ಪ್ರಶ್ನೆ: ನಾನೊಬ್ಬ ಹೌಸ್ ಮೇಕರ್. ನಮ್ಮ ಮದುವೆಯಾಗಿ ವರ್ಷ ಆಗ್ತಾ ಬಂತು. ನಮ್ಮ ಮನೆಯಲ್ಲಿ ನಮ್ಮ ಜೊತೆಗೆ ಅತ್ತೆಯೂ ಇದ್ದಾರೆ. ಅವರು ವಿಧವೆ. ಅತ್ತೆಯದು ವಿಚಿತ್ರ ಸ್ವಭಾವ. ನನ್ನ ಪ್ರತೀ ಕೆಲಸದಲ್ಲೂ ಮೂಗು ತೂರಿಸುತ್ತಾರೆ. ಪ್ರತೀ ಕೆಲಸವನ್ನೂ ತಿದ್ದುವ ಪ್ರಯತ್ನ ಮಾಡುತ್ತಾರೆ. ನಾನು ನನ್ನದೇ ಹಣದಲ್ಲಿ ನನಗೆ ಬೇಕಾದ ಡಿಸೈನ್ ಬ್ಲೌಸ್ ಹೊಲಿಸಿದರೆ ಸುತ್ತಮುತ್ತ ಮನೆಯವರ ಬಳಿಯೆಲ್ಲ ಅವಳು ಇದ್ದಬದ್ದ ದುಡ್ಡೆಲ್ಲ ಇಂಥದ್ದಕ್ಕೇ ಖರ್ಚು ಮಾಡ್ತಾಳೆ ಅಂತ ಕಮೆಂಟ್ ಮಾಡ್ತಾರೆ. ಅವರು ಎದುರು ಸಿಕ್ಕಾಗ ನಂಗೆ ಬುದ್ದಿ ಹೇಳಲಿಕ್ಕೆ ಬರುತ್ತಾರೆ. ನನಗೆ ಯಾವುದಕ್ಕೂ ಸ್ವಾತಂತ್ರ್ಯವೇ ಇಲ್ಲವಾಗಿದೆ. ಒಂಥರ ಉಸಿರುಗಟ್ಟುವ ವಾತಾವರಣ.. ನನ್ನ ಹಾಗೂ ಗಂಡನ ಪರ್ಸನಲ್ ವಿಚಾರಗಳಲ್ಲೂ ತಲೆ ಹಾಕ್ತಾರೆ. ಅವರು ಹೇಳಿದ ದಿನಗಳಲ್ಲಿ ಮಾತ್ರ ನಾವು ಗಂಡ ಹೆಂಡತಿ ಜೊತೆಯಾಗಿ ಮಲಗಬೇಕಂತೆ. ಈ ಬಗ್ಗೆ ಗಂಡನ ಬಳಿ ಹೇಳಿದರೆ, ಅವರು ನಮ್ಮ ಒಳ್ಳೆಯದಕ್ಕೇ ಅಲ್ವಾ ಹೇಳೋದು ಅಂತಾರೆ. ಗಂಡ ಹೆಂಡತಿ ಜೊತೆಗೆ ಮಲಗಿಕೊಂಡ ಮಾತ್ರಕ್ಕೆ ಪ್ರತಿದಿನವೂ ಸೆಕ್ಸ್ ಮಾಡ್ತಾರೆ ಅಂತ ಅರ್ಥವಾ, ಒಂದು ವೇಳೆ ಹಾಗೆ ಮಾಡ್ತೀವಿ ಅಂದ್ರೂ ಇವರದ್ದೇನು ಹೋಗೋದು? ಮಹಾ ಗಯ್ಯಾಳಿ ಆಗಿರುವ ಅತ್ತೆಯ ಬಳಿ ಇದನ್ನೆಲ್ಲ ಹೇಗೆ ಹೇಳೋದು ಗೊತ್ತಾಗ್ತಿಲ್ಲ.

ಪ್ರೀತಿ ಪ್ರೇಮ ಅಂದರೆ.... ಇವರು ಹೇಳ್ತಾರೆ ನೀವು ಮಾಡಿ!

