Mary Kom Breaks Silence on Divorce; Accuses Ex-Husband Onler of Fraud ಮೇರಿ ಕೋಮ್ ಮತ್ತು ಓನ್ಲರ್ ಎರಡು ದಶಕಗಳಿಗೂ ಹೆಚ್ಚು ಕಾಲ ವಿವಾಹವಾಗಿದ್ದರು. 2023ರಲ್ಲಿ ಆಘಾತಕಾರಿಯಾಗಿ ಮೇರಿ ಕೋಮ್ ವಿವಾಹ ವಿಚ್ಛೇದನವನ್ನು ಘೋಷಿಸಿದರು.
ನವದೆಹಲಿ (ಜ.10): ದಿಗ್ಗಜ ಬಾಕ್ಸಿಂಗ್ ತಾರೆ ಮೇರಿ ಕೋಮ್ ಇದೇ ಮೊದಲ ಬಾರಿಗೆ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಜೀವನದ ಅತ್ಯಂತ ಕರಾಳ ಅಧ್ಯಾಯದ ಬಗ್ಗೆ ಪಿಟಿಐ ಜೊತೆ ಅವರು ಮಾತನಾಡಿದ್ದಾರೆ. ಆರು ಬಾರಿಯ ವಿಶ್ವ ಚಾಂಪಿಯನ್, ಒಲಿಂಪಿಕ್ ಕಂಚಿನ ಪದಕ ವಿಜೇತ ಮತ್ತು ಹಲವಾರು ಜಾಗತಿಕ ಪ್ರಶಸ್ತಿಗಳನ್ನು ಗೆದ್ದಿರುವ 43 ವರ್ಷದ ಮೇರಿ ಕೋಮ್, ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರವೂ ತುಂಬಾ ದೀರ್ಘವಾಗಿ ಹೋಗಿದ್ದು, ನನ್ನ ಈ ಫೇಸ್‌ಅನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ನೋವಿನಲ್ಲಿ ಮಾತನಾಡಿದ್ದಾರೆ.
"ನಾನು ಏನನ್ನು ಅನುಭವಿಸಿದೆ ಎಂಬುದರ ಬಗ್ಗೆ ಏನೂ ತಿಳಿದಿಲ್ಲದ ಜನರು ನನಗೆ ದುರಾಸೆಯ ವ್ಯಕ್ತಿ ಎಂದಿದ್ದಾರೆ.ಹೌದು, ನಾನು ಈಗ ನನ್ನ ಪತಿ ಓನ್ಲರ್‌ನಿಂದ ಬೇರ್ಪಟ್ಟಿದ್ದೇನೆ ಮತ್ತು ಇದೆಲ್ಲವೂ ಎರಡು ವರ್ಷಗಳ ಹಿಂದೆ ಸಂಭವಿಸಿದೆ" ಎಂದು ಅವರು ಐಒಎ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಹಮದಾಬಾದ್‌ಗೆ ಹೋಗಿರುವ ಮೇರಿ ಕೋಮ್, ದೂರವಾಣಿ ಮೂಲಕ ನಡೆದ ಸಂದರ್ಶನದಲ್ಲಿ ಹೇಳಿದ್ದಾರೆ. ಮೇರಿ ಕೋಮ್ ಹಾಗೂ ಓನ್ಲೆರ್ ಎರಡು ದಶಕಗಳ ಕಾಲ ವಿವಾಹವಾಗಿದ್ದರು. 2023ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿ ಪತಿಯಿಂದ ದೂರವಾಗಿದ್ದರು.
ಸುಳ್ಳಿನ ಪ್ರಪಂಚದಲ್ಲಿದ್ದೆ ಅನ್ನೋದು ಅರ್ಥವಾಗಿತ್ತು
"ನಾನು ಸ್ಪರ್ಧಿಸುವವರೆಗೂ ಎಲ್ಲವೂ ಚೆನ್ನಾಗಿತ್ತು ಮತ್ತು ನನ್ನ ಹಣಕಾಸಿನಲ್ಲಿ ಬಹಳ ಕಡಿಮೆ ತೊಡಗಿಸಿಕೊಂಡಿದ್ದೆ, ಆದರೆ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಮೊದಲು ನಾನು ಗಾಯಗೊಂಡಾಗ, ನಾನು ಸುಳ್ಳಿನ ಪ್ರಪಂಚದಲ್ಲಿದ್ದೆ ಎನ್ನುವುದು ಗೊತ್ತಾಗಿತ್ತು' ಎಂದು ಮೇರಿ ಕೋಮ್ ಹೇಳಿದ್ದಾರೆ.
"ನಾನು ಹಲವಾರು ತಿಂಗಳುಗಳ ಕಾಲ ಹಾಸಿಗೆ ಹಿಡಿದಿದ್ದೆ ಮತ್ತು ಆ ನಂತರ ನನಗೆ ವಾಕರ್ ಅಗತ್ಯವಿತ್ತು. ಆಗ ನಾನು ನಂಬಿದ್ದ ವ್ಯಕ್ತಿ ನಾನು ನಂಬಿದ ವ್ಯಕ್ತಿಯಲ್ಲ ಎಂದು ನನಗೆ ಅರಿವಾಯಿತು. ಅದು ಜಗತ್ತಿಗೆ ಒಂದು ಡ್ರಾಮಾ ಆಗಬೇಕೆದು ನಾನು ಬಯಸಲಿಲ್ಲ, ಆದ್ದರಿಂದ ನಮ್ಮ ನಡುವೆ ಅದನ್ನು ಪರಿಹರಿಸಲು ಹಲವಾರು ಪ್ರಯತ್ನಗಳ ನಂತರ ನಾನು ವಿಚ್ಛೇದನವನ್ನು ಕೋರಿದೆ' ಎಂದಿದ್ದಾರೆ.
"ಇದು ಮುಂದುವರಿಯಲು ಸಾಧ್ಯವಿಲ್ಲ ಎಂದು ನಾನು ನನ್ನ ಕುಟುಂಬ ಮತ್ತು ಅವರ ಕುಟುಂಬಕ್ಕೆ ತಿಳಿಸಿದೆ, ಮತ್ತು ಅವರು ಅರ್ಥಮಾಡಿಕೊಂಡರು. ಇದು ಖಾಸಗಿಯಾಗಿ ಉಳಿಯುತ್ತದೆ ಎಂದು ನಾನು ಆಶಿಸಿದ್ದೆ, ಆದರೆ ಕಳೆದ ವರ್ಷದಿಂದ ನನ್ನ ಮೇಲೆ ದೂಷಣೆ ಮಾಡಲು ಸಂಘಟಿತ ಪ್ರಯತ್ನ ನಡೆದಿದೆ. ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ನಾನು ಭಾವಿಸಿದ್ದೆ, ಆದರೆ ನಂತರ ನನ್ನ ಮೌನವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಯಿತು ಮತ್ತು ದಾಳಿಗಳು ಹೆಚ್ಚುತ್ತಲೇ ಇದ್ದವು" ಎಂದು ಅವರು ನೆನಪಿಸಿಕೊಂಡಿದ್ದಾರೆ.
ಆತನಿಂದಾಗಿ ಕಷ್ಟಪಟ್ಟು ಖರೀದಿಸಿದ ಭೂಮಿ ಕಳೆದುಕೊಂಡೆ
ಈಗ ಫರಿದಾಬಾದ್‌ನಲ್ಲಿ ವಾಸ ಮಾಡುತ್ತಿರುವ ರಾಜ್ಯಸಭಾ ಸದಸ್ಯೆ, ನನಗೆ ಕೋಟಿಗಟ್ಟಲೆ ವಂಚನೆಯಾಗಿದೆ. ನಾನುಕಷ್ಟಪಟ್ಟು ಸಂಪಾದಿಸಿದ ಹಣದಿಂದ ಖರೀದಿಸಿದ ಭೂಮಿಯನ್ನು ಕೂಡ ಕಳೆದುಕೊಂಡಿದ್ದೇನೆ ಎಂದು ಆರೋಪಿಸಿದ್ದಾರೆ.
"ಅವನು ಸಾಲ ತೆಗೆದುಕೊಳ್ಳುತ್ತಲೇ ಇದ್ದ. ನನ್ನ ಆಸ್ತಿಯನ್ನು ಅಡವಿಟ್ಟು ಅದನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದ. ಅವನು ಚುರಾಚಂದ್‌ಪುರದ ಸ್ಥಳೀಯರಿಂದ ಹಣವನ್ನೂ ಸಾಲ ಪಡೆದಿದ್ದ.ಅದನ್ನು ಅವನಿಂದ ವಸೂಲಿ ಮಾಡಲು, ಅವರು ಭೂಗತ ಗುಂಪುಗಳ ಮೂಲಕ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.


