ಮುಂಬೈನ ಪೃಥ್ವಿರಾಜ್ ಬೋಹ್ರಾ ಎಂಬುವವರು ಜುಹು ಬೀಚ್‌ನಲ್ಲಿ 'ಆಲಿಸುವ ಸೇವೆ'ಯನ್ನು ಆರಂಭಿಸಿದ್ದಾರೆ. ಜನರ ದುಃಖ, ಚಿಂತೆಗಳನ್ನು ಕೇಳಲು ಅವರು ನಿಗದಿತ ಶುಲ್ಕವನ್ನು ವಿಧಿಸುತ್ತಾರೆ. ನಗರ ಜೀವನದಲ್ಲಿನ ಒಂಟಿತನ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಮುಂಬೈ (ಮಾ.21): ಆಧುನಿಕ ಜೀವನದ ಓಟದಲ್ಲಿ ಮನುಷ್ಯನಿಗೆ ತನ್ನ ಮನದ ಮಾತನ್ನು ಹೇಳಿಕೊಳ್ಳಲು ಸಮಯವಿಲ್ಲ, ಕೇಳಿಸಿಕೊಳ್ಳಲು ಹಿತೈಷಿಗಳಿಲ್ಲ. ಜನರ ಈ ನೋವನ್ನೇ ಅರಿತ ಮುಂಬೈನ ಪೃಥ್ವಿರಾಜ್ ಬೋಹ್ರಾ ಎನ್ನುವವರು ಜುಹು ಬೀಚ್‌ನಲ್ಲಿ ಒಂದು ವಿನೂತನ "ಲಿಸನಿಂಗ್ ಸರ್ವಿಸ್" (ಆಲಿಸುವ ಸೇವೆ) ಆರಂಭಿಸುವ ಮೂಲಕ ವೈರಲ್ ಆಗಿದ್ದಾರೆ.
ಪೃಥ್ವಿ ಅವರು ಜುಹೂ ಬೀಚ್‌ನ ಮರಳಿನ ಮೇಲೆ ಒಂದು ಕೈಬರಹದ ಫಲಕವನ್ನು ಹಿಡಿದು ಕುಳಿತುಕೊಳ್ಳುತ್ತಾರೆ. ಹಿಂದಿಯಲ್ಲಿರುವ ಆ ಫಲಕದಲ್ಲಿ "ಕಿಸಿ ಕೋ ಅಪ್ನಾ ದುಃಖ ಸುನಾನಾ ಹೈ ತೋ ಮೈ ಸುನ್ ಸಕ್ತಾ ಹೂಂ" (ಯಾರಿಗಾದರೂ ತಮ್ಮ ದುಃಖವನ್ನು ಹೇಳಿಕೊಳ್ಳಬೇಕಿದ್ದರೆ, ನಾನು ಕೇಳಿಸಿಕೊಳ್ಳಬಲ್ಲೆ) ಎಂದು ಬರೆಯಲಾಗಿದೆ.
ಪೃಥ್ವಿರಾಜ್ ನೀಡುವ ಸೇವೆಗಳು
ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಪೃಥ್ವಿ ತಮ್ಮ ವಿಭಿನ್ನ ಶುಲ್ಕದ ಬಗ್ಗೆಯೂ ವಿವರಿಸಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳನ್ನು ಆಲಿಸಲು 250 ರೂಪಾಯಿ ಚಾರ್ಜ್ ಮಾಡುತ್ತಾರೆ. ಗಂಭೀರವಾದ ಅಥವಾ ದೊಡ್ಡ ಮಟ್ಟದ ಚಿಂತೆಗಳನ್ನು ಕೇಳಿಸಿಕೊಳ್ಳಲು 500 ರೂಪಾಯಿ ಶುಲ್ಕ ವಿಧಿಸುತ್ತಾರೆ. ಕಷ್ಟ ಹೇಳಿಕೊಳ್ಳುವವರ ಜೊತೆ ತಾವೂ ಕುಳಿತು ಅಳುವುದಾದರೆ ಅದಕ್ಕೆ 1 ಸಾವಿರ ರೂಪಾಯಿ ಫೀಸ್ ವಿಧಿಸುತ್ತಾರೆ. "ನಿಮ್ಮ ಈ ಸೇವೆಗೆ ನಿಜವಾಗಿಯೂ ಯಾರಾದರೂ ಹಣ ಪಾವತಿಸುತ್ತಾರೆಯೇ?" ಎಂಬ ಪ್ರಶ್ನೆಗೆ, "ಹೌದು, ಜನರು ಖಂಡಿತವಾಗಿಯೂ ಬರುತ್ತಾರೆ" ಎಂದು ಅವರು ಉತ್ತರಿಸಿದ್ದಾರೆ. ಪೃಥ್ವಿರಾಜ್ ಬೋಹ್ರಾ ಅವರು ತಮ್ಮದೇ ಆದ ಇನ್‌ಸ್ಟಾಗ್ರಾಮ್ ಪೇಜ್ ಮತ್ತು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ.
ಈ ವಿಲಕ್ಷಣ ಉಪಕ್ರಮವು ಮುಂಬೈನಂತಹ ಗದ್ದಲದ ನಗರಗಳಲ್ಲಿನ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಬೆಂಬಲದ ಅಗತ್ಯತೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಒತ್ತಡದ ಮಟ್ಟಗಳು ಹೆಚ್ಚುತ್ತಿರುವುದು ಮತ್ತು ಕೈಗೆಟುಕುವ ದರದಲ್ಲಿ ಮಾನಸಿಕ ಆರೋಗ್ಯ ಸೇವೆಗಳು ಸಿಗದಿರುವುದು ಜನರು ಇಂತಹ ಅನೌಪಚಾರಿಕ ಮಾರ್ಗಗಳತ್ತ ಮುಖ ಮಾಡಲು ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಪೃಥ್ವಿರಾಜ್ ಅವರ ಈ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ ಭಿನ್ನ ಪ್ರತಿಕ್ರಿಯೆಗಳು ಬಂದಿವೆ. "ಈ ವ್ಯಕ್ತಿ ಬೀಚ್‌ನಲ್ಲಿ ಅತ್ಯಂತ ದೊಡ್ಡ ಬಿಸಿನೆಸ್ ಮಾಡೆಲ್ ಕಂಡುಕೊಂಡಿದ್ದಾರೆ," ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು "ಇದೊಂದು ಮುಂದಿನ ದೊಡ್ಡ ಸ್ಟಾರ್ಟ್ಅಪ್ ಐಡಿಯಾ" ಎಂದಿದ್ದಾರೆ.
ಇನ್ನು ಕೆಲವರು ಇದನ್ನು ವಿರೋಧಿಸಿದ್ದಾರೆ. "ಈಶಾನ್ಯ ಭಾರತದಂತಹ ಕಡೆ ನಮ್ಮ ಸಮುದಾಯಗಳು ಯಾವುದೇ ಬಿಲ್ ಇಲ್ಲದೆ ಜನರ ಕಷ್ಟಗಳನ್ನು ಆಲಿಸುತ್ತವೆ. ಆದರೆ ಮೆಟ್ರೋ ನಗರಗಳಲ್ಲಿ ನೋವು ಕೂಡ ಮಾರಾಟಕ್ಕಿದೆ ಎಂಬುದು ಒಂಟಿತನದ ಸಾಂಕ್ರಾಮಿಕ ರೋಗವನ್ನು ತೋರಿಸುತ್ತದೆ. ಅರ್ಹತೆ ಇಲ್ಲದ ಇಂತಹ ವ್ಯಕ್ತಿಗಳು ಸರಿಯಾದ ಸಹಾಯ ಪಡೆಯಲಾಗದ ಜನರನ್ನು ಬೇಟೆಯಾಡುತ್ತಿದ್ದಾರೆ," ಎಂದು ಕಳವಳ ವ್ಯಕ್ತಪಡಿಸಿದ್ದಾರೆ. "ನಾನು ನನ್ನ ಸ್ನೇಹಿತರು ಮತ್ತು ಕುಟುಂಬದವರಿಗೆ ಇದೇ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದೇನೆ," ಎಂದು ಹಲವರು ತಮಾಷೆ ಮಾಡಿದ್ದಾರೆ.


