ಲಕ್ಸುರಿ ಬ್ಯೂಟಿ ಗಿಫ್ಟ್ ಅನ್ನು ಹೆಂಡತಿಯನ್ನು ಬಿಟ್ಟು ಸಹೋದ್ಯೋಗಿಗೆ ಕೊಟ್ಟ ವಿವಾಹಿತ ಪುರುಷನ ನಡೆ ಇಂಟರ್ನೆಟ್‌ನಲ್ಲಿ ತಲ್ಲಣ ಮೂಡಿಸಿದೆ. ಪತ್ನಿಯು ಇದನ್ನು ಗೌರವದ ಕೊರತೆ ಎಂದರೆ, ಪತಿ ಇದನ್ನು ಸಾಮಾನ್ಯ ಸೌಜನ್ಯ ಎಂದಿದ್ದಾನೆ. ನೆಟ್ಟಿಗರು ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಸುತ್ತಿದ್ದಾರೆ.

ಐಷಾರಾಮಿ YSL (Yves Saint Laurent) ಸ್ಕಿನ್ ಕೇರ್ ಮತ್ತು ಮೇಕಪ್ ಹ್ಯಾಂಪರ್ ಗಿಫ್ಟ್ ವಿಷಯವೊಂದು ಇಂಟರ್ನೆಟ್‌ನಲ್ಲಿ ದಂಪತಿಗಳ ಸಂಬಂಧ, ಆಫೀಸ್ ಮಿತಿಗಳು ಹಾಗೂ "ವರ್ಕ್ ಸ್ಪೌಸ್" (Colleagues) ಎಂಬ ಪರಿಕಲ್ಪನೆಯ ಕುರಿತು ಭಾರಿ ದೊಡ್ಡ ವಿವಾದವನ್ನು ಸೃಷ್ಟಿಸಿದೆ.

ಘಟನೆಯ ವಿವರ:

ಎಕ್ಸ್ (ಟ್ವಿಟರ್) ಖಾತೆಯಲ್ಲಿ 'HMG' (@Haleemarh_Gumel) ಎಂಬ ಮಹಿಳೆ ಹಂಚಿಕೊಂಡ ಕಥೆ ಈ ಚರ್ಚೆಗೆ ನಾಂದಿ ಹಾಡಿದೆ. ಆಕೆಯ ಪತಿ ತಾನು ಕೆಲಸ ಮಾಡುವ ಕಂಪನಿಯ ಅಧಿಕೃತ ಲಂಚ್ ಪಾರ್ಟಿಯಲ್ಲಿ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಆದ YSL ಬ್ಯೂಟಿ ಹ್ಯಾಂಪರ್ ಅನ್ನು ಉಡುಗೊರೆಯಾಗಿ ಗೆದ್ದಿದ್ದನು. ಆದರೆ, ಆತ ಅದನ್ನು ಮನೆಗೆ ತಂದು ಹೆಂಡತಿಗೆ ನೀಡುವ ಬದಲು, ಆಫೀಸ್‌ನಲ್ಲೇ ತನ್ನ ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಉಡುಗೊರೆಯಾಗಿ ನೀಡಿದ್ದಾನೆ. ಅಷ್ಟೇ ಅಲ್ಲದೆ, ಕಂಪನಿಯು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪತಿ ಆ ಮಹಿಳೆಗೆ ಗಿಫ್ಟ್ ಕೊಡುತ್ತಿರುವ ಫೋಟೋವನ್ನು ಹಾಕಿ, ಆತನ 'ಉದಾರ ಗುಣ'ವನ್ನು ಶ್ಲಾಘಿಸಿದೆ.

