Asianet Suvarna News Asianet Suvarna News

ಪ್ರೀತಿ ಪಾತ್ರರು ಸತ್ತಾಗ, ಬದುಕಲ್ಲಿ ಮುಗುಳ್ನಗೆಯ ಮೊಳಕೆ ಒಡೆದಾಗ..

ಪ್ರೀತಿಪಾತ್ರರ, ತುಂಬಾ ಹಚ್ಚಿಕೊಂಡ ಸಂಬಂಧಿಗಳ ಸಾವು ಸಂಭವಿಸಿದಾಗ, ಇನ್ನೇನು ನಮ್ಮ ಬದುಕು ಮಗುಚಿ ಬಿದ್ದಿತು ಅಂದುಕೊಳ್ಳುತ್ತೇವೆ. ಅಲ್ಲಿಂದಲೇ ಹೊಸ ಬದುಕಿನ ಮೊಳಕೆ ಒಡೆಯುವುದು ನಿಮಗೆ ಗೊತ್ತೇ? ಇದು ಹ್ಯೂಮನ್‌ ಆಫ್‌ ಬಾಂಬೇ ಫೇಸ್‌ಬುಕ್‌ ಪುಟದಲ್ಲಿ ತಾಯಿಯೊಬ್ಬಳು ಹಂಚಿಕೊಂಡ ಆತ್ಮಕತೆ

 

How to move on in life when near and dear ones passed away
Author
Bengaluru, First Published Feb 15, 2020, 4:28 PM IST

ಅವಿನಾಶ್‌ ಮತ್ತು ನಾನು ತುಂಬಾ ಪ್ರೀತಿಸುತ್ತಿದ್ದೆವು. ಆತ ಎಲ್ಲ ಕೆಲಸಗಳಲ್ಲೂ ತುಂಬು ಹೃದಯದಿಂದ ನನಗೆ ನೆರವಾಗುತ್ತಿದ್ದ. ನನ್ನ ಯಶಸ್ಸಿನ ಹಿಂದೆ ಬೆಂಗಾವಲಾಗಿ ಆತ ನಿಂತಿದ್ದ. ಹಾಗೆಯೇ ನಾನೂ. ನೀನಿಲ್ಲದೆ ನನ್ನ ಬಾಳಲ್ಲಿ ಏನೂ ನಡೆಯದು ಹುಡುಗಿ ಎನ್ನುತ್ತಿದ್ದ ಆತ.

ಹಾಗೇ ಮದುವೆಯಾದೆವು. ದಾಂಪತ್ಯದ ಮಧುರ ಕ್ಷಣಗಳು ನಮ್ಮದಾದವು. ಮೂರು ವರ್ಷ ಕಳೆದ ಬಳಿಕ ಒಂದು ದಿನ ಇದ್ದಕ್ಕಿದ್ದಂತೆ ಗೈನಕಾಲಜಿಸ್ಟರನ್ನು ಭೇಟಿಯಾಗಬೇಕಾಗಿ ಬಂತು, ಅವರು ಹೇಳಿದರು- ನೀನು ತಾಯಿಯಾಗ್ತಿದ್ದೀಯಾ ಅಂತ. ಒಂದು ಕ್ಷಣ ಅವರು ಹೇಳಿದ್ದೇನು ಅಂತ ನನ್ನಲ್ಲಿ ಸಿಂಕ್‌ ಆಗಲೇ ಇಲ್ಲ. ಅರ್ಥವಾದ ಮರುಕ್ಷಣ ಆನಂದದ ಸೆಲೆಯೊಂದು ನಮ್ಮಿಬ್ಬರ ಮುಖದಲ್ಲಿ ಪುಟಿಯಿತು. ಮುಂದಿನ ದಿನಗಳು ಸ್ವರ್ಗಸಮಾನ ಅಂತ ನಾವು ಭಾವಿಸಿದೆವು.

