ನಾವು ಸುಖವಾಗಿದ್ದೇವೆ ಅಂತ ಅನಿಸೋದು ಯಾವಾಗ ಗೊತ್ತಾ?
ಛೇ, ಈ ಜಗತ್ತಿನ ಜನ ಎಲ್ಲ ಎಷ್ಟು ಖುಷಿಯಿಂದ ಆರಾಮವಾಗಿದ್ದಾರೆ. ಆದರೆ ನನಗೆ ಮಾತ್ರ ಯಾವಾಗಲೂ ದುಃಖ. ಖುಷಿಗಳೇ ಇಲ್ಲ. ದೇವ್ರೇ ನನಗೆ ಮಾತ್ರ ಯಾಕಿಂಥಾ ಬದುಕು.. ಹೀಗೆಲ್ಲ ಗೋಳಾಡ್ತೀವಿ. ಆದರೆ ಕಿಲಾಡಿ ದೇವ್ರು ಲೆಕ್ಕಾಚಾರನೇ ಬೇರೆ ಇರುತ್ತೆ.
ಮುಲ್ಲಾ ನಸ್ರುದ್ದೀನ್ ನ ಒಂದು ಫೇಮಸ್ ಕತೆ ಇದೆ. ನಸ್ರುದ್ದೀನ್ ಒಂದು ಸಣ್ಣ ಗುಡಿಸಲಲ್ಲಿ ವಾಸ ಮಾಡ್ತಾ ಇರುತ್ತಾನೆ. ಅವನೋ ತುಸು ಸ್ವಾರ್ಥಿ. ಅವನ ಹೆಂಡತಿ ದಯೆಯುಳ್ಳವಳು. ಅವರ ಚಿಕ್ಕ ಗುಡಿಸಲ ವಾಸ ನಸ್ರುದ್ದೀನ್ ನಿಗೆ ಬೇಸರ ತರಿಸುತ್ತಿತ್ತು. ಎಲ್ಲರೂ ಎಷ್ಟೆಷ್ಟು ದೊಡ್ಡ ಮನೆಯಲ್ಲಿ ವಾಸ ಇದ್ದಾರೆ, ನಮಗೆ ಮಾತ್ರ ಇಂಥಾ ಸಣ್ಣ ಮನೆ ಅಂದುಕೊಳ್ಳುತ್ತಾ ಗೊಣಗುತ್ತಿದ್ದ. ನಸ್ರುದ್ದೀನ್ ಹೆಂಡತಿಗೆ ಅವನ ಗೊಣಗಾಟ ಕೇಳಿತು. ಅವಳು ಹೊರಗೆಲ್ಲೋ ಹೋಗಿ ಅನಾಥವಾಗಿದ್ದ ಒಂದು ಕತ್ತೆಯನ್ನು ತಂದಳು. ಅದಕ್ಕೆ ಹುಲ್ಲು ನೀರು ಕೊಟ್ಟು ತನ್ನ ಮನೆಯೊಳಗೆ ಬಿಟ್ಟುಕೊಂಡಳು. ನಸ್ರುದ್ದೀನ್ ಕೆಂಡಾಮಂಡಲನಾದ. 'ಇದೇನು ಮಾಡ್ತಾ ಇದ್ದೀಯಾ, ನಮಗೇ ಇರಲಿಕ್ಕೆ ಜಾಗ ಇಲ್ಲ ಅಂತ ಒದ್ದಾಡುತ್ತಿದ್ದರೆ ಈ ಕತ್ತೆಯನ್ನು ತಂದಿದ್ದೀಯಾ. ನಿನ್ನನ್ನು ಕತ್ತೆಯನ್ನು ಇಬ್ಬರನ್ನೂ ಮನೆಯಿಂದ ಆಚೆ ಹಾಕುತ್ತೀನಿ ನೋಡು..'ಎಂದು ಅಬ್ಬರಿಸಿದ. ಆದರೆ ಹೆಂಡತಿ ತಬುಸ್ ಇದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಅವನ ಗೊಣಗಾಟ ಮುಂದುವರಿದಿತ್ತು.
