Asianet Suvarna News Asianet Suvarna News

ಪತ್ರಕರ್ತರಿಗೆ ಬಯ್ಯುತ್ತಾ, ಸಿಕ್ಕ ಸಿಕ್ಕ ಮೆಸೇಜ್‌ ಫಾರ್ವರ್ಡ್ ಮಾಡೋ ಮುನ್ನ...

ಪ್ರತಿಯೊಬ್ಬರ ಕೈಯಲ್ಲೂ ಈಗ ಸ್ಮಾರ್ಟ್‌ಫೋನ್. ಕೈಗೆಟುಕುವ ದರದಲ್ಲಿ ಇಂಟರ್‌ನೆಟ್. ಸದಾ ಅನ್‌ಲೈನ್‌ನಲ್ಲಿರುತ್ತಾನೆ. ಹಾಗಂತ ಆತ ಫುಲ್ ಫ್ರೀ ಇದಾದನ ಅಂತ ಅರ್ಥವಲ್ಲ. ಇದು ಆತನ ಉದ್ಯೋಗದ ಭಾಗವಾಗಿಯೂ ಇರಬಹುದು. ಆದರೂ, ಗ್ರಹಸಲಾಗದ ಮನಸ್ಸುಗಳಿಗೆ ತಲುಪದೇ ಹೋಗುವ ಸಂವಹನದ ಅಂತರ ಮಾತ್ರ ಹೆಚ್ಚುತ್ತಲೇ ಇದೆ....
Human psychology in ear of internet and busy with mobile
Author
Bengaluru, First Published Apr 16, 2020, 3:43 PM IST
ಹೆಚ್ಚು ಕಮ್ಮಿ ಸುಮಾರು ಒಂದು ದಶಕದಿಂದ ನಾವು ಸ್ಮಾರ್ಟ್ ಫೋನ್ ಮತ್ತು ಅದರೊಂದಿಗಿನ ಅಂತರ್ಜಾಲ ಸಂಪರ್ಕದ ಹೆಚ್ಚು ನಿಕಟ ನಂಟು ಹೊಂದಿದ್ದೇವೆ. ಆದರೂ ಇಂದಿಗೂ ನಮ್ಮೊಳಗಿರುವ ಗೊಂದಲವೆಂದರೆ ONLINE ಎಂಬ ಸ್ಟೇಟಸ್ ಕಾಣಿಸುತ್ತಿರುವ ವ್ಯಕ್ತಿ ಬಿಡುವಾಗಿದ್ದಾನೆ, ONLINE ಅಂದರೆ ಆತ ನಿರುಮ್ಮಳವಾಗಿ ಕುಳಿತಿದ್ದಾನೆ, ONLINE ಎಂದರೆ ಸಂದೇಶಗಳಿಗೆ ಕಾಯುತ್ತಾ ಇದ್ದಾನೆ, ONLINE ಇದ್ದರೆ ಎಚ್ಚರವಾಗಿದ್ದಾನೆ ಅಂತ ಕಲ್ಪಿಸಿಕೊಳ್ಳುವುದು. 

ಯಾರಿಗೆ ಗೊತ್ತು ಆಗಷ್ಟೇ ಮೃತಪಟ್ಟ ವ್ಯಕ್ತಿಯ ಮೊಬೈಲು ಕೂಡಾ ಅಂತ್ಯಕಾಲಕ್ಕೆ ನೆಟ್ ಸಂಪಕ್ಕಕ್ಕೆ ತೆರೆದುಕೊಂಡಿದ್ದರೆ ಆನ್ ಲೈನ್ ಎಂದೇ ಸ್ಟೇಟಸ್ ತೋರಿಸುತ್ತದೆ. ಅದು ಮೊಬೈಲ್ ತಪ್ಪಲ್ಲ, ಗ್ರಹಿಸಲಾಗದ ಮನಸ್ಸುಗಳಿಗೆ ತಲುಪದೇ ಹೋಗುವ ಸಂವಹನದ ಅಂತರ. 

