ನಟ ಜಯಂ ರವಿ ಮತ್ತು ಪತ್ನಿ ಆರತಿ ರವಿ ವಿಚ್ಛೇದನ ಪ್ರಕರಣ ಹೊಸ ತಿರುವು ಪಡೆದಿದೆ. ತಮಗೆ ಮಾಟಮಂತ್ರ ಮಾಡಲಾಗಿತ್ತು ಎಂದು ರವಿ ಆರೋಪಿಸಿದ್ದು, ಇತ್ತ ನಟಿ ಮೀರಾ ಚೋಪ್ರಾ ಜಯಂ ರವಿ ಬೆಂಬಲಕ್ಕೆ ನಿಂತಿದ್ದಾರೆ. ರವಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಪತ್ನಿ ಮತ್ತು 'ಇಡ್ಲಿ ನಟಿ'ಯ ವಿರುದ್ಧ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.

ಚೆನ್ನೈ (ಮೇ.17): ಕಾಲಿವುಡ್‌ನ ಸ್ಟಾರ್ ಜೋಡಿಗಳಾಗಿದ್ದ ನಟ ರವಿ ಮೋಹನ್ (ಜಯಂ ರವಿ) ಮತ್ತು ಅವರ ಪತ್ನಿ ಆರತಿ ರವಿ ನಡುವಿನ ವಿಚ್ಛೇದನ ವಿವಾದ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಪತ್ರಿಕಾಗೋಷ್ಠಿ ನಡೆಸಿ ತಮಗೆ ಮಾಟಮಂತ್ರ ಮಾಡಲಾಗಿತ್ತು, ರಕ್ತದ ವಾಂತಿ ಮಾಡಿದ್ದೆ ಮತ್ತು ಹೆಂಡತಿ ಕಡೆಯವರಿಂದ ತೀವ್ರ ಅವಮಾನ ಅನುಭವಿಸಿದ್ದೇನೆ ಎಂದು ಜಯಂ ರವಿ ಕಣ್ಣೀರಿಟ್ಟಿದ್ದರು. ಇದೀಗ ಈ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಸೋದರಸಂಬಂಧಿ ಹಾಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿರುವ ಮೀರಾ ಚೋಪ್ರಾ ಅವರು ಬಹಿರಂಗವಾಗಿ ಜಯಂ ರವಿ ಬೆಂಬಲಕ್ಕೆ ನಿಂತಿದ್ದಾರೆ.

Add Asianetnews Kannada as a Preferred SourcegooglePreferred

ವಿಚ್ಛೇದನ ಪ್ರಕ್ರಿಯೆ ಅಂತಿಮಗೊಳ್ಳುವವರೆಗೆ ತಾವು ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಜಯಂ ರವಿ ಘೋಷಿಸಿದ ಬೆನ್ನಲ್ಲೇ ಮೀರಾ ಚೋಪ್ರಾ ಅವರು ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

ಜಯಂ ರವಿ ಅವರ ಹೇಳಿಕೆಯ ಚಿತ್ರಗಳನ್ನು ಹಂಚಿಕೊಂಡಿರುವ ಮೀರಾ, "ನಾನು ಸೌತ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಇವರನ್ನು (ಜಯಂ ರವಿ) ಹತ್ತಿರದಿಂದ ಬಲ್ಲೆ. ಆತ ಅತ್ಯಂತ ಮೃದುಸ್ವಭಾವದ ಮತ್ತು ಮುಗ್ಧ ಯುವಕ. ಪ್ರಸ್ತುತ ಅವರ ಡಿವೋರ್ಸ್ ವಿಚಾರ ಓದಿದೆ. ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ, ಪ್ರತಿ ಬಾರಿಯೂ ಪುರುಷನೇ ತಪ್ಪಿತಸ್ಥನಾಗಿರುವುದಿಲ್ಲ. ಮಹಿಳೆಯರ ಪರವಾಗಿರುವ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನೇಕ ಮಹಿಳೆಯರನ್ನು ನಾನು ನೋಡುತ್ತಿದ್ದೇನೆ. ಇಲ್ಲಿ ಪುರುಷನ ಅಳಲನ್ನೂ ಕೇಳಬೇಕಿದೆ. ಜಯಂ ರವಿಗೆ ಶೀಘ್ರದಲ್ಲೇ ಸತ್ಯ ಮತ್ತು ನ್ಯಾಯ ಸಿಗಲಿ ಎಂದು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