 

ಉತ್ತರ : ನಿಜಕ್ಕೂ ನಿಮ್ಮದು ವಿಚಿತ್ರ ಸಮಸ್ಯೆಯೇ. ಹೆಚ್ಚಿನ ಅತ್ತೆಯರನ್ನು ಗಮನಿಸಿದರೆ ಅವರಿಗೆ ಮಗನಿಗೆ ಮದುವೆ ಆಗುವವರೆಗೂ ಅಂಥಾ ಸಮಸ್ಯೆ ಏನೂ ಆಗಲ್ಲ. ಆದರೆ ಮದುವೆ ಆದ ಕೂಡಲೇ ಇದ್ದಕ್ಕಿದ್ದಂತೆ ಮಗನ ಬಗ್ಗೆ ಎಲ್ಲಿಲ್ಲದ ಅಕ್ಕರೆ, ಕಾಳಜಿ, ಅದಕ್ಕಿಂತ ಹೆಚ್ಚಾಗಿ ಮೋಹ ಬಂದು ಬಿಡುತ್ತದೆ. ತಾನಿಷ್ಟು ವರ್ಷ ಸಾಕಿ ಬೆಳೆಸಿದ ಮಗ ನನ್ನ ಸೊತ್ತು ಅನ್ನುವ ಒಂದು ಮನಸ್ಥಿತಿ. ಇದರ ಹಿಂದೆ ಒಂದು ಇನ್ ಸೆಕ್ಯುರಿಟಿ ಫೀಲ್ ಇರುತ್ತೆ. ತನ್ನ ಮಗ ಎಲ್ಲಿ ತನ್ನಿಂದ ದೂರವಾಗ್ತಾನೋ, ಹೆಂಡತಿಯ ದಾಸ ಆಗ್ತಾನೋ ಅಂತೆಲ್ಲ ತಳಮಳ. ಹೀಗಾಗಿ ಅವರು ಮಗನಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲೂ ಹಕ್ಕುದಾರಿಕೆ ಸಾಧಿಸಲಿಕ್ಕೆ ನೋಡುತ್ತಾರೆ. ಮಗನ ಹೆಂಡತಿ ಸೊಸೆಯನ್ನಂತೂ ತನ್ನ ಸ್ಪರ್ಧಿಯಂತೇ ಕಾಣೋದು ಸಾಮಾನ್ಯ. ಇಂಥ ಮೋಹ ಅವರನ್ನೂ ನೆಮ್ಮದಿಯಾಗಿರಲಿಕ್ಕೆ ಬಿಡಲ್ಲ. ಮಗ ಸೊಸೆಯ ನೆಮ್ಮದಿಯನ್ನೂ ಕಸಿಯುವಂತೆ ಮಾಡುತ್ತದೆ. ಮಗನ ಒಳ್ಳೆಯದಕ್ಕೇ ತಾನು ಹೇಳೋದು ಅನ್ನುವ ರೀತಿ ಪ್ರತಿಯೊಂದನ್ನೂ ಬಿಂಬಿಸುತ್ತಾರೆ. ಇದಕ್ಕೆ ಸಂಬಂಧಿಕರು, ಅಕ್ಕಪಕ್ಕದವರೂ ಕುಮ್ಮಕ್ಕು ಕೊಡೋದಿದೆ. ಬಹುಶಃ ನಿಮ್ಮದು ಇಂಥದ್ದೇ ಒಂದು ಕೇಸ್ ಇರಬೇಕು.

 

ನೀವು ಕೊಡ್ತಿರೋ ಕಿಸ್‌ ಬಗ್ಗೆ ನಿಮಗೇ ತಿಳಿಯದ ಸಂಗತಿಗಳು!

 

ಇಲ್ಲಿ ನಿಮಗೆ ಮೂರು ಆಯ್ಕೆ ಇದೆ. ಮೊದಲನೆಯದು ಅತ್ತೆಯ ದುಪ್ಪಟ್ಟು ಒಳ್ಳೆತನವನ್ನು ನೀವು ಪ್ರದರ್ಶಿಸೋದು. ಅತ್ತೆಯನ್ನು ಅತಿಯಾದ ಕಾಳಜಿಯಿಂದ ನೋಡ್ಕೊಳ್ಳೋದು, ಅತ್ತೆಯ ಪ್ರತೀ ವಿಷಯದಲ್ಲೂ ಅತಿಯಾಗಿ ಗಮನ ಕೊಡೋದು.. ಇದೊಂಥರ ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ಪ್ರವೃತ್ತಿ. ಅದಕ್ಕೆ ಇದಕ್ಕೆ ವಿರೋಧ ಮಾಡಬಹುದು, ನಿಮ್ಮೊಳ್ಳೇದಕ್ಕೇ ಇದು ಅಂತ ನೀವೂ ನಾಟಕ ಮಾಡಬಹುದು. ಒಂದು ಹಂತದ ಬಳಿಕ ಅವರು ನಿಮ್ಮನ್ನು ನಿಮ್ಮಷ್ಟಕ್ಕೆ ಬಿಡುವ ಸಾಧ್ಯತೆ ಇರುತ್ತದೆ.
 