ಸತ್ತ ನಿನ್ನೆಯ ಬಳಿಕೆ, ಕಾಣದ ನಾಳೆಯ ಬಗ್ಗೆ

ONLINE ಎಂದರೆ ಮೊಬೈಲ್ ಸಕ್ರಿಯವಾಗಿದೆ, ಆ ಮೊಬೈಲಿಗೆ ಇಂಟರ್ ನೆಟ್ ಸಂಪರ್ಕ ಇದೆ, ಹಾಗೂಈ ಕ್ಷಣಕ್ಕೆ ಸಂಪರ್ಕ ಜಾಗೃತವಾಗಿದೆ ಎಂದಷ್ಟೇ ಅರ್ಥ. ಹೊರತು ಮೊಬೈಲ್ ನ ಮಾಲೀಕ ಮೊಬೈಲನ್ನು ಕೈಯ್ಯಲ್ಲೇ ಹಿಡಿದುಕೊಂಡು ಕುಳಿತಿದ್ದಾನೆ, ಚಾಟ್ ಮಾಡುತ್ತಿದ್ದಾನೆ, ಇನ್ನೂ ನಿದ್ರೆ ಮಾಡಿಲ್ಲ (ತುಂಬ ಮಂದಿ ರಾತ್ರಿ ಮಲಗುವಾಗಲೂ ನೆಟ್ ಆಫ್ ಮಾಡುವುದಿಲ್ಲ ಈಗೀಗ) ಆತನ ಕೆಲಸಗಳೆಲ್ಲ ಮುಗಿದಿವೆ ಎಂದೂ ಅರ್ಥ ಅಲ್ಲ. ತುಂಬ ತುಂಬ ಮಂದಿ ಈ ಸರಳ ವ್ಯವಸ್ಥೆಯನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಇದಕ್ಕೆ ಕಾರಣ... ಮೊಬೈಲು, ಇಂಟರ್ ನೆಟ್ಟು ಮತ್ತು ಆನ್ ಲೈನ್ ಜಗತ್ತು ಡಿಪಿ, ಸ್ಟೇಟಸ್ಸು, ವಾಲು, ಫೋಟೋಗಳನ್ನು ತೋರಿಸುತ್ತದೆಯೇ ವಿನಹ ವ್ಯಕ್ತಿಯ ಮನಸ್ಥಿತಿ, ಪರಿಸ್ಥಿತಿ ಅಥವಾ ವಸ್ತುಸ್ಥಿತಿಯನ್ನು ಕಣ್ಣಾರೆ ತೋರಿಸುವುದಿಲ್ಲ (ವಿಡಿಯೋ ಕಾಲ್ ಮಾಡದ ಹೊರತು). ಆದ ಕಾರಣ ಯಂತ್ರವೇ ಆಗಿರುವ ಈ ಮೊಬೈಲಿನ ಡಿಪಿಯಲ್ಲಿ ಕಾಣಿಸುವ ನಗು ನಗುತ್ತಿರುವ ಫೋಟೋ, ಕೆಲವೊಮ್ಮೆ ಅರ್ಥವೇ ಆಗದ ಸ್ಟೇಟಸ್ಸುಗಳು, ಕಾಲ್ ಸ್ವೀಕರಿಸಲೂ ಪುರುಸೊತ್ತಿಲ್ಲದ ವ್ಯಕ್ತಿ ಆಗಾಗ ಸ್ಟೇಟಸ್ ಅಪ್ಡೇಟ್ ಮಾಡುವ ಜಾದೂ... ಗ್ರೂಪುಗಳಲ್ಲಿ ಆಕ್ಟಿವ್ ಆಗಿದ್ದರೂ ವೈಯಕ್ತಿಕ ಸಂದೇಶಗಳ ಕಡೆಗಣನೆ... ಇಂತಹ ಚಿತ್ರವಿಚಿತ್ರ ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳಲಾಗದವರು ಆನ್ ಲೈನ್ ಎಂಬ ಸ್ಥಿತಿಯನ್ನೇ ಅಸ್ತಿತ್ವದ ಸಂಕೇತವಾಗಿ ಪರಿಗಣಿಸುತ್ತಿದ್ದಾರೆ, ಈಗಲೂ ಪರಿಗಣಿಸುತ್ತಾರೆ. 

ಲಾಸ್ಟ್ ಸೀನ್ ಸಮಯದ ನಂತರ ಮೊಬೈಲ್ ಬಳಕೆದಾರ ಮಲಗಿದ್ದಾನೆ ಎಂದೋ, ಮೂರು ನಾಲ್ಕು ದಿನ ಆನ್ ಲೈನ್ ಇಲ್ಲದಿದ್ದರೆ ವ್ಯಕ್ತಿ ಸತ್ತೇ ಹೋಗಿದ್ದಾನೆ ಎಂದೋ... ಚಿತ್ರ ವಿಚಿತ್ರ ಸ್ಟೇಟಸ್ ಹಾಕುವವರು ಇನ್ನು ಸ್ವಲ್ಪ ಹೊತ್ತಿಗೆ ಆತ್ಮಹತ್ಯೆಯನ್ನೇ ಮಾಡಿಕೊಂಡಾರೇ ಎಂದೂ ಮನೆಯಲ್ಲೇ ಕುಳಿತು ಊಹಿಸುವವರೂ ಇದ್ದಾರೆ. ಆನ್ ಲೈನ್ ಇರುವುದು, ಇರಬೇಕಾದ್ದು ಈಗೀಗ ವೈಯಕ್ತಿಕ ಅಥವಾ ವೃತ್ತಿಬದುಕಿನ ಅನಿವಾರ್ಯತೆ ಎಂಬುದು ಹಲವರಿಗೆ ಇನ್ನೂ ಅರ್ಥ ಆಗಿಲ್ಲ. ಸರಳವಾಗಿ ವಿವರಿಸಿದರೂ ಅರ್ಥ ಆಗುವುದಿಲ್ಲ. ಕಾರಣ ಗೊತ್ತಿಲ್ಲ.... ಇನ್ನೊಂದು ತಕರಾರು ಗ್ರೂಪುಗಳಲ್ಲಿ ಮೆಸೇಜುಗಳನ್ನು ಫಾರ್ವರ್ಡ್ ಮಾಡುವ ಬಗ್ಗೆ....

