Asianet Suvarna News

ಮೊದಲ ಬಾರಿ ತೃತೀಯ ಲಿಂಗಿ ಜಾನಪದ ಅಕಾಡೆಮಿ ಅಧ್ಯಕ್ಷೆ; ಮಂಜಮ್ಮ ಜೋಗತಿ ಪರಿಚಯ!

ಹುಟ್ಟಿದ್ದು ಮಂಜುನಾಥ ಆಗಿ. ಬೆಳೆದದ್ದು ಮಂಜಮ್ಮನಾಗಿ. ಆಮೇಲೆ ಹೊಟ್ಟೆಪಾಡಿಗಾಗಿ ಕೈಗೊಂಡ ಕಲಾ ವೃತ್ತಿಯೇ ಇವರನ್ನು ಮಂಜಮ್ಮ ಜೋಗತಿಯನ್ನಾಗಿ ಮಾಡಿ, ಇಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಯನ್ನಾಗಿಯೂ ಮಾಡಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಅಕಾಡೆಮಿಯೊಂದಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಮಂಜಮ್ಮ ಜೋಗತಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಉಳಿದುಕೊಂಡು ಬಂದಿರುವ ‘ಜೋಗತಿ’ ಕಲಾ ಪ್ರಕಾರದ ಪ್ರಮುಖ ರಾಯಭಾರಿ. ಅವರು ಇಲ್ಲಿ ‘ಜೋಗತಿ’ ಕಲಾ ಪ್ರಕಾರದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ.

Manjamma Jogati first tranwomen to head karnataka Janapada Academy
Author
Bangalore, First Published Oct 26, 2019, 10:12 AM IST
  • Facebook
  • Twitter
  • Whatsapp

ಕೆಂಡಪ್ರದಿ

ಜೋಗತಿ ಕಲೆ ಎಂದರೇನು?

ಉತ್ತರ ಕರ್ನಾಟಕದ ಯಲ್ಲಮ್ಮ, ರೇಣುಕಾದೇವಿ, ಹುಲಿಗೆಮ್ಮ ದೇವತೆಗಳ ಜಾತ್ರೆ ವೇಳೆ ದೇವಿಯರ ಸ್ತುತಿಗಾಗಿ ಹಾಡುವ, ನೃತ್ಯ ಮಾಡುವ ಪ್ರಕಾರಕ್ಕೆ ಜೋಗತಿ ಕಲೆ ಎನ್ನುತ್ತಾರೆ. ದೇವಿಯ ದೀಕ್ಷೆ ತೆಗೆದುಕೊಂಡ ಗಂಡು ಮಕ್ಕಳಿಗೆ ಜೋಗಿಗಳು ಎಂದರೆ, ಹೆಣ್ಣು ಮಕ್ಕಳಿಗೆ ಜೋಗಮ್ಮರು ಎನ್ನುತ್ತಾರೆ. ಇನ್ನು ಸೀರೆ ಉಟ್ಟು ನೃತ್ಯ ಮಾಡುವ ಗಂಡಸರಿಗೆ ಜೋಗತಿಯರು ಎನ್ನುತ್ತಾರೆ. ಇದು ವಿವಿಧ ಧಾರ್ಮಿಕ ಆಯಾಮಗಳನ್ನು ಹೊಂದಿದ್ದು, ವ್ಯಕ್ತಿಗಳು ದೀಕ್ಷೆ ಪಡೆಯುವ ಕ್ರಮ ತುಂಬಾ ವಿಭಿನ್ನವಾಗಿದೆ. ಹೀಗೆ ದೀಕ್ಷೆ ತೆಗೆದುಕೊಂಡವರು, ಅದರಲ್ಲಿಯೂ ಮುಖ್ಯವಾಗಿ ಇಳಕಲ್‌ ಸೀರೆಯುಟ್ಟು, ಹಸಿರು ಬಳೆ ತೊಟ್ಟು ತಲೆಯ ಮೇಲೆ ದೇವರನ್ನು ಹೊತ್ತು ಗಂಡಸರು ಮಾಡುವ ನೃತ್ಯಕ್ಕೆ ಜೋಗತಿ ಕಲೆ ಎನ್ನುತ್ತಾರೆ.

ಪಂಜಾಬಿ ವಧುವಿನ ಕೈಯಲ್ಲಿರೋ ಚೂಡಾ -ಕಲೀರೆ .. ಏನೀದು ರೀ?