ಆದರೆ ವಿಧಿ ಹೊಂಚು ಹಾಕುತ್ತಿತ್ತು. ಒಂದು ದಿನ, ಅವಿನಾಶ್‌ ಟೆನ್ನಿಸ್‌ ಆಡಲು ಹೋದವನು, ಅಂಗಳದಲ್ಲಿಯೇ ಮಗುಚಿಬಿದ್ದ. ಫ್ರೆಂಡ್ಸ್‌ ಓಡಿಬಂದು ಎತ್ತಿದರು, ಏನಾಯಿತು ಎಂದು ತಿಳಿಯುವ ಮೊದಲೇ ಪ್ರಾಣ ಹೋಗಿತ್ತು. ನನಗೆ ಕರೆ ಬಂತು, ಧಾವಿಸಿದೆ. ನೋಡಿದರೆ ಅವಿನಾಶ್‌ನ ದೇಹದಲ್ಲಿ ಜೀವ ಇರಲಿಲ್ಲ. ನಾನು ಎಷ್ಟೊಂದು ಪ್ರೀತಿಸಿದ, ನನ್ನನ್ನು ಎಷ್ಟೊಂದು ಪ್ರೀತಿಸಿದ ದೇಹ. ಚೈತನ್ಯ ಕಳೆದುಕೊಂಡು ನೆಲದಲ್ಲಿ ಬಿದ್ದಿದ್ದುದನ್ನು ನೋಡಲು ನನ್ನಿಂದ ಆಗಲಿಲ್ಲ. ಮುಂಧಿನ ಕಾರ್ಯಗಳು ಹೇಗೆ ನಡೆದವೋ ಗೊತ್ತೇ ಆಗಲಿಲ್ಲ.
 

ಹಾಗೇ ದಿನಗಳು ಕಳೆದವು. ಹೊಸ ಕುಡಿಯೊಂದು ನನ್ನ ಒಡಲಲ್ಲಿ ಮಿಸುಕಾಡುತ್ತಿತ್ತು. ನಾನು ಬಾಲ್ಕನಿಯಲ್ಲಿ ಕುಳಿತು ದುಃಖಿಸುತ್ತಾ ಇದ್ದರೆ, ಒಡಲಲ್ಲಿದ್ದ ಕಂದ ನನ್ನನ್ನು ಸಂತೈಸುವಂತೆ ಮೇಲಿನಿಂದ ಕೆಳಕ್ಕೂ ಕೆಳಗಿನಿಂದ ಮೇಲಕ್ಕೂ ಓಡಾಡುತ್ತಿತ್ತು. ಕೆಲವೊಮ್ಮೆ ನಾನು ಅವಿನಾಶ್‌ನ ನೆನಪಿನಲ್ಲಿ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದರೆ, ಒಡಲಿನ ಕಂದ ಗಾಬರಿಯಿಂದ ಅತ್ತಿತ್ತ ಒದ್ದಾಡುತ್ತಿತ್ತು. ಕಡೆಗೆ ನಾನೇ ನನ್ನ ದುಃಖವನ್ನು ತಹಬಂದಿಗೆ ತಂದುಕೊಂಡು, ಗಾಬರಿಯಾಗಬೇಡ ಕಂದಾ ಎಂದು ಹೊಟ್ಟೆ ನೀವಿಕೊಂಡು ಅದನ್ನು ಸಂತೈಸಬೇಕಾಗುತ್ತಿತ್ತು!

