಕ್ಕಳ ಮೇಲೆ ಸೂಪರ್‌ವೈಸ್ ಮಾಡುವ ಬದಲಿಗೆ ಅವರ ನಿರ್ಧಾರಗಳಲ್ಲಿ ನಂಬಿಕೆಯಿಡಬೇಕು ಹಾಗೂ ಅಂದುಕೊಂಡಂತೆಯೇ ಎಲ್ಲ ಆಗುತ್ತಿಲ್ಲ ಎಂದಾಗ ನಾನಿದ್ದೇನೆ ಎಂದು ಜೊತೆಗಿರಬೇಕು ಎನ್ನುವುದು ಇದರ ತಾತ್ಪರ್ಯ. 

ಬ್ಯಾಲೆನ್ಸ್
ಮಕ್ಕಳಿಗೆ ನಿರ್ಧರಿಸಲು ಸ್ವಾತಂತ್ರ್ಯ ಕೊಟ್ಟ ಮಾತ್ರಕ್ಕೆ ಅವರಿಗೆ ಬೇಕಾಗಿದ್ದೆಲ್ಲ ಮಾಡಲು ಬಿಡಬೇಕೆಂದೇನಿಲ್ಲ. ಟ್ರಿಕ್ ಏನಪ್ಪಾ ಅಂದ್ರೆ ಅವರ ನಿರ್ಧಾರ ತೆಗೆದುಕೊಳ್ಳುವ ಕೌಶಲಗಳನ್ನು ಪ್ರೋತ್ಸಾಹಿಸುತ್ತಲೇ ವಯಸ್ಸಿಗೆ ತಕ್ಕದಾದ ನಿಯಮಗಳನ್ನು ಹಾಕುವುದು. ಉದಾಹರಣೆಗೆ ಟಿವಿ ಮತ್ತಿತರೆ ಸ್ಕ್ರೀನ್ ನೋಡಲು ಟೈಂ ಲಿಮಿಟ್ ಕೊಡುವುದು, ಹೋಂವರ್ಕ್ ಮಾಡಲೇಬೇಕೆಂಬ ನಿಯಮ ವಿಧಿಸುವ ಜೊತೆಗೇ ಅವರಿಗೆ ಬೇಕಾದ ಸಮಯದಲ್ಲಿ ಮಾಡಲು ಅವಕಾಶ ನೀಡುವುದು, ಅವರ ಬಟ್ಟೆ, ಊಟ, ಆಟಿಕೆಗಳ, ಹವ್ಯಾಸಗಳನ್ನು ಅವರೇ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವುದು, ಅವರ ಇಷ್ಟವನ್ನು ಗೌರವಿಸುವುದು ಮುಖ್ಯ. 

ಬೆಂಬಲವೇ ಶ್ರೀರಕ್ಷೆ
ಮಕ್ಕಳಿಗೆ ನಿರ್ಧರಿಸಲು ಅವಕಾಶ ನೀಡಿದಾಗ ಅವರು ತಪ್ಪುಗಳನ್ನು ಮಾಡುವುದು ಸಹಜ, ಸೋಲುಗಳನ್ನೂ ಎದುರಿಸಬೇಕಾಗಬಹುದು. ಆದರೆ, ಈ ಸೋಲುಗಳು ಅವರನ್ನು ಕಂಗೆಡಿಸಲು ಬಿಡಬಾರದು. ಬದಲಿಗೆ ಸೋಲಿನಿಂದ ಪಾಠ ಕಲಿಯುವುದನ್ನು ಹೇಳಿಕೊಡಿ. ಅವರು ತಪ್ಪು ಮಾಡಿದಾಗಲೂ ನೀವು ಅವರಿಗೆ ಸಂಪೂರ್ಣ ಬೆಂಬಲವಾಗಿ ನಿಂತಾಗ, ಮತ್ತೆ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹ ನೀಡಿದಾಗ ಅವರಲ್ಲಿ ನೀವಿಟ್ಟ ನಂಬಿಕೆ ಅವರಿಗೆ ಮನದಟ್ಟಾಗುತ್ತದೆ. ಇದರಿಂದ ಪೋಷಕರು ಹಾಗೂ ಮಕ್ಕಳ ನಡುವೆ ಗಟ್ಟಿಯಾದ ಬಂಧ ಬೆಸೆದುಕೊಳ್ಳಲು ಸಹಾಯವಾಗುತ್ತದೆ. ಅಷ್ಟೇ ಅಲ್ಲ, ಇದು ಮಕ್ಕಳಲ್ಲಿ ತಮ್ಮ ಜ್ಞಾನ ಹಾಗೂ ಸಂಪನ್ಮೂಲವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುತ್ತದೆ. 

ಸಂಗಾತಿಯೊಂದಿಗೆ ಸರಿದೂಗಿಸು ಆರ್ಥಿಕ ಸಂಬಂಧ ಹೀಗಿರಲಿ...

ಈ ವಿಧಾನದಿಂದ ಮಕ್ಕಳು ಸೋಲನ್ನು ಒಪ್ಪಿಕೊಳ್ಳುವುದು, ಅದರಿಂದ ಕಲಿಯುವುದನ್ನು ಅಳವಡಿಸಿಕೊಳ್ಳುತ್ತಾರೆ. ಜೊತೆಗೆ, ಸಣ್ಣ ವಯಸ್ಸಿನಲ್ಲಿಯೇ ಅವರು ಹೆಚ್ಚು ಅನವಲಂಬಿತರೂ ಹಾಗೂ ಜವಾಬ್ದಾರಿಯುತರೂ ಆಗುತ್ತಾರೆ. ಜೊತೆಗೆ, ಉದಾಸೀನದಿಂದಲೋ ಅಥವಾ ಭಯದಿಂದಲೋ ಸಹಾಯ ಕೇಳುವ ಬದಲಿಗೆ, ಅಗತ್ಯವಿದ್ದಾಗ ಮಾತ್ರ ಸಹಾಯ ಪಡೆಯುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. 

ನೆನಪಿಡಿ, ಯಾವಾಗ ನೀವು ಮಕ್ಕಳಿಗೆ ಸ್ವಾತಂತ್ರ್ಯ ನೀಡುತ್ತೀರೋ, ಆಗಲೇ ಅವರು ಅಸಾಮಾನ್ಯವಾಗಿ ಯೋಚಿಸಲು ಆರಂಭಿಸುವುದು. ಕೆಲವೊಮ್ಮೆ ಮಕ್ಕಳಿಗಾಗಲ್ಲ ಎಂದೋ, ಅವರಿಗೆ ಕಷ್ಟವಾಗುತ್ತಿದೆ ಎಂದೋ ಒಂದಿಷ್ಟು ಮಾಡಿಕೊಟ್ಟು ಬಿಡೋಣ ಎಂದು ಪೋಷಕರಿಗನಿಸಬಹುದು, ಆದರೆ, ಸ್ವಲ್ಪ ತಾಳ್ಮೆವಹಿಸಿ. ಮಕ್ಕಳು ನಿಧಾನವಾಗಿಯಾದರೂ ಸರಿ, ಅವರಾಗಿಯೇ ನಿರ್ಧರಿಸಿ ಕೆಲಸ ಮಾಡಲಿ, ಇದು ಭವಿಷ್ಯದಲ್ಲಿ ಅವರ ಸಹಾಯಕ್ಕೆ ಬಂದೇಬರುತ್ತದೆ.