ಉತ್ತಮ ಕೇಳುಗನಾಗಲು ಕಿವಿಯಿದ್ರೆ ಸಾಲದು, ಮನಸ್ಸೂ ಬೇಕು
ಆ ದಿನ ರಾತ್ರಿ ಜೋರು ಮಳೆ ಸುರಿಯಲಾರಂಭಿಸಿತು, ಮಧ್ಯರಾತ್ರಿ ಯಾರೋ ಬಾಗಿಲು ಬಡಿದರು. ಪತ್ನಿ ಬಾಗಿಲು ತೆಗೆಯಲು ಎದ್ದಾಗ ನಸ್ರುದ್ದೀನ್ ತಡೆದ. 'ನಿಂಗೇನು ಹುಚ್ಚಾ, ಇಲ್ಲಿ ನಾವಿಬ್ಬರು ಇರೋದೇ ಕಷ್ಟ. ಚಿಕ್ಕ ನೀರು ಸೋರುವ ಈ ಗುಡಿಸಲಲ್ಲಿ ಇನ್ನೊಬ್ಬರಿಗೆ ಎಲ್ಲಿ ಜಾಗ ಮಾಡ್ತೀಯಾ..' ಅವನತ್ತ ನಸುನಕ್ಕು ಎದ್ದು ಪತ್ನಿ ಬಾಗಿಲು ತೆಗೆದಳು. ಹೊರಗೊಬ್ಬ ವ್ಯಕ್ತಿ ಮಳೆಗೆ ನಡುಗುತ್ತಾ ನಿಂತಿದ್ದ. ಅವನನ್ನು ತಬುಸ್ ಒಳಗೆ ಕರೆದಳು. ಆತ ಕೃತಜ್ಞತೆಯಿಂದ ಮನೆಯೊಳಗೆ ಬಂದ. ಸ್ವಲ್ಪ ಹೊತ್ತಿಗೆ ಮತ್ತೆ ಬಾಗಿಲು ಬಡಿಯುವ ಸದ್ದು. ಅದನ್ನು ಕೇಳಿ, ಒಳಗಿದ್ದ ವ್ಯಕ್ತಿ ಹೇಳಿದ, ' ಅಯ್ಯೋ, ಇಲ್ಲಿ ನಾವಿಷ್ಟು ಜನ ನಿಂತದ್ದೇ ಕಷ್ಟದಲ್ಲಿ. ಇನ್ನೊಬ್ಬರು ಹೇಗೆ ಬರಲು ಸಾಧ್ಯ, ನೀವು ಸುಮ್ಮನಿರಿ. ಅವನ ಪಾಡಿಗೆ ಅವನು ಹೋಗಲಿ' ಎಂದ. ನಸ್ರುದ್ದೀನ್ ಪತ್ನಿ ಗಂಭೀರವಾಗಿ ಹೇಳಿದಳು. 'ನೀನು ಬಾಗಿಲು ತಟ್ಟಿದಾಗ ನನ್ನ ಗಂಡನೂ ಹೀಗೇ ಅಂದಿದ್ದ. ಈಗ ನಾವು ಮೂವರೂ ನಿಂತಿಲ್ವೇ..' ಅನ್ನುತ್ತಾ ಬಾಗಿಲು ತೆಗೆದಳು. ಇನ್ನೊಬ್ಬ ಆಗಂತುಕ ಒಳ ನುಸುಳಿದ. ಜೋರು ಮಳೆ ಸುರಿಯುತ್ತಿತ್ತು. ಚಿಕ್ಕ ಜೋಪಡಿ ತುಂಬಿ ತುಳುಕುತ್ತಿತ್ತು. ಇನ್ನೊಂದು ಸ್ವಲ್ಪ ಹೊತ್ತಾದ ಮೇಲೆ ಯಾರೋ ಬಾಗಿಲು ಉಜ್ಜುವ ದನಿ ಕೇಳಿತು, ಆ ಇಬ್ಬರು ವ್ಯಕ್ತಿಗಳು ಗಾಬರಿಯಿಂದ ನೋಡುತ್ತಿರುವಾಗಲೇ ತಬುಸಂಗೆ ತಿಳಿಯಿತು ಅದು ಅವರ ಕತ್ತೆ ಅಂತ. ಈಗ ಮತ್ತೊಬ್ಬ ವ್ಯಕ್ತಿ ಹೇಳಿದ, ಅಯ್ಯೋ ಇಲ್ಲಿ ಮನುಷ್ಯರೇ ನಿಲ್ಲೋದು ಕಷ್ಟ. ಇನ್ನು ಕತ್ತೆಯನ್ನು ಒಳಗೆ ಬಿಟ್ಟುಕೊಂಡರೆ ದೇವರೇ ಗತಿ!' ಅವನ ಮಾತು ಕಿವಿಗೆ ಹಾಕಿಕೊಳ್ಳದೆ ತಬುಸ್ ಬಾಗಿಲು ತೆಗೆದಳು. ಅವರ ಊಹೆಯಂತೇ ಅಲ್ಲಿ ಕತ್ತೆ ನಿಂತಿತ್ತು. ಕತ್ತೆಯನ್ನು ತಮ್ಮ ಮಧ್ಯೆ ನಿಲ್ಲಿಸಿಕೊಂಡು ಅವರೆಲ್ಲ ಅದರ ಸುತ್ತ ನಿಂತರು. ಕತ್ತೆಯೂ ಬೆಚ್ಚನೆಯ ವಾತಾವರಣ ಸಿಕ್ಕಿದ್ದಕ್ಕೆ ಖುಷಿಯಾಗಿತ್ತು.