 

ನನ್ನ ಅಮ್ಮ ನನ್ನ ಬೆಂಬಲಕ್ಕೆ ನಿಂತರು. ಅವಿನಾಶ್‌ನ ಸ್ಥಾನವನ್ನು ತುಂಬಲು ಆಕೆಗೆ ಸಾಧ್ಯವಿರಲಿಲ್ಲ. ಆದರೆ ಅಮ್ಮ ಅಮ್ಮನೇ. ನಾನು ಅಂಶ್‌ನನ್ನು ಹೆತ್ತಾಗ ಆಕೆಯೇ ಆಸ್ಪತ್ರೆಯಲ್ಲಿ ಜೊತೆಗಿದ್ದಳು. ನನ್ನ ಬಾಣಂತನವನ್ನೂ ಅಮ್ಮನೇ ಮಾಡಿದಳು. ಅಂಶ್‌ನ ಮುಖ ಅವಿನಾಶ್‌ನನ್ನೇ ಹೋಲುತ್ತದೆ ಎಂದು ಮಗುವನ್ನು ನೋಡಲು ಬಂದವರೆಲ್ಲ ಹೇಳಿದರು. ಆತನ ಮುಖ ನೋಡುತ್ತ ನೋಡುತ್ತ ಅವಿನಾಶ್‌ನನ್ನೇ ನೋಡಿದಂತೆ ಆಗಿತ್ತಿತ್ತು. ಅಂಶ್‌ನ ಅಳು, ನಗುವಿನ ಲೋಕದಲ್ಲಿ ನಾನು ಜಗವನ್ನೇ ಮರೆಯತೊಡಗಿದೆ. ಅವಿನಾಶ್‌ನ ಕಣ್ಮರೆಯ ದುಃಖವನ್ನು ಮರೆಯಲು ಯತ್ನಿಸಿದೆ.

 

ನಾವು ಸುಖವಾಗಿದ್ದೇವೆ ಅಂತ ಅನಿಸೋದು ಯಾವಾಗ ಗೊತ್ತಾ?

 

ನಿಧಾನವಾಗಿ ಇನ್ನೂ ಕೆಲವರ ಪರಿಚಯ ಆಗತೊಡಗಿತು. ನಮ್ಮ ಅಪಾರ್ಟ್‌ಮೆಂಟ್‌ನಲ್ಲಿಯೇ ಒಬ್ಬಾಕೆ ಇದ್ದರು. ಆಕೆಯ ಮಗುವಿಗೆ ಎರಡು ವರ್ಷ. ಗಂಡನಿಗೂ ಈಕೆಗೂ ಡೈವೋರ್ಸ್ ಆಗಿತ್ತು. ಗಂಡ ಈಕೆಯನ್ನು ಬಿಟ್ಟು ಇನ್ನೊಬ್ಬಳ ಜೊತೆಗೆ ಹೋಗಿದ್ದ. ಈಕೆ ಸಿಂಗಲ್‌ ಪೇರೆಂಟ್‌ ಆಗಿ ಮಗುವನ್ನು ನೋಡಿಕೊಳ್ಳುತ್ತಿದ್ದಳು. ಆಕೆಯ ಮೂಲಕ ನನ್ನ ಹಾಗೆಯೇ ಒಂಟಿಯಾಗಿ ಮಗುವನ್ನು ಸಾಕುತ್ತಿರುವ ಒಂದಷ್ಟು ಮಂದಿಯ ಪರಿಚಯವಾಯಿತು. ಎಲ್ಲರೂ ಎದುರಿಸುತ್ತಿದ್ದ ಸಮಸ್ಯೆ ಒಂದೇ- ಅಪ್ಪ ಎಲ್ಲಿ ಎಂದು ಕೇಳಿದರೆ ಮಗುವಿಗೆ ಉತ್ತರಿಸುವುದು ಹೇಗೆ ಎಂಬುದು ಗೊತ್ತಾಗದ ಸಮಸ್ಯೆ. ಸಾವು, ಡೈವೋರ್ಸ್, ಮದುವೆ, ಮರುಮದುವೆಗಳೆಲ್ಲಾ ಅರ್ಥವಾಗದ ಪುಟಾಣಿ ಮಕ್ಕಳಿಗೆ ಅರ್ಥ ಮಾಡಿಸುವುದು ಏನನ್ನು?

 

ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ;ಒಂದು ಮಧುರ ಕಥಾ ಪ್ರಸಂಗ!