ಈ ಕಲೆ ಇಂದು ಯಾವ ಸ್ಥಿತಿಯಲ್ಲಿ ಇದೆ?

ಸದ್ಯ ಇಡೀ ರಾಜ್ಯದಲ್ಲಿ ಈ ಕಲೆಯನ್ನು ಜೀವಂತವಾಗಿ ಇಟ್ಟಿರುವುದು ನಮ್ಮದೊಂದೇ ತಂಡ. ನಾವು ಹದಿನೈದು ಮಂದಿ ಇದ್ದೇವೆ. ಹಿಂದೆಲ್ಲಾ ಹೊಟ್ಟೆಪಾಡಿಗಾಗಿ ಜಾತ್ರೆಗಳಲ್ಲಿ, ಸಂತೆಗಳಲ್ಲಿ, ಗ್ರಾಮಗಳಿಗೆ ಹೋಗಿ ಜೋಗತಿ ಕಲಾ ಪ್ರದರ್ಶನ ಮಾಡಿ ಜನರು ಕೊಟ್ಟಕಾಸು, ದವಸ, ಧಾನ್ಯದಿಂದ ಜೀವನ ಮಾಡುತ್ತಿದ್ದೇವು. ಈಗ ಕೆಲವಾರು ಕಡೆಗಳಲ್ಲಿ, ಜಾನಪದ ವೇದಿಕೆಗಳಿಂದ ನಮಗೆ ಆಹ್ವಾನ ಬರುತ್ತಿದೆ. ಬಂದ ಕಡೆಗೆ ಹೋಗಿ ನೃತ್ಯ ಮಾಡಿ ಬರುತ್ತೇವೆ. ಆದರೆ ಇದನ್ನು ಕಲಿಯಲು ಹೊಸದಾಗಿ ಹೆಚ್ಚಿನವರು ಬರುತ್ತಿಲ್ಲ. ಯಾಕೆಂದರೆ ಇದರ ಬಗ್ಗೆ ಜನರಲ್ಲಿ ಅಷ್ಟಾಗಿ ಅರಿವು ಇಲ್ಲ. ನಾನು ಜಾನಪದ ಅಕಾಡೆಮಿ ಅಧ್ಯಕ್ಷೆಯಾಗಿರುವುದರಿಂದ ಮೊದಲ ಹಂತದಲ್ಲಿ ಶಾಲಾ ಕಾಲೇಜುಗಳಲ್ಲಿ ಈ ಕಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದೇನೆ.

ಹಾಗಾದರೆ ಇದು ತಂಡವಾಗಿ ಪ್ರದರ್ಶಿಸುವ ಕಲೆಯೇ?

ಹೌದು. ಜೋಗತಿ ನೃತ್ಯ ಮಾಡುವಾಗ ಒಬ್ಬರು, ಮೂವರು ಇಲ್ಲವೇ ಐದು ಮಂದಿ ಇರಬೇಕು. ಮುಮ್ಮೇಳ ಮತ್ತು ಹಿಮ್ಮೇಳದಲ್ಲಿ ಜೋಗತಿ ಪದಗಳನ್ನು ಹಾಡುವವರು, ಶ್ರುತಿ, ಚೌಡಕಿ, ತಾಳ, ಹಲಗೆಗಳನ್ನು ನುಡಿಸಲು ಆರು ಮಂದಿ ಇರುತ್ತಾರೆ. ಹಾಗಾಗಿ ಕನಿಷ್ಟಏಳು ಮಂದಿ ಗರಿಷ್ಟಹನ್ನೊಂದು ಮಂದಿ ಇರಲೇಬೇಕು. ನೃತ್ಯವನ್ನು ಐದು ನಿಮಿಷದಿಂದ ಮೂವತ್ತು ನಿಮಿಷದ ತನಕ ಮಾಡಲಾಗುತ್ತದೆ. ಹೀಗೆ ಮಾಡುವಾಗ ತಲೆ ಮೇಲೆ ಇರುವ ಕೊಡವನ್ನು ಕೈಯಲ್ಲಿ ಹಿಡಿಯುವ ಹಾಗೆ ಇಲ್ಲ. ಹಾಗೆಯೇ ಬ್ಯಾಲೆನ್ಸ್‌ ಮಾಡಬೇಕು. ಇದರ ಜೊತೆಗೆ ಇಲ್ಲೊಂದು ದೈವ ಶಕ್ತಿಯೂ ಇದೆ ಎನ್ನುವ ನಂಬಿಕೆ ನಮ್ಮದು.

