6 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ತಮ್ಮ ಪತಿ ಕರುಂಗ್ ಓನ್ಲರ್ ಅವರಿಂದ ವಿಚ್ಚೇದನ ಪಡೆದಿರುವುದಾಗಿ ಖಚಿತಪಡಿಸಿದ್ದಾರೆ. 2023ರ ಡಿಸೆಂಬರ್‌ನಲ್ಲಿ ದೂರವಾದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮಾಹಿತಿ ನೀಡಿದ್ದಾರೆ.
ನವದೆಹಲಿ: 6 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್, ಒಲಿಂಪಿಕ್ಸ್ ಪದಕ ವಿಜೇತ ಭಾರತದ ದಿಗ್ಗಜ ಬಾಕ್ಸರ್ ಮೇರಿ ಕೋಮ್ ತಮ್ಮ ಪತಿಯಿಂದ ವಿಚ್ಚೇದನ ಪಡೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 2023ರ ಡಿಸೆಂಬರ್‌ನಲ್ಲೇ ಕರುಂಗ್ ಓನ್ಲರ್ ಅವರಿಂದ ದೂರವಾಗಿದ್ದೇನೆ ಎಂದು ಕೋಮ್ ಸಾಮಾಜಿಕ ತಾಣಗಳಲ್ಲಿ ಖಚಿತಪಡಿಸಿದ್ದಾರೆ.
ಇವರಿಬ್ಬರು 2005ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆದರೆ 2022ರಲ್ಲಿ ಓನ್ಲರ್ ಮಣಿಪುರ ಚುನಾವಣೆಯಲ್ಲಿ ಸೋತು, ಭಾರೀ ಹಣ ಕಳೆದುಕೊಂಡ ಬಳಿಕ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು ಎನ್ನಲಾಗಿದೆ. ಕೆಲ ಸಮಯದಿಂದ ಇವರಿಬ್ಬರ ವಿಚ್ಚೇದನ ಸುದ್ದಿ ವರದಿಯಾಗುತ್ತಿದ್ದವು. ಕೆಲ ವರದಿಗಳ ಪ್ರಕಾರ ಮೇರಿ ಕೋಮ್ ಹಾಗೂ ಓನ್ಲರ್ ದಂಪತಿ ಮಣಿಪುರ ಚುನಾವಣಾ ಪ್ರಚಾರಕ್ಕಾಗಿ ಎರಡರಿಂದ ಮೂರು ಕೋಟಿ ರುಪಾಯಿ ಖರ್ಚು ಮಾಡಿದ್ದರು ಎನ್ನಲಾಗುತ್ತಿದೆ. ಇಷ್ಟು ಖರ್ಚು ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ, ಮೇರಿ ಕೋಮ್ ಪತಿ ಚುನಾವಣೆಯಲ್ಲಿ ಸೋಲುಂಡಿದ್ದರು.
ಆದರೆ ಮೇರಿ ಕೋಮ್ ಬಾಕ್ಸಿಂಗ್ ಫೌಂಡೇಶನ್ ಮುಖ್ಯಸ್ಥ ಹಾಗೂ ತಮ್ಮ ವ್ಯವಹಾರದ ಪಾಲುದಾರ ಹಿತೇಶ್ ಚೌಧರಿ ಜೊತೆಗಿನ ಸಂಬಂಧದ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು 42 ವರ್ಷದ ಕೋಮ್ ಅಲ್ಲಗಳೆದಿದ್ದಾರೆ. ಅಲ್ಲದೆ, ಈ ರೀತಿ ಆಧಾರರಹಿತ ಸುದ್ದಿ ಹರಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
'ನಾನು ಹಿತೇಶ್ ಚೌಧರಿ ಅಥವಾ ಇನ್ನ್ಯಾರೊಂದಿಗೋ ಡೇಟಿಂಗ್ ನಡೆಸುತ್ತಿದ್ದೇನೆ ಎನ್ನುವುದು ಸುಳ್ಳು ಸುದ್ದಿ. ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡಿದರೆ. ಮಾನನಷ್ಟ ಹಾಗೂ ಪ್ರೈವೇಶಿ ಆಕ್ಟ್‌ನಡಿ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇನೆ' ಎಂದು ಮೇರಿ ಕೋಮ್ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನು ಇದೇ ವೇಳೆ ಮೇರಿ ಕೋಮ್ ಈ ಸಂಕಷ್ಟದ ಸಮಯದಲ್ಲಿ ತಮ್ಮ ಖಾಸಗಿತಕ್ಕೆ ಧಕ್ಕೆ ನೀಡಬೇಡಿ ಎಂದು ಮಾಧ್ಯಮದವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅದೇ ರೀತಿ ಯಾವುದೇ ನಕಾರಾತ್ಮಕ ಸುಳ್ಳು ಮಾಹಿತಿ ಹರಡಬೇಡಿ ಎಂದು ಮೇರಿ ಕೋಮ್ ಮನವಿ ಮಾಡಿಕೊಂಡಿದ್ದಾರೆ.
ಮಣಿಪುರದ ಕೋಮ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದರು. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಿನ್ನ ಜಯಿಸಿದ್ದಾರೆ. ಅಂದಹಾಗೆ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ 6 ಚಿನ್ನದ ಪದಕ ಗೆದ್ದ ಏಕೈಕ ಮಹಿಳೆ ಎನ್ನುವ ಹೆಗ್ಗಳಿಕೆ ಮೇರಿ ಕೋಮ್ ಅವರದ್ದಾಗಿದೆ. ಸದ್ಯ ಮೇರಿ ಕೋಮ್ ತಮ್ಮ ನಾಲ್ಕು ಮಕ್ಕಳೊಂದಿಗೆ ಫರಿದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.
ಮೆದುಳು ಜ್ವರ: ರಾಜ್ಯದ ಯುವ ಫುಟ್ಬಾಲಿಗ, 10 ವರ್ಷದ ಅರ್ನೆಸ್ಟ್ ನಿಧನ
ಬೆಂಗಳೂರು: ಯುವ ಫುಟ್ಬಾಲ್ ಆಟಗಾರ, ಬೆಂಗಳೂರು ಎಫ್‌ಸಿ ಅಂಡರ್-11 ತಂಡದ ಆಟಗಾರ ರೊನಾಲ್ಡ್ ಅರ್ನೆಸ್ಟ್ ಡಿ ಗ್ರಾಸಾ(10 ವರ್ಷ) ಮೆದುಳು ಜ್ವರದಿಂದಾಗಿ ಬುಧವಾರ ನಿಧನರಾಗಿದ್ದಾರೆ.
ಅಂಡರ್-11 ಯೂತ್ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ಶೂಟರ್ಸ್, ಬೆಂಗಳೂರು ಎಫ್‌ಸಿ ತಂಡಗಳನ್ನು ಪ್ರತಿನಿಧಿಸಿರುವ ಅರ್ನೆಸ್ಟ್ ಕೆಲ ದಿನಗಳ ಹಿಂದೆ ಮೆದುಳು ಜ್ವರಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ
ಚಿಕಿತ್ಸೆ ಫಲಿಸದೆ ಬುಧವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ತಂದೆ ರೊನಾಲ್ಡ್ ಡಿ ಗ್ರಾಸಾ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.2023ರಲ್ಲಿ ಬೆಂಗಳೂರು ಶೂಟರ್ಸ್ ತಂಡದ ಪರ ಅರ್ನೆಸ್ಟ್ ಗರಿಷ್ಠ ಗೋಲು ಸರದಾರ ಎನಿಸಿಕೊಂಡಿದ್ದರು. ಬೈಯ್ಚುಂಗ್ ಬುಟಿಯಾ ಫುಟ್ಬಾಲ್ ಸ್ಕೂಲ್ ತಂಡದ ಪರವೂ ಆಡಿರುವ ಅವರು, ಕಳೆದ ವರ್ಷ ಬಿಎಫ್‌ಸಿ ಸೇರ್ಪಡೆಗೊಂಡಿದ್ದರು. ಅರ್ನೆಸ್ಟ್ ನಿಧನಕ್ಕೆ ಕರ್ನಾಟಕ ಫುಟ್ಬಾಲ್ ಸಂಸ್ಥೆ, ಬೆಂಗಳೂರು ನಗರ ಫುಟ್ಬಾಲ್ ಸಂಸ್ಥೆ ಸಂತಾಪ ಸೂಚಿಸಿದೆ.