"ನನ್ನ ಅಸ್ತಿತ್ವವೇ ಇಲ್ಲದಂತಾಯಿತು" ಎಂದು ಕಣ್ಣೀರಿಟ್ಟ ಪತ್ನಿ:

ಈ ಫೋಟೋ ನೋಡಿದ ಪತ್ನಿ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. "ನಾನು ಮನೆಯಲ್ಲಿ ಮಗುವನ್ನು ನೋಡಿಕೊಳ್ಳುತ್ತಾ, ಮನೆ ಸ್ವಚ್ಛಗೊಳಿಸಿ ಆತನಿಗಾಗಿ ಅಡುಗೆ ಮಾಡುತ್ತಾ ಕಾಯುತ್ತಿದ್ದೆ. ಆದರೆ ಆತ ಇನ್ನೊಬ್ಬ ಮಹಿಳೆಯನ್ನು ಸಂತೋಷಪಡಿಸಿ ಸಾರ್ವಜನಿಕವಾಗಿ ಪ್ರಶಂಸೆ ಪಡೆಯುತ್ತಿದ್ದಾನೆ. ಆ ಕ್ಷಣದಲ್ಲಿ ಅವನ ಮನಸ್ಸಿನಲ್ಲಿ ನನ್ನ ನೆನಪೇ ಬರಲಿಲ್ಲವೇ? ನನ್ನ ಅಸ್ತಿತ್ವವೇ ಅಳಿಸಿಹೋದಂತೆ ಅನಿಸಿ ಉಸಿರುಗಟ್ಟಿದಂತಾಯಿತು" ಎಂದು ಆಕೆ ಬರೆದುಕೊಂಡಿದ್ದಾರೆ.

View post on Instagram

ಗಂಡನ ಸಮರ್ಥನೆ ಮತ್ತು ನೆಟ್ಟಿಗರ ಕಾಮೆಂಟ್‌ಗಳು:

ಈ ಬಗ್ಗೆ ಹೆಂಡತಿ ಪ್ರಶ್ನಿಸಿದಾಗ, ಪತಿ ಅದನ್ನು "ನಿನ್ನ ಹುಚ್ಚುತನ ಮತ್ತು ನಾಟಕ" ಎಂದು ತಳ್ಳಿಹಾಕಿದ್ದಾನೆ. "ಒಬ್ಬ ಪುರುಷನಾಗಿ ಮೇಕಪ್ ಬಾಕ್ಸ್ ಅನ್ನು ಕಚೇರಿಯಲ್ಲಿ ಇಟ್ಟುಕೊಳ್ಳುವುದು ಮುಜುಗರ ತರುತ್ತಿತ್ತು, ಆದ್ದರಿಂದ ಸಹೋದ್ಯೋಗಿಗೆ ಕೊಟ್ಟೆ" ಎಂದು ಆತ ಸಮರ್ಥಿಸಿಕೊಂಡಿದ್ದಾನೆ. ಆದರೆ ಪತ್ನಿ, "ಇದು ಕೇವಲ ಅಸೂಯೆಯಲ್ಲ, ವಿಶ್ವಾಸದ್ರೋಹ" ಎಂದಿದ್ದಾರೆ.

View post on Instagram

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಒಂದು ವರ್ಗದ ಜನರು, "ವಿವಾಹಿತ ಪುರುಷನಿಗೆ ಯಾವುದೇ ಸಂಬಂಧವಿಲ್ಲದ ಮಹಿಳೆಗೆ ಇಂತಹ ವೈಯಕ್ತಿಕ ಲಕ್ಸುರಿ ಗಿಫ್ಟ್ ಕೊಡುವ ಹಕ್ಕಿಲ್ಲ, ಅದರಲ್ಲಿ ಪ್ರೀತಿಗಿಂತ ಹೆಂಡತಿಯ ಕಡೆಗಣನೆ ಎದ್ದು ಕಾಣುತ್ತಿದೆ" ಎಂದು ಪತ್ನಿಯ ಪರ ನಿಂತಿದ್ದಾರೆ. ಇನ್ನೊಂದು ವರ್ಗದ ಜನರು, "ಆತ ಕೇವಲ ವೃತ್ತಿಪರ ವಾತಾವರಣದಲ್ಲಿ ಸೌಜನ್ಯದಿಂದ ವರ್ತಿಸಿದ್ದಾನೆ, ಇದನ್ನು ಅತಿಯಾಗಿ ವಿಶ್ಲೇಷಿಸಲಾಗುತ್ತಿದೆ" ಎಂದು ಪತಿಯನ್ನು ಬೆಂಬಲಿಸಿದ್ದಾರೆ.

Scroll to load tweet…