ಕೊರೋನಾ ಆತಂಕದ ನಡುವೆ ಸಂಭೋಗದ ಭಯಕ್ಕೆ ಉತ್ತರ

ಎಷ್ಟೇ ಸುಶಿಕ್ಷತರಿರಲಿ, ಎಷ್ಟೇ ಉನ್ನತ ಹುದ್ದೆಗಳಲ್ಲಿ ಇರುವವರಿರಲಿ, ಎಷ್ಟೇ ತಿಳಿವಳಿಕೆ ಇರುವವರೆಂದು ನೀವು ಭಾವಿಸಿರುತ್ತೀರೋ ಅವರೆಲ್ಲ ಈ ವಿಷಯದಲ್ಲಿ ಅವಿಧೇಯತೆ ತೋರುವುದನ್ನು ಕಂಡು ನಾನು ಆಶ್ಚರ್ಯ ಪಟ್ಟಿದ್ದೇನೆ. 

ಸಾಮಾಜಿಕ ಜಾಲತಾಣವೆಂದರೆ ಸಂದೇಶಗಳ ಮಹಾ ಪ್ರವಾಹ, ಎಲ್ಲಿಂದಲೋ, ಯಾರು ಯಾರೋ ಬರೆದ, ಹೆಸರಿರುವ, ಹೆಸರಿಲ್ಲದ, ಮಾಹಿತಿ ಕೊಡುವ, ದಾರಿ ತಪ್ಪಿಸುವ, ನಂಬಿಸುವ, ನಂಬುವಂತೆ ಮಾಡುವ ಸಾವಿರ ಸಾವಿರ ಮೆಸೇಜುಗಳು ನಿರಾಯಾಸವಾಗಿ ಗ್ರೂಪುಗಳಲ್ಲಿ ಅಥವಾ ವೈಯಕ್ತಿವಾಗಿ ನಮಗೆ ಬಂದು ತಲಪುತ್ತವೆ. ಬಹಳಷ್ಟು ಮಂದಿ ಇಂತಹ ಮೆಸೇಜು ತಮ್ಮ ಇನ್ ಬಾಕ್ಸಿಗೆ ಬಂದು ಬಿದ್ದ ಕೂಡಲೇ ಪುಳಕಿತರಾಗುತ್ತಾರೆ. ಮೈಲುದ್ದದ ಮೆಸೇಜಿನ ಶೀರ್ಷಿಕೆ ಮಾತ್ರ ನೋಡುತ್ತಾರೆ, ಉದಾಹರಣೆಗೆ-ಈಗಿನ ಟ್ರೆಂಡ್ ಪ್ರಕಾರ ಕೊರೋನಾ ಅಂತ ಕಂಡರೆ ಸಾಕು ತಾವೆಷ್ಟು ಗ್ರೂಪುಗಳಲ್ಲಿದ್ದೇವೆಯೋ ಅಷ್ಟೂ ಗ್ರೂಪುಗಳಿಗೆ ಫಾರ್ವರ್ಡ್ ಮಾಡುತ್ತಾರೆ. ಮನಸ್ಸಿನಲ್ಲೇ ಬೀಗುತ್ತಾರೆ, ನಾನು ಮೊದಲ ಬಾರಿಗೆ ಜಗತ್ತಿಗೆ ಈ ಸಂದೇಶ ಕಳುಪಿಸಿದೆ, ಕೊರೋನಾ ನಿರ್ಮೂಲನೆಗೆ ನನ್ನ ಕೈಲಾದ ಸಹಾಯ ಮಾಡಿದೆ, ಈ ಸಂದೇಶವನ್ನು ಮುಂದೂಡುವ ಮೂಲಕ ಜನಜಾಗೃತಿ ಮಾಡಿದೆ ಅಂತ... 