ವೇಷಭೂಷಣದ ಬಗ್ಗೆ ಹೇಳುವುದಾದರೆ?

ಜೋಗತಿ ನೃತ್ಯ ಮಾಡುವವರು ಇಳಕಲ್‌ ಸೀರೆ ಹುಟ್ಟು, ಹಸಿರು ಬಳೆ, ಕವಡೆ ಸರ, ಅಡ್ಡ ವಿಭೂತಿ, ಅಡ್ಡ ಭಂಡಾರ, ಅಡ್ಡ ಕುಂಕುಮ ಧರಿಸಬೇಕು. ನೃತ್ಯದಲ್ಲಿ ಇಡೀ ದೇಹವೇ ಚಲನೆಯಲ್ಲಿ ಇರುತ್ತದೆ. ದೇಹದ ಎಲ್ಲಾ ಭಾಗಗಳನ್ನೂ ನಾವು ನೃತ್ಯಕ್ಕೆ ಅರ್ಪಿಸಿದರೂ ತಲೆಯ ಮೇಲೆ ಇರುವ ಕೊಡ ಅಥವಾ ದೇವರು ಬೀಳುವ ಹಾಗೆ ಇಲ್ಲ. ಸತತವಾದ ಅಭ್ಯಾಸ ಮತ್ತು ದೈವ ಭಕ್ತಿ ಇದ್ದರೆ ಇದು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಜೋಗಪ್ಪ ಮತ್ತು ಜೋಗಮ್ಮಗಳು ನೃತ್ಯ ಮಾಡುವುದು ಕಡಿಮೆ. ಜೋಗತಿಯರೇ ಹೆಚ್ಚಾಗಿ ನೃತ್ಯ ಮಾಡುತ್ತಾ ಬಂದಿದ್ದಾರೆ.

ಜೋಗತಿ ಕಲೆಯ ಜ್ಯೋತಿ

ಬಳ್ಳಾರಿ ಮೂಲದವರಾದ ಮಂಜಮ್ಮ ಜೋಗತಿ ಹುಲಿಗೆಮ್ಮೆ ದೇವಸ್ಥಾನದಲ್ಲಿ ಜೋಗತಿಯಾಗಿ ದೀಕ್ಷೆ ತೆಗೆದುಕೊಂಡು ಎರಡೂವರೆ ದಶಕಗಳಿಂದಲೂ ಅಪರೂಪದ ಜೋಗತಿ ಕಲೆಯಲ್ಲಿ ತೊಡಗಿಸಿಕೊಂಡಿರುವವರು. ಇದರ ಜೊತೆಗೆ ನಾಟಕ, ಜಾನಪದ ಕಲಾ ಪ್ರಕಾರಗಳಲ್ಲಿಯೂ ಇವರ ಪಾಲ್ಗೊಳ್ಳುವಿಕೆ ಇದೆ. ಮಂಜುನಾಥನಾಗಿ ಹುಟ್ಟಿ, ಮಂಜಮ್ಮನಾಗಿ ಬದಲಾದ ಇವರು ಸದ್ಯ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಕರ್ನಾಟಕ ಸರಕಾರದಿಂದ ನೇಮಿಸಲ್ಪಟ್ಟಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಈ ಮಟ್ಟದ ಸ್ಥಾನವನ್ನು ಅಲಂಕರಿಸಿದಂತಾಗಿದೆ.

ಈ ದೇಶದಲ್ಲಿ ಅತಿಥಿಗೆ ಟೀ ಕೊಟ್ಟರೆ 'ಹೊರಡಿ' ಎಂದರ್ಥ!

ಹೊಟ್ಟೆಪಾಡಿಗಾಗಿ ಸಂತೆ, ಜಾತ್ರೆಗಳಲ್ಲಿ ಮಾಡುತ್ತಿದ್ದ ಜೋಗತಿ ಕಲೆಯ ಬಗ್ಗೆ ಇವರಿಗೆ ಇರುವ ಪ್ರೀತಿಯೇ ಇಂದು ಇವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಓದಿದ್ದು ಹತ್ತನೇ ತರಗತಿಯಾದರೂ 2006 ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2008 ಜಾನಪದ ಲೋಕ ಪ್ರಶಸ್ತಿ, 2010 ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2012 ಶ್ರೀ ತಾಯಮ್ಮ ಮಲ್ಲಯ್ಯ ದತ್ತಿನಿಧಿ ಪ್ರಶಸ್ತಿ ಸೇರಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Follow Us:
Download App:
  • android
  • ios