ಎರಡನೆಯದು ನಿರ್ಲಕ್ಷಿಸೋದು. ಅವರು ಹೇಳುವ ಎಲ್ಲ ಮಾತನ್ನೂ ನಿರ್ಲಕ್ಷಿಸಿ ಬಿಡಿ. ಅವರು ಹೇಳಿದ್ದಕ್ಕೆಲ್ಲ ಹೂಂ ಅನ್ನಿ. ಆದರೆ ನೀವು ನಿಮಗೆ ಬೇಕಾದ ಹಾಗೆ ಬದುಕಿ. ಅವರ ಯಾವ ಮಾತನ್ನೂ ಮನಸ್ಸಿಗೆ ಹಚ್ಚಿಕೊಳ್ಳಲೇ ಬೇಡಿ. ಅವರನ್ನು ಸಂಪೂರ್ಣ ನಿರ್ಲಕ್ಷಿಸಿ. ಇದರಿಂದ ಅವರಿಗೆ ತಮ್ಮ ತಪ್ಪಿನ ಅರಿವಾಗುವ ಸಾಧ್ಯತೆ ಇದೆ.
 

ಮೂರನೆಯದು ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಫ್ರೆಂಡ್ ಥರ ಮಾತಾಡಿ. ಅವರ ಸಮಸ್ಯೆಗಳೇನು ಅಂತ ಆತ್ಮೀಯವಾಗಿ ವಿಚಾರಿಸಿ. ನಿಮ್ಮ ಮನೆಯಲ್ಲಿ ಅಮ್ಮನ ಹತ್ರ ಯಾವೆಲ್ಲ ವಿಷಯ ಚರ್ಚಿಸುತ್ತಿದ್ದಿರೋ ಹಾಗೆ ಇವರ ಬಳಿಯೂ ಮಾತನಾಡಿ. ನಿಮ್ಮ ಮನಸ್ಸಿನ ನೋವನ್ನು ಹೇಳಿಕೊಳ್ಳಿ. ನಿಮ್ಮ ಸಮಸ್ಯೆಯ ಕುರಿತು ಚರ್ಚಿಸಿ. ಅವರ ಆ ವರ್ತನೆ ನಿಮ್ಮ ದಾಂಪತ್ಯದ ಮೇಲೆ ಯಾವ ಪರಿಣಾಮ ಬೀರಬಹುದು ಅಂತ ತಿಳಿಹೇಳಿ. ಅವರು ಬೈಯಲಿ, ಟೀಕಿಸಲಿ. ನಿಮ್ಮಮ್ಮ ಬೈದದ್ದು ಅಂತಲೇ ತಿಳ್ಕೊಂಡು ನಿಮಗೆ ಸಿಟ್ಟು ಬಂದರೆ ಜಗಳಾಡಿ. ಮುದ್ದು ಬಂದರೆ ಮುದ್ದು ಮಾಡಿ. ಇದರಿಂದ ನಿಮ್ಮಿಬ್ಬರ ಸ್ವಭಾವ ಸುಧಾರಿಸುತ್ತದೆ. ಎಲ್ಲವನ್ನೂ ನೇರವಾಗಿ ಮಾತನಾಡೋದರಿಂದ ಮನಸ್ಸಲ್ಲಿ ಕಲ್ಮಶ ಉಳಿಯಲ್ಲ. ಹಾಗಾಗಿ ನಿಮ್ಮಿಬ್ಬರ ಸಂಬಂಧ ನಿಧಾನಕ್ಕೆ ಸುಧಾರಿಸಬಹುದು. ಅತ್ತೆ ನಿಮ್ಮ ಕಷ್ಟಗಳನ್ನೂ ಅರ್ಥ ಮಾಡಬಹುದು. ಇಲ್ಲಿ ನೀವು ಅವರ ಸ್ಪರ್ಧಿ ಅಲ್ಲ, ಅವರಿಗಿಂತ ಬಹಳ ಚಿಕ್ಕವರು, ಅವರ ಮಗನಿಗಿಂತಲೂ ಚಿಕ್ಕವರು. ಹಾಗಾಗಿ ಅವರ ಸ್ಥಾನಕ್ಕೆ ಯಾವ ಧಕ್ಕೆಯನ್ನೂ ಉಂಟುಮಾಡಲ್ಲ. ಅವರಿಗೆ ಬೇಕಾದ ಹಾಗೆ ಕಂಫರ್ಟ್ ಆಗಿ ಅವರಿರಬಹುದು ಅನ್ನೋದನ್ನು ಮನದಟ್ಟು ಮಾಡಿ.. ಇದು ಆರಂಭದಲ್ಲೇ ವರ್ಕೌಟ್ ಆಗದಿರಬಹುದು. ಆದರೆ ನಿಧಾನಕ್ಕೆ ಅವರಿಗೆ ಅರ್ಥ ಆಗಿಯೇ ಆಗುತ್ತದೆ.