ಇಂಥವರ ಪೈಕಿ ಹಲವರು ಸಮೂಹ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಕೊಡುವ ಧಾವಂತದಲ್ಲಿ ಬಾಯಿಗೆ ಬಂದದ್ದೆಲ್ಲ ಕೊಡ್ತವೆ, ಅರಚ್ತಾರೆ, ಟಿಆರ್ ಪಿ ಬರ್ತದೆ ಅಂತ ಜನರನ್ನು ಹೆದರಿಸ್ತಾರೆ, ಪ್ರಚೋದಿಸ್ತಾರೆ, ಅವಸರದಲ್ಲಿ ಏನಕ್ಕೇನೋ ಮಾತನಾಡ್ತಾರೆ ಅಂತ ತೀರ್ಪು ನೀಡುತ್ತಿರುತ್ತಾರೆ. ಸ್ವಲ್ಪ ಸಹನೆಯಿಂದ ಯೋಚಿಸಿ, ನಿಮ್ಮಲ್ಲಿ ಎಷ್ಟು ಮಂದಿ ನೀವು ಫಾರ್ವರ್ಡ್ ಮಾಡುವ ಮೆಸೇಜಿನ ಒಳಗೇನಿದೆ, ಅದು ಸತ್ಯವ ಅಂತ ಪರೀಕ್ಷೆ ಮಾಡ್ತೀರಿ? ನಿಮ್ಮಲ್ಲಿ ಎಷ್ಟು ಮಂದಿ ಯಾವ ಗ್ರೂಪಿಗೆ ಯಾವ ಮೆಸೇಜು ಸೂಕ್ತ ಅಂತ ಸ್ವಲ್ಪ ಸಹನೆಯಿಂದ ಯೋಚಿಸಿ ಫಾರ್ವರ್ಡ್ ಮಾಡ್ತೀರಿ? ನಿಮ್ಮಲ್ಲಿ ಎಷ್ಟು ಮಂದಿ ಇಂತಹ ಖಚಿತವಲ್ಲದ ಮೆಸೇಜುಗಳನ್ನು ನಾನು ಅವಸರದಲ್ಲಿ ಫಾರ್ವರ್ಡ್ ಮಾಡಿದರೆ ಇನ್ನಷ್ಟು ಮಂದಿ ನನ್ನ ಹಾಗೆ ಮತ್ತಷ್ಟು ಗ್ರೂಪುಗಳಿಗೆ ಫಾರ್ವರ್ಡ್ ಮಾಡಿದೆರ ಪರಿಣಾಮ ಏನಾಗಬಹುದು ಅಂತ ಯೋಚಿಸ್ತೀರಿ?

ಇನ್ನು ಮುಂದೆ ಜಗತ್ತಿನಲ್ಲಿ ಶೇಕ್ ಹ್ಯಾಂಡ್ ಇರೋಲ್ವಾ?

ಸಮೂಹ ಮಾಧ್ಯಮಗಳಿಗೆ (ಟಿ.ವಿ., ಪೇಪರ್ ಸಹಿತ) ಸುದ್ದಿಗಳಿಗೆ ಮೂಲ ಅಂತ ಇರುತ್ತದೆ, ವರದಿಗಾರರು, ಉಪ ಸಂಪಾದಕರು ಇರುತ್ತಾರೆ, ಸರ್ಕಾರಿ ಇಲಾಖೆಗಳು ಅಧಿಕೃತವಾಗಿ ಸುದ್ದಿ ಸಂಸ್ಥೆಗಳಿಗೆ ಸುದ್ದಿಗಳನ್ನು ನೀಡುತ್ತವೆ, ಸಂದರ್ಶನಗಳನ್ನು ನೀಡುತ್ತಾರೆ, ಪತ್ರಕರ್ತರಿಗೆ ಅವರದೇ ಆದ ಮೂಲಗಳಿರುತ್ತವೆ ಸುದ್ದಿಗಳನ್ನು ಸಂಗ್ರಹಿಸಲು ಹಾಗೂ ಪತ್ರಕರ್ತರಿಗೆ ಅವರದ್ದೇ ಆದ ವಿಧಾನಗಳಿರುತ್ತವೆ ಅದನ್ನು ಜನರಿಗೆ ಅರ್ಥ ಆಗುವಹಾಗೆ ನೀಡಲು. ಟಿಆರ್ ಪಿ, ಬ್ರೇಕಿಂಗ್ ನ್ಯೂಸ್ ಇವೆಲ್ಲ ಪತ್ರಿಕೋದ್ಯಮದ ಭಾಗಗಳೇ ಹೊರತು ಅದಕ್ಕೋಸ್ಕರವೇ 24 ಗಂಟೆ ಪತ್ರಕರ್ತರು ಪರಿತಪಿಸುತ್ತಾ ಇರುವುದಿಲ್ಲ. ಅದು ವೃತ್ತಿ ಬದುಕಿನ ಒಂದು ಉದ್ದೇಶ ಅಷ್ಟೇ... ಆದರೆ, ನಿಮಗೆ ಹೆಸರು ವಿಳಾಸವಿಲ್ಲದೆ ಹರಿದು ಬರುವ ಸುಳ್ಳು, ವದಂತಿ ರೂಪದ ಮೆಸೇಜುಗಳನ್ನು ಫಾರ್ವರ್ಡ್ ಮಾಡುವಾಗ ನಿಮಗ್ಯಾಕೆ ಬ್ರೇಕಿಂಗ್ ನ್ಯೂಸ್ ಗಳನ್ನು ಬೈಯ್ಯುವ ನಾವು ಅಂಥಹದ್ದೇ ಧಾವಂತದಲ್ಲಿ ವೈಯಕ್ತಿಕ ಮಟ್ಟದಲ್ಲಿ ಜನರನ್ನು ತಪ್ಪು ದಾರಿಗೆ ತಳ್ಳುವಂತೆ ಫಾರ್ವರ್ಡ್ ಮಾಡುತ್ತಿದ್ದೇನೆ ಅಂತ ಅನ್ನಿಸುವುದಿಲ್ಲ?