'ನನ್ನ ಕೈ ಸೀಳಿಕೊಂಡಿದ್ದೆ, ಮಕ್ಕಳಿಗೆ ಬಾಡಿಗಾರ್ಡ್ ಇಟ್ಟಿದ್ದಾರೆ!': ಜಯಂ ರವಿ ಆರೋಪ

ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಜಯಂ ರವಿ ತಮ್ಮ ವೈವಾಹಿಕ ಜೀವನದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದರು. "ಸಾಕಷ್ಟು ದಿನ ಸುಮ್ಮನಿದ್ದೆ, ಆದರೆ ಇನ್ನು ಸಾಧ್ಯವಿಲ್ಲ. ಜಯಂ ರವಿ ಎಂದರೆ ಸಾಫ್ಟ್ ಎಂದುಕೊಂಡಿದ್ದಾರೆ. ನನ್ನ ತಾಳ್ಮೆ ಪರೀಕ್ಷಿಸಿದವರಿಗೆ ನನ್ನ ಆಫೀಸ್‌ಗೆ ಬಂದು ಎದುರಿಸಲು ಸವಾಲು ಹಾಕುತ್ತೇನೆ. ನನ್ನ ಡಿವೋರ್ಸ್ ಮುಗಿಯುವವರೆಗೂ ನಾನು ಕ್ಯಾಮೆರಾ ಮುಂದೆ ನಿಲ್ಲಲ್ಲ" ಎಂದು ಕಣ್ಣೀರು ಹಾಕಿದ್ದರು.

ಮುಂದುವರಿದು ಮಾತನಾಡಿದ್ದ ಅವರು, "ನನ್ನ ಸ್ವಂತ ಮಕ್ಕಳನ್ನು ಭೇಟಿಯಾಗಲು ಅವರು ಬಿಡುತ್ತಿಲ್ಲ. ನನ್ನ ಇಬ್ಬರು ಗಂಡು ಮಕ್ಕಳಿಗೆ ಬಾಡಿಗಾರ್ಡ್‌ಗಳನ್ನು ಇಟ್ಟು ಕಾವಲು ಕಾಯಲಾಗುತ್ತಿದೆ. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ನಾನು ಮದುವೆಯಾಗಿದ್ದೆ, ಈಗ ಅದಕ್ಕೆ ತಕ್ಕ ಶಾಸ್ತಿ ಅನುಭವಿಸುತ್ತಿದ್ದೇನೆ. ಮಾನಸಿಕ ಕಿರುಕುಳ ತಾಳಲಾರದೆ ಒಮ್ಮೆ ನಾನು ನನ್ನ ಕೈ ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೆ. ಆದರೂ ಮರುದಿನ ಶೂಟಿಂಗ್‌ಗೆ ಹಾಜರಾಗಿದ್ದೆ. ಫೆಮಿನಿಸಂ (ಸ್ತ್ರೀವಾದ) ಹೆಸರಿನಲ್ಲಿ ಕೆಲವರು ಕಾನೂನಿನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನನ್ನ ಮ್ಯಾನೇಜರ್ ಮತ್ತು ಭಾವ ಪ್ರಸಾದ್ ಕೂಡ ಆ ಕುಟುಂಬದಿಂದ ನನಗಿಂತ ಮುಂಚೆಯೇ ದೂರಾಗುವ ಮೂಲಕ ನನ್ನಷ್ಟೇ ನರಕ ಅನುಭವಿಸಿದ್ದಾರೆ" ಎಂದು ಜಯಂ ರವಿ ಸ್ಫೋಟಕ ಹೇಳಿಕೆ ನೀಡಿದ್ದರು.

ಕಿರುಕುಳ ನೀಡುತ್ತಿರುವ ಟ್ರೋಲರ್‌ಗಳ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದ ರವಿ, ಗಾಯಕಿ ಕೆನಿಶಾ ಫ್ರಾನ್ಸಿಸ್ ಸೈಬರ್ ಬುಲ್ಲಿಂಗ್‌ನಿಂದ ಬೇಸತ್ತು ದೂರ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ 'ಮೂರು ಅಕ್ಷರದ ಹೆಸರಿನ ಇಡ್ಲಿ ನಟಿ'ಯೊಬ್ಬರ ವಿರುದ್ಧ ಹರಿಹಾಯ್ದ ರವಿ, "ಬೇರೆಯವರ ಸಂಸಾರ ಮುರಿದು ಸಾರ್ವಜನಿಕ ವೇದಿಕೆಗಳಲ್ಲಿ ಫೆಮಿನಿಸಂ ಬಗ್ಗೆ ಭಾಷಣ ಬಿಗಿಯುವ ನೈತಿಕತೆ ಆಕೆಗೆ ಎಲ್ಲಿದೆ?" ಎಂದು ಪರೋಕ್ಷವಾಗಿ ಹಿರಿಯ ನಟಿ, ರಾಜಕಾರಣಿ ಖುಷ್ಬೂ ಸುಂದರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.

2009 ರಲ್ಲಿ ಪ್ರೀತಿಸಿ ಅದ್ಧೂರಿಯಾಗಿ ವಿವಾಹವಾಗಿದ್ದ ಜಯಂ ರವಿ ಮತ್ತು ಆರತಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರಸ್ತುತ ಇವರಿಬ್ಬರ ವಿಚ್ಛೇದನದ ಕಾನೂನು ಹೋರಾಟ ನ್ಯಾಯಾಲಯದಲ್ಲಿದ್ದು, ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.