ಬಿಹಾರ ಮೂಲದ 13 ವರ್ಷದ ಯುವ ಆಟಗಾರ ಇದೀಗ ಐಪಿಎಲ್ ಹರಾಜಿನಲ್ಲಿ 1.1 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
ಜೆಡ್ಡಾ: ಈ ಬಾರಿಯ ಐಪಿಎಲ್ ಆಟಗಾರರ ಹರಾಜು ಸಾಕಷ್ಟು ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್ ಹರಾಜಿಗೆ 13 ವರ್ಷದ ವೈಭವ್ ಸೂರ್ಯವಂಶಿಯಿಂದ ಹಿಡಿದು 42 ವರ್ಷದ ಜೇಮ್ಸ್ ಆಂಡರ್‌ಸನ್ ವರೆಗೆ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದರು. 2025ರ ಐಪಿಎಲ್ ಮೆಗಾ ಹರಾಜಿಗೆ 577 ಆಟಗಾರರ ಹೆಸರನ್ನು ಬಿಸಿಸಿಐ ಶಾರ್ಟ್‌ಲಿಸ್ಟ್ ಮಾಡಿತ್ತು.
ಈ ಪೈಕಿ ಕೇವಲ 13 ವರ್ಷ 243 ದಿನದ ವೈಭವ್ ಸೂರ್ಯವಂಶಿ ಅವರನ್ನು ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 1.1 ಕೋಟಿ ರುಪಾಯಿ ನೀಡಿ ಖರೀದಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಈ 13 ವರ್ಷದ ಪೋರ ಯಾರು? ಅಷ್ಟಕ್ಕೂ ಕೋಟಿ ಬೆಲೆಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಈ ವೈಭವ್ ಖರೀದಿಸಿದ್ದೇಕೆ? ನೋಡೋಣ ಬನ್ನಿ.
ಆರ್‌ಸಿಬಿ ಗುರಿ ಐಪಿಎಲ್ ಕಪ್ ಗೆಲ್ಲೋದಲ್ಲ, ಹಣ ಗಳಿಸೋದು: ಕನ್ನಡಿಗರ ಭಾವನೆಗಳ ಜೊತೆ ಆಡ್ತಾ ಇದ್ಯಾ ಫ್ರಾಂಚೈಸಿ?
ಕಳೆದ 16 ವರ್ಷಗಳ ಐಪಿಎಲ್ ಹರಾಜಿನ ಇತಿಹಾಸದಲ್ಲೇ, ಹರಾಜಿಗೆ ಹೆಸರು ನೋಂದಾಯಿಸಿದ ಅತಿ ಕಿರಿಯ ಆಟಗಾರ ಎಂದು ವೈಭವ್ ಸೂರ್ಯವಂಶಿ ಗಮನ ಸೆಳೆದಿದ್ದರು. ಇದೀಗ ಸೂರ್ಯವಂಶಿ ಕೇವಲ 13ನೇ ವಯಸ್ಸಿಗೆ ಕೋಟ್ಯಾಧಿಪತಿಯಾಗಿ ಹೊರಹೊಮ್ಮಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಹರಾಜಾದ ಅತಿ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆ ಇದೀಗ ಬಿಹಾರ ಮೂಲದ ವೈಭವ್ ಪಾಲಾಗಿದೆ.
ಈ ಯುವ ಕ್ರಿಕೆಟಿಗ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯವೊಂದರಲ್ಲಿ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಅತಿ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. ಈ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅಂಡರ್-19 ಯೂಥ್ ಟೆಸ್ಟ್ ಪಂದ್ಯದಲ್ಲಿ ಭಾರತ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದ ವೈಭವ್ ಸೂರ್ಯವಂಶಿ, ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ವೈಭವ್, ಆಸೀಸ್ ಅಂಡರ್ 19 ತಂಡದ ವಿರುದ್ದ ಕೇವಲ 62 ಎಸೆತಗಳಲ್ಲಿ ಸ್ಪೋಟಕ 104 ರನ್ ಸಿಡಿಸಿದ್ದರು. ಎಡಗೈ ಬ್ಯಾಟರ್ ಆಗಿರುವ ವೈಭವ್ ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಭಾರತ ಪರ ಯೂಥ್ ಟೆಸ್ಟ್‌ನಲ್ಲಿ ಅತಿವೇಗದ ಹಾಗೂ ಜಗತ್ತಿನ ಒಟ್ಟಾರೆ ಎರಡನೇ ಅತಿವೇಗದ ಶತಕ ಸಿಡಿಸಿದ ಹಿರಿಮೆಗೆ ಪಾತ್ರರಾಗಿದ್ದರು.
ಇನ್ನು ಇದಕ್ಕೂ ಮೊದಲು ವೈಭವ್ ಸೂರ್ಯವಂಶಿ ಈ ವರ್ಷಾರಂಭದಲ್ಲೇ ತಮ್ಮ 12ನೇ ವಯಸ್ಸಿಗೆ ಬಿಹಾರ ಪರ ರಣಜಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಮೂಲಕ ಗಮನ ಸೆಳೆದಿದ್ದರು. ಈ ಮೂಲಕ ಭಾರತ ಪರ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಅತಿಕಿರಿಯ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದರು.