ಬಹುತೇಕರು ಈ ಪ್ರಶ್ನೆಗೆ ಉತ್ತರವನ್ನೇ ಕೊಡುವುದಿಲ್ಲ. ಫಾರ್ವರ್ಡ್ ಮೆಸೇಜು ಮಾಡುವುದನ್ನು ಜನ್ಮಸಿದ್ಧ ಹಕ್ಕು ಅಂತ ಅಂದುಕೊಂಡ ಬಹುತೇಕರಿಗೆ ಈ ಪ್ರಶ್ನೆ ಕೇಳಿದರೆ ಸಿಟ್ಟು ಬರುತ್ತದೆ, ಯಾಕೆ ಕಂಡ ಕಂಡಲ್ಲಿ ಫಾರ್ವರ್ಡ್ ಮಾಡಬಾರದು ಎಂದು ವಿವರಿಸಹೊರಟರೆ ಕೇಳಿಸಿಕೊಳ್ಳುವ ಸಹನೆಯೂ ಇರುವುದಿಲ್ಲ. ನೀವು ವೈಯಕ್ತಿಕ ಸ್ವರೂಪದಲ್ಲಿ ಖಚಿತವಾಗಿ ಸುದ್ದಿಯನ್ನೋ, ಜೋಕನ್ನೋ ಅಥವಾ ತಪ್ಪು ದಾರಿಗೆಳೆಯದ ಯಾವುದನ್ನು ಬೇಕಾದರೆ ಫಾರ್ವರ್ಡ್ ಮಾಡಿ. ಆದರೆ ಗ್ರೂಪುಗಳಲ್ಲಿ, ಆಥವಾ ಸಾಮೂಹಿಕವಾಗಿ ಕಂಡ ಕಂಡ ಮೆಸೇಜುಗಳನ್ನು ಹಿಂದೆ ಮುಂದೆ ನೋಡದೆ ಫಾರ್ವರ್ಡ್ ಮಾಡಬಾರದು.... 

ಸಂಗಾತಿಯೊಂದಿಗೆ ಸಂಬಂಧ ಹೀಗಿರಲಿ

ಯಾಕೆಂದರೆ?:
1) ಒಂದು ವೇಳೆ ನಾವು ಫಾರ್ವರ್ಡ್ ಮಾಡುವ ಮೆಸೇಜು ಸುಳ್ಳು ಸುದ್ದಿಗಳನ್ನು ಹೊಂದಿದ್ದರೆ ಅದು ಇನ್ನಷ್ಟು ಮಂದಿಯನ್ನು ಗೊಂದಲಕ್ಕೆ ದೂಡುವುದಲ್ಲದೆ, ಸಮೂಹ ಸನ್ನಿಗೊಳಗಾಗುವ ಅಪಾಯವಿದೆ. 