ಸ್ವಲ್ಪ ಹೊತ್ತಿಗೆ ಬೆಳಗಾಯ್ತು. ಮಳೆಯೆಲ್ಲ ನಿಂತು ಸೂರ್ಯ ಕಣ್ಣರಳಿಸಿ ನಗುತ್ತಿದ್ದ. ಅವರೆಲ್ಲ ಧನ್ಯವಾದ ಹೇಳಿ ಹೊರ ಹೋದರು. ಕತ್ತೆಯೂ ಎದ್ದು ಮೇಯಲೆಂದು ಹೊರಗೆ ಹೋಯ್ತು. ತಬುಸಂ ಮತ್ತು ನಸ್ರುದ್ದೀನ್ ಮಾತ್ರ ಉಳಿದರು.
ಈಗ ನಸ್ರುದ್ದೀನ್ ಉದ್ಗರಿಸಿದ, 'ಅರೆ, ಎಷ್ಟು ಜಾಗ ಇದೆ ಮನೆಯೊಳಗೆ!'
*
ಮಗಳು 13 ದಾಟುವ ಮುನ್ನ ಈ ಜೀವನಪಾಠಗಳನ್ನು ಕಲಿಸಿ
ನಮ್ಮ ಸ್ಥಿತಿಯೂ ಇದಕ್ಕಿಂತ ಭಿನ್ನ ಇರೋದಿಲ್ಲ. ಅದಕ್ಕೇ ದೊಡ್ಡವರು ಹೇಳೋದು, ಕಷ್ಟ ಬಂತು ಅಂತ ಗೊಣಗುವಾಗಲೇ ದೊಡ್ಡ ಇನ್ನೊಂದು ಕಷ್ಟ ಬರುತ್ತೆ, ಆಗ ಮೊದಲಿನ ಕಷ್ಟ ಚಿಕ್ಕದಾಗಿ ಕಾಣುತ್ತೆ ಅಂತ. ದೇವರು ಕಿಲಾಡಿ ನಾವು ಅಯ್ಯೋ ಕಷ್ಟ ಅಂತ ಗೊಣಗುತ್ತಿರುವಾಗ ಮತ್ತೊಂದು ಅದಕ್ಕಿಂತ ದೊಡ್ಡ ಕಷ್ಟ ತಂದು ಎದುರಿಡುತ್ತಾನೆ.
ಕಷ್ಟ ಅಂತ ಗೊಣಗುತ್ತಾ ಕೂರುವ ಬದಲು ಅದರ ಕಡೆಗೆ ಲಕ್ಷ್ಯ ಕೊಡದೇ ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಿದ್ದರೆ ಕಷ್ಟ ಯಾವಾಗ ಕರಗಿತು ಅನ್ನೋದೇ ತಿಳಿಯೋದಿಲ್ಲ. ಬದಲು ಕಷ್ಟಕ್ಕೆ ಕಂಗಾಲಾಗಿ ಕೂತರೆ ಮತ್ತಷ್ಟು ಸಂಕಷ್ಟ ನೋವುಗಳು ಎದುರಾಗುತ್ತವೆ. ನಾವು ದೇವರಲ್ಲಿ ಪ್ರಾರ್ಥಿಸಬೇಕಾದ್ದು ಕಷ್ಟ ಕೊಡ್ಬೇಡ ದೇವ್ರೇ ಅಂತಲ್ಲ. ಬದಲಿಗೆ ಬರುವ ಕಷ್ಟಗಳನ್ನು ಫೇಸ್ ಮಾಡುವ ಶಕ್ತಿ ಕೊಡು ದೇವರೇ ಅಂತ. ಏಕೆಂದರೆ ನಾವು ಬದುಕಿನಲ್ಲಿ ಇನ್ನಷ್ಟು ಮತ್ತಷ್ಟು ಸ್ಟ್ರಾಂಗ್ ಆಗ್ತಾ ಹೋಗಲಿ ಅಂತಲೇ ದೇವರು ಕಷ್ಟ ಕೊಡುತ್ತಾನೆ. ಕಷ್ಟಗಳಲ್ಲಿ ನಾವು ಕಲಿಯೋ ಪಾಠ, ಮಾನವೀಯ ಅಂಶಗಳನ್ನು ಸುಖದಲ್ಲಿ ಕಲಿಯೋದು ಸಾಧ್ಯವೇ ಇಲ್ಲ. ಇದಕ್ಕೇ ದೇವರು ಕಷ್ಟ ಕೊಡ್ತಾನೆ ಅಂದುಕೊಂಡು ಕಷ್ಟಗಳನ್ನೂ ಮನಸಾರೆ ಅನುಭವಿಸೋಣ. ಖುಷಿಯಾಗಿರೋಣ.