 

ಹೀಗಾಗಿ ನಮ್ಮದೊಂದು ಕೌನ್ಸೆಲಿಂಗ್‌ ಗ್ರೂಪ್‌ ಶುರವಾಯಿತು. ಪರಿಣತ ಮಕ್ಕಳ ಕೌನ್ಸಿಲರ್‌ ಒಬ್ಬರ ಸಹಾಯ ಪಡೆದವು. ಅವರು ನಮ್ಮ ಅನಿಸಿಕೆ ಅಭಿಪ್ರಾಯಗಳನ್ನೆಲ್ಲ ಕೇಳಿದರು. ಎಲ್ಲರೂ ಒಂದು ಗ್ರೂಪ್‌ ರಚಿಸಿಕೊಂಡು ಬರುವಂತೆ ಹೇಳಿದರು. ಎಲ್ಲರೂ ಬಂದ ಬಳಿಕ, ಮಗುವನ್ನು ಇಂಥ ಸಂದರ್ಭದಲ್ಲಿ ಹೇಗೆ ಬೆಳೆಸಬೇಕು, ಹೇಗೆ ಪರಸ್ಪರ ಸಹಾಯ ಮಾಡಿಕೊಳ್ಳಬಹುದು ಎಂಬ ಅನಿಸಿಕೆಗಳನ್ನು ಹಂಚಿಕೊಳ್ಳಲು ಆರಂಭಿಸಿದೆವು. ಇದು ತುಂಬಾ ಸಹಾಯವಾಯಿತು. ಈಗ ಅಂಶ್‌ಗೆ ಮೂರು ವರ್ಷ. ಸುತ್ತಮುತ್ತಲ ಜಗತ್ತನ್ನು ಸ್ವಲ್ಪ ಸ್ವಲ್ಪವೇ ಅರ್ಥ ಮಾಡಿಕೊಳ್ಳಲು ಕಲಿತಿದ್ದಾನೆ. ತನ್ನ ಹಾಗೇ ಅಪ್ಪ ಜೊತೆಗಿಲ್ಲದ ಫ್ಯಾಮಿಲಿಯ ಮಕ್ಕಳ ಜೊತೆ ತುಂಬಾ ಚೆನ್ನಾಗಿ ಆಡಲು ಕಲಿತಿದ್ದಾನೆ. ಅಪ್ಪ ಇರುವ ಫ್ಯಾಮಿಲಿಯ ಹಾಗೇ ಅಪ್ಪ ಇಲ್ಲದ ಫ್ಯಾಮಿಲಿಗಳೂ ಸಹಜ ಎಂಬುದನ್ನು ಕಲಿಯುತ್ತಿದ್ದಾನೆ ಅನಿಸುತ್ತಿದೆ.

 

ಗಂಡನ ಜೊತೆ ಮಲಗೋಕೆ ಬಿಡಲ್ಲ ಅತ್ತೆ, ಇದೆಂಥಾ ಕರ್ಮ ರೀ ನಂದು!

 

ಸಂಬಂಧಗಳು ಸೇರುತ್ತವೆ; ನಾಶವಾಗುತ್ತವೆ. ಪ್ರವಾಹದಲ್ಲಿ ಒಟ್ಟು ಸೇರಿ ಮತ್ತೆ ಬೇರೆಯಾಗುವ ಎಲೆಗಳ ಹಾಗೆ ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಮಾತನ್ನು ಯಥಾವತ್ತಾಗಿ ನನ್ನ ಜೀವನಕ್ಕೆ ಅನ್ವಯಿಸಿ ನೋಡಿಕೊಳ್ಳುತ್ತಿದ್ದೇನೆ. ಅಂಶ್‌ನ ಮುಗುಳುನಗೆಯಲ್ಲಿ ಬದುಕು ಮತ್ತೆ ಅರಳಿದೆ!

Follow Us:
Download App:
  • android
  • ios