ಮಾತು ಮಾತಿಗೆ ಮಕ್ಕಳಿಗೆ ಏಟು ನೀಡುವ ಪಾಲಕರೇ ಇದನ್ನೋದಿ..
ಕೈ ತಪ್ಪಿ ನೀರು ಚೆಲ್ಲಿದ್ರೂ ಏಟು ಬೀಳುತ್ತೆ…ಟಿವಿ ನೋಡಿದ್ರೂ ಏಟು ಬೀಳುತ್ತೆ… ಖುಷಿಯಲ್ಲಿ ಕಿರುಚಾಡಿದ್ರೂ ಹೊಡೆತ ಬೀಳುತ್ತೆ…ಕೆಲ ಪಾಲಕರು ಮಕ್ಕಳಿಗೆ ಹೊಡೆಯೋದನ್ನೇ ಹವ್ಯಾಸ ಮಾಡಿಕೊಂಡಿರ್ತಾರೆ. ಹೊಡೆದು ಅವರೇನೋ ಸಿಟ್ಟು ಕಮ್ಮಿ ಮಾಡ್ಕೊಳ್ತಾರೆ, ಆದ್ರೆ ಮಕ್ಕಳ ಮೇಲೆ ಅದು ಯಾವ ಪರಿಣಾಮ ಬೀರ್ತಿದೆ ಎಂಬುದನ್ನು ನೋಡೋಕೆ ಹೋಗಲ್ಲ.
ಮಕ್ಕಳಿ (Children) ಲ್ಲದ ಮನೆ (Home) ಯಲ್ಲಿ ಸ್ಮಶಾನ ಮೌನವಿರುತ್ತದೆ. ಹಿಂದಿನ ಕಾಲದಲ್ಲಿ ಮನೆ ತುಂಬ ಮಕ್ಕಳಿರುತ್ತಿದ್ದರು. ಸದಾ ಮಕ್ಕಳ ಅಳು – ನಗು ಮನೆಯಲ್ಲಿ ತುಂಬಿರುತ್ತಿತ್ತು. ಈಗ ಮನೆಗೊಂದು ಮಗುವಿದ್ದರೆ ಸಾಕು ಎನ್ನುತ್ತಾರೆ ಪಾಲಕರು. ಇರುವ ಒಂದು ಮಗುವನ್ನು ಸಾಕುವುದೇ ಕಷ್ಟ ಎಂಬ ಸ್ಥಿತಿ ಈಗಿದೆ. ಅದೇನೇ ಇರಲಿ, ಮಕ್ಕಳು ಮನೆಯಲ್ಲಿದ್ದರೆ ಮನೆಯಲ್ಲಿ ಖುಷಿ ಮನೆ ಮಾಡಿರುತ್ತದೆ. ಮಕ್ಕಳೆಂದ ಮೇಲೆ ಗಲಾಟೆ, ಅಳು, ಕಿಲಾಡಿ ಇರಲೇಬೇಕು. ಸದಾ ಕೆಲಸದಲ್ಲಿರುವ ಪಾಲಕರಿಗೆ ಮಕ್ಕಳು ಸಣ್ಣದಾಗಿ ಗಲಾಟೆ ಮಾಡಿದ್ರೂ ಕಿರಿಕಿರಿ ಎನ್ನಿಸುತ್ತದೆ. ಕೋಪ ನೆತ್ತಿಗೇರುತ್ತದೆ. ಮಕ್ಕಳು ಹೇಳಿದ ಮಾತು ಕೇಳದೆ ಹೋದಾಗ ಪಾಲಕರು ಬೈತಾರೆ. ಅದಕ್ಕೂ ಮಕ್ಕಳು ಬಗ್ಗದೆ ಹೋದಾಗ ಏಟು ಬೀಳುತ್ತದೆ. ಕೆಲ ಪಾಲಕರು ಪ್ರತಿ ದಿನ ಮಕ್ಕಳಿಗೆ ಹೊಡೆಯುತ್ತಿರುತ್ತಾರೆ. ಬೈದು –ಹೊಡೆದು ಮಾಡಿದ್ರೆ ಮಕ್ಕಳು ಸರಿ ದಾರಿಗೆ ಬರ್ತಾರೆಂಬ ನಂಬಿಕೆ ಪಾಲಕರದ್ದು. ಆದ್ರೆ ಇದು ತಪ್ಪು. ಮಕ್ಕಳಿಗೆ ನೀವು ಸದಾ ಹೊಡೆಯುತ್ತಿದ್ದರೆ ಮಕ್ಕಳು ಸುಧಾರಿಸಲು ಸಾಧ್ಯವೇ ಇಲ್ಲ. ಮಕ್ಕಳ ಮನಸ್ಸಿನ ಮೇಲೆ ಇದು ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಕೆಲ ಬದಲಾವಣೆಗಳನ್ನು ನೀವು ಕಾಣ್ತೀರಾ. ಇಂದು ಮಕ್ಕಳಿಗೆ ಹೊಡೆದ್ರೆ ಮಕ್ಕಳಲ್ಲಾಗುವ ನಕಾರಾತ್ಮಕ ಬದಲಾವಣೆಗಳು ಏನು ಎಂಬುದನ್ನು ನಾವು ಹೇಳ್ತೇವೆ.
