ಮೀರತ್‌ನಲ್ಲಿ ಗಂಡ ಗಡ್ಡವನ್ನು ಶೇವ್ ಮಾಡಲು ನಿರಾಕರಿಸಿದ್ದಕ್ಕೆ ಬೇಸತ್ತ ಪತ್ನಿ, ಆತನ ಸೋದರನ ಜೊತೆ ಓಡಿಹೋಗಿರುವ ವಿಚಿತ್ರ ಘಟನೆ ನಡೆದಿದೆ.
ಮೀರತ್: ಕೆಲ ದಿನಗಳಿಂದ ವಿವಾಹಿತ ಮಹಿಳೆಯರು ಅಳಿಯ, ಮೊಮ್ಮಗ್ಗ ಎಂಬುದನ್ನೂ ನೋಡದೇ ಸಂಬಂಧಗಳನ್ನು ಲೆಕ್ಕಿಸದೇ ಓಡಿ ಹೋಗುತ್ತಿರುವ ಸುದ್ದಿಗಳು ಉತ್ತರ ಪ್ರದೇಶದಿಂದ ನಿರಂತರವಾಗ ವರದಿಯಾಗುತ್ತಿದೆ. ಒಂದು ತಿಂಗಳ ಅಂತರದಲ್ಲಿ ಮೂರಕ್ಕೂ ಹೆಚ್ಚು ವಿವಾಹಿತ ಮಹಿಳೆಯರ ವಿಚಿತ್ರ ಪ್ರೇಮ ಸಂಬಂಧಗಳು ಬೆಳಕಿಗೆ ಬಂದಿವೆ. ಮೊದಲು ಪ್ರಕರಣದಲ್ಲಿ ಮಹಿಳೆ ಇನ್ನೇನೂ ಮಗಳ ಮದುವೆಗೆ ಕೆಲ ದಿನಗಳಿರುವಾಗ ಮಗಳ ಭಾವೀ ಗಂಡ ಅಂದರೆ ತನ್ನ ಭಾವಿ ಅಳಿಯನ ಜೊತೆಯೇ ಓಡಿ ಹೋಗಿದ್ದಳು. ಈ ಪ್ರಕರಣ ಮಾಸುವ ಮೊದಲೇ ಮತ್ತೊಬ್ಬ ಮಹಿಳೆ ತನ್ನ ಮಗಳ ಮಾವ(ಗಂಡನ ಅಪ್ಪ)ನ ಜೊತೆ ಓಡಿ ಹೋದ ಸುದ್ದಿ ಬೆಳಕಿಗೆ ಬಂದಿತ್ತು. ಇದು ಮಾಸುವ ಮೊದಲು ವರಸೆಯಲ್ಲಿ ಮೊಮ್ಮಗನಾಗಬೇಕಾದ 30 ವರ್ಷದ ವ್ಯಕ್ತಿಯ ಜೊತೆ 50 ವರ್ಷದ ಮಹಿಳೆ ಓಡಿ ಹೋದ ಘಟನೆ ನಡೆದಿತ್ತು. ಈಗ ಇದೇ ರೀತಿ ವಿಚಿತ್ರವಾದ ಮತ್ತೊಂದು ಘಟನೆ ಮೀರತ್‌ನಿಂದ ವರದಿಯಾಗಿದೆ. ಈ ಪ್ರಕರಣದಲ್ಲಿ ಗಂಡನ ಗಡ್ಡದಿಂದ ಬೇಸತ್ತ ಮಹಿಳೆ ಆತನ ಸೋದರನ (brother-in-law) ಜೊತೆ ಓಡಿ ಹೋಗಿದ್ದಾಳೆ. ಉತ್ತರ ಪ್ರದೇಶ ಮೀರತ್‌ನಲ್ಲಿ ಈ ಘಟನೆ ನಡೆದಿದೆ.
ಗಂಡ ತನ್ನ ಗಡ್ಡ ಶೇವ್ ಮಾಡಲು ನಿರಾಕರಿಸಿದ ಎಂದು ಬೇಸರಗೊಂಡ ಮಹಿಳೆ ಆತನ ಸೋದರನ ಜೊತೆ ಓಡಿ ಹೋಗಿದ್ದಾಳೆ. ಮೀರತ್‌ನ ಉಜ್ವಲ ಗಾರ್ಡ್‌ನ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಶಕೀರ್ ಮೌಲ್ವಿಯಾಗಿದ್ದು (Muslim cleric) 7 ತಿಂಗಳ ಹಿಂದಷ್ಟೇ ಆತ ಆರ್ಷಿ ಎಂಬುವವಳನ್ನು ಮದುವೆಯಾಗಿದ್ದ. ಮದುವೆಯ ನಂತರ ಅರ್ಶಿ ತನ್ನ ಗಂಡನಿಗೆ ಗಡ್ಡ ತೆಗೆಯುವಂತೆ ಒತ್ತಾಯ ಮಾಡಿದ್ದಾಳೆ. ಅಲ್ಲದೇ ಕುಟುಂಬದ ಒತ್ತಾಯದ ಕಾರಣಕ್ಕೆ ನಿನ್ನನ್ನು ಮದುವೆಯಾಗಿರುವುದಾಗಿ ಪತಿಗೆ ಅರ್ಶಿ ಹೇಳಿದ್ದಳಂತೆ, ಅಲ್ಲದೇ ಗಡ್ಡ ತೆಗೆದರೆ ಮಾತ್ರ ನಿನ್ನೊಂದಿಗೆ ವಾಸ ಮಾಡುವುದಾಗಿ ಆಕೆ ಪತಿ ಶಕೀರ್‌ಗೆ ಹೇಳಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಅಲ್ಲದೇ ಪತ್ನಿಯ ಕುಟುಂಬವೂ ಆತನಿಗೆ ಗಡ್ಡ ತೆಗೆಯುವಂತೆ ಒತ್ತಾಯಿಸಿತು ಎಂದು ಶಕೀರ್ (Shakir) ಆರೋಪ ಮಾಡಿದ್ದಾರೆ.
ಈ ಜಗಳದ ನಡುವೆಯೇ ಆರ್ಶಿಗೆ ಶಕೀರ್‌ನ ಕಿರಿಯ ಸೋದರ (younger brother) ಅಂದರೆ ಮೈದುನನ ಜೊತೆ ಪ್ರೇಮ ಸಂಬಂಧ ಬೆಳೆದಿದ್ದು, ಫೆಬ್ರವರಿ 3 ರಂದೇ ಇವರಿಬ್ಬರೂ ಓಡಿ ಹೋಗಿದ್ದಾರೆ. ಇದರಿಂದ ಶಕೀರ್ ಹಾಗೂ ಆತನ ಕುಟುಂಬಕ್ಕೆ ಆಘಾತವಾಗಿದೆ. ಇತ್ತ ಪತ್ನಿ ಸ್ವಂತ ತಮ್ಮನ (ಮೈದುನ) ಜೊತೆಯೇ ಓಡಿ ಹೋಗಿದ್ದರಿಂದ ಸಾಮಾಜಿಕ ಮುಜುಗರ ಎದುರಿಸುವುದು ಬೇಡ ಎಂದು ಶಕೀರ್ ಪೊಲೀಸರಿಗೆ ದೂರು ನೀಡದೇ ತನ್ನ ಸಂಬಂಧಿಕರ ಸಹಾಯದಿಂದ ಅವರಿಬ್ಬರನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಅವರಿಬ್ಬರೂ ಆತನಿಗೆ ಸಿಕ್ಕಿಲ್ಲ.
ಹೀಗಾಗಿ ಆತ ಈಗ ಪೊಲೀಸರಿಗೆ ತನ್ನ ಪತ್ನಿ ಹಾಗೂ ಸೋದರ ನಾಪತ್ತೆಯಾಗಿದ್ದಾರೆಂದು ನಾಪತ್ತೆ ದೂರು ದಾಖಲಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿ ಅರ್ಶಿಯ ಕುಟುಂಬಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಅವರ ಕುಟುಂಬ ತಾವು ಅವಳೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದಾಗಿ ಹೇಳಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದಾರೆ. ಅರ್ಶಿ ಈಗ ತನ್ನಿಂದ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ ಎಂದು ಶಕೀರ್ ಆರೋಪಿಸಿದ್ದಾರೆ. ಮೀರತ್‌ನ ಎಸ್‌ಪಿ ಆಯುಷ್ ವಿಕ್ರಂ ಈ ಬಗ್ಗೆ ದೂರು ದಾಖಲಾಗಿರುವುದನ್ನು ಖಚಿತಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.