2) ಒಬ್ಬ ವ್ಯಕ್ತಿ ಖಂಡಿತಾ ಒಂದೇ ವಾಟ್ಸಪ್ ಗ್ರೂಪಿನಲ್ಲಿರುವುದಲ್ಲ, ಹತ್ತಾರು ಗ್ರೂಪುಗಳಲ್ಲಿ ಇರುತ್ತಾರೆ. ಪ್ರತಿ ಗ್ರೂಪಿಗೂ ಒಂದೊಂದು ಉದ್ದೇಶವಿರುತ್ತದ. ಪ್ರತಿ ಗ್ರೂಪಿನಲ್ಲೂ ನೂರೋ, ಇನ್ನೋರೋ ಅಥವಾ ಭರ್ತಿ ಸದಸ್ಯರಿರುತ್ತಾರೆ. ಹೀಗಿರುವಾಗ ಪ್ರತಿ ಮೆಸೇಜನ್ನು ಪ್ರತಿ ಗ್ರೂಪಿಗೂ ಫಾರ್ವರ್ಡ್ ಮಾಡಬೇಕು ಎಂಬ ಹಠ ಯಾಕೆ. ಒಂದು ಗ್ರೂಪಿನ ಉದ್ದೇಶಗಳಲ್ಲಿ ನಮ್ಮ ಗ್ರೂಪಿಗೆ ಯಾವ ಮೆಸೇಜನ್ನೂ ಫಾರ್ವರ್ಡ್ ಮಾಡಬಹುದು, ಯಾವುದೇ ನಿರ್ಬಂಧ ಇಲ್ಲ ಎಂದು ತಿಳಿಸಿದ್ದಲ್ಲಿ ಸಂತೋಷದಿಂದ ಫಾರ್ವರ್ಡ್ ಮಾಡಿ, ನಿಮ್ಮ ಮನೆಯ ಗ್ರೂಪೋ, ಫ್ಯಾಮಿಲಿ ಗ್ರೂಪೋ ಅಥವಾ ಸಂತೋಷಕ್ಕೋಸ್ಕರ ಮಾಡಿದ ಸಮಾನಮನಸ್ಕ ಸ್ನೇಹಿತರ ಗ್ರೂಪುಗಳಿಗೆ ಏನು ಬೇಕಾದರೂ ಫಾರ್ವರ್ಡ್ ಮಾಡಿ. ಆದರೆ ವಿಷಯ, ಉದ್ದೇಶ, ಗುರಿಗಳನ್ನು ಮೀರಿ ಗ್ರೂಪಿನ ಎಲ್ಲರೂ ಎಲ್ಲವನ್ನೂ ಫಾರ್ವರ್ಡ್ ಮಾಡುವುದೇ ಕೆಲಸವಾದರೆ ಆ ಗ್ರೂಪಿಗೆ ಪ್ರತ್ಯೇಕತೆ ಏನಿರುತ್ತದೆ. ಅಡ್ಮಿನ್ ಗಳು ಹಾಕುವ ಮುಖ್ಯ ಸಂದೇಶಗಳ ಗತಿ ಏನು.... ಪ್ರತಿ ಗ್ರೂಪುಗಳಿಗೂ ಕೊರೋನಾ ಬಗ್ಗೆ ಸಾವಿರ ಸಾವಿರ ಮೆಸೇಜುಗಳನ್ನು ದೂಡುವ ಮೂಲಕ ನೀವು ಸಾಧಿಸುವುದೇನು.... ಎಷ್ಟು ಮಂದಿಗೆ ಅಷ್ಟುದ್ದದ ಮೆಸೇಜುಗಳನ್ನು ಓದುವ ಸಹನೆ ಇದೆ, ಸಮಯ ಇದೆ ಯಾವತ್ತಾದರೂ ಯೋಚಿಸಿದ್ದೀರ... ಯೋಚಿಸುವುದು ಬಿಡಿ... ಬೇಕಾಬಿಟ್ಟಿ ಫಾರ್ವರ್ಡ್ ಮಾಡಬೇಡಿ ಎಂದವನನ್ನೇ ಪ್ರತ್ಯೇಕ ಮಾಡಲಾಗುತ್ತದೆ ಹಾಗೂ ಆತನೊಬ್ಬ ಅವಿವೇಕಿ ಎಂಬತೆ ನೋಡಲಾಗುತ್ತದೆ. ಅದರ ಹೊರತೂ ಯಾರೂ ತಮ್ಮ ಪ್ರವೃತ್ತಿ ಬದಲಾಯಿಸಲು ತಯಾರಿಲ್ಲ. 

3) ಸುದ್ದಿಯ ಗ್ರೂಪು, ಮಾಹಿತಿಯ ಗ್ರೂಪು, ಜೋಕುಗಳ ಗ್ರೂಪು, ಕುಟುಂಬ ಗ್ರೂಪು, ಕಚೇರಿ ಗ್ರೂಪು, ಸಾಮಾಜಿಕ ಉದ್ದೇಶದ ಗ್ರೂಪು, ಕಲೆ ಸಂಸ್ಕೃತಿಯ ಗ್ರೂಪು, ರಾಜಕೀಯ ಪಕ್ಷಗಳ ಗ್ರೂಪು... ಹೀಗೆ ಬೇರೆ ಬೇರೆ ಉದ್ದೇಶಗಳಿಗೋಸ್ಕರ ಗ್ರೂಪುಗಳನ್ನು ಕಟ್ಟಿರುತ್ತಾರೆ. ಇವುಗಳ ಪೈಕಿ ಹಲವರು ಹಲವು ಗ್ರೂಪುಗಳಲ್ಲಿ ಇರುತ್ತಾರೆ. ಹಾಗಿರುವಾಗ ಪ್ರತಿ ಗ್ರೂಪುಗಳಿಗೂ ನೀವು ಹಠ ಕಟ್ಟಿ ಹಾಕಿದ ವಿಷಯವನ್ನೇ ಹಾಕಿದರೆ ಹೇಗಾಗಬಹುದು.... ಗ್ಯಾರೇಜಿನಲ್ಲಿ ವಾಹನ ರಿಪೇರಿ ಮಾಡುತ್ತಾರೆ, ಹೊಟೇಲಿನಲ್ಲಿ ಆಹಾರ ನೀಡುತ್ತಾರೆ, ಮೆಡಿಕಲ್ ನಲ್ಲಿ ಔಷಧ ಸಿಗುತ್ತದೆ, ಪುಸ್ತಕದಂಗಡಿಯಲ್ಲಿ ಪುಸ್ತಕ ಸಿಗುತ್ತದೆ. ಯಾವ ಅಂಗಡಿಯಲ್ಲಿ ಏನು ಸಿಗಬೇಕೋ ಅದೇ ಸಿಗಬೇಕು. ಅದರ ಹೊರತು ಎಲ್ಲಾ ಅಂಗಡಿಗಳಲ್ಲೂ ವಾಹನ ರಿಪೇರಿ ಮಾಡುತ್ತಾರೆಯೇ, ಊಟ ನೀಡುತ್ತಾರೆಯೇ, ಔಷಧ ನೀಡುತ್ತಾರೆಯೇ ಇಲ್ಲವಲ್ಲ. ವಾಟ್ಸಪ್ ಗ್ರೂಪುಗಳೂ ಹಾಗೆಯೇ ತಮ್ಮದೇ ಉದ್ದೇಶಗಳಿಗೆ ರೂಪುಗೊಂಡಿರುತ್ತವೆ. ಮತ್ಯಾಕೆ ನಿಮಗೆ ಕಂಡ ಕಂಡ ಗ್ರೂಪುಗಳಿಗೆಲ್ಲ ನನಗಿಷ್ಟದ ಮೆಸೇಜನ್ನೇ ಮುಂದೂಡಬೇಕೆಂಬ ಹಠ... ಇಷ್ಟು ಸರಳ ವಿಚಾರ ಯಾಕೆ ಅರ್ಥ ಆಗುವುದಿಲ್ಲ. 

4) ಕುಟುಂಬ, ಸಂಸ್ಥೆ, ಸ್ನೇಹಿತರ ಗ್ರೂಪಿನ ಹೊರತು ಇತರ ಎಲ್ಲಾ ಸಾಮಾಜಿಕ ಗ್ರೂಪುಗಳಲ್ಲಿ ಒಂದೇ ವಯೋಮಾನ, ಒಂದೇ ಮನಸ್ಥಿತಿಯ ಸದಸ್ಯರಿರುವುದಲ್ಲ. ಬೇರೆ ಬೇರೆ ವಯಸ್ಸಿನವರು, ಬೇರೆ ಬೇರೆ ವೃತ್ತಿಯಲ್ಲಿರುವವರು, ಬೇರೆ ಬೇರೆ ಮನಸ್ಥಿತಿಯವರೂ ಇರುತ್ತಾರೆ. ಹಾಗಿರುವಾಗ ಅವರಿಗೆಲ್ಲ ಅವರದ್ದೇ ಆದ ಒತ್ತಡ, ಮೂಡ್, ಸಮಯಾವಕಾಶ ಅಂತ ಇರುತ್ತದೆ. ಗ್ರೂಪಿನಲ್ಲಿ ಇರುವ ಅಷ್ಟೂ ಮಂದಿಯ ಭಾವನೆಗಳನ್ನು ಇತರರು ಗೌರವಿಸಬೇಕು. ನಾನೊಂದು ಮೆಸೇಜನ್ನು ಗ್ರೂಪಿನಲ್ಲಿ ಹಾಕಿದರೆ ಇತರರಿಗೆ ಆಗುವ ಪ್ರಯೋಜನ ಏನು. ಈ ಗ್ರೂಪಿಗೆ ಈ ಮಸೇಜು ಸೂಕ್ತವೇ, ಇದರಿಂದ ಇತರರಿಗೆ ತೊಂದರೆ ಆಗಬಹುದೇ ಎಂದು ವಿವೇಚಿಸುವ ಸೂಕ್ಷ್ಮತೆ ಬೇಕು. ಗ್ರೂಪಿನಲ್ಲಿ ಹಗುರವಾಗಿ ಮಾತನಾಡುವಾಗ, ವ್ಯಕ್ತಿಗಳ ಬಗ್ಗೆ, ಸಂಸ್ಥೆಗಳ ಬಗ್ಗೆ, ವೃತ್ತಿಗಳ ಬಗ್ಗೆ ಸಾಮಾನ್ಯೀಕರಿಸಿದ ಹೇಳಿಕೆಗಳನ್ನು ನೀಡುವಾಗ ಅದು ಇತರರ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಅರಿವು ಬೇಕು. ಅಡ್ಮಿನ್ ಗಳು ನಮ್ಮನ್ನು ಒಬ್ಬ ಜವಾಬ್ದಾರಿಯುತ ಸದಸ್ಯನಾಗಿ ಗ್ರೂಪಿಗೆ ಸೇರಿಸಿದ ಬಳಿಕ ಆ ಗೌರವವನ್ನು ಉಳಿಸಿಕೊಳ್ಳಬೇಕಾದ ಹೊಣೆಯೂ ನಮ್ಮ ಮೇಲೆ ಇರುತ್ತದೆ ಎಂಬುದನ್ನು ಮರೆಯಬಾರದು. 

ಆಫೀಸ್ ಪಾಲಿಟಿಕ್ಸೆ ಬೇಜಾರಾದ್ರೆ ಇದನ್ನೊಮ್ಮೆ ಓದಿ

 5) ಜಾಲತಾಣವೆಂಬುದು ಒಂದು ತಂತ್ರಜ್ಞಾನದ ವರ. ಸೆಕೆಂಡುಗಳಲ್ಲಿ ಹಲವರನ್ನು ತಲುಪಲಾಗುವ ವೇದಿಕೆ. ಅದರ ಸದುಪಯೋಗ ನಮ್ಮ ಕೈಲಿದೆ. ನಮ್ಮ ವಿವೇಚನೆಯಿಲ್ಲದೆ ವರ್ತನೆಯಿಂದಲೇ ಜಾಲತಾಣವೆಂದರೆ ಒಂದು ಒತ್ತಡದ ಸಂಗತಿಯಾಗಿ, ಮನಸ್ಸನ್ನು ಕೆರಳಿಸುವ ಜಾಗವಾಗಿ ಪರಿವರ್ತನೆಯಾಗುತ್ತಿದೆ. ವೈರಸುಗಳು ಕಾಡಿದರೆ ಚಿಕಿತ್ಸೆ ಪಡೆದು ಗುಣವಾಗಬಹುದೇನೋ... 

ಆದರೆ, ಸಾಮಾಜಿಕ ವೇದಿಕೆಗಳಲ್ಲಿ ನಮ್ಮ ವರ್ತನೆಯ ಕುರಿತಾಗಿ ಅಳವಡಿಸಬೇಕಾದ ಸ್ವಯಂ ನಿರ್ಬಂಧಗಳನ್ನು ನಾವೇ ಪಾಲಿಸದಿದ್ದರೆ, ಯಾರನ್ನೂ ಲೆಕ್ಕಿಸದೆ, ಶಿಷ್ಟಾಚಾರಗಳನ್ನು ಪಾಲಿಸದೆ ಜಾಲತಾಣಗಳಲ್ಲಿ ವರ್ತಿಸಿದರೆ ನಮ್ಮ ಕೈಲಿರುವ ಸೌಲಭ್ಯಗಳನ್ನು ಭ್ರಷ್ಟವಾಗಲು ನಾವೇ ಹೊಣೆಯಾಗುತ್ತೇವೆ.... ಇನ್ಯಾರನ್ನೂ ದೂರಿ ಪ್ರಯೋಜನವಿಲ್ಲ ಎಂಬುದು ವಿಷಾದದ ಸಂಗತಿ. 

 (ವಿ.ಸೂ.: ಯಾರಾದರೂ ಅಪ್ಪಿತಪ್ಪಿ ಈ ಬರಹವನ್ನು ಕೊನೆಯ ತನಕ ಓದಿದ್ದರೆ ಅಂಥವರ ಗಮನಕ್ಕೆ.. ಈ ಬರಹ ಯಾವುದೇ ವ್ಯಕ್ತಿ ಅಥವಾ ವ್ಯವಸ್ಥೆಯ ಕುರಿತಾಗಿ ಬರೆದದ್ದಲ್ಲ. ಇದು ನಾನು ಕೆಲವು ತಿಂಗಳುಗಳಿಂದ ಜಾಲತಾಣಗಳಲ್ಲಿ ಕಂಡು ಬಂದ ಬೆಳವಣಿಗೆಗಳ ಕುರಿತು ಬರೆದದ್ದು, ಇವೆಲ್ಲ ನಾನು ಕಂಡುಕೊಂಡ ವಿಚಾರಗಳು. ಯಾರನ್ನೂ ವೈಯಕ್ತಿಕವಾಗಿ ಉದ್ದೇಶಿಸಿ ಹೇಳಿಲ್ಲ. ಈ ಬರಹದ ಮೂಲಕ ಯಾವುದನ್ನೂ ಬದಲಾಯಿಸಲೂ, ಯಾರಿಗೂ ಕರೆ ನೀಡಲು ನಾನು ಹೊರಟಿಲ್ಲ. ನಾನೊಬ್ಬ ಚಿಂತಕನೂ ಅಲ್ಲ, ಸಮಾಜಸುಧಾರಕನೂ ಅಲ್ಲ. ಜಾಲತಾಣಗಳ ಶಿಷ್ಟಾಚಾರಗಳ ಬಗ್ಗೆ ಯಾರಿಗಾದರೂ ನಿರ್ಲಕ್ಷ್ಯವಿದ್ದರೆ ದಯವಿಟ್ಟು ಕ್ರೀಡಾ ಮನೋಭಾವದಿಂದ ಈ ಅಂಶಗಳನ್ನು ಗಮನಿಸಿ, ಬೃಹತ್ ಸಂವಹನ ವ್ಯವಸ್ಥೆಯೊಂದರ ಸದುಪಯೋಗಕ್ಕೆ ಎಲ್ಲರೂ ಕೈಜೋಡಿಸುವಂತಾಗಲಿ, ಆರೋಗ್ಯಪೂರ್ಣ ಸಮಾಜಕ್ಕೆ ನಾವೂ ಧ್ವನಿಗಳಾಗೋಣ ಎಂಬ ಕಳಕಳಿ ಹೊರತು ಮತ್ತಿನ್ನೇನೂ ಇಲ್ಲ) 

-ಕೊನೆವರೆಗೂ ಯಾರಾದರೂ ತಾಳ್ಮೆಯಿಂದ ಓದಿದ್ದರೆ ಅಂಥವರಿಗೆ ಧನ್ಯವಾದಗಳು. 

 -ಕೃಷ್ಣಮೋಹನ ತಲೆಂಗಳ 
Follow Us:
Download App:
  • android
  • ios