ಕಿರಿಯರಿಗೆ ಕೈ ಎತ್ತುತ್ತಾರೆ ಮಕ್ಕಳು : ಮಕ್ಕಳಿಗೆ ಹೊಡೆಯುವ ಮೂಲಕ ಶಿಸ್ತು ಕಲಿಸುತ್ತಿದ್ದೀರಿ ಎಂದು ನೀವು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಮಕ್ಕಳಿಗೆ ನೀವು ಕೆಟ್ಟದ್ದನ್ನು ಕಲಿಸುತ್ತಿದ್ದೀರಿ. ನಿಮ್ಮನ್ನು ನೋಡಿ ಮಕ್ಕಳೂ ಕೈ ಎತ್ತುವುದನ್ನು ಕಲಿಯುತ್ತಾರೆ. ಚಿಕ್ಕ ಚಿಕ್ಕ ವಿಷಯಗಳಿಗೆ ಹೊಡೆಯುವುದು ಮಕ್ಕಳಲ್ಲಿ ಭಯದ ಭಾವನೆಯನ್ನು ಉಂಟುಮಾಡುತ್ತದೆ. ಅವರು ಇದನ್ನು ತಮಗಿಂತ ಚಿಕ್ಕವರ ಮೇಲೆ ಪ್ರಯೋಗ ಮಾಡುತ್ತಾರೆ. ಹೊಡೆಯುವುದು ತಪ್ಪಲ್ಲ ಎಂದು ಭಾವಿಸ್ತಾರೆ.
ಮಕ್ಕಳ ಮೇಲೆ ಬೇಕಾಬಿಟ್ಟಿ ಕಿರುಚಾಡ್ತೀರಾ ? ತಾಳ್ಮೆಯಿಂದ ಇರೋದು ಹೇಗೆ ನಾವ್ ಹೇಳ್ತೀವಿ
ಮನಸ್ಸಿನ ಮೇಲಾಗುತ್ತೆ ಆಳವಾದ ಗಾಯ : ಮಗುವನ್ನು ಹೊಡೆಯುವುದು ಅವರಿಗೆ ದೈಹಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ನೋವುಂಟು ಮಾಡುತ್ತದೆ. ಮಕ್ಕಳ ಮನಸ್ಸಿನ ಮೇಲಾದ ಗಾಯ ಬೇಗ ಮಾಸುವುದಿಲ್ಲ. ಅವರು ತಮ್ಮನ್ನು ತಾವು ಕೆಟ್ಟ ವ್ಯಕ್ತಿ ಎಂದು ಭಾವಿಸುತ್ತಾರೆ. ದೊಡ್ಡವರಾದ್ಮೇಲೆ ತಮ್ಮ ಬಗ್ಗೆ ಅವರಿಗೆ ಗೌರವವಿರುವುದಿಲ್ಲ. ನಾನು ಕೆಟ್ಟವನು ಎಂಬ ನೋವು ಅವರಿಗೆ ದೀರ್ಘ ಕಾಲದವರೆಗೆ ಕಾಡಬಹುದು.
ಪೋಷಕರಿಂದ ದೂರವಾಗ್ತಾರೆ ಮಕ್ಕಳು : ಕೋಪದಲ್ಲಿ ಮಕ್ಕಳಿಗೆ ನಾಲ್ಕೈಟು ಹೊಡೆದಿರುತ್ತೇವೆ. ಅದೇ ಸರಿ ಎಂದು ಸಮರ್ಥಿಸಿಕೊಳ್ತೇವೆ. ಕೆಲ ಪಾಲಕರು ಮಕ್ಕಳಿಗೆ ಹೊಡೆದ ನಂತ್ರ ಪಶ್ಚಾತಾಪ ಪಟ್ಟುಕೊಂಡ್ರೂ ಅದನ್ನು ಮಕ್ಕಳ ಮುಂದೆ ತೋರಿಸುವುದಿಲ್ಲ. ಮಕ್ಕಳಿಗೆ ಏಟು ನೀಡಿದಾಗ ಪಾಲಕರ ಕೋಪ ತಣ್ಣಗಾಗುತ್ತದೆ. ಆದ್ರೆ ಮಕ್ಕಳಲ್ಲಿ ಭಯ ಆವರಿಸುತ್ತದೆ. ಚಿಕ್ಕಪುಟ್ಟ ವಿಷ್ಯಕ್ಕೆ ಪಾಲಕರು ಹೊಡೆಯುತ್ತಾರೆ ಎಂಬ ಸಂಗತಿ ಮಕ್ಕಳಿಗೆ ತಿಳಿಯುತ್ತದೆ. ಹಾಗಾಗಿ ಪಾಲಕರ ಬಳಿ ಬರಲು ಅವರು ಹೆದರುತ್ತಾರೆ. ಹೊಡೆತ ತಿನ್ನುವ ಭಯದಲ್ಲಿ ಅನೇಕ ವಿಷ್ಯಗಳನ್ನು ಪಾಲಕರಿಗೆ ಹೇಳುವುದೇ ಇಲ್ಲ.
Relationship Tips : ಒನ್ ಸೈಡೆಡ್ ಲವ್‌ನಲ್ಲಿ ಬಿದ್ದಿದ್ದೀರಾ ? ಪಶ್ಚಾತ್ತಾಪ ಪಡ್ಬೇಕಾಗುತ್ತೆ !
ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ : ಮಕ್ಕಳನ್ನು ಸುಧಾರಿಸ್ಬೇಕು ಹಾಗಾಗಿ ಹೊಡೆಯಬೇಕೆಂದು ಪಾಲಕರು ಭಾವಿಸಿರುತ್ತಾರೆ. ಕೆಲ ಪಾಲಕರು ಎಲ್ಲರ ಮುಂದೆ, ಮಕ್ಕಳ ಸ್ನೇಹಿತರ ಮುಂದೆ ಮಕ್ಕಳಿಗೆ ಹೊಡೆಯುತ್ತಾರೆ. ಇದು ಮಕ್ಕಳ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಮಕ್ಕಳ ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸವನ್ನು ಕುಗ್ಗಿಸುವ ಸಾಧ್ಯತೆಯೂ ಇರುತ್ತದೆ.
ಹೊಡೆತ ರೂಢಿಯಾದ್ರೆ ಕಷ್ಟ : ಅಪರೂಪಕ್ಕೊಮ್ಮೆ ಮಕ್ಕಳಿಗೆ ಹೊಡೆದ್ರೆ ಮಕ್ಕಳಲ್ಲಿ ಭಯವಿರುತ್ತದೆ. ಅದೇ ಪ್ರತಿ ದಿನ, ಮಾತು ಮಾತಿಗೆ ಹೊಡೆತ ತಿಂದ್ರೆ ಮಕ್ಕಳಿಗೆ ಇದು ರೂಢಿಯಾಗುತ್ತದೆ. ಹಾಗಾಗಿ ಮಕ್ಕಳು ಹೊಡೆತಕ್ಕೆ ಹೆದರುವುದಿಲ್ಲ. ಎರಡು –ಮೂರು ಹೊಡೆತ ಹೊಡೆದು ಪಾಲಕರು ಸುಮ್ಮನಾಗ್ತಾರೆಂದು ಭಾವಿಸುವ ಮಕ್ಕಳು ತಪ್ಪು ಮಾಡಲು ಹೆದರುವುದಿಲ